ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರನ್ನು ದಾಖಲಿಸಿಕೊಳ್ಳಲು ಬೆಡ್​ಗಳು ಖಾಲಿ ಇದ್ದರೂ, ಚಿಕಿತ್ಸೆ ಕೊಡಲು ವೈದ್ಯರು ಹಾಗೂ ನರ್ಸ್ಗಳೇ ಇಲ್ಲ! ಕರೊನಾ ಸೋಂಕಿತರ ಸೇವೆ ಮಾಡಬೇಕೆಂಬ ಸೂಚನೆ ಬರುತ್ತಿದ್ದಂತೆ ವೈದ್ಯರು, ನರ್ಸ್​ಗಳು, ವೈದ್ಯಕೀಯ ಸಿಬ್ಬಂದಿ ದಿಢೀರ್ ನಾಪತ್ತೆಯಾಗುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಇತರೆ ಸಿಬ್ಬಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಈ ಭೀತಿಯಿಂದ ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು, ಸ್ವಚ್ಛತಾ ಸಿಬ್ಬಂದಿ ಕೆಲಸ ತೊರೆಯುತ್ತಿದ್ದಾರೆ. ಕರೊನಾ ನಿಯಂತ್ರಣ ಕುರಿತು ಆರಂಭದಲ್ಲಿ ನಿರ್ಲಕ್ಷ್ಯ ತೋರಿದ ಸರ್ಕಾರ, ಪ್ರಕರಣಗಳ ಸಂಖ್ಯೆ ಏರುತ್ತಿದ್ದಂತೆ ತರಾತುರಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿತು. ಶೇ. 50 ಹಾಸಿಗೆ ಮೀಸಲಿಡಬೇಕೆಂದು ಆದೇಶ ಹೊರಡಿಸಿತು. ನಂತರ ಕೋವಿಡ್ ಚಿಕಿತ್ಸೆಗಾಗಿ ಬಿಡುಗಡೆ ಮಾಡಿರುವ ಆಸ್ಪತ್ರೆಗಳ ಪಟ್ಟಿಯಲ್ಲಿ ಬಹುತೇಕ ಆಸ್ಪತ್ರೆಗಳಿಗೆ ಮಾಹಿತಿಯನ್ನೇ ನೀಡದೆ, ಬೆಸ್ಕಾಂ ಮೂಲಕ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಕುರಿತು ಮಾಹಿತಿ ತರಿಸಿಕೊಂಡು ಏಕಾಏಕಿ ಆಸ್ಪತ್ರೆಗಳ ಹೆಸರು ಪ್ರಕಟಿಸಿತ್ತು. ಆದರೆ, ಅಗತ್ಯ ಸೌಲಭ್ಯವಿಲ್ಲದೆ ಚಿಕಿತ್ಸೆ ಕೊಡುವುದು ಹೇಗೆ ಎಂಬುದು ವೈದ್ಯರು ಹಾಗೂ ನರ್ಸ್​ಗಳ ಪ್ರಶ್ನೆ.
ಆಸ್ಪತ್ರೆಯ ಮುಖ್ಯಸ್ಥರು, ವೈದ್ಯರು ಹಾಗೂ ಸಿಬ್ಬಂದಿ ಮನವೊಲಿಸಲೂ ಅವಕಾಶ ಸಿಗದೆ ಬಹಳಷ್ಟು ಮಂದಿ ಈಗಾಗಲೇ ಕೆಲಸ ತೊರೆದು ಹೋಗಿದ್ದಾರೆ. ಇದರಿಂದ ಆಸ್ಪತ್ರೆಗಳು ಸಾಮಾನ್ಯ ರೋಗಿಗಳಿಗೂ ಚಿಕಿತ್ಸೆ ನೀಡಲಾಗದೆ ಪರಿಸ್ಥಿತಿಗೆ ತಲುಪಿವೆ.
ಬೆಂಗಳೂರಿನ ಶಿವಾಜಿನಗರದ ಎಚ್​ಬಿಎಸ್ ಆಸ್ಪತ್ರೆ, ರಾಜಾಜಿನಗರದ ಸುಗುಣ ಆಸ್ಪತ್ರೆ, ಕೆ.ಆರ್. ಪುರಂನ ಸತ್ಯಸಾಯಿ ಆಥೋ ಆಸ್ಪತ್ರೆ, ಪುಲಕೇಶಿನಗರದ ಸಂತೋಷ್ ಆಸ್ಪತ್ರೆ.. ಹೀಗೇ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳಿಲ್ಲದೆ ಸೇವೆ ನೀಡಲು ಸಮಸ್ಯೆಯಾಗುತ್ತಿದೆ.
39 ವೈದ್ಯರು, 8 ನರ್ಸ್​ಗಳು ನಾಪತ್ತೆ:ಶಿವಾಜಿನಗರದ ಎಚ್​ಬಿಎಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರು ಹಾಗೂ ಶಂಕಿತರು ದಾಖಲಾಗಿದ್ದಾರೆ. ಆದರೆ ಅವರಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಶುಶ್ರೂಷಕರೇ ಇಲ್ಲ. ಈ ಮೊದಲು ಆಸ್ಪತ್ರೆಯಲ್ಲಿ 44 ವೈದ್ಯರು ಹಾಗೂ 20 ಶುಶ್ರೂಷಕರಿದ್ದರು. ಆದರೆ, ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಸಿದ್ಧತೆ ನಡೆಸುತ್ತಲೇ ವೈದ್ಯರು ಹಾಗೂ ಶುಶ್ರೂಷಕರು ಕಣ್ಮರೆಯಾಗಿದ್ದು, ಈಗ ಕೇವಲ ಐವರು ವೈದ್ಯರು ಹಾಗೂ 12 ಶುಶ್ರೂಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿ 25 ಸಾವಿರ ದಾಟಿದ ಸೋಂಕಿತರು:ರಾಜ್ಯದಲ್ಲಿ ಸೋಮವಾರ 1,843 ಹೊಸ ಕರೊನಾ ಪಾಸಿಟಿವ್ ಪ್ರಕರಣ ಗಳು ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. 30 ಸೋಂಕಿತರು ಮೃತರಾಗಿದ್ದು, ಒಟ್ಟು ಮೃತರ ಸಂಖ್ಯೆ 401ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 981 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ.
ಐವರು ಜನಪ್ರತಿನಿಧಿಗಳಿಗೆ ಕರೊನಾ:ಜನಪ್ರತಿನಿಧಿಗಳಲ್ಲೂ ಈಗ ಕರೊನಾ ಭೀತಿ ಆವರಿಸಿದೆ. ಒಂದು ವಾರದಲ್ಲಿ ಐವರು ಜನಪ್ರತಿನಿಧಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಂಡ್ಯ ಸಂಸದೆ ಸುಮಲತಾ, ಕುಣಿಗಲ್ ಶಾಸಕ ರಂಗನಾಥ್ ಅವರಿಗೆ ಕರೊನಾ ಪಾಸಿಟಿವ್ ಸೋಮವಾರ ದೃಢಪಟ್ಟಿದೆ. ಶಾಸಕ ಭರತ್ ಶೆಟ್ಟಿ, ಮಾಜಿ ಉಪಸಭಾಪತಿ ಪುಟ್ಟಣ್ಣ ಹಾಗೂ ಪರಿಷತ್ ಸದಸ್ಯ ಪ್ರಾಣೇಶ್​ಗೆ ಈಗಾಗಲೇ ಸೋಂಕು ತಗುಲಿದೆ.
ವೇತನ ಹೆಚ್ಚಿಸುತ್ತೇವೆ ಅಂದರೂ ಬರುತ್ತಿಲ್ಲ:ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ರೆಗ್ಯುಲರ್ ಹಾಗೂ ಕನ್ಸಲ್ಟೆಂಟ್ ಸೇರಿ 70 ವೈದ್ಯರು ಸೇವೆ ನೀಡುತ್ತಿದ್ದಾರೆ. ಆದರೆ, 110 ಇದ್ದ ಶುಶ್ರೂಷಕರ ಸಂಖ್ಯೆ ಈಗ 80ಕ್ಕೆ ಇಳಿದಿದೆ. ಬಹುತೇಕ ಸ್ವಚ್ಛತಾ ಸಿಬ್ಬಂದಿ ಕೆಲಸ ತೊರೆದು ಹೋಗಿದ್ದಾರೆ. ಇರುವ ಶುಶ್ರೂಷಕರು ಸಹ ಕೋವಿಡ್ ವಾರ್ಡ್​ನಲ್ಲಿ ಕಾರ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಬಹಳಷ್ಟು ಮನವೊಲಿಕೆಯ ನಂತರ ಕೆಲವರು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ವೇತನ ನೀಡುತ್ತೇವೆಂದರೂ ಕೋವಿಡ್ ರೋಗಿಗಳ ಆರೈಕೆಗೆ ಯಾರೂ ಮುಂದಾಗುತ್ತಿಲ್ಲ ಎನ್ನುತ್ತಾರೆ ಆಸ್ಪತ್ರೆಯ ಮುಖ್ಯಸ್ಥ ಡಾ. ಆರ್. ರವೀಂದ್ರ.
ರೋಗಿಗಳು ಆಸ್ಪತ್ರೆಯತ್ತ ಸುಳಿಯುತ್ತಿಲ್ಲ:ಕೆ.ಆರ್. ಪುರಂನ ಸತ್ಯಸಾಯಿ ಆಥೋಪೆಡಿಕ್ ಆಸ್ಪತ್ರೆ ಮೂಳೆ ಚಿಕಿತ್ಸೆಗೆ ಸಂಬಂಧಿಸಿದ್ದು. ಹೀಗಾಗಿ ಇಲ್ಲಿ ಕೇವಲ ಇಬ್ಬರು ಜನರಲ್ ಫಿಜಿಷಿಯನ್​ಗಳು ಕನ್ಸಲ್ಟೆಂಟ್ ಸೇವೆ ನೀಡುತ್ತಿದ್ದರು. ಕೆಲ ದಿನಗಳ ಹಿಂದೆ ಬಂದ ಬೆಸ್ಕಾಂ ಅಧಿಕಾರಿಗಳು ಆಸ್ಪತ್ರೆಯ ಸೌಲಭ್ಯಗಳ ಮಾಹಿತಿ ಪಡೆದುಕೊಂಡು ಹೋದರು. ಆಗಲೂ ನಮ್ಮದು ಮೂಳೆ ಚಿಕಿತ್ಸೆಗೆ ಸಂಬಂಧಿಸಿದ ಆಸ್ಪತ್ರೆ. ಇಲ್ಲಿ ಕೋವಿಡ್ ಚಿಕಿತ್ಸೆ ನೀಡುವವರಿಲ್ಲ ಎಂದು ತಿಳಿಸಲಾಗಿತ್ತು. ಆದರೆ ಒಂದೆರಡು ದಿನಗಳ ನಂತರ ಪತ್ರಿಕೆಯಲ್ಲಿ ಕೋವಿಡ್ ಆಸ್ಪತ್ರೆಗಳ ಪಟ್ಟಿಯಲ್ಲಿ ಆಸ್ಪತ್ರೆ ಹೆಸರು ದಾಖಲಾಗಿತ್ತು. ವಿಷಯ ತಿಳಿಯುತ್ತಲ್ಲೇ ಇದ್ದ ಇಬ್ಬರು ಜನರಲ್ ಫಿಜಿಷಿಯನ್​ಗಳು ಕೆಲಸ ತೊರೆದು ಹೋದರು. ಆಯಾಗಳು ಬರುತ್ತಿಲ್ಲ. 22 ಶುಶ್ರೂಷಕರಲ್ಲಿ ಕೇವಲ ಮೂವರು ಉಳಿದುಕೊಂಡಿದ್ದಾರೆ. ‘ನಾನೂ ಸೇರಿದಂತೆ ಇಬ್ಬರು ಆಥೋ ತಜ್ಞರಿದ್ದೇವೆ. ಪತ್ರಿಕೆಯಲ್ಲಿ ಪ್ರಕಟಣೆ ನೋಡಿದಾಗಿನಿಂದ ಕೋವಿಡ್ ರೋಗಿಗಳಿಂದ ಒಂದೇ ಸಮನೆ ಕರೆ ಬರುತ್ತಿದೆ. ಮತ್ತೊಂದೆಡೆ ಕೋವಿಡ್ ರಹಿತ ರೋಗಿಗಳು ಆಸ್ಪತ್ರೆಯತ್ತ ಸುಳಿಯುತ್ತಿಲ್ಲ. ಹೀಗಿರುವಾಗ ಸೋಂಕಿತರನ್ನು ದಾಖಲಿಸಿಕೊಂಡರೆ ಚಿಕಿತ್ಸೆ ನೀಡುವುದಾದರೂ ಹೇಗೆ?’ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಮಹೇಶ್ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
20 ಸಿಬ್ಬಂದಿ ಪರಾರಿ!: ಪುಲಕೇಶಿನಗರದ ಸಂತೋಷ್ ಆಸ್ಪತ್ರೆಯಲ್ಲಿ ಈ ಮೊದಲಿದ್ದ 40 ಶುಶ್ರೂಷಕರಲ್ಲಿ 20 ಮಂದಿ ಕೆಲಸ ತೊರೆದು ಹೋಗಿದ್ದಾರೆ. ಉಳಿದವರು ಹೆಚ್ಚುವರಿ ಹಣ ನೀಡುತ್ತೇನೆ ಎಂದರೂ ಕೋವಿಡ್ ರೋಗಿಗಳ ಆರೈಕೆ ಮಾಡಲು ಒಪ್ಪುತ್ತಿಲ್ಲ. 3-4 ದಿನಗಳಿಂದ ಕೋವಿಡ್ ರಹಿತ ರೋಗಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೀಗಾದರೆ ಆಸ್ಪತ್ರೆ ನಡೆಸುವುದಾದರೂ ಹೇಗೆ? ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಅವರ ಆರೈಕೆ ಮತ್ತು ಆಸ್ಪತ್ರೆ ಸ್ವಚ್ಛತೆಗೆ ಸಿಬ್ಬಂದಿ ಇಲ್ಲದೆ ಬಹಳ ಸಮಸ್ಯೆಯಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಂತೋಷ್ ತಿಳಿಸಿದರು.
3 ತಿಂಗಳು ಕೆಲಸಕ್ಕೆ ಬರಲ್ಲ!:ಬೆಂಗಳೂರಿನ ಚಂದ್ರಾಪುರದಲ್ಲಿನ ಆತ್ರೇಯ ಆಸ್ಪತ್ರೆ ಮೆಟರ್ನಿಟಿ ಕೇರ್ ಸೆಂಟರ್. ಹಾಗಿದ್ದರೂ ಸರ್ಕಾರ ಯಾವುದೇ ಮಾಹಿತಿ ನೀಡದೆ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಪಟ್ಟಿಯಲ್ಲಿ ಸೇರಿಸಿದೆ. ಮಾಹಿತಿ ತಿಳಿಯುತ್ತಲೇ 54 ವೈದ್ಯರಲ್ಲಿ 50 ವೈದ್ಯರು ಮೂರು ತಿಂಗಳ ಕಾಲ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿ ಹೋಗಿದ್ದಾರೆ. ನಮ್ಮದು ಹೆರಿಗೆ ಆಸ್ಪತ್ರೆ. ಸದ್ಯ ಶುಶ್ರೂಷಕರು, ಸ್ವಚ್ಛತಾ ಸಿಬ್ಬಂದಿ, ನಾನೂ ಸೇರಿ ಕೇವಲ 14 ಮಂದಿ ಇದ್ದೇವೆ. ಎರಡು ದಿನಗಳ ಹಿಂದೆ ಬೆಸ್ಕಾಂ ಸಿಬ್ಬಂದಿ ಆಸ್ಪತ್ರೆಗೆ ಬಂದು ನಿಮ್ಮಲ್ಲಿ ಇರುವ ಹಾಸಿಗೆಗಳಲ್ಲಿ ಶೇ. 50 ಕೋವಿಡ್ ಚಿಕಿತ್ಸೆಗೆ ಮೀಸಲಿಡಿ ಎಂದು ಹೇಳುತ್ತಿದ್ದಾರೆ. ಆದರೆ, ನಮ್ಮಲ್ಲಿ ವೆಂಟಿಲೇಟರ್ ಇಲ್ಲ, ಯಾವುದೇ ಸೌಲಭ್ಯ ಇಲ್ಲದ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದಾದರೂ ಹೇಗೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ನಾರಾಯಣಸ್ವಾಮಿ ತಮ್ಮ ಅಳಲು ತೋಡಿಕೊಂಡರು.
ಇದು ಕೇವಲ ಒಂದೆರಡು ಆಸ್ಪತ್ರೆಗಳ ಸಮಸ್ಯೆಯಲ್ಲ, ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಸ್ವಚ್ಛತಾ ಸಿಬ್ಬಂದಿ ಕೆಲಸ ತೊರೆದು ಹೋಗಿದ್ದಾರೆ. ಇದರಿಂದ ಆಸ್ಪತ್ರೆಗಳು ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಬಲಪಡಿಸುವ ಅಗತ್ಯವಿದೆ. ಇದನ್ನು ಸಂಬಂಧಪಟ್ಟ ಸಚಿವರ ಮೂಲಕ ಸರ್ಕಾರದ ಗಮನಕ್ಕೂ ತರಲಾಗಿದೆ.
– ಡಾ. ಆರ್. ರವೀಂದ್ರ,ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂ ಅಸೋಸಿಯೇಷನ್ (ಫಾನಾ) ಅಧ್ಯಕ್ಷ
ಯಾರೂ ಬೆಂಗಳೂರು ಬಿಟ್ಟು ಹೋಗಬೇಡಿ. ಕರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಕ್ರಮ ತೆಗೆದುಕೊಂಡಿದೆ. ಸರ್ಕಾರದೊಂದಿಗೆ ಬೆಂಗಳೂರಿನ ಜನ ಸಹಕರಿಸಬೇಕು. ನಾವು ಕರೊನಾ ಜತೆಗೇ ಬದುಕಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಂಗಳೂರಿನಲ್ಲಿ 450 ಆಂಬುಲೆನ್ಸ್, 10 ಸಾವಿರ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಇನ್ನಷ್ಟು ಆರೋಗ್ಯ ಸವಲತ್ತು ಕೊಡಲು ಕ್ರಮಕೈಗೊಂಡಿದ್ದೇವೆ. ಯಾರೂ ಆತಂಕಪಡುವ ಅಗತ್ಯವಿಲ್ಲ.
| ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿ
https://www.vijayavani.net/how-will-corona-pandemic-end-there-are-two-ways/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
