ಬೆಂಗಳೂರು:ಪ್ರತಿನಿತ್ಯ ಮುನ್ನೂರಕ್ಕೂ ಹೆಚ್ಚು ವಿಮಾನಗಳ ಆಗಮನ-ನಿರ್ಗಮನದ ಮೂಲಕ ದೇಶದ ಮೂರನೇ ಹೆಚ್ಚು ಸಂಚಾರದ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ದುರಂತವೊಂದು ಕೂದಲೆಳೆಯಲ್ಲಿ ತಪ್ಪುವ ಮೂಲಕ 426 ಪ್ರಯಾಣಿಕರು ಆಪಾಯದಿಂದ ಪಾರಾಗಿದ್ದಾರೆ.
ಜ.7ರಂದು ವಿಮಾನ ಸಂಚಾರ ನಿಯಂತ್ರಣ(ಎಟಿಸಿ) ಅಧಿಕಾರಿಗಳ ನಡುವೆ ಉಂಟಾದ ಸಂವಹನ ಕೊರತೆಯಿಂದಾಗಿ ಎರಡು ರನ್​ವೇಗಳಿಂದ ಒಂದೇ ಸಮಯದಲ್ಲಿ ಎರಡು ವಿಮಾನಗಳು ಆಗಸಕ್ಕೇರಿ ಇನ್ನೇನು ಢಿಕ್ಕಿಯಾಗಬೇಕು ಎನ್ನುವಷ್ಟರಲ್ಲಿ ರಾಡಾರ್ ಸಹಾಯದಿಂದ ದುರಂತ ತಪ್ಪಿರುವುದು ಇದೀಗ ಬೆಳಕಿಗೆ ಬಂದಿದೆ. ಇಂಥದ್ದೊಂದು ಸನ್ನಿವೇಶವನ್ನು ವಿಮಾನಯಾನ ಸಚಿವಾಲಯಕ್ಕೆ ವರದಿ ಮಾಡದೆ ಮುಚ್ಚಿಟ್ಟ ಅಧಿಕಾರಿಗಳ ವರ್ತನೆ ಅಚ್ಚರಿಗೀಡುಮಾಡಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಸಂವಹನದ ಕೊರತೆ:ಬೆಂಗಳೂರು ವಿಮಾನ ನಿಲ್ದಾಣ 2008ರಿಂದ ಕಾರ್ಯಾಚರಣೆ ನಡೆಸುತ್ತಿದೆ. ವಿಮಾನ ಸಂಚಾರ ಹೆಚ್ಚಳವಾದಂತೆ ಎರಡನೇ ರನ್​ವೇ ಅವಶ್ಯಕತೆ ಅರಿತು ನಿರ್ಮಾಣ ಆರಂಭಿಸಲಾಯಿತಾದರೂ ವಿಳಂಬದಿಂದಾಗಿ 2019ರಿಂದ ಎರಡನೇ ರನ್​ವೇ ಕಾರ್ಯಾಚರಣೆ ಆರಂಭಿಸಿತು. ಪ್ರಾರಂಭದಿಂದಲೂ ಇದ್ದ ರನ್​ವೇಯನ್ನು ಉತ್ತರ ರನ್​ವೇ ಎಂದು, ಕರೆಯಲಾಗುತ್ತಿದ್ದು, ವಿಮಾನಗಳು ಹಾರಾಟ ಆರಂಭಿಸಲು(ಟೇಕಾಫ್) ಅದನ್ನು ಬಳಸಲಾಗುತ್ತಿದೆ. ಎರಡನೇ ಮತ್ತು ಹೊಸ ರನ್​ವೇಯನ್ನು ದಕ್ಷಿಣ ರನ್​ವೇ ಎಂದು ಹೆಸರಿಸಿ ವಿಮಾನಗಳ ಆಗಮನಕ್ಕೆ(ಲ್ಯಾಂಡಿಂಗ್) ಬಳಕೆ ಮಾಡಲಾಗುತ್ತಿದೆ.
ಆಗಿದ್ದೇನು?:ಜ.7ರಂದು ಬೆಳಗ್ಗೆ ಕರ್ತವ್ಯದಲ್ಲಿದ್ದ ಅಧಿಕಾರಿ ದಕ್ಷಿಣ ರನ್​ವೇಯನ್ನು ಬಂದ್ ಮಾಡಿ, ವಿಮಾನಗಳ ಹಾರಾಟ ಹಾಗೂ ಇಳಿಯುವಿಕೆಗೆ ಉತ್ತರದ ರನ್​ವೇಯನ್ನೇ ಬಳಸಲು ನಿರ್ಧರಿಸಿದರು. ಆದರೆ ದಕ್ಷಿಣದ ರನ್​ವೇಯನ್ನು ಬಂದ್ ಮಾಡಲಾಗಿರುವ ವಿಚಾರವನ್ನು ದಕ್ಷಿಣದ ರನ್​ವೇ ನಿಯಂತ್ರಿಸುತ್ತಿರುವ ಅಧಿಕಾರಿಗೆ(ಎಟಿಸಿ) ತಿಳಿಸಲಿಲ್ಲ. ಇದೇ ವೇಳೆ ಇಂಡಿಗೋ ಸಂಸ್ಥೆಯ ಎರಡು ವಿಮಾನಗಳು ನಿಲ್ದಾಣದಿಂದ ಹೊರಡಬೇಕಿತ್ತು. 6ಇ-455 ಸಂಖ್ಯೆಯ ವಿಮಾನ ಬೆಂಗಳೂರಿನಿಂದ ಪಶ್ಚಿಮ ಬಂಗಾಳದ ಕೊಲ್ಕತಾಗೆ, 6ಇ-246 ಸಂಖ್ಯೆಯ ವಿಮಾನ ಬೆಂಗಳೂರಿನಿಂದ ಒಡಿಶಾದ ಭುವನೇಶ್ವರಕ್ಕೆ ಹೊರಡುವುದರಲ್ಲಿದ್ದವು. ಉತ್ತರದ ರನ್​ವೇಯಿಂದ ಕೊಲ್ಕತಾದ ವಿಮಾನ ಹಾರಾಟ ಆರಂಭಿಸಲು ಎಟಿಸಿ ಹಸಿರು ನಿಶಾನೆ ತೋರಿದರು. ಇದೇ ವೇಳೆ, ರನ್​ವೇ ಬಂದ್ ಆಗಿರುವ ಮಾಹಿತಿ ಇಲ್ಲದ ದಕ್ಷಿಣದ ರನ್​ವೇ ಎಟಿಸಿ ಸಹ ಭುವನೇಶ್ವರದ ವಿಮಾನ ಹಾರಾಟಕ್ಕೆ ಅನುಮತಿ ನೀಡಿದರು. ಆದರೆ ಎಂದಿನಂತೆ ಲ್ಯಾಂಡಿಂಗ್​ಗೆ ಅನುಮತಿ ನೀಡಬೇಕಿದ್ದ ದಕ್ಷಿಣದ ರನ್​ವೇಯಿಂದ ಹಾರಾಟ ಆರಂಭಕ್ಕೆ ಅನುಮತಿ ನೀಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಮೂರು ಸಾವಿರ ಅಡಿ ಎತ್ತರ
ರನ್​ವೇ ಎಟಿಸಿಗಳ ನಡುವಿನ ಸಂವಹನ ಕೊರತೆಯಿಂದಾಗಿ ಎರಡೂ ವಿಮಾನಗಳು ಏಕಕಾಲದಲ್ಲಿ ಹಾರಾಟ ಆರಂಭಿಸಿವೆ. ಸರಿಸುಮಾರು ಮೂರು ಸಾವಿರ ಅಡಿಗಳಷ್ಟು ಎತ್ತರಕ್ಕೆ ಹೋಗುವವರೆಗೂ ಅತ್ಯಂತ ಸನಿಹದಲ್ಲೇ ಹಾರಾಟ ನಡೆಸುತ್ತಿದ್ದವು. ಎರಡೂ ವಿಮಾನಗಳು ಒಟ್ಟಿಗೆ ಹಾರಾಟ ನಡೆಸುವಷ್ಟು ಅಂತರ ನಡುವಿನಲ್ಲಿ ಇರಲಿಲ್ಲ, ಎರಡೂ ವಿಮಾನಗಳ ಪೈಲಟ್​ಗಳಿಗೂ ಇದರ ಮಾಹಿತಿ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿರುವ ಪ್ರಿಸಿಷನ್ ಅಪ್ರೋಚ್ ರಾಡಾರ್ (ಪಿಎಆರ್) ಈ ಅಪಾಯವನ್ನು ಗ್ರಹಿಸಿ ಇಬ್ಬರೂ ಪೈಲಟ್​ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದಾಗ ಪೈಲಟ್​ಗಳು ಎಚ್ಚೆತ್ತಿದ್ದಾರೆ. ಕೂಡಲೆ ಕೋಲ್ಕತಾಕ್ಕೆ ಹೋಗಬೇಕಿದ್ದ ವಿಮಾನವನ್ನು ಎಡಕ್ಕೆ, ಭುವನೇಶ್ವರಕ್ಕೆ ತೆರಳುತ್ತಿದ್ದ ವಿಮಾನವನ್ನು ಬಲಕ್ಕೆ ತಿರುಗಿಸಿ ಅಪಾಯವನ್ನು ತಪ್ಪಿಸಿದ್ದಾರೆ, ಎರಡೂ ವಿಮಾನಗಳು ಪ್ರಯಾಣ ಮುಂದುವರಿಸಿ ಮುಕ್ತಾಯಗೊಳಿಸಿವೆ. ಎರಡೂ ವಿಮಾನದಲ್ಲಿ ಒಟ್ಟು 426 ಜನರಿದ್ದರು.
ಭಾರತದಲ್ಲಿ ಅನುಮತಿಯಿಲ್ಲ
ವಿಮಾನಗಳ ಸಂಖ್ಯೆ ಹೆಚ್ಚಳವಾದಾಗ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ವಿಶ್ವದ ಅನೇಕ ವಿಮಾನನಿಲ್ದಾಣಗಳಲ್ಲಿ ಒಂದಕ್ಕಿಂತ ಹೆಚ್ಚು ಸಮಾನಾಂತರ ರನ್​ವೇಗಳನ್ನು ಹೊಂದಲಾಗುತ್ತದೆ. ಅದರಂತೆಯೇ ಬೆಂಗಳೂರಿನಲ್ಲೂ ನಿರ್ವಿುಸಲಾಗಿದೆ. ಒಂದೇ ಸಮಯಕ್ಕೆ ಎರಡು ವಿಮಾನಗಳು ಎರಡೂ ರನ್​ವೇಯಿಂದ ಹಾರಾಟ ಆರಂಭಿಸುವುದನ್ನು ಏಕಕಾಲದಲ್ಲಿ ಸಮಾನಾಂತರ ಹಾರಾಟ ರನ್​ವೇ ಎನ್ನಲಾಗುತ್ತದೆ. ವಿದೇಶದ ಅನೇಕ ವಿಮಾನ ನಿಲ್ದಾಣಗಳಲ್ಲಿ ಇದಕ್ಕೆ ಅನುಮತಿ ಇದೆಯಾದರೂ ಭಾರತದಲ್ಲಿ ಯಾವುದೇ ನಿಲ್ದಾಣಕ್ಕೆ ಈ ರೀತಿ ಅನುಮತಿ ಇಲ್ಲ. ಆದರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏಕಕಾಲದಲ್ಲಿ ಒಂದು ರನ್​ವೇಯಿಂದ ಹಾರಾಟ ಆರಂಭಿಸಲು, ಮತ್ತೊಂದರಲ್ಲಿ ಹಾರಾಟ ಮುಕ್ತಾಯಗೊಳಿಸಲು ಅನುಮತಿ ಇದೆ.
ಪ್ರಿಸಿಷನ್ ಅಪ್ರೋಚ್ ರಾಡಾರ್
ವಿಮಾನ ನಿಲ್ದಾಣಗಳ ಬಳಿಯಲ್ಲಿ ಹಾರಾಡುವ ವಿಮಾನಗಳು ಪರಸ್ಪರ ಢಿಕ್ಕಿ ಆಗದಂತೆ ತಡೆಯಲು ನಿಲ್ದಾಣದಲ್ಲಿ ಪ್ರಿಸಿಷನ್ ಅಪ್ರೋಚ್ ರಾಡಾರ್(ಪಿಎಆರ್) ಅಳವಡಿಸಲಾಗಿರುತ್ತದೆ. ಇದು ಪ್ರತಿ ವಿಮಾನವನ್ನೂ ಅವಲೋಕಿಸುತ್ತಿರುತ್ತದೆ. ಅಪಾಯದ ಹಂತದಲ್ಲಿ ಯಾವುದೇ ಹಾರಾಟ ಕಂಡುಬಂದರೆ ಕೂಡಲೆ ಅದರ ಪೈಲಟ್​ಗೆ ಸಂದೇಶ ರವಾನಿಸಿ ಎಚ್ಚರಿಕೆ ನೀಡುತ್ತದೆ. ಇದೀಗ ರಾಡಾರ್​ನಿಂದಾಗಿಯೇ ಮಹಾ ಅಪಾಯವೊಂದು ತಪ್ಪಿದಂತಾಗಿದೆ.
ತನಿಖೆಗೆ ಆದೇಶ
ವಿಮಾನ ನಿಲ್ದಾಣಗಳಲ್ಲಿ ಯಾವುದೇ ಅಪಘಾತ ಅಥವಾ ಅಹಿತಕರ ಘಟನೆಗಳು ನಡೆದರೂ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ(ಡಿಜಿಸಿಎ) ಅಥವಾ ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ(ಎಎಐ) ವರದಿ ನೀಡಬೇಕು. ಆದರೆ ಜ.7ಕ್ಕೆ ಘಟನೆ ನಡೆದಿದ್ದರೂ ವಿಮಾನ ನಿಲ್ದಾಣದ ಅಧಿಕಾರಿಗಳಾಗಲಿ ಅಥವಾ ವಿಮಾನ ಸಂಸ್ಥೆಯಾಗಲಿ ಯಾವುದೇ ಮಾಹಿತಿ ನೀಡದೆ ಮುಚ್ಚಿಟ್ಟಿವೆ. ತಮ್ಮ ದಿನನಿತ್ಯದ ವ್ಯವಹಾರದ ಪುಸ್ತಕಗಳಲ್ಲೂ ವರದಿ ಮಾಡಿಲ್ಲ. ಇದೀಗ ವಿಚಾರ ತಿಳಿದ ಡಿಜಿಸಿಎ, ಇಲಾಖಾ ಮಟ್ಟದ ತನಿಖೆಗೆ ಆದೇಶಿಸಿದೆ ಎನ್ನಲಾಗಿದೆ. ಆದರೆ ಇಲ್ಲಿಯವರೆಗೂ ಬೆಂಗಳೂರು ವಿಮಾನ ನಿಲ್ದಾಣವಾಗಲಿ, ಇಂಡಿಗೋ ಸಂಸ್ಥೆಯಾಗಲಿ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.
ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + twenty =
Remember me
