ನವದೆಹಲಿ:ಭಾರಿ ನಿರೀಕ್ಷೆಯೊಂದಿಗೆ ಷೇರುಪೇಟೆ ಪ್ರವೇಶಿಸಿದ ಭಾರತೀಯ ಜೀವ ವಿಮಾ ನಿಗಮದ (ಎಲ್​ಐಸಿ) ನಿರ್ವಹಣೆ ಹೂಡಿಕೆದಾರರಿಗೆ ಆರಂಭದಿಂದಲೂ ನಿರಾಸೆ ಮೂಡಿಸುತ್ತಿದೆ. ಎಲ್​ಐಸಿ ಷೇರು ಮೌಲ್ಯ ಸೋಮವಾರ 777.40ಕ್ಕೆ ಕುಸಿದಿದೆ. ಇದು ಆರಂಭಿಕ ಷೇರು ಮಾರಾಟದಲ್ಲಿ (ಐಪಿಒ) ನಿಗದಿ ಮಾಡಲಾಗಿದ್ದಕ್ಕಿಂತ (949 ರೂ.) ಶೇ.17.51 ಕಡಿಮೆ ಆಗಿದೆ.
ಸೋಮವಾರ ವಹಿವಾಟು ಆರಂಭವಾದಾಗ 800 ರೂ.ಗಿಂತ ತುಸು ಹೆಚ್ಚಿದ್ದ ಷೇರು ಮೌಲ್ಯ ದಿನದ ಅಂತ್ಯಕ್ಕೆ ಶೇ.2.86ರಷ್ಟು ಕೆಳಗಿಳಿದು 777.40 ರೂ.ಗಳಲ್ಲಿ ಕೊನೆಗೊಂಡಿತು. ಇದರಿಂದ ಹೂಡಿಕೆದಾರರಿಗೆ ಈವರೆಗೆ ಒಟ್ಟು 1.08 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾದಂತಾಗಿದೆ. ಜತೆಗೆ ಮಿಡ್​ಕ್ಯಾಪ್​ನಲ್ಲಿ 5 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪನಿಗಳ ಪಟ್ಟಿಯಿಂದ ಎಲ್​ಐಸಿ ಮೊದಲ ಬಾರಿಗೆ ಕೆಳಗೆ ಇಳಿದಿದೆ. ಸಂಸ್ಥೆಯ ಮಾರುಕಟ್ಟೆ ಬಂಡವಾಳ 4,91,705 ಕೋಟಿ ರೂ.ಗೆ ಕುಸಿದಿದೆ.
ಮೇ 4ರಿಂದ 9ರವರೆಗೆ ಎಲ್​ಐಸಿ ಐಪಿಒ ಪ್ರಕಟಿಸಿದಾಗ ಉದ್ದೇಶಿತ ಬಿಡ್​ಗಿಂತ ಅಂದಾಜು ಮೂರುಪಟ್ಟು ಹೆಚ್ಚು ಬೇಡಿಕೆಗಳು ಸಲ್ಲಿಕೆ ಆಗಿದ್ದವು. ಐಪಿಒದಲ್ಲಿ ಸಾಮಾನ್ಯ ವರ್ಗದಲ್ಲಿ 949 ರೂ. ಮತ್ತು ಉದ್ಯೋಗಿಗಳು ಹಾಗೂ ಪಾಲಿಸಿದಾರರಿಗೆ ರಿಯಾಯಿತಿ ದರದಲ್ಲಿ 889 ರೂ.ಗೆ ಪ್ರತಿ ಷೇರನ್ನು 15ರ ಗುಚ್ಛದಂತೆ 22.13 ಕೋಟಿ ಷೇರು (ಶೇ. 3.5) ಮಾರಾಟ ಮಾಡಿತ್ತು. ಇದರಿಂದ ಸರ್ಕಾರ 20,557 ಕೋಟಿ ರೂ. ಬಂಡವಾಳ ಸಂಗ್ರಹಿಸಿತು. ಆದರೆ, ಎಲ್​ಐಸಿ ಲಿಸ್ಟಿಂಗ್​ಗೆ ಬಂದಾಗ (ಮೇ 17) ಐಪಿಒ ದರಕ್ಕಿಂತ ಶೇ.8ರಷ್ಟು ಇಳಿಕೆಯಾಗಿ 875.45ಕ್ಕೆ ಕುಸಿದಿತ್ತು. ಕಳೆದ ತಿಂಗಳು ಎಲ್​ಐಸಿ 2021-22ರ ಆರ್ಥಿಕ ವರ್ಷದಲ್ಲಿ ಲಾಭಾಂಶ ಘೋಷಣೆ ಮಾಡಿದ್ದು, ಶೇ.15 ಪಾವತಿಸುವುದಾಗಿ ಘೋಷಿಸಿತ್ತು.
ಡಾಲರ್ ಎದುರು ರೂಪಾಯಿ 80ಕ್ಕೆ?:ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಸೋಲುತ್ತಿರುವ ಕಾರಣ ಈ ವರ್ಷದಲ್ಲಿ ಪ್ರತಿ ಡಾಲರ್​ಗೆ ವಿನಿಮಯ ದರ 80 ರೂಪಾಯಿ ಮುಟ್ಟುವ ಸಂಭವ ಇದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ರೂಪಾಯಿ ವಿನಿಮಯ 77.92ರವರೆಗೂ ತಲುಪಿದ್ದು, ಡಾಲರ್ ಮೌಲ್ಯ ಶೇ. 4.4ಕ್ಕೆ ಹಿಗ್ಗಿತ್ತು. ಇದೇ ಜಾಡಿನಲ್ಲಿ ರೂಪಾಯಿ ಕುಸಿಯುತ್ತಿದ್ದರೆ ಅದು 79 ರಿಂದ 81 ರೂಪಾಯಿಯವರೆಗೆ ಮುಟ್ಟುವ ಸಾಧ್ಯತ ಇದೆ ಎಂದು ಯುಬಿಎಸ್ ಎಜಿ, ನೋಮುರಾ ಹೋಲ್ಡಿಂಗ್ಸ್, ಬ್ಲೂಮ್​ಗ್ ಎಕನಾಮಿಕ್ಸ್​ಗಳು ಅಭಿಪ್ರಾಯಪಟ್ಟಿವೆ. ಈ ಮಧ್ಯೆ, ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 2 ಪೈಸೆ ಏರಿಕೆ ಆಗಿದ್ದು, ವಿನಿಮಯ ದರ 77.66 ರೂಪಾಯಿಗೆ ಸ್ಥಿರಗೊಂಡಿದೆ.
ಷೇರುಪೇಟೆಯಲ್ಲಿ ಇಳಿಕೆ:ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್​ನಲ್ಲಿ 93.91 ಅಂಶ ಇಳಿಕೆಯಾಗಿ 55,675.32ಕ್ಕೆ ಸೋಮವಾರದ ವಹಿವಾಟು ಮುಗಿದಿದೆ. ನಿಫ್ಟಿಯಲ್ಲಿ 14.75 ಪಾಯಿಂಟ್ ಕಡಿಮೆಯಾಗಿ ದಿನದ ವಹಿವಾಟು 16,569.55ಕ್ಕೆ ಕೊನೆಗೊಂಡಿದೆ. ಅಲ್ಟ್ರಾ ಟೆಕ್ ಸಿಮೆಂಟ್, ಬಜಾಜ್ ಫಿನ್​ಸರ್ವ್, ನೆಸ್ಲೆ ಇಂಡಿಯಾ, ಎಲ್​ಆಂಡ್ ಟಿ, ಆಕ್ಸಿಸ್ ಬ್ಯಾಂಕ್, ಡಾ.ರೆಡ್ಡೀಸ್ ಲ್ಯಾಬ್, ಎಚ್​ಯುುಎಲ್​ಗಳ ಷೇರು ಮೌಲ್ಯ ಇಳಿಕೆ ಆಗಿದೆ. ಇನ್ನೊಂದೆಡೆ ಟಾಟಾ ಸ್ಟೀಲ್, ಇಂಡಸ್​ಇಂಡ್ ಬ್ಯಾಂಕ್, ಎಂಆಂಡ್​ಎಂ, ಐಟಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಇನ್ಪೋಸಿಸ್, ಐಸಿಐಸಿಐ ಬ್ಯಾಂಕ್​ಗಳಿಗೆ ಲಾಭ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ.0.61 ಏರಿಕೆ ಆಗಿದ್ದು, ಬೆಂಟ್ ದರ್ಜೆಯ ತೈಲದ ಪ್ರತಿ ಬ್ಯಾರೆಲ್ ಬೆಲೆ 120.4 ಡಾಲರ್​ಗೆ ತಲುಪಿದೆ.
ಚಿನ್ನ-ಬೆಳ್ಳಿ ದರ ಏರಿಕೆ:ದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 43 ರೂ. ಹೆಚ್ಚಳ ಆಗಿದ್ದು, 10 ಗ್ರಾಂ ಬೆಲೆ 50,908 ರೂಪಾಯಿಗೆ ಏರಿದೆ. ಬೆಳ್ಳಿ ಧಾರಣೆ 850 ರೂ. ಅಧಿಕವಾಗಿದ್ದು, ಕೆ.ಜಿ. ಬೆಲೆ 62,211 ರೂ. ಮುಟ್ಟಿದೆ.
ಆರ್​ಬಿಐ ಎಂಪಿಸಿ ಸಭೆ ಆರಂಭ:ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಸೋಮವಾರ ಆರಂಭಗೊಂಡಿದ್ದು, ಬುಧವಾರ ಮುಕ್ತಾಯ ಆಗಲಿದೆ. ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ರೆಪೊ ದರವನ್ನು ಶೇ. 0.40ರವರೆಗೆ ಏರಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಮೇ ತಿಂಗಳಲ್ಲಿ ಆರ್​ಬಿಐ ಮಧ್ಯಂತರವಾಗಿ 40 ಮೂಲಾಂಶ ಏರಿಕೆ ಮಾಡಿತ್ತು.
ಇಪಿಎಫ್​ಒ ಈಕ್ವಿಟಿ ಹೂಡಿಕೆ ಮಿತಿ ಏರಿಕೆ?:ಷೇರು ಮಾರುಕಟ್ಟೆಯಲ್ಲಿ ಶೇ.15ರಷ್ಟಿರುವ ಹೂಡಿಕೆಯನ್ನು ಎರಡು ಹಂತದಲ್ಲಿ ಶೇ.20 ಮತ್ತು ಶೇ.25ಕ್ಕೆ ಹೆಚ್ಚಿಸಲು ಕಾರ್ವಿುಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್​ಒ) ಮುಂದಾಗಿದೆ. ಇಪಿಎಫ್​ನ ಹೂಡಿಕೆ ಮತ್ತು ಲೆಕ್ಕಪರಿಶೋಧನಾ ಸಮಿತಿ ಎರಡು ವಾರದ ಹಿಂದೆ ಸಭೆ ನಡೆಸಿದ್ದು, ಈಕ್ವಿಟಿಯಲ್ಲಿ ಹೂಡಿಕೆ ಏರಿಸುವ ಪ್ರಸ್ತಾವ ನೀಡಿದೆ. ಈ ಬಗ್ಗೆ ಜೂನ್ ಕಡೆಯ ವಾರದಲ್ಲಿ ನಡೆಯುವ ಇಪಿಎಫ್​ಒ ಕೇಂದ್ರೀಯ ವಿಶ್ವಸ್ಥ ಮಂಡಳಿ (ಸಿಬಿಟಿ) ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ನಂತರ ಅನುಮೋದನೆಗಾಗಿ ಕೇಂದ್ರ ಕಾರ್ವಿುಕ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇಪಿಎಫ್​ಒಗೆ ಪ್ರತಿದಿನ ಅಂದಾಜು 600 ಕೋಟಿ ರೂ. ಆದಾಯ ಬರುತ್ತದೆ. ಇದರಲ್ಲಿ 200 ಕೋಟಿ ರೂ. ಕ್ಲೇಮುಗಳಿಗೆ ವಿನಿಯೋಗ ಆಗುತ್ತಿದೆ. ಹೆಚ್ಚುವರಿಯಾಗುವ 400 ಕೋಟಿ ರೂ.ಗಳಲ್ಲಿ ಈಕ್ವಿಟಿಯಲ್ಲಿ ಹೂಡಿಕೆ ಏರಿಸುವ ಬಗ್ಗೆ ಷೇರು ಮಾರುಕಟ್ಟೆ ತಜ್ಞರ ಜತೆ ಇಪಿಎಫ್ ಚರ್ಚೆ ನಡೆಸಿದೆ. 2021-22ರಲ್ಲಿ ಭವಿಷ್ಯನಿಧಿ (ಪಿಎಫ್) ಬಡ್ಡಿದರವನ್ನು ಶೇ.8.1ಕ್ಕೆ ನಿಗದಿಗೊಳಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿರುವುದರಿಂದ 5 ಕೋಟಿ ಚಂದಾದಾರರಿಗೆ ಪಿಎಫ್ ಪ್ರತಿಫಲದಲ್ಲಿ ಕೊರತೆ ಆಗಿದೆ.
ಹೆಣ್ಮಕ್ಳೂ ಸ್ಟ್ರಾಂಗು ಅನ್ನೋದಕ್ಕೆ ಈಕೆ ‘ಸಾಕ್ಷಿ’: ಏಕಾಂಗಿಯಾಗಿ ಬೈಕ್​ನಲ್ಲಿ ಜಮ್ಮು-ಕಾಶ್ಮೀರಕ್ಕೆ ಹೋಗಿಬಂದ ವಿದ್ಯಾರ್ಥಿನಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
