ಮಹಾರಾಷ್ಟ್ರದಲ್ಲಿನ ಸದ್ಯದ ರಾಜಕೀಯ ಬಿಕ್ಕಟ್ಟು ಪಕ್ಷಾಂತರ ವಿರೋಧಿ ಕಾನೂನು, ಸ್ಪೀಕರ್ ಮತ್ತು ರಾಜ್ಯಪಾಲರ ಪಾತ್ರಗಳು ಇತ್ಯಾದಿ ಅಂಶಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಏಕನಾಥ್ ಶಿಂಧೆ ನೇತೃತ್ವದಲ್ಲಿ ಆಡಳಿತಾರೂಢ ಶಿವಸೇನೆಯ ಹಲವು ಶಾಸಕರು ಬಂಡಾಯ ಎದ್ದಿದ್ದಾರೆ. ಶಿಂಧೆ ಬಣದ 16 ಶಾಸಕರಿಗೆ ಶಾಸಕ ಸ್ಥಾನ ದಿಂದ ಅನರ್ಹಗೊಳಿಸುವ ಕುರಿತಂತೆ ನೋಟಿಸ್ ಜಾರಿಯಾಗಿದೆ. ಈ ನಡುವೆ, ಜುಲೈ 12ರವರೆಗೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸವೋಚ್ಚ ನ್ಯಾಯಾಲಯ ಸೋಮವಾರ ಸೂಚಿಸಿದೆ.
ಪಕ್ಷವನ್ನು ತೊರೆಯುವ ಶಾಸಕರ ಸಂಖ್ಯೆ ಆ ಪಕ್ಷದ ಶಾಸಕ ಬಲದ ಮೂರನೇ ಎರಡರಷ್ಟು ಇದ್ದರೆ ಪಕ್ಷಾಂತರ ವಿರೋಧಿ ಕಾನೂನು ಅನ್ವಯಿಸುವುದಿಲ್ಲ. ಈ ಶಾಸಕರು ಬೇರೆ ಪಕ್ಷದೊಂದಿಗೆ ವಿಲೀನಗೊಳ್ಳಬಹುದು ಅಥವಾ ಶಾಸಕಾಂಗದಲ್ಲಿ ಪ್ರತ್ಯೇಕ ಗುಂಪಾಗಬಹುದು. ಉದಾಹರಣೆಗೆ, ಕಳೆದ ವರ್ಷ ಮೇಘಾಲಯದಲ್ಲಿ 17 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್​ಗೆ ಸೇರ್ಪಡೆಗೊಂಡರು. 2019ರಲ್ಲಿ, ರಾಜಸ್ತಾನದ ಬಹುಜನ ಸಮಾಜ ಪಕ್ಷದ ಎಲ್ಲ ಆರು ಶಾಸಕರು ಕಾಂಗ್ರೆಸ್​ಗೆ ಸೇರಿದರು. ಅದೇ ವರ್ಷ, ತೆಲುಗು ದೇಶಂನ ಆರು ರಾಜ್ಯಸಭಾ ಸಂಸದರ ಪೈಕಿ ನಾಲ್ವರು ಬಿಜೆಪಿ ಸೇರಿದರು. ಈ ಎಲ್ಲ ಸಂದರ್ಭಗಳಲ್ಲಿ, ಪಕ್ಷಾಂತರ ವಿರೋಧಿ ಕಾನೂನು ಪ್ರಕಾರ ಅನರ್ಹತೆ ಉಂಟಾಗಲಿಲ್ಲ.
ಮಹಾರಾಷ್ಟ್ರದ ಪ್ರಸ್ತುತ ಪರಿಸ್ಥಿತಿಯಲ್ಲಿ ನಿಯಮದ ಅನ್ವಯ ಹೇಗೆ?:ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ ಶಾಸಕರ ಒಟ್ಟು ಸಂಖ್ಯೆ 55 ಇದೆ. ಇದರಲ್ಲಿ ಮೂರನೇ ಎರಡರಷ್ಟು ಎಂದರೆ 37 ಆಗುತ್ತದೆ. ಶಿಂಧೆ ಗುಂಪಿನಲ್ಲಿ ಇಷ್ಟು ಸಂಖ್ಯೆಯ ಶಾಸಕರು ಇದ್ದರೆ (ಈ ಬಗ್ಗೆ ಭಿನ್ನ ಭಿನ್ನ ಸಂಖ್ಯೆಗಳು ವರದಿಯಾಗುತ್ತಿವೆ) ಪಕ್ಷಾಂತರ ವಿರೋಧಿ ಕಾನೂನು ಅನ್ವಯಿಸುವುದಿಲ್ಲ. ಆದರೆ, ಶಾಸಕರು ಪಕ್ಷವನ್ನು ತೊರೆದಿದ್ದಾರೆಯೇ ಅಥವಾ ಪಕ್ಷದ ಮೂರನೇ ಎರಡರಷ್ಟು ಗುಂಪು ತೊರೆದಿದೆಯೇ ಎಂಬುದನ್ನು ವಿಧಾನಸಭೆ ಸ್ಪೀಕರ್ ನಿರ್ಧರಿಸುತ್ತಾರೆ. ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ 2019ರಲ್ಲಿ ರಾಜೀನಾಮೆ ನೀಡಿದ್ದರಿಂದ ಮಹಾ ರಾಷ್ಟ್ರ ವಿಧಾನಸಭೆಯ ಸ್ಪೀಕರ್ ಸ್ಥಾನವು ಪ್ರಸ್ತುತ ಖಾಲಿಯಾಗಿದೆ. ಸ್ಪೀಕರ್ ಹುದ್ದೆ ಖಾಲಿ ಇರುವ ಸಂದರ್ಭದಲ್ಲಿ ಡೆಪ್ಯುಟಿ ಸ್ಪೀಕರ್ ಅವರು ಸ್ಪೀಕರ್ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಸಂವಿಧಾನದ 180 (1) ನೇ ವಿಧಿ ಹೇಳುತ್ತದೆ. ಹೀಗಾಗಿ, ಉಪ ಸ್ಪೀಕರ್ ಎನ್​ಸಿಪಿಯ ನರಹರಿ ಜಿರ್ವಾಲ್ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅನರ್ಹತೆಗೆ ವಿನಾಯಿತಿ:ಒಂದು ರಾಜಕೀಯ ಪಕ್ಷದ ಮೂರನೇ ಎರಡರಷ್ಟು ಶಾಸಕರು ಮತ್ತೊಂದು ಪಕ್ಷದಲ್ಲಿ ವಿಲೀನವಾಗಲು ನಿರ್ಧರಿಸುವ ಪರಿಸ್ಥಿತಿಯಲ್ಲಿ, ಬೇರೆ ಪಕ್ಷ ಸೇರಲು ನಿರ್ಧರಿಸಿದ ಸದಸ್ಯರಾಗಲಿ ಅಥವಾ ಮೂಲ ಪಕ್ಷದೊಂದಿಗೆ ಉಳಿಯುವ ಸದಸ್ಯರಾಗಲಿ ಅನರ್ಹತೆ ಎದುರಿಸುವುದಿಲ್ಲ.
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದ್ದಾಗ ರಾಜ್ಯಪಾಲರ ಪಾತ್ರ ಬಹುಮುಖ್ಯ. 1994 ರ ಮೊದಲು, ರಾಜ್ಯಪಾಲರು ರಾಜ್ಯ ಸರ್ಕಾರಗಳನ್ನು ತ್ವರಿತವಾಗಿ ವಜಾಗೊಳಿಸುವ ರೂಢಿ ಇತ್ತು. ಶಾಸಕಾಂಗದಲ್ಲಿ ಬಹುಮತ ಹೊಂದಿಲ್ಲ ಎಂದು ಹೇಳಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುತ್ತಿದ್ದರು. ಆದರೆ, 1994ರಲ್ಲಿ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡುವುದರೊಂದಿಗೆ ಈ ಅಭ್ಯಾಸ ಕೊನೆಗೊಂಡಿತು. ಬೊಮ್ಮಾಯಿ ಪ್ರಕರಣದಲ್ಲಿ ನ್ಯಾಯಾಲಯವು, ಸರ್ಕಾರವು ಬಹುಮತ ಕಳೆದುಕೊಂಡಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುವ ಸ್ಥಳವು ಶಾಸಕಾಂಗವೇ ಆಗಿದೆ ಎಂದು ತೀರ್ಪು ನೀಡಿದೆ. ಪ್ರಸ್ತುತ ಬೆಳವಣಿಯಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು, ವಿಧಾನಸಭೆ ಅಧಿವೇಶನ ಕರೆದು, ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಸೂಚಿಸಬಹುದು.
ಮಹಾರಾಷ್ಟ್ರದಲ್ಲಿನ ಈ ಸಂದರ್ಭದಲ್ಲಿ, ವಿಧಾನಸಭೆ ವಿಸರ್ಜನೆ ಆಗಬಹುದೇ ಎಂಬ ಚರ್ಚೆಯೂ ನಡೆಯುತ್ತಿದೆ. ಯಾವುದೇ ರಾಜ್ಯದ ಮುಖ್ಯಮಂತ್ರಿ ಐದು ವರ್ಷಗಳ ಅವಧಿ ಮುಗಿಯುವ ಮೊದಲು ಶಾಸಕಾಂಗವನ್ನು ವಿಸರ್ಜಿಸಿ ಚುನಾವಣೆಗೆ ಹೋಗುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಬಹುದು. ಇಂತಹ ಸಂದರ್ಭದಲ್ಲಿ ರಾಜ್ಯಪಾಲರ ವಿವೇಚನೆ ಮಹತ್ವ ಪಡೆದು ಕೊಳ್ಳುತ್ತದೆ. ರಾಜ್ಯ ಶಾಸಕಾಂಗದ ವಿಶ್ವಾಸವನ್ನು ಹೊಂದಿರದ ಸಚಿವ ಸಂಪುಟದಿಂದ ವಿಸರ್ಜನೆಯ ಶಿಫಾರಸು ಬರುತ್ತಿದೆ ಎಂದು ಅವರಿಗೆ ಮನದಟ್ಟಾದರೆ ಆ ಶಿಫಾರಸನ್ನು ಒಪ್ಪದೆ ಇರಬಹುದು.
ಆಯಾ ರಾಮ್ ಗಯಾ ರಾಮ್:ಪಕ್ಷನಿಷ್ಠೆ ಬದಲಿಸುವ ಪ್ರವೃತ್ತಿಗೆ ‘ಆಯಾ ರಾಮ್ ಗಯಾ ರಾಮ್ ಎಂಬ ವ್ಯಂಗ್ಯೋಕ್ತಿ ಇದೆ. ಹರಿಯಾಣ ಶಾಸಕ ಗಯಾ ಲಾಲ್ ಅವರು 1967ರಲ್ಲಿ ಒಂದೇ ದಿನದಲ್ಲಿ ಮೂರು ಬಾರಿ ಪಕ್ಷ ಬದಲಾಯಿಸಿದ್ದರು. ಕೊನೆಗೂ ಅವರ ನಿಷ್ಠೆಯನ್ನು ಖಾತ್ರಿ್ರಡಿಸಿಕೊಂಡ ನಂತರ, ಹಿರಿಯ ಕಾಂಗ್ರೆಸ್ ನಾಯಕ ರಾವ್ ಬಿರೇಂದರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ‘ಗಯಾ ರಾಮ್ ಅಬ್ ಆಯಾ ರಾಮ್ ಹೈ’ ಎಂದು ಹೇಳಿದ್ದರು. ಈ ಹೇಳಿಕೆ ಕೆಲ ಬದಲಾವಣೆಯೊಂದಿಗೆ ‘ಆಯಾ ರಾಮ್ ಗಯಾ ರಾಮ್ ಎಂಬ ನುಡಿಗಟ್ಟಾಗಿ ಮಾರ್ಪಟ್ಟಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ, ಕಾನೂನಿನಡಿಯಲ್ಲಿ ಎರಡು ಮಾರ್ಗಗಳು ತೆರೆದುಕೊಳ್ಳುತ್ತವೆ.
ಈ ಎರಡೂ ಸಂದರ್ಭಗಳಲ್ಲಿ, ಸ್ಪೀಕರ್ ಎಲ್ಲರ ವಾದಗಳನ್ನು ಆಲಿಸಿದ ನಂತರ ಅಂತಿಮವಾಗಿ ನಿರ್ಧರಿಸುತ್ತಾರೆ. ಈ ಪ್ರಕ್ರಿಯೆಗೆ ಕೆಲ ಸಮಯ ಬೇಕಾಗುತ್ತದೆ.
ಸಂವಿಧಾನದ ಹತ್ತನೇ ಪರಿಚ್ಛೇದವನ್ನು ಸಾಮಾನ್ಯವಾಗಿ ಪಕ್ಷಾಂತರ-ವಿರೋಧಿ ಕಾನೂನು ಎಂದು ಕರೆಯಲಾಗುತ್ತದೆ. ಶಾಸಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ನಿಷ್ಠೆಯನ್ನು ಬದಲಾಯಿಸುವ ಪ್ರವೃತ್ತಿಯನ್ನು ಮತ್ತು ಸರ್ಕಾರಗಳನ್ನು ಉರುಳಿಸಿ ಹೊಸದನ್ನು ರಚಿಸುವುದನ್ನು ತಡೆಯುವ ನಿಟ್ಟಿನಲ್ಲಿ 1985ರಲ್ಲಿ ಈ ಕಾನೂನು ರೂಪಿಸಲಾಯಿತು. ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ ಸಂವಿಧಾನದ 52ನೇ ತಿದ್ದುಪಡಿ ಮೂಲಕ ಈ ಕಾನೂನು ಜಾರಿಗೆ ತಂದರು. ಯಾವುದೇ ಶಾಸಕಾಂಗ ಸದಸ್ಯರು ಸಲ್ಲಿಸುವ ಮನವಿಯ ಆಧಾರದ ಮೇಲೆ ಪಕ್ಷಾಂತರಿಗಳನ್ನು ಅನರ್ಹಗೊಳಿಸುವ ಅವಕಾಶವನ್ನು ಸ್ಪೀಕರ್​ಗೆ ಇದು ನೀಡುತ್ತದೆ. ಒಬ್ಬ ಶಾಸಕ ಅಥವಾ ಸಂಸದನನ್ನು ಯಾವ ಸಂದರ್ಭಗಳಲ್ಲಿ ಅನರ್ಹಗೊಳಿಸಬಹುದು ಎಂಬುದನ್ನು 10ನೇ ಪರಿಚ್ಛೇದದಲ್ಲಿ ವಿವರಿಸಲಾಗಿದೆ.
ಮೊದಲನೆಯದಾಗಿ, ಚುನಾಯಿತ ಸದಸ್ಯ ಸ್ವಇಚ್ಛೆಯಿಂದ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದಾಗ ಅನರ್ಹಗೊಳಿಸಬಹುದು. ಎರಡನೆಯದಾಗಿ, ಪಕ್ಷದ ಆದೇಶವನ್ನು (ವ್ಹಿಪ್) ಉಲ್ಲಂಘಿಸಿ ಚುನಾಯಿತ ಸದಸ್ಯ ಸದನದಲ್ಲಿ ಮತ ಚಲಾಯಿಸಿದಾಗ ಅಥವಾ ಮತ ಚಲಾವಣೆಯಿಂದ ದೂರ ಉಳಿದಾಗ ಅನರ್ಹಗೊಳಿಸಬಹುದು. ಮೂರನೆಯದಾಗಿ, ಪಕ್ಷೇತರರಾಗಿ ಆಯ್ಕೆಯಾದ ಸದಸ್ಯರು ಯಾವುದಾದರೂ ಪಕ್ಷ ಸೇರಿದಾಗ ಅನರ್ಹಗೊಳಿಸಬಹುದು.
ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…

ಎರಡನೇ ಮಗುವೂ ಹೆಣ್ಣಾಯ್ತೆಂದು ಮೊದಲ ಮಗಳನ್ನು ಕೊಲ್ಲಲು ಯತ್ನಿಸಿದ ತಂದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
