ವಿದಿಷಾ:ಜೂನ್​ 5ರಂದು ಪ್ರತಿವರ್ಷ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಅಂದು ಮಾತ್ರ ಎಲ್ಲರಲ್ಲೂ ಪರಿಸರ ಸಂರಕ್ಷಣೆಯ ಮಹತ್ವದ ನೆನಪಾಗುತ್ತದೆ. ಕೆಲವರು ಸಾಮೂಹಿಕವಾಗಿ ಸಸಿಗಳನ್ನು ನೆಟ್ಟು, ಮುಂದಿನ ಪರಿಸರ ದಿನಾಚರಣೆವರೆಗು ಮತ್ತೆ ಅತ್ತ ತಿರುಗಿಯೂ ನೋಡುವುದಿಲ್ಲ. ಇನ್ನು ಕೆಲವರು ಸಮೀಪದ ಕೆರೆಕಟ್ಟೆಗಳನ್ನು ಅರೆಬರೆಯಾಗಿ ಸ್ವಚ್ಛಗೊಳಿಸಿ ಮಹತ್ತಾದ ಸಾಧನೆ ಮಾಡಿದವರ ಹಾಗೆ ಪೋಸ್​ ಕೊಟ್ಟುಕೊಂಡು ಓಡಾಡುವುದೂ ಅಷ್ಟೇ ಸಹಜ.
ಆದರೆ ಮಧ್ಯಪ್ರದೇಶದ ವಿದಿಷಾದ ಈ ಸಮಿತಿ ಸದಸ್ಯರು ತಮ್ಮ ನಗರವನ್ನು ಹಾದು ಹೋಗಿರುವ ಯಮುನಾ ನದಿಯ ಉಪನದಿ ಬೆಟ್ವಾ ನದಿಯನ್ನು ನಿರಂತರವಾಗಿ 17 ವರ್ಷಗಳಿಂದ ಸ್ವಚ್ಛಗೊಳಿಸುತ್ತಲೇ ಇದ್ದಾರೆ. ಇದಕ್ಕಾಗಿ ಬೆಟ್ವಾ ಉತ್ಥಾನ ಸಮಿತಿ ಎಂಬ ಸಮಿತಿ ರಚಿಸಿಕೊಂಡಿದ್ದಾರೆ. ಇದರಲ್ಲಿ 30 ಜನ ಸದಸ್ಯರು ಇದ್ದು, ಪ್ರತಿದಿನ ಬೆಳಗ್ಗೆ ಒಂದೆರಡು ಗಂಟೆ ನದಿಯ ಸ್ವಚ್ಛತೆಗಾಗಿ ಶ್ರಮದಾನ ಮಾಡುತ್ತಾರೆ.

ಕೋವಿಡ್​-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್​ಡೌನ್​ ಘೋಷಿಸಲಾಗಿದ್ದರೂ ಈ ಸಮಿತಿ ಸದಸ್ಯರು ಮಾತ್ರ ತಮ್ಮ ಕಾಯಕವನ್ನು ನಿರಂತರವಾಗಿ ಮುಂದುವರಿಸಿದ್ದಾರೆ. ಶ್ರಮದಾನ ಮಾಡುವ ವೇಳೆ ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಅವರು ಮರೆತಿಲ್ಲ.ಬೆಟ್ವಾ ಉತ್ಥಾನ ಸಮಿತಿಯ ಇನ್ನೊಂದು ವಿಶೇಷತೆ ಇದೆ. ಈ ಸಮಿತಿಯಲ್ಲಿ ಆರ್​ಎಸ್​ಎಸ್​ ಸ್ವಯಂಸೇವಕರು ಹಾಗೂ ಮುಸ್ಲಿಮರು, ಪೊಲೀಸರು, ಶಿಕ್ಷಕರು, ಮಕ್ಕಳು, ವೃದ್ಧರು ಕೂಡ ಇದ್ದಾರೆ. ಮುಸ್ಲಿಮರು ಮತ್ತು ಆರ್​ಎಸ್​ಎಸ್​ ಸ್ವಯಂಸೇವಕರು ಇಬ್ಬರು ಸಾಲಲ್ಲಿ ನಿಂತು ನದಿಯಲ್ಲಿ ಹರಿದು ಬರುವ ಕೊಳಕನ್ನು ತುಂಬಿದ ಬುಟ್ಟಿಗಳನ್ನು ಪರಸ್ಪರ ದಾಟಿಸುತ್ತಾ ತ್ಯಾಜ್ಯವಿಲೇವಾರಿಗೆ ಸಹಕರಿಸುತ್ತಾ ಧಾರ್ಮಿಕ ಸೌಹಾರ್ದತೆ ಮೆರೆಯುತ್ತಿದ್ದಾರೆ.
ಮೇಘದೂತಕ್ಕೂ ಸಾಕ್ಷಿ:ಸಂಸ್ಕೃತ ಕವಿರತ್ನ ಕಾಳಿದಾಸ ಈ ನದಿಯ ತಟದಲ್ಲಿ ಕುಳಿತು ಮೇಘದೂತ ಮಹಾಕಾವ್ಯದ ಎರಡು ಅಧ್ಯಾಯಗಳನ್ನು ಬರೆದಿದ್ದ ಎಂಬ ನಂಬಿಕೆ ತುಂಬಾ ಹಿಂದಿನಿಂದಲೂ ಇದೆ.
ನದಿಯ ಬಳಿಗೆ ಬರುವ ಜನರು ಪೂಜೆ ಮಾಡಿ, ಹೂವು ಸೇರಿ ಪೂಜೆಯ ವಸ್ತುಗಳು, ಬಟ್ಟೆ, ಪ್ಲಾಸ್ಟಿಕ್​ ಮತ್ತಿತರ ತ್ಯಾಜ್ಯವನ್ನು ಹಾಗೆಯೇ ಬಿಟ್ಟು ಹೋಗುತ್ತಾರೆ. ಕೆಲವರು ಬಾಟಲಿಗಳನ್ನು ಎಸೆದಿರುತ್ತಾರೆ. ಈ ತ್ಯಾಜ್ಯವನ್ನು ನಾವು ಸ್ವಚ್ಛಗೊಳಿಸಿ, ನದಿಯಲ್ಲಿ ನೈರ್ಮಲ್ಯ ಕಾಪಾಡುತ್ತೇವೆ. ಮೊದಲು ಈ ಪ್ರದೇಶದಲ್ಲಿ ದುರ್ನಾತ ಹಬ್ಬಿರುತ್ತಿತ್ತು. ಆದರೆ, 17 ವರ್ಷಗಳಿಂದ ಪ್ರತಿದಿನವೂ ಸ್ವಚ್ಛಗೊಳಿಸುತ್ತಿರುವುದರಿಂದ ನದಿಯ ಸುತ್ತಮುತ್ತಲ ಪ್ರದೇಶದಲ್ಲಿ ಈ ದುರ್ನಾತ ಇಲ್ಲವಾಗಿದೆ ಎಂದು ಬೆಟ್ವಾ ಉತ್ಥಾನ ಸಮಿತಿಯ ಸದಸ್ಯರು ಹೇಳುತ್ತಾರೆ.

ಅದೊಂದು ದಿನ ಮೊಹರಂ ಮತ್ತು ದಸರಾ ಹಬ್ಬಗಳೆರಡೂ ಒಂದೇ ದಿನ ಬಂದಿತ್ತು. ಆದರೂ ಎಂದಿನಂತೆ ನದಿಯ ಬಳಿಗೆ ಬಂದ ಸಮಿತಿಯ ಮುಸ್ಲಿಂ ಮತ್ತು ಹಿಂದು ಸದಸ್ಯರು ನದಿಯನ್ನು ಸ್ವಚ್ಛಗೊಳಿಸಿದ್ದಲ್ಲದೆ, ಒಟ್ಟಾಗಿ ಎರಡೂ ಹಬ್ಬಗಳನ್ನು ಆಚರಿಸಿ, ಕೋಮು ಸೌಹಾರ್ದತೆ ಮೆರೆದರು ಎಂದು ಸಾರ್ವಜನಿಕರೊಬ್ಬರು ತಿಳಿಸುತ್ತಾರೆ.
ಜಿಲ್ಲಾಧಿಕಾರಿಯಿಂದ ಆರಂಭ:ಬಿಟ್ವಾ ನದಿಯ ಪರಿಸರದಲ್ಲಿ ಭಾರಿ ದುರ್ನಾತ ಹಬ್ಬಿರುವುದು, ಕೊಳಕು ತುಂಬಿರುವುದನ್ನು ಗಮನಿಸಿದ 2003ರಲ್ಲಿ ವಿದಿಷಾ ಜಿಲ್ಲಾಧಿಕಾರಿಯಾಗಿದ್ದ ಸುಧಾ ಚೌಧರಿ, ಬೆಟ್ವಾ ನದಿಯ ಸ್ವಚ್ಛತೆಗಾಗಿ ಬೆಟ್ವಾ ಉತ್ಥಾನ ಸಮಿತಿ ರಚಿಸಿದರು. 2003ರ ಜನವರಿ 11ರಂದು ಕಾರ್ಯಾರಂಭಿಸಿದ ಈ ಸಮಿತಿಯ ಸದಸ್ಯರು ಅಂದಿನಿಂದಲೂ ಪ್ರತಿದಿನವೂ ನದಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಈ ಸಮಿತಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುತ್ತಾರೆ.
ಉತ್ತರ ಪ್ರದೇಶದಲ್ಲಿ ಸಂಗಮ:ಮಧ್ಯಪ್ರದೇಶದ ರೈಸೆನ್​ ಜಿಲ್ಲೆಯ ವಿಂಧ್ಯಾ ಪರ್ವತಶ್ರೇಣಿಯಲ್ಲಿ ಉಗಮಿಸುವ ಬೆಟ್ವಾ ನದಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಸಾಗುತ್ತಾ, ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ಯಮುನಾ ನದಿಯನ್ನು ಸಂಗಮಿಸುತ್ತದೆ.
ಗಿಡ ನೆಟ್ಟರು:ಈ ವರ್ಷದ ಪರಿಸರ ದಿನಾಚರಣೆ ನಿಮಿತ್ತ ನದಿಯ ಸುತ್ತ ಮರಗಿಡಗಳನ್ನು ಬೆಳೆಸಲು ಬೆಟ್ವಾ ಉತ್ಥಾನ ಸಮಿತಿ ಸದಸ್ಯರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯೇ ನದಿ ಬಳಿಗೆ ಬಂದ ಸಮಿತಿ ಸದಸ್ಯರು ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಿ, ಸಸಿಗಳನ್ನು ನೆಟ್ಟು, ಅವುಗಳನ್ನು ವೈಯಕ್ತಿಕವಾಗಿ ಪೋಷಿಸುವ ನಿರ್ಧಾರ ಕೈಗೊಂಡರು.
ಮಂಕಿ V/S ಲೆಪರ್ಡ್: ಮಂಗನ ಹಿಡಿತಕ್ಕೆ ಸೋಲಲೇ ಬೇಕಾಯ್ತು ಈ ಚಿರತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 9 =
Remember me
