ರಾಘವ ಶರ್ಮ ನಿಡ್ಲೆ ಅಯೋಧ್ಯೆಎಲ್ಲೆಲ್ಲೂ ಜೈಶ್ರೀರಾಮ್ ಜೈ ಸೀತಾಮಾತಾ, ಜೈ ಹನುಮಾನ್ ಘೊಷಣೆ. ಮುಗಿಲು ಮುಟ್ಟಿದ್ದ ಭಕ್ತರ ಸಂಭ್ರಮ… ಕೊನೆಗೂ ರಾಮ ತನ್ನ ಮೂಲನೆಲೆಗೆ ತಲುಪುತ್ತಿದ್ದಾನೆ ಎಂಬ ಸಮಾಧಾನ.. ಶಾಪಮುಕ್ತ ಅಯೋಧ್ಯೆ ಗತವೈಭವಕ್ಕೆ ಮರಳುತ್ತಿದೆ ಎಂಬ ಸಂತಸ.. ಇದು ಬುಧವಾರ ಸಂಜೆ ರಾಮಜನ್ಮಸ್ಥಾನ ಅಯೋಧ್ಯಾ ನಗರಿಯಾದ್ಯಂತ ಕಂಡುಬಂದ ದೃಶ್ಯವೈಭವ. ಜ.22ರಂದು ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ನಗರದ ರಾಮಸೇವಕಪುರದ ವಿವೇಕ ಸೃಷ್ಟಿ ಎಂಬಲ್ಲಿಂದ ಬಾಲರಾಮನ ಮೂರ್ತಿಯನ್ನು ನಗರದ ವಿವಿಧ ರಸ್ತೆಗಳನ್ನು ದಾಟಿ, ರಾಮ್ೋಟ್​ನಲ್ಲಿರುವ ಶ್ರೀರಾಮಜನ್ಮಸ್ಥಾನಕ್ಕೆ ತಂದಿರಿಸಲಾಯಿತು. ಅಯೋಧ್ಯೆಯ ಸೆಲ್ಪಿ ಪಾಯಿಂಟ್ ಎಂದು ಪ್ರಸಿದ್ಧಿಯಾಗಿರುವ ಲತಾ ಮಂಗೇಶ್ಕರ್ ಚೌಕ್, ರಾಮಪಥದ ಮಾರ್ಗವಾಗಿ ನಂತರ ಹನುಮಾನ್ ಗಡಿ ದೇಗುಲದ ಎದುರುಭಾಗದ ಬೀದಿಗಳನ್ನು ದಾಟಿ, ದಶರಥ ಮಹಲ್​ನ ಮುಂಭಾಗದ ಮೂಲಕ ಭವ್ಯ ಶ್ರೀರಾಮ ಮಂದಿರದ ಪ್ರಾಂಗಣದಲ್ಲಿ ನೆಲೆಗೊಳಿಸಲಾಯಿತು.
ಅಯೋಧ್ಯಾ ನಿವಾಸಿಗರು, ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ಭಕ್ತವರ್ಗ, ದೂರದೂರ ಗಳಿಂದ ಪಾದಯಾತ್ರೆ ಮೂಲಕ ನಗರಕ್ಕೆ ತಲುಪಿದ್ದ ಯುವಜನರು, ವೃದ್ಧರು, ಮಹಿಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯ ಆಸ್ತಿಕ ವರ್ಗ ಬಾಲರಾಮನ ದೇವದರ್ಶನ ಯಾತ್ರೆಗೆ ಸಾಕ್ಷಿಯಾಯಿತು.
1992ರಲ್ಲಿ ರಾಮನ ಸಣ್ಣಮೂರ್ತಿಯೊಂದನ್ನು ಪ್ರತಿಷ್ಠಾಪಿಸಿದ ಬಳಿಕ ಮೊದಲ ಬಾರಿಗೆ ಬಾಲರಾಮನ ಹೊಸದಾದ, 51 ಇಂಚು ಎತ್ತರದ, 150-200 ಕೆಜಿ ಭಾರದ ಮೂರ್ತಿಯನ್ನು ನಗರದಾದ್ಯಂತ ಪರಿಕ್ರಮ ನಡೆಸಿ, ಮೂಲಸ್ಥಾನಕ್ಕೆ ತಂದಿಡಲಾಯಿತು. ಬುಧವಾರ ಮಧ್ಯಾಹ್ನದ ವೇಳೆ ಈಗಿರುವ ಹಳೆಯ ರಾಮನ ಗರ್ಭಗುಡಿಯಲ್ಲಿದ್ದ ರಾಮನ ಮೂರ್ತಿಯನ್ನೂ ಹೊಸ ರಾಮಮಂದಿರಕ್ಕೆ ತಂದಿರಿಸಲಾಗಿದೆ. ಎರಡೂ ಮೂರ್ತಿಗಳನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ. ಹಲವು ಧಾರ್ವಿುಕ ವಿಧಿವಿಧಾನ, ಹೋಮ-ಹವನ, ಪೂಜಾ ಕಾರ್ಯಗಳೊಂದಿಗೆ ಈ ಎರಡೂ ಮೂರ್ತಿಗಳನ್ನು ಗರ್ಭಗುಡಿಯಲ್ಲಿ ಗುರುವಾರ ಪ್ರತಿಷ್ಠಾಪಿಸಲಾಗುವುದು. 22ರಂದು ಬಾಲರಾಮನ ಮುಖ್ಯ ಧಾರ್ವಿುಕ ವಿಧಿಯಾದ ಪ್ರಾಣಪ್ರತಿಷ್ಠೆ ನಡೆಯಲಿದೆ.
ಟ್ರಕ್​ನಲ್ಲಿ ಪ್ರಯಾಣ:ರಾಮಸೇವಕಪುರದ ಕೊಠಡಿಯೊಂದರಲ್ಲಿ ಇರಿಸಲಾಗಿದ್ದ, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕಪ್ಪುಶಿಲೆಯಲ್ಲಿ ಕೆತ್ತಿದ್ದ ಬಾಲರಾಮನ ಮೂರ್ತಿಯನ್ನು ಟ್ರಕ್​ವೊಂದರಲ್ಲಿ ಸಾಗಿಸಲಾಯಿತು. ಗುರುವಾರದ ಪ್ರತಿಷ್ಠಾಪನೆ ಬಳಿಕವೇ ಮೂರ್ತಿಯ ಚಿತ್ರವನ್ನು ಸಾರ್ವಜನಿಕ ವೀಕ್ಷಣೆಗೆ ಬಹಿರಂಗಪಡಿಸಲಾಗುವುದು ಎಂದು ಹೇಳಲಾಗಿದೆ. ಪರಿಕ್ರಮದ ವೇಳೆ ಟ್ರಕ್​ನಲ್ಲಿದ್ದ ಮೂರ್ತಿ ಯಾರಿಗೂ ಕಾಣಿಸದಂತೆ ಮುಚ್ಚಲಾಗಿತ್ತು. ಭಾರಿ ಪೊಲೀಸ್ ಭದ್ರತೆ ಮತ್ತು ಪುರೋಹಿತ ವರ್ಗದ ಸಮ್ಮುಖದಲ್ಲಿ ಬಾಲರಾಮನ ಪರಿಕ್ರಮ ನಡೆಯಿತು.
ಜನವೋ ಜನ:ನೂತನ ರಾಮಮಂದಿರ ನಿರ್ಮಾಣ ಹಾಗೂ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಅಯೋಧ್ಯಾ ನಗರವಿಡೀ ಕಳೆಗಟ್ಟಿದ್ದು, ದೇಶದ ಮೂಲೆ ಮೂಲೆಗಳಿಂದ ಜನಸಾಗರ ಹರಿದುಬರುತ್ತಿದೆ. 19ರ ನಂತರ ಸೀಮಿತ ರೀತಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಅವಕಾಶವಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. 20ರಿಂದ ನಗರದಲ್ಲಿ ಗಣ್ಯ ಅತಿಥಿಗಳ ಓಡಾಟ ಹೆಚ್ಚಲಿದ್ದು, ಇಡೀ ನಗರ ಪೊಲೀಸ್ ಮತ್ತು ಸೇನಾ ಪಡೆಗಳ ಸರ್ಪಗಾವಲಿನಲ್ಲಿರಲಿದೆ. ನಗರದ ಅಂಗಡಿಗಳನ್ನು ಏಕರೂಪದ ವಿನ್ಯಾಸ, ಬಣ್ಣಗಳಿಂದ ಸಜ್ಜುಗೊಳಿಸಲಾ ಗಿದ್ದು, ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.
ರಾಜ್ಯದ 20 ಅರ್ಚಕರು, ವಿದ್ವಾಂಸರು:ಗರ್ಭಗೃಹಕ್ಕೆ ಗುರುವಾರ ಬಾಲರಾಮನ ಪ್ರವೇಶವಾಗಲಿದೆ. ಬಳಿಕ, ಜಲಾಧಿವಾಸ, ಅನ್ನಾಧಿವಾಸ, ಫಲಾಧಿವಾಸ, ಆಜ್ಜಾಧಿವಾಸ ಸೇರಿ ಒಟ್ಟು 12 ಅಧಿಪತಿಗಳ ಪೂಜೆ ನಡೆಯಲಿದೆ. ಈ ಪೂಜಾ ವಿಧಿ-ವಿಧಾನ 21ರ ತನಕ ಮುಂದುವರಿಯಲಿದೆ. ಬುಧವಾರ ಬೆಳಗ್ಗೆ 121 ಪಂಡಿತರಿಂದ ವಿವಿಧ ಬಗೆಯ ಹೋಮ, ಯಜ್ಞಾದಿಗಳನ್ನು ಕೈಗೊಳ್ಳಲಾಗಿದೆ. 121 ಮಂದಿಯ ತಂಡದಲ್ಲಿ 20 ಪುರೋಹಿತರು, ಸಂಸ್ಕೃತ ಭಾಷಾ ವಿದ್ವಾಂಸರು ಕರ್ನಾಟಕದಿಂದ ಬಂದಿದ್ದಾರೆ. ಒಂದು ವರ್ಷದ ಹಿಂದೆ ಪೂಜಾ ಕಾರ್ಯಕ್ರಮವೊಂದಕ್ಕೆ ನಮ್ಮನ್ನು ಕರೆಸಲಾಗಿತ್ತು. ಆಗ ನಮ್ಮ ಮಂತ್ರ ಘೊಷಣೆ, ಪದ್ಧತಿಗಳನ್ನು ಗಮನಿಸಿದ್ದ ಟ್ರಸ್ಟ್ ಸದಸ್ಯರು, ಪ್ರಾಣಪ್ರತಿಷ್ಠೆ ಸಂದರ್ಭದ ಪೂಜಾ ಕಾರ್ಯಗಳಲ್ಲಿ ಭಾಗಿಯಾಗುವ ಇಚ್ಛೆಯಿದೆಯೇ ಎಂದು ಕೇಳಿದ್ದರು. ನಂತರ ಪರೀಕ್ಷಾ ಪ್ರಕ್ರಿಯೆಗಳ ಮೂಲಕ ನಮ್ಮನ್ನು ಆಯ್ಕೆ ಮಾಡಿದರು ಎಂದು ಬೆಳಗಾವಿ ಮೂಲದ ಅರ್ಚಕರಾದ ಪ್ರಮೋದ್ ಮಾಹಿತಿ ನೀಡಿದ್ದಾರೆ.
ಮಂದಿರಕ್ಕೆ ಬಂದ ಸರಯೂ ಜಲ:ಸರಯೂ ನದಿಯ ಪವಿತ್ರ ಜಲವನ್ನು ನಗರದ ಮಹಿಳೆಯರು ಕಳಶಗಳಲ್ಲಿ ನೂತನ ರಾಮಮಂದಿರಕ್ಕೆ ತೆಗೆದುಕೊಂಡು ಬಂದರು. ಈ ಜಲವನ್ನು ಪೂಜಾ ಕೈಂಕರ್ಯಗಳಿಗೆ ಬಳಸಲಾ ಗುವುದು ಎಂದು ಮಂದಿರದ ಪುರೋಹಿತರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 6 =
Remember me
