ನವದೆಹಲಿ:ಕೇಂದ್ರದ ಮೂರು ಕೃಷಿ ಕಾಯ್ದೆ ವಾಪಸ್, ತೈಲ, ಅಡುಗೆ ಅನಿಲ ದರ ಇಳಿಕೆಯ ಪ್ರಮುಖ ಬೇಡಿಕೆಯೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್ ದೇಶಾದ್ಯಂತ ಬಹುತೇಕ ಪ್ರತಿಭಟನಾ ರ್ಯಾಲಿಗಷ್ಟೆ ಸೀಮಿತವಾಗಿತ್ತು. ರೈತರ ಪ್ರತಿಭಟನೆ ಚಾಲ್ತಿಯಲ್ಲಿರುವ ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶಗಳಲ್ಲಿ ವ್ಯಾಪಕ ಮತ್ತು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ತುಸು ಹೆಚ್ಚು ಹಾಗೂ ಬೇರೆ ರಾಜ್ಯಗಳಲ್ಲಿ ಸಾಂಕೇತಿಕ ಪ್ರತಿಭಟನೆಗಳು ಕಂಡುಬಂದವು. ಹಲವೆಡೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು. ಈಶಾನ್ಯ ರಾಜ್ಯಗಳಲ್ಲಿ ಬಂದ್ ಯಾವುದೇ ಪರಿಣಾಮ ಬೀರಲಿಲ್ಲ. ಸರ್ಕಾರಿ ಕಚೇರಿ, ಬ್ಯಾಂಕ್, ಉದ್ದಿಮೆಗಳು, ಶಿಕ್ಷಣ ಸಂಸ್ಥೆ, ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಾರ್ವಜನಿಕ ಸಾರಿಗೆ, ರೈಲು, ಆಟೋ, ಟ್ಯಾಕ್ಸಿಗಳ ಸಂಚಾರಕ್ಕೆ ಧಕ್ಕೆ ಆಗಲಿಲ್ಲ. ಕೆಲವು ರಾಜ್ಯ ಸರ್ಕಾರಗಳು ಸ್ವಯಂಪ್ರೇರಿತವಾಗಿ ಬಸ್ ಸಂಚಾರ ನಿಲ್ಲಿಸಿದ್ದವು.
ದೆಹಲಿಯಲ್ಲಿ ತೀವ್ರ ವಾಹನ ದಟ್ಟಣೆ:ರಾಜಧಾನಿ ದೆಹಲಿಯ ಸಿಂಘು, ಟಿಕ್ರಿ, ಗಾಜಿಯಾಬಾದ್ ಗಡಿಗಳಲ್ಲಿ ಬೃಹತ್ ರ‍್ಯಾಲಿ ನಡೆದ ಕಾರಣ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶಗಳ ಎಕ್ಸ್​ಪ್ರೆಸ್ ವೇ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ತಡೆ ನಡೆದ ಕಾರಣ ಜನಜೀವನ ಅಸ್ತವ್ಯಸ್ತವಾಯಿತು. ಪಂಜಾಬ್ ಮತ್ತು ಹರಿಯಾಣಗಳಲ್ಲಿ 20ಕ್ಕೂ ಹೆಚ್ಚು ಕಡೆ ರೈಲು ತಡೆ ನಡೆಯಿತು. ಇದರಿಂದ 25 ರೈಲುಗಳ ಸಂಚಾರ ವ್ಯತ್ಯಯವಾಯಿತು ಎಂದು ರೈಲ್ವೆ ಇಲಾಖೆ ಹೇಳಿದೆ. ಬಂದ್​ಗೆ ಕಾಂಗ್ರೆಸ್, ಬಿಎಸ್​ಪಿ, ಆರ್​ಜೆಡಿ, ಆಮ್ ಆದ್ಮಿ ಪಕ್ಷ, ಟಿಡಿಪಿ, ಎಡಪಕ್ಷಗಳು ಸೇರಿ ಇನ್ನಿತರ ಪಕ್ಷಗಳು ಬೆಂಬಲ ಸೂಚಿಸಿದ್ದವು. ಈ ಪಕ್ಷಗಳ ಪ್ರಬಲವಾಗಿರುವ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರವಾಗಿತ್ತು.
ಎಮ್ಮೆಗೆ ಹೋಲಿಕೆ:ಕೊಪ್ಪಳದಲ್ಲಿ ಕರವೇ ಪದಾಧಿಕಾರಿಗಳು ಕೇಂದ್ರ ಸರ್ಕಾರವನ್ನು ಎಮ್ಮೆಗೆ ಹೋಲಿಸಿ ಪ್ರತಿಭಟನೆ ನಡೆಸಿದರು. ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಅವರ ಕೂಗು ಕಿವಿಗೆ ಹಾಕಿಕೊಳ್ಳದ ಸರ್ಕಾರ ಎಮ್ಮೆಯಂತೆ ಮೊಂಡುತನ ಮಾಡುತ್ತಿದೆ ಎಂದು ಅಣಕ ಮಾಡಿದರು.
ದೇಶಾದ್ಯಂತ ಬಂದ್ ಯಶಸ್ವಿಯಾಗಿ ನಡೆದಿದೆ. ಸರ್ಕಾರಿ, ಖಾಸಗಿ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು, ಮಳಿಗೆ, ಕೈಗಾರಿಕೆಗಳು, ವಾಣಿಜ್ಯೋದ್ಯಮಗಳು ಮುಚ್ಚಿದ್ದವು. ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿಲ್ಲ. ತುರ್ತು ಸೇವೆ ಬಿಟ್ಟರೆ ಉಳಿದ್ದಲ್ಲ ಸ್ತಬ್ಧವಾಗಿದ್ದವು. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ
|ಸಂಯುಕ್ತ ಕಿಸಾನ್ ಮೋರ್ಚಾ
ರೈತರ ಅಹಿಂಸಾ ಮಾರ್ಗದ ಸತ್ಯಾಗ್ರಹ ಇವತ್ತಿಗೂ ದೃಢವಾಗಿ ನಡೆಯುತ್ತಿದೆ. ಆದರೆ, ದಬ್ಬಾಳಿಕೆಯ ಸರ್ಕಾರಕ್ಕೆ ಇದು ಹಿಡಿಸುತ್ತಿಲ್ಲ. ರೈತರನ್ನು ಶೋಷಣೆ ಮಾಡುವುದೇ ಅದರ ಕೆಲಸವಾಗಿದೆ. ಹೀಗಾಗಿ ಭಾರತ್ ಬಂದ್ ನಡೆದಿದೆ.
|ರಾಹುಲ್ ಗಾಂಧಿಕಾಂಗ್ರೆಸ್ ನಾಯಕ
ನಮ್ಮ ಹೋರಾಟ ಯಶಸ್ವಿಯಾಗಿದೆ. ಸರ್ಕಾರ ಹಟಕ್ಕೆ ಬಿದ್ದಿತ್ತು. ಜನರು ಬಂದ್​ಗೆ ಬೆಂಬಲಿಸಿದ್ದಾರೆ. ಜಿಲ್ಲೆಗಳಲ್ಲೂ ಬಂದ್ ಯಶಸ್ವಿಯಾಗಿದೆ. ನವೆಂಬರ್​ನಲ್ಲಿ ಮತ್ತೊಂದು ಬೃಹತ್ ಹೋರಾಟ ಮಾಡಲು ಚಿಂತಿಸಲಾಗಿದೆ.
|ಕೋಡಿಹಳ್ಳಿ ಚಂದ್ರಶೇಖರ್ರೈತ ಮುಖಂಡ
ಸಾರ್ವಜನಿಕರು ಈಗಷ್ಟೇ ಕೋವಿಡ್ ಆತಂಕದಿಂದ ಮುಕ್ತ ರಾಗಿದ್ದಾರೆ. ವ್ಯಾಪಾರ, ವಹಿವಾಟು ಪುನಃ ಆರಂಭಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತ ಬಂದ್​ಗೆ ಕರೆ ನೀಡಿದ್ದು ಸರಿಯಲ್ಲ.
|ಬಸವರಾಜ ಬೊಮ್ಮಾಯಿಸಿಎಂ (ಹುಬ್ಬಳ್ಳಿಯಲ್ಲಿ ಹೇಳಿದ್ದು)
ಕೃಷಿಕರಿಗೆ ಮಾರಕವಾಗಿರುವ ಈ ಕಾಯ್ದೆಗಳನ್ನು ಹಿಂಪಡೆ ಯಬೇಕೆಂದು ದೆಹಲಿಯಲ್ಲಿ ಕಳೆದ 9 ತಿಂಗಳಿನಿಂದ ರೈತರು ಹೋರಾಟ ಮಾಡುತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅವರಿಗೆ ಬೆಂಬಲ ನೀಡುವ ಉದ್ದೇಶದಿಂದ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ.
|ಕುರುಬೂರು ಶಾಂತಕುಮಾರ್ರೈತ ಮುಖಂಡ
ಬಂದ್​ಗೆ ಕರೆ ನೀಡುವ ಅಗತ್ಯವೇ ಇರಲಿಲ್ಲ. ವರ್ಷವಿಡೀ ರೈತರು ಪ್ರತಿಭಟನೆ ನಡೆಸಲು ಸಾಧ್ಯವೇ? ನಿಜವಾದ ರೈತರು ಸೌಲಭ್ಯ ಕೇಳುತ್ತಿದ್ದಾರೆ. ರೈತರು ಕೇಳುವ ಸೌಲಭ್ಯ ನೀಡಲು ಸರ್ಕಾರ ತಯಾರಿದೆ. ಇದು ರೈತರ ಸರ್ಕಾರ.
|ನಾರಾಯಣ ಗೌಡರೇಷ್ಮೆ ಸಚಿವ
ರೈತರ ಆದಾಯ ದ್ವಿಗುಣಗೊಳಿಸಲು ಮತ್ತು ಕೃಷಿ ಉತ್ಪನ್ನಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಮುಕ್ತ ಅವಕಾಶ ಕಲ್ಪಿಸಿದ್ದು, ಇದನ್ನು ಸಹಿಸಲಾಗದ ದಲ್ಲಾಳಿಗಳು ರೈತರ ಹೆಸರಿನಲ್ಲಿ ಹೋರಾಟಕ್ಕೆ ಇಳಿದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೌನ್ ಹಾಲ್ ಬಳಿ ಬಂದು ಪ್ರತಿಭಟನೆ ಮಾಡಿದವರಲ್ಲಿ ನಿಜವಾದ ರೈತರು ಎಷ್ಟು, ಎಷ್ಟು ಜನರಿಗೆ ಉಳುಮೆ ಮಾಡಲು, ಬೆಳೆ ಬೆಳೆಯಲು ಬರುತ್ತದೆ? ಎಂದು ಕೇಳಿದರು. ಸುಳ್ಳು ಹಾಗೂ ಸಿದ್ಧರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ವಯಸ್ಸಾದ ಮೇಲೆ ಕಣ್ಣಿನ ಪೊರೆ ಜಾಸ್ತಿಯಾಗುತ್ತದಂತೆ. ಅವರಿಗೆ ಯಾವ್ಯಾವ ಪೊರೆ ಬೆಳೆದಿದೆಯೋ ಗೊತ್ತಿಲ್ಲ. ಪೊರೆ ಸರಿಸಿದರೆ ತಾಲಿಬಾನ್ ಏನೆಂದು ಗೊತ್ತಾಗುತ್ತದೆ ಎಂದು ಕುಟುಕಿದರು.
ಪರ-ವಿರೋಧ ಪ್ರತಿಭಟನೆ:ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಬಸ್ ನಿಲ್ದಾಣದ ಒಂದು ಭಾಗದಲ್ಲಿ ಭಾರತ ಬಂದ್ ಪರ ವಾಗಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರೆ, ನಿಲ್ದಾಣದ ಮತ್ತೊಂದು ಕಡೆ ಬಿಜೆಪಿ ಕಾರ್ಯ ಕರ್ತರು ಭಾರತ್ ಬಂದ್ ವಿರುದ್ಧ ಪ್ರತಿಭಟನೆ ನಡೆಸಿದರು. ಪರಸ್ಪರ ವಿರುದ್ಧದ ಘೊಷಣೆ ತಾರಕಕ್ಕೇರುತ್ತಿದ್ದಂತೆಯೇ ಪೊಲೀಸರು ತಮ್ಮ ವಾಹನ ಗಳನ್ನು ಮಧ್ಯೆ ನಿಲ್ಲಿಸಿ ಶಾಂತಿ ಕಾಪಾಡಿದರು.
ಟಂಟಂನಲ್ಲಿ ಪರೀಕ್ಷೆಗೆ:ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಬಳಿ ಧಾರವಾಡ-ವಿಜಯಪುರ ಹೆದ್ದಾರಿಯನ್ನು ರೈತರು ತಡೆ ಮಾಡಿ ಬಸ್ ನಿಲ್ಲಿಸಿದ್ದರಿಂದ ಮುಧೋಳ ನಗರಕ್ಕೆ ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿಗಳು ಟಂಟಂ ಮೂಲಕ ಪರೀಕ್ಷಾ ಕೇಂದ್ರಕ್ಕೆ ಹೋದರು.
ಮೋದಿಗೆ ಜೈ ಎಂದರು!:ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮರೇಗುದ್ದಿ ಕ್ರಾಸ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಲ ಯುವಕರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿದರು.
ಚಕ್ಕಡಿ ಬಂಡಿಯಲ್ಲಿ ಬಂದ ರೈತರು:ಕೃಷಿ ಕಾಯ್ದೆಗಳನ್ನು ವಿರೋಧಿಸಿ, ತೈಲ ಬೆಲೆ ಏರಿಕೆ ಖಂಡಿಸಿ ಧಾರವಾಡದ ವಿವಿಧ ಸಂಘಟನೆಗಳ ಮುಖಂಡರು ಚಕ್ಕಡಿ ಬಂಡಿಯೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಬೆಂಗಳೂರು:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ಕೊಟ್ಟಿದ್ದ ‘ಭಾರತ್ ಬಂದ್’ ರಾಜ್ಯದಲ್ಲಿ ಪ್ರತಿಭಟನೆಗೆ ಮಾತ್ರ ಸೀಮಿತವಾಗಿದ್ದು, ಬಹುತೇಕ ಸಂಘಟನೆಗಳು ನೈತಿಕ ಬೆಂಬಲ ಕೊಟ್ಟ ಹಿನ್ನೆಲೆಯಲ್ಲಿ ದೈನಂದಿನ ವ್ಯಾಪಾರ-ವಹಿವಾಟುಗಳು ಸಹಜ ಸ್ಥಿತಿಯಲ್ಲಿದ್ದವು.
ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ಕೊಟ್ಟಿದ್ದ ಭಾರತ್ ಬಂದ್ ಬೆಂಬಲಿಸಿ ರೈತ, ಕನ್ನಡಪರ, ದಲಿತ, ಕಾರ್ವಿುಕ ಸಂಘಟನೆಗಳ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದರು. ವ್ಯಾಪಾರ-ವಹಿವಾಟು, ಸಾರಿಗೆ, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಅಂಗಡಿ- ಮುಂಗಟ್ಟುಗಳು, ವಾಹನಗಳ ಓಡಾಟ ಸಹಜ ಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಬಂದ್ ಬಿಸಿ ತಟ್ಟಲಿಲ್ಲ. ರೈತ ಸಂಘಟನೆಗಳು ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಕೆಲ ಜಿಲ್ಲೆಗಳಲ್ಲಿ ಪ್ರತಿಭಟನೆ, ಧರಣಿ, ವಾಹನ ತಡೆ, ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು. ಬೆಂಗಳೂರಿನ ಟೌನ್​ಹಾಲ್ ಬಳಿ ತರಕಾರಿ ಮಾರುವುದು, ರಸ್ತೆ ಮೇಲೆ ಹೊರಳುವುದು ಸೇರಿ ವಿವಿಧ ಮಾದರಿಯಲ್ಲಿ ಪ್ರತಿಭಟಿಸಿ ಸರ್ಕಾರದ ಗಮನಸೆಳೆಯಲು ಪ್ರಯತ್ನಿಸಿದರು. ಚಿಕ್ಕಬಳ್ಳಾಪುರದಲ್ಲಿ ಹೂಗಳನ್ನು ರಸ್ತೆಗೆ ಸುರಿದು ಅರೆಬೆತ್ತಲೆ ಪ್ರತಿಭಟನೆ ನಡೆಸಿದರೆ, ಹಾಸನದಲ್ಲಿ ರಸ್ತೆಯಲ್ಲೇ ಅಡುಗೆ ಮಾಡಿ ಪ್ರತಿಭಟಿಸಿದರು.
ರೈತರು ಮೈಸೂರು ಮಾರುಕಟ್ಟೆ ವೃತ್ತದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೇಂದ್ರದ ಕ್ರಮವನ್ನು ಖಂಡಿಸಿದರೆ, ಚಿತ್ರದುರ್ಗದಲ್ಲಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಆಕ್ರೋಶ ಹೊರ ಹಾಕಿದರು. ದಾವಣಗೆರೆಯಲ್ಲಿ ರೈತ ಸಂಘಟನೆಗಳ ಪ್ರತಿಭಟನೆಗೆ ಬಂದ್ ಸೀಮಿತವಾಗಿತ್ತು. ಬಹುತೇಕ ಕಡೆ ಮಧ್ಯಾಹ್ನದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು. ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಾವಿರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಬೆಂಗಳೂರಿನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕುರುಬೂರು ಶಾಂತಕುಮಾರ್ ಅವರನ್ನು ಪ್ರತಿಭಟನೆಗೂ ಮುನ್ನವೇ ಪೊಲೀಸರು ವಶಕ್ಕೆ ಪಡೆದರು.




ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + twelve =
Remember me
