|ರಾಘವ ಶರ್ಮ ನಿಡ್ಲೆ, ನವದೆಹಲಿರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಭಾರತದಲ್ಲಿ ನಡೆದ ಐತಿಹಾಸಿಕ ಜಿ-20 ಶೃಂಗಸಭೆಗೆ ಗೈರಾಗುವ ಹಿನ್ನೆಲೆಯಲ್ಲಿ ಶೃಂಗಸಭೆಯ ಯಶಸ್ಸಿನ ಬಗ್ಗೆ ಆರಂಭದಲ್ಲಿ ಆನುಮಾನಗಳಿದ್ದವು. ಮುಖ್ಯವಾಗಿ ನವದೆಹಲಿ ಘೊಷಣೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದ್ದು, ಇವರಿಬ್ಬರ ಗೈರು ಮತ್ತಷ್ಟು ಅನಿಶ್ಚಿತ ವಾತಾವರಣ ನಿರ್ಮಾಣ ಮಾಡಿತ್ತು. ಆದರೆ, ಅವೆಲ್ಲವನ್ನೂ ಮೀರಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಶೃಂಗಸಭೆ ವಿಶ್ವದ ಗಮನಸೆಳೆದಿದೆ ಮತ್ತು ರಾಜತಾಂತ್ರಿಕ ಕ್ಷೇತ್ರದಲ್ಲಿ ದೇಶದ ವರ್ಚಸ್ಸನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದೆ ಎಂದು ನಿಸ್ಸಂದೇಹದಿಂದ ಹೇಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಣಾಯಕ, ಸಮರ್ಥ, ದಿಟ್ಟ ನಾಯಕತ್ವ ವಿಶ್ವ ವೇದಿಕೆಯಲ್ಲಿ ದೇಶದ ಹೆಸರನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಲ್ಲದೆ, ಇತರೆ ಪ್ರಭಾವಿ, ದೊಡ್ಡ ಆರ್ಥಿಕತೆಗಳು ಭಾರತವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸುವಂತೆ ಮಾಡಿದೆ.
ಮೋದಿ ನಾಯಕತ್ವಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಜಿ-20ಯ ಹಲವು ಸದಸ್ಯ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೆ, ಜಿ-20 ಯಶಸ್ಸಿಗೆ ಅವರ ವರ್ಚಸ್ವಿ ನಾಯಕತ್ವ ಕಾರಣ ಎಂದೂ ಅಭಿಪ್ರಾಯ ಪಟ್ಟಿದ್ದಾರೆ. ಭಾರತ ರಾಜತಾಂತ್ರಿಕವಾಗಿ ಬಲಗೊಳ್ಳುತ್ತಿರುವುದಕ್ಕೆ ದೇಶದ ಹಾಲಿ ನಾಯಕತ್ವ ಮಹತ್ವದ ಕೊಡುಗೆ ನೀಡುತ್ತಿದೆ ಎನ್ನುವುದು ಅತಿಶಯವೇನಲ್ಲ. ಜಿ-20ಯನ್ನು ದೇಶದಲ್ಲಿ ತಳಮಟ್ಟಕ್ಕೆ (ನಗರ, ಪಟ್ಟಣ) ಕೊಂಡೊಯ್ಯಬೇಕು ಎನ್ನುವುದು ಮೋದಿ ಅವರ ಚಿಂತನೆಯೇ ಆಗಿತ್ತು. ಇದನ್ನು ವಿದೇಶಾಂಗ ಸಚಿವ ಜೈ ಶಂಕರ್ ಅವರೂ ಹೇಳಿದ್ದರು. ಎಲ್ಲರನ್ನೊಳಗೊಳ್ಳುವುದು ಎಂದರೆ ಕೇವಲ ದೇಶಗಳನ್ನು ಸೇರಿಸಿಕೊಳ್ಳುವುದಷ್ಟೇ ಅಲ್ಲ. ದೇಶದ ಜನರನ್ನೂ ಸೇರಿಸಿಕೊಂಡು ಜಗತ್ತಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಆ ಮೂಲಕ ತನ್ನನ್ನೂ (ಭಾರತ) ಸಮೃದ್ಧ ಗೊಳಿಸುವುದು ಎನ್ನುವುದನ್ನು ಭಾರತ ಸರ್ಕಾರ ತನ್ನ ನಡೆ ಮೂಲಕವೇ ಧೃಢೀಕರಿಸಿದೆ. ವಿಶ್ವ ನಾಯಕರನ್ನು ಸ್ವಾಗತಿಸುವುದರಿಂದ ಆರಂಭಿಸಿ, ರಾಷ್ಟ್ರಪತಿ ದ್ರೌಪದಿ ಮುಮು ಜತೆಗಿನ ಔತಣ ಕೂಟ, 2ನೇ ದಿನದಂದು ಮಹಾತ್ಮಾ ಗಾಂಧಿ ಸಮಾಧಿ ಸ್ಥಳ ರಾಜ್​ಘಾಟ್​ಗೆ ಭೇಟಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಮೋದಿಯವರ ಮುಂಚೂಣಿಯಲ್ಲೇ ನಡೆದವು. ಮೋದಿ ಉಪಸ್ಥಿತಿ ಇದ್ದರೆ ಕಾರ್ಯಕ್ರಮಗಳ ಫೇಸ್​ವ್ಯಾಲ್ಯೂ ಹೆಚ್ಚಿರುತ್ತದೆ. ವಿಪಕ್ಷಗಳು ಒಪ್ಪದಿದ್ದರೂ, ಅದು ವಾಸ್ತವ ಕೂಡ ಹೌದು. ಹೀಗಾಗಿ, ಜಿ-20ಯ ಪ್ರತಿಯೊಂದು ಕಾರ್ಯಕ್ರಮವೂ ಅಭೂತಪೂರ್ವ ಯಶಸ್ಸನ್ನು ಕಾಣಲು ಸಾಧ್ಯವಾಯಿತು. ರಷ್ಯಾ-ಉಕ್ರೇನ್ ಸಂಘರ್ಷದ ವಿಚಾರದಲ್ಲಿ ಭಾರತ ತನ್ನ ಸಮಗ್ರತೆ ಹಾಗೂ ಆರ್ಥಿಕ ಆದ್ಯತೆಗಳಿಗೆ ಮಹತ್ವ ನೀಡುತ್ತಾ, ಅದಕ್ಕೆ ಪೂರಕವಾದ ನಿಲುವನ್ನು ತೆಗೆದುಕೊಂಡಿರುವುದಕ್ಕೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಮಾತನಾಡುತ್ತಾ ಅವರು ಈ ಅನಿಸಿಕೆ ಹೊರಹಾಕಿದ್ದಾರೆ. ಜಾಗತಿಕ ವಿಚಾರಗಳಿಗೆ ಸಂಬಂಧಿಸಿ ಭಾರತದ ನಿಲುವು ದೇಶದ ರಾಜಕೀಯದಲ್ಲಿ ಚರ್ಚೆಯ ವಿಷಯವಾದರೂ, ರಾಜತಾಂತ್ರ ಅಥವಾ ಭಾರತದ ವಿದೇಶಾಂಗ ನೀತಿಗಳನ್ನು ಪಕ್ಷ ಅಥವಾ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳಬಾರದು ಎನ್ನುವುದು ಸಿಂಗ್ ಅಭಿಪ್ರಾಯ.
ದೇಶೀಯ ರಾಜಕಾರಣದ ದೃಷ್ಟಿಕೋನದಿಂದ ನೋಡಿದರೆ, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಗೈರಿನಿಂದ ಭಾರತಕ್ಕೆ ನಷ್ಟಕ್ಕಿಂತ ಲಾಭವೇ ಆಗಿದೆ. 2020 ಏಪ್ರಿಲ್ ತಿಂಗಳಿಂದ ಆರಂಭಗೊಂಡ ಭಾರತ-ಚೀನಾ ಸಂಘರ್ಷ ಈಗಲೂ ಮುಂದುವರಿದ್ದು, ಎರಡು ದೇಶಗಳ ಸಂಬಂಧ ಹದಗೆಡುತ್ತಿದೆಯೇ ಹೊರತು ಸುಧಾರಿಸಿಲ್ಲ. ಹೀಗಿರುವಾಗ, ಕ್ಸಿ ಬರುತ್ತಿದ್ದರೆ, ನಗುಮುಖದೊಂದಿಗೆ ಅವರನ್ನು ಸ್ವಾಗತಿಸಿ ಹ್ಯಾಂಡ್​ಶೇಕ್ ಮಾಡುವುದು, ದ್ವಿಪಕ್ಷೀಯ ಸಭೆ ನಡೆಸುವ ಅನಿವಾರ್ಯತೆ ಭಾರತದ ಮುಂದಿರುತ್ತಿತ್ತು. ವಿನಾಕಾರಣ ಇದು ವಿಪಕ್ಷಗಳ ಟೀಕೆಗೂ ಕಾರಣವಾಗುತ್ತಿತ್ತು. ಆದರೆ, ಭಾರತ ಇದರಿಂದ ಪಾರಾಗಿದೆ. ಬಹುಶಃ ಜಿ-20 ವಿಷಯದಲ್ಲಿ ಭಾರತದ ಯಶಸ್ಸನ್ನು ಚೀನಾ ಮೊದಲೇ ಊಹಿಸಿದ್ದಿರಬಹುದು. ಹೀಗಾಗಿ, ಈ ಸಂಭ್ರಮಕ್ಕೆ ತಾನು ಸಾಕ್ಷಿಯಾಗುವುದು ಬೇಡ ಎಂದೇ ಶೃಂಗಸಭೆಗೆ ಗೈರಾಗುವ ನಿರ್ಧಾರ ಕೈಗೊಂಡಿದ್ದಿರಬಹುದು. ಅಭಿವೃದ್ಧಿಶೀಲ 134 ರಾಷ್ಟ್ರಗಳನ್ನು ಹೊಂದಿರುವ ಗ್ಲೋಬಲ್ ಸೌತ್ ತಾನು ನಾಯಕ ಎಂಬಂತೆ ಚೀನಾ ವರ್ತಿಸುತ್ತಿದ್ದರೂ, ನಾಯಕನಿಗೆ ಇರಬೇಕಾದ ಗುಣ ಅದರಲ್ಲಿಲ್ಲ. ಬೆಲ್ಟ್ ರೋಡ್ ಇನಿಷಿಯೇಟಿವ್ (ಬಿಆರ್​ಐ) ಯೋಜನೆ ಮೂಲಕ ಗ್ಲೋಬಲ್ ಸೌತ್​ನ ಕೆಲ ರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸಿದರೂ, ಕರೊನಾ ಮಹಾಮಾರಿ ಎಲ್ಲಾ ಲೆಕ್ಕಾಚಾರಗಳನ್ನು ಬದಲಿಸಿದೆ. ಕರೊನಾ ಮಹಾಮಾರಿಗೆ ಸಿಲುಕಿದ್ದ ಬಡ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಮೂಲಕ ಭಾರತ ತನ್ನ ಮಾನವೀಯ ಪರಂಪರೆಯನ್ನು ವಿಶ್ವದ ಮುಂದಿಟ್ಟಿತು. ಕರೊನಾ ಮಹಾಮಾರಿ ವಿಷಯದಲ್ಲಂತೂ ಇಡೀ ವಿಶ್ವ ಚೀನಾವನ್ನು ವಿಲನ್ ರೀತಿ ಕಾಣುತ್ತಿದೆ. ರಷ್ಯಾ-ಉಕ್ರೇನ್ ಸಂಘರ್ಷ ವಿಷಯದಲ್ಲೂ ರಷ್ಯಾ ಜತೆಗೆ ನಿಲ್ಲುವ ಮೂಲಕ ಪಾಶ್ಚಿಮಾತ್ಯ ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದಲ್ಲಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಶೃಂಗಸಭೆ ಆರಂಭಕ್ಕೆ ಮುನ್ನ ರಷ್ಯಾ ವರ್ತನೆಗಳನ್ನು ಖಂಡತುಂಡವಾಗಿ ಟೀಕಿಸಿದರು. ಜಿ-20 ಶೃಂಗಸಭೆಗೆ ವಸುದೈವ ಕುಟುಂಬಕಂ ಎಂಬ ಥೀಮ್ ನೀಡುವ ಮೂಲಕ ಭಾರತ ಮತ್ತೊಮ್ಮೆ ನಾವು ಎಲ್ಲರೊಂದಿಗಿದ್ದೇವೆ. ಇಡೀ ವಿಶ್ವ ಒಂದು ಕುಟುಂಬ ಎಂಬ ಸಂದೇಶ ರವಾನಿಸಿರುವುದು ಸಹಜವಾಗಿಯೇ ಹಲವು ರಾಷ್ಟ್ರಗಳ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಆಫ್ರಿಕನ್ ರಾಷ್ಟ್ರಗಳ ಒಕ್ಕೂಟವನ್ನು ಜಿ-20 ಗುಂಪಿಗೆ ಸೇರ್ಪಡೆಗೊಳಿಸುವ ಮೂಲಕ ಗ್ಲೋಬಲ್ ಸೌತ್ ವ್ಯಾಪ್ತಿಯಲ್ಲಿರುವ ರಾಷ್ಟ್ರಗಳ ಪೈಕಿ ತನ್ನ ಸಾಮರ್ಥ್ಯ ಹಾಗೂ ಬಲಿಷ್ಠತೆಯನ್ನು ಚಾಣಾಕ್ಷ ತಂತ್ರಗಾರಿಕೆಗಳ ಮೂಲಕ ಸಾಬೀತುಪಡಿಸಿದೆ. ಇದೇ ಕಾರಣಕ್ಕಾಗಿ, ಜಿ-20 ಸಭೆಗೆ ಹಾಜರಾಗಿದ್ದ ರಾಷ್ಟ್ರಗಳ ಹಲವು ನಾಯಕರು ಮೋದಿ ನಾಯಕತ್ವವನ್ನು ಶ್ಲಾಘಿಸಿದರು. ಅಲ್ಲದೆ, ಜಿ-20 ಶೃಂಗಸಭೆಗೆ ದೇಶೀಯ ಸ್ಪರ್ಶ ಹಾಗೂ ವೈವಿಧ್ಯತೆಯ ರೂಪ ನೀಡುವ ಮೂಲಕ ಶೃಂಗಸಭೆಯ ಹೊಸ ಮಾದರಿಯನ್ನೂ ಸದಸ್ಯರಿಗೆ ಪರಿಚಯಿಸಿದೆ.
ಕಾಂಗ್ರೆಸ್ಸಿಗರ ಉದ್ಧಟತನ:ಜಿ-20 ವಿಶ್ವ ನಾಯಕರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುಮು ಅವರು ಏರ್ಪಡಿಸಿದ್ದ ಔತಣಕೂಟಕ್ಕೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿತ್ತು. ಇದೊಂದು ರಾಜತಾಂತ್ರಿಕ ಕಾರ್ಯಕ್ರಮವಾಗಿದ್ದರಿಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದ ಸಿಎಂ ಸುಖ್ವಿಂದರ್ ಸಿಂಗ್ ಸುಕ್ಕು, ಜಾರ್ಖಂಡ್ ಸಿಎಂ ಹೇಮಂತ್, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಸೇರಿ ಇಂಡಿಯಾ ಮೈತ್ರಿಕೂಟದ ಹಲವು ನಾಯಕರು ಭಾಗಿಯಾಗಿದ್ದರು. ಆದರೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಔತಣಕೂಟಕ್ಕೆ ಆಸಕ್ತಿ ತೋರಿದರೆ, ವಿಶ್ವ ನಾಯಕರನ್ನು ಭೇಟಿ ಮಾಡುವ ಅಭೂತಪೂರ್ವ ಅವಕಾಶ ಕಳೆದುಕೊಂಡರು. ನಿತೀಶ್ ಕುಮಾರ್, ಹೇಮಂತ್ ಸೊರೇನ್​ರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಪಿಎಂ ಮೋದಿ ಅವರು ಪರಿಚಯ ಮಾಡಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದೆ. ಅದೇ ರೀತಿ, ಹಿಮಾಚಲ ಸಿಎಂ ಸುಖ್ವಿಂದರ್ ಸುಕ್ಕು ಜತೆಗೂ ಪ್ರಧಾನಿ ಅಷ್ಟೇ ಅಭಿಮಾನದಿಂದ ಮಾತನಾಡುತ್ತಿರುವ ದೃಶ್ಯಗಳು ಹೊರಬಂದಿವೆ. ಹೀಗಿದ್ದಾಗ, ಕರ್ನಾಟಕದ ಸಿಎಂ ಕೂಡ ಅಲ್ಲಿರಬೇಕಿತ್ತು ಎಂದು ಕರ್ನಾಟಕದ ಜನತೆ ಭಾವಿಸಿದರೆ ಅದು ತಪ್ಪಲ್ಲ.
ಒಂದರ್ಥದಲ್ಲಿ ಮುಖ್ಯಮಂತ್ರಿ ರಾಜ್ಯದ ರಾಯಭಾರಿಯಾಗಿರುತ್ತಾರೆ. ವಿಶ್ವ ನಾಯಕರನ್ನು ಭೇಟಿ ಮಾಡುವ ವೇಳೆ ರಾಜ್ಯಕ್ಕೆ ಬನ್ನಿ ಎಂಬ ಸೌಹಾರ್ದ ಆಹ್ವಾನ ವನ್ನಾದರೂ ನೀಡುವ ಅವಕಾಶವಿತ್ತು. ಆದರೆ, ಇದರಲ್ಲಿ ಯಾವುದೇ ಆಸಕ್ತಿ ತೋರಿಸದ ಸಿಎಂ, ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂದು ರಾಜ್ಯದಲ್ಲೇ ಉಳಿದುಕೊಂಡರು. ರಾಜಕೀಯ ಅಖಾಡದಲ್ಲಿ ಮಮತಾ, ನಿತೀಶ್, ಹೇಮಂತ್ ಸೊರೇನ್ ಎಲ್ಲರೂ ಮೋದಿಯವರನ್ನು ದ್ವೇಷಿಸುತ್ತಾರೆ. ಆದರೆ, ದೇಶದ ವಿಷಯ ಬಂದಾಗ ನಾವು ಒಗ್ಗಟ್ಟಾಗಿರಬೇಕು ಎಂಬ ಸಾಮಾನ್ಯ ತಿಳಿವಳಿಕೆ ಅವರಲ್ಲಿತ್ತು. ಹೀಗಾಗಿ, ಸಿದ್ದರಾಮಯ್ಯರ ನಡೆ ಕೇಂದ್ರ-ರಾಜ್ಯ ಸರ್ಕಾರದ ನಡುವಿನ ಸಂಬಂಧ ವೃದ್ಧಿಗೆ ಪೂರಕವಾಗಿರಲಿಲ್ಲ. ಬದಲಿಗೆ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದೇ ಹೇಳಬೇಕಾಗುತ್ತದೆ. ರಾಜ್ಯಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಔತಣಕೂಟಕ್ಕೆ ಆಹ್ವಾನಿಸಲಿಲ್ಲ ಎಂದು ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಆರೋಪ ಮಾಡಿದ್ದರು. ಖರ್ಗೆ ಕೂಡ ರಾಹುಲ್ ಆರೋಪಕ್ಕೆ ದನಿಗೂಡಿಸಿದರು. ಇದೇ ಖರ್ಗೆಯವರು ಹೊಸ ಸಂಸತ್ ಉದ್ಘಾಟನಾ ಕಾರ್ಯಕ್ರಮಕ್ಕೆ ನೀಡಿದ್ದ ಆಹ್ವಾನಕ್ಕೆ ಮನ್ನಣೆ ನೀಡದೆ, ಗೈರಾಗಿದ್ದರು. ಕೆಲ ದಿನಗಳ ಹಿಂದೆ ಕೆಂಪುಕೋಟೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೂ ಗೈರಾದರು. ಅನಾರೋಗ್ಯದ ಕಾರಣ ನೀಡಿದ್ದ ಅವರು, ತಮ್ಮ ನಿವಾಸ ಮತ್ತು ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ರಾಹುಲ್ ಅಂದು ಏಕೆ ಮಾತಾಡಿರಲಿಲ್ಲ? ಖರ್ಗೆಯವರಿಗೆ ರಾಷ್ಟ್ರಪತಿ ಔತಣಕೂಟಕ್ಕೆ ಆಹ್ವಾನ ನೀಡಿದ್ದರೆ, ಅವರ ಉಪಸ್ಥಿತಿ ಬಗ್ಗೆ ಸರ್ಕಾರಕ್ಕೆ ಖಚಿತತೆ ಇರಲಿಲ್ಲ. ಬಹುಶಃ ಆ ಕಾರಣಕ್ಕೇ ಆಹ್ವಾನ ನೀಡಿಲ್ಲ ಎಂದೂ ಹೇಳಲಾಗಿದೆ.
ಕೆನಡಾಕ್ಕೆ ಕಟು ಸಂದೇಶ:ಭಾರತದಲ್ಲಿ ಖಲಿಸ್ತಾನಿ ಉಗ್ರಗಾಮಿಗಳು ಬೇರೂರುವುದು ಹಾಗೂ ಕೆನಡಾದಲ್ಲಿನ ದುಷ್ಟಶಕ್ತಿಗಳು ಇದನ್ನು ಪೋಷಿಸುತ್ತಿರುವುದು ಭಾರತಕ್ಕೆ ಕಾಳಜಿಯ ವಿಷಯ. ಹೀಗಾಗಿ, ಕೆನಡಾ ಪ್ರಧಾನಿ ಪ್ರಧಾನಿ ಜಸ್ಟಿನ್ ಟ್ರುಡು ಅವರಿಗೆ ಮೋದಿ ಕಟು ಸಂದೇಶ ರವಾನಿಸಿದ್ದು, ಕೆನಡಾದಲ್ಲಿ ಉಗ್ರಗಾಮಿ ಶಕ್ತಿಗಳು ಭಾರತ ವಿರೋಧಿ ಚಟುವಟಿಕೆಗಳನ್ನು ಮುಂದುವರೆಸುತ್ತಿವೆ, ಇದಕ್ಕೆ ನೀವು ಕಡಿವಾಣ ಹಾಕಲೇಬೇಕು ಎಂದು ಹೇಳಿದ್ದಾರೆ. ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದವನ್ನು ಉತ್ತೇಜಿಸಲಾಗುತ್ತಿದೆ, ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಲಾಗುತ್ತಿದೆ. ರಾಜತಾಂತ್ರಿಕ ಆವರಣಗಳನ್ನು ಹಾನಿಗೊಳಿಸುತ್ತಿದ್ದಾರೆ. ನಿಮ್ಮಲ್ಲಿರುವ ಭಾರತೀಯ ಸಮುದಾಯ, ಅವರ ಪೂಜಾ ಸ್ಥಳಗಳಿಗೆ ಬೆದರಿಕೆ ಬರುತ್ತಿದೆ ಎಂದು ಮೋದಿ ತಿಳಿಸಿರುವ ಬಗ್ಗೆ ವಿದೇಶಾಂಗ ಇಲಾಖೆ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ. ಈ ಮೂಲಕ ಕೆನಡಾಕ್ಕೆ ಪರೋಕ್ಷವಾಗಿ ಎಚ್ಚರಿಕೆಯನ್ನೂ ನೀಡಲಾಗಿದೆ. ಸಂಘಟಿತ ಅಪರಾಧ, ಮಾದಕವಸ್ತು ಜಾಲ ಮತ್ತು ಮಾನವ ಕಳ್ಳಸಾಗಣೆಯೊಂದಿಗೆ ದುಷ್ಟ ಶಕ್ತಿಗಳ ನಂಟನ್ನು ಕೆನಡಾ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಭಾರತಕ್ಕೆ ಕೆನಡಾ ಸಹಕರಿಸಬೇಕು ಎಂದು ತಿಳಿಸಲಾಗಿದೆ. ಭಾರತ-ಕೆನಡಾ ಬಾಂಧವ್ಯದ ಪ್ರಗತಿಗೆ ಪರಸ್ಪರ ಗೌರವ, ನಂಬಿಕೆಯ ಸಂಬಂಧ ಅತ್ಯಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೆನಡಾದಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಖ್ ಮತಬ್ಯಾಂಕ್ ಇರುವುದರಿಂದ ಕೆನಡಾ ಸರ್ಕಾರ ಖಲಿಸ್ತಾನಿಗಳ ಬಗ್ಗೆ ಮೃದು ಧೋರಣೆ ತಾಳುತ್ತಿದೆ ಎಂದು ಹೇಳಲಾಗಿದೆ. ಆದರೆ, ಈ ನಿರ್ಲಕ್ಷ್ಯ ಧೋರಣೆ ಭಾರತದ ಮೇಲೆ ಪರಿಣಾಮ ಬೀರುತ್ತಿದೆ. ಕೃಷಿ ಕಾಯ್ದೆ ವಿರೋಧಿಸಿ ದಿಲ್ಲಿ ಗಡಿಭಾಗದಲ್ಲಿ ನಡೆದಿದ್ದ ಪ್ರತಿಭಟನೆ ಹಿಂದೆಯೂ ಖಲಿಸ್ತಾನಿ ಶಕ್ತಿಗಳ ಕೈವಾಡ ಇತ್ತು ಎಂದು ಗುಪ್ತಚರ ವರದಿಗಳೇ ಹೇಳಿವೆ. ಹೀಗಿರುವಾಗ, ಕೆನಡಾ ಪಿಎಂಗೆ ಮೋದಿ ಕಠಿಣ ಸಂದೇಶ ನೀಡಿರುವುದು ಗಮನಾರ್ಹ.
ಹವಾಮಾನ, ಪರಿಸರ ಕಾಳಜಿ:ಹಲವು ಜಾಗತಿಕ ಸಭೆಗಳಲ್ಲಿ ಚರ್ಚಯಾದಂತೆ ಜಿ-20 ಶೃಂಗಸಭೆಯಲ್ಲೂ ಹವಾಮಾನ ಬದಲಾವಣೆ, ಹಸಿರು ಪರಿಸರ ರಕ್ಷಣೆ, ಪ್ಲಾಸ್ಟಿಕ್ ಬಳಕೆ ತಗ್ಗಿಸುವ ಬಗ್ಗೆ ಗಂಭೀರ ಚರ್ಚೆಗಳಾಗಿವೆ. ಈ ಮೂರೂ ವಿಷಯಗಳು ಪ್ರಪಂಚಕ್ಕೆ ಭವಿಷ್ಯದಲ್ಲಿ ಭಾರೀ ಅಪಾಯ ತಂದೊಡ್ಡುವ ಸೂಚನೆಗಳಿರುವುದರಿಂದ ಭಾರತ ಸೇರಿದಂತೆ ಎಲ್ಲರೂ ಈ ಬಗ್ಗೆ ಕಳವಳ ಹೊಂದಿದ್ದಾರೆ. ಭಾರತದಲ್ಲಿ ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರಿದ್ದರೂ, ಪ್ಲಾಸ್ಟಿಕ್ ವಸ್ತುಗಳ ಪೂರೈಕೆ ಎಗ್ಗಿಲ್ಲದೆ ನಡೆಯುತ್ತಿದೆ. ಬಹುಪಾಲು ಭಾರತೀಯರು ಪ್ಲಾಸ್ಟಿಕ್ ಬಳಕೆ ಪ್ರಮಾಣವನ್ನು ಕಡಿಮೆ ಮಾಡಿಲ್ಲ ಮತ್ತು ಇದು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೂ, ತಮಗೇನೂ ಸಂಬಂಧ ಇಲ್ಲ ಎಂಬಂತೆ ಬದುಕುತ್ತಿದ್ದಾರೆ. ದೇಶದ ರಾಜಧಾನಿ ದೆಹಲಿಯೇ ಇದಕ್ಕೆ ತಾಜಾ ಉದಾಹರಣೆ. ದೇಶದ ನೀತಿ ನಿರೂಪಕರು ರಾಜಧಾನಿಯಲ್ಲಿದ್ದರೂ, ಪ್ಲಾಸ್ಟಿಕ್ ಬಳಕೆ ಮೇಲಿನ ನಿಷೇಧವನ್ನು ಇಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಸ್ಥಳೀಯಾಡಳಿತಗಳೂ ತಮಗೆ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿವೆ. ಹೀಗಾಗಿ, ಜಾಗತಿಕ ವೇದಿಕೆಗಳಲ್ಲಿ ಭಾರತವೂ ವಿಶ್ವ ನಾಯಕರು ಕಳವಳ ವ್ಯಕ್ತಪಡಿಸಿ ಪ್ರಯೋಜನವಿಲ್ಲ. ಪರಿಸರ ಹಾನಿಯ ವಿರೋಧಿ ಕ್ರಮಗಳ ಅನುಷ್ಠಾನ ಪರಿಣಾಮಕಾರಿಗಿಯಾದೆಯೇ ಎಂಬುದನ್ನು ಆಗಾಗ ಪರಿಶೀಲಿಸುತ್ತಿರಬೇಕು.
ವಿಶ್ವ ನಾಯಕರಿಗೆ ಕೈಯಿಂದ ಸುತ್ತುವ ಸ್ಕಾರ್ಫ್ ಉಡುಗೊರೆಯಾಗಿ ನೀಡುವ ಪ್ರಧಾನಿ ಮೋದಿ ನಿರ್ಧಾರದ ಹಿಂದೆ ಇತಿಹಾಸದ ಕಾರಣವೂ ಇದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಗುರುತಿಸುವ ಮತ್ತು ಪರಿಚಯಿಸುವ ಉದ್ದೇಶ ಅವರದ್ದಾಗಿತ್ತು. ಮಹಾತ್ಮ ಗಾಂಧಿ ಅವರ ಸಮಾಧಿಸ್ಥಳ ರಾಜ್​ಘಾಟ್ ಸ್ಮಾರಕಕ್ಕೆ ಜಿ-20 ನಾಯಕರು ಭೇಟಿ ನೀಡಿದ ವೇಳೆ ಅವರ ಹೆಗಲಿಗೆ ಖಾದಿ ಸ್ಕಾರ್ಫ್ ಹಾಕಿ ಸ್ವಾಗತಿಸಲಾಯಿತು. ಇದು ಅಹಿಂಸಾ ತತ್ವದ ಪ್ರಮುಖ ಸಂಕೇತವೂ ಹೌದು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತಕ್ಕೆ ಮುಕ್ತಿ ಸಿಕ್ಕ ಸಂದೇಶವನ್ನೂ ಅದು ಸಾರಿದೆ. ಗಾಂಧಿಗೆ ಖಾದಿ ಸ್ಕಾರ್ಫ್​ಗಳು ಸ್ವಾವಲಂಬನೆಯ ಲಾಂಛನವಾಗಿದ್ದವು. ಇದು ಭಾರತೀಯರು ಸ್ಥಳೀಯವಾಗಿ ತಯಾರಿಸುವ ಬಟ್ಟೆಯಾಗಿದೆ. ವಿದೇಶಗಳಿಂದ ಆಮದು ಮಾಡಿದ ಅಥವಾ ಬ್ರಿಟಿಷರ ಉತ್ಪನ್ನಗಳನ್ನು ಬಹಿಷ್ಕರಿಸಲು ಇದನ್ನು ವಿನ್ಯಾಸಗೊಳಿಸಲಾಗಿತ್ತು. ಇಂದು ಭಾರತೀಯರು ತಮ್ಮ ಕೈಗಾರಿಕಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಸಮರ್ಥರಾಗಿದ್ದಾರೆ ಮತ್ತು ನಾವು ವಿದೇಶಿಯರ ಮೇಲೆ ಎಲ್ಲದಕ್ಕೂ ಅವಲಂಬಿತರಾಗಿಲ್ಲ ಎಂಬುದನ್ನೂ ಇದು ವಿವರಿಸಿದೆ. ಒಟ್ಟಿನಲ್ಲಿ, ಜಿ-20 ಶೃಂಗಸಭೆ ಭಾರತೀಕರಣ ಹಾಗೂ ಭಾರತೀಯತೆಯ ಹೆಮ್ಮೆಯ ಸಭೆಯಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
