ನವದೆಹಲಿ:ಲಿವ್ ಇನ್ ಸಂಗಾತಿಯನ್ನು ಹತ್ಯೆ ಮಾಡಿ, ಶವವನ್ನು ಫ್ರಿಜ್​ನಲ್ಲಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಸಂಗಾತಿಯನ್ನು ಹತ್ಯೆ ಮಾಡುವ ಮುನ್ನ ಆರೋಪಿ ತನ್ನ ನಿಶ್ಚಿತಾರ್ಥದ ಪಾರ್ಟಿಯಲ್ಲಿ ಸ್ನೇಹಿತರ ಜೊತೆ ಡಾನ್ಸ್​ ಮಾಡಿ ಎಂಜಾಯ್​ ಮಾಡಿದ್ದ ಎಂಬ ಸಂಗತಿ ಬಯಲಾಗಿದೆ.
ಸಾಹಿಲ್ ಗೆಹ್ಲೋಟ್ (24) ಎಂಬಾತ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ನಿಕ್ಕಿ ಯಾದವ್​ಳನ್ನು ಕೊಂದು ಮೃತದೇಹವನ್ನು ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದ. ಅಲ್ಲದೇ ಮರು ದಿನವೇ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ. ಈ ಪ್ರಕರಣ ಫೆ. 14ರಂದು ಬೆಳಕಿಗೆ ಬಂದಿತು. ಹತ್ಯೆಗೂ ಮುನ್ನ ನಡೆದ ತನ್ನದೇ ನಿಶ್ಚಿತಾರ್ಥ ಕಾರ್ಯಕ್ರಮದ ಬಳಿಕ ಆರೋಪಿ ಗೆಹ್ಲೋಟ್​ ಉತ್ತಮ ನಗರದಲ್ಲಿರುವ ನಿಕ್ಕಿ ಯಾದವ್ ಬಾಡಿಗೆ​ ಮನೆಗೆ ತೆರಳಿ ನೆಲೆಸಿದ್ದ. ಈ ವೇಳೆ ಫೆ. 10ರಂದು ಬೇರೊಬ್ಬಳ ಜೊತೆ ನಿಗದಿಯಾಗಿದ್ದ ಮದುವೆಗೂ ಮುನ್ನ ಯಾದವ್​ಗಳನ್ನು ಪ್ರವಾಸಕ್ಕೆ ಕರೆದೊಯ್ಯಲು ಪ್ಲಾನ್​ ಮಾಡಿದ್ದ.
ಲಿವ್-ಇನ್ ಸಂಗಾತಿಯೊಂದಿಗೆ ಮುಂದುವರಿಯಬೇಕೇ? ಅಥವಾ ಹೆತ್ತವರು ನೋಡಿದ ಯುವತಿಯನ್ನು ಮದುವೆಯಾಗಬೇಕೇ? ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಎರಡು ಮನಸ್ಸಿನೊಂದಿಗೆ ಗೊಂದಲದಲ್ಲಿದ್ದೆ ಎಂಬುದನ್ನು ಗೆಹ್ಲೋಟ್​ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ನಿಶ್ಚಿತಾರ್ಥದ ಬಳಿಕ ನಿಕ್ಕಿ ಯಾದವ್​ ಮನೆಗೆ ಬಂದು ಉಳಿದುಕೊಂಡಿದ್ದ ಗೆಹ್ಲೋಟ್​, ಅಂದು ರಾತ್ರಿಪೂರ್ತಿ ಅಲ್ಲಿಯೇ ಇದ್ದ. ಇತ್ತ ಗೆಹ್ಲೋಟ್​​ ಜೊತೆ ಗೋವಾ ಪ್ರವಾಸಕ್ಕೆ ಯಾದವ್​ ಪ್ಲಾನ್​ ಮಾಡಿದ್ದಳು. ಮೊದಲೇ ತನ್ನ ಟಿಕೆಟ್​ ಬುಕ್​ ಮಾಡಿದ್ದಳು. ಆದರೆ, ಟ್ರಾವೆಲ್​ ಅಪ್ಲಿಕೇಶನ್​ನಲ್ಲಿ ಗೆಹ್ಲೋಟ್​ ಟಿಕೆಟ್​ ಬುಕ್​ ಆಗದಿದ್ದಾಗ ಇಬ್ಬರು ತಮ್ಮ ಪ್ಲಾನ್​ ಬದಲಾಯಿಸಿ, ಹಿಮಾಚಲ ಪ್ರದೇಶಕ್ಕೆ ಪ್ರವಾಸ ಮಾಡಲು ನಿರ್ಧರಿಸಿದರು.
ಬಳಿಕ ಇಬ್ಬರು ತಮ್ಮ ಕಾರಿನಲ್ಲಿ ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ ಹೋದರು, ಅಲ್ಲಿ ಅವರು ಆನಂದ್ ವಿಹಾರ್ ಬಸ್ ಟರ್ಮಿನಸ್​​ನಿಂದ ಬಸ್ ಹತ್ತಬೇಕು ಅಂತಾ ಅಂದುಕೊಂಡರು. ಆದರೆ ಅಲ್ಲಿಗೆ ತಲುಪಿದಾಗ, ಬಸ್ ಕಾಶ್ಮೀರ್ ಗೇಟ್ ಐಎಸ್‌ಬಿಟಿಯಿಂದ ಹೊರಡಲಿದೆ ಎಂದು ಅವರಿಗೆ ತಿಳಿಯಿತು. ಬಳಿಕ ಕಾಶ್ಮೀರ ಗೇಟ್​ಗೆ ತೆರಳಿ, ಕಾರನ್ನು ಪಾರ್ಕ್​ ಮಾಡಿ ಮಾತನಾಡಲು ಆರಂಭಿಸಿದರು. ಈ ವೇಳೆ ಗೆಹ್ಲೋಟ್​, ನಿಗದಿಯಾದ ತನ್ನ ಮದುವೆ ಬಗ್ಗೆ ಹೇಳಿದ್ದಾನೆ.
ನಿಶ್ಚಿತಾರ್ಥದ ಹಾಗೂ ಬೇರೊಂದು ಯುವತಿಯನ್ನು ಮದುವೆ ಆಗುವ ಬಗ್ಗೆ ಯಾದವ್​ ಅಸಮಾಧಾನ ಹೊರಹಾಕಿದಳು. ಅಲ್ಲದೆ, ತನ್ನೊಂದಿಗೆ ಹಿಮಾಚಲ ಪ್ರದೇಶ ಪ್ರವಾಸಕ್ಕೆ ಬರುವಂತೆ ಒತ್ತಾಯಿಸಿದಳು. ಆದರೆ, ನಾನು ಅಂದಿನಿಂದ ಎರಡು ಮನಸ್ಸಿನಲ್ಲಿದ್ದೆ. ತುಂಬಾ ಗೊಂದಲದಲ್ಲಿ ಸಿಲುಕಿ ಏನು ಮಾಡಬೇಕೆಂದು ಯೋಚಿಸುತ್ತಿದ್ದೆ. ಮದುವೆ ನಿಗದಿಯಾಗಿದ್ದರಿಂದ ತುಂಬಾ ಒತ್ತಡಕ್ಕೆ ಒಳಗಾಗಿದ್ದೆ. ಮದುವೆ ವಿಚಾರಕ್ಕೆ ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿತು. ತುಂಬಾ ಕೋಪದಲ್ಲಿದ್ದ ನಾನು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದೆ. ಬಳಿಕ ಆಕೆಯ ಮೃತದೇಹವನ್ನು ಗ್ರಾಮದಲ್ಲಿರುವ ನಮ್ಮ ಡಾಭಾದಲ್ಲಿ ಇಟ್ಟೆ ಎಂದು ಗೆಹ್ಲೋಟ್​ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ ಗೆಹ್ಲೋಟ್​ ತನ್ನ ಲಿವ್ ಇನ್ ಸಂಗಾತಿಯನ್ನು ಕೊಲೆ ಮಾಡಲು ಮೊದಲೇ ಬಯಸಿದ್ದನು ಮತ್ತು ಪ್ರವಾಸಕ್ಕೆ ಹೋಗುವುದಾಗಿ ಭರವಸೆ ನೀಡುವ ಮೂಲಕ ಅವಳನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ತಾನು ಎರಡು ಮನಸ್ಸಿನಲ್ಲಿದ್ದೆ ಎಂದು ಗೆಹ್ಲೋಟ್​ ಹೇಳಿದ್ದಾನೆ. ಆದರೆ, ಇದೆಲ್ಲ ಆತನ ಆವೃತ್ತಿಯಾಗಿದೆ. ನಿಶ್ಚಿತಾರ್ಥದ ದಿನ ತುಂಬಾ ಸಂತೋಷವಾಗಿ, ಎಂಜಾಯ್​ ಮಾಡಿದ್ದ ಎಂದು ತಿಳಿದುಬಂದಿದೆ. ಅಲ್ಲದೆ, ಕೊಲೆ ಮಾಡಿದ ನಿಖರವಾದ ಸಮಯವನ್ನು ಸಹ ಆತ ಹೇಳುತ್ತಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೆ ಫೆಬ್ರವರಿ 9 ಮತ್ತು 10ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕಾರಿನಲ್ಲಿ ಮೊಬೈಲ್ ಡೇಟಾ ಕೇಬಲ್​ನಿಂದ ನಿಕ್ಕಿಯ ಕುತ್ತಿಗೆ ಬಿಗಿದು ಕೊಂದು, ಮೃತದೇಹವನ್ನು ದೆಹಲಿಯ ಮಿತ್ರಾನ್ ಹಳ್ಳಿಯಲ್ಲಿ ತನ್ನ ಕುಟುಂಬದವರು ನಡೆಸುತ್ತಿದ್ದ ಡಾಬಾದಲ್ಲಿದ್ದ ರೆಫ್ರಿಜರೇಟರ್​ನಲ್ಲಿ ಇರಿಸಿದ್ದಾನೆ ಎಂದು ವಿಶೇಷ ಪೊಲೀಸ್ ಆಯುಕ್ತ ರವೀಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ. 2018ರಲ್ಲಿ ಇಬ್ಬರು ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ಕೋಚಿಂಗ್ ಸೆಂಟರ್​ಗೆ ಹೋಗುತ್ತಿದ್ದಾಗ ಪರಿಚಿತರಾಗಿ ಹಲವು ವರ್ಷಗಳಿಂದ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದರು. 2022ರ ಡಿಸೆಂಬರ್​ನಲ್ಲಿ ಸಾಹಿಲ್ ಬೇರೊಂದು ಹುಡುಗಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. 2023 ಫೆಬ್ರವರಿ 9 ಮತ್ತು 10ಕ್ಕೆ ವಿವಾಹ ನಿಗದಿಪಡಿಸಲಾಗಿತ್ತು. ಈ ವಿಷಯ ನಿಕ್ಕಿಗೆ ತಿಳಿದ ಬಳಿಕ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಯಾದವ್ ಹೇಳಿದ್ದಾರೆ. ಬಂಧಿತ ಆರೋಪಿ ಸಾಹಿಲ್​ನನ್ನು ಕೋರ್ಟ್ 5 ದಿನ ಪೊಲೀಸರ ವಶಕ್ಕೆ ನೀಡಿದೆ.(ಏಜೆನ್ಸೀಸ್​)
ಅಧಿಕಾರಕ್ಕಾಗಿ ಏನೆಲ್ಲ ನಡೆಯುತ್ತೆ ಅನ್ನೋದಕ್ಕೆ ಪುಲ್ವಾಮಾ ದಾಳಿ ಉದಾಹರಣೆ! ಕೊಪ್ಪಳ ಸರ್ಕಾರಿ ಶಿಕ್ಷಕನ ವಿವಾದ

ಐಸಿಸಿ ರ‍್ಯಾಂಕಿಂಗ್ ಬ್ಲಂಡರ್: ಭಾರತ ಮಧ್ಯಾಹ್ನ ನಂ. 1, ಸಂಜೆ ಮತ್ತೆ ನಂ. 2!

ಶಾಲೆಯಲ್ಲೇ 2ನೇ ಮದ್ವೆಯಾದ ಹೆಡ್​ ಮಾಸ್ಟರ್​ಗೆ ಮರುಕ್ಷಣವೇ ಮೊದಲ ಪತ್ನಿಯಿಂದ ಬಿಗ್​ ಶಾಕ್!​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + thirteen =
Remember me
