ರಾಘವ ಶರ್ಮ ನಿಡ್ಲೆ
ನವದೆಹಲಿ :ಬಿಹಾರದಲ್ಲಿ ಅತಿ ಹೆಚ್ಚು ಅವಧಿಗೆ ಆಡಳಿತ ನಡೆಸಿ, ನಂತರ 1990ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪಕ್ಷಕ್ಕೆ ಈವರೆಗೂ ರಾಜ್ಯದಲ್ಲಿ ‘ಮರುಹುಟ್ಟು’ ಕಾಣಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಪಕ್ಷಗಳ ನಾಯಕರಾದ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಪ್ರಭಾವಳಿಗಳ ಮುಂದೆ ಕಾಂಗ್ರೆಸ್ ತನ್ನ ಪ್ರಾಬಲ್ಯ ಉಳಿಸಿಕೊಳ್ಳುವಲ್ಲಿ ಸೋತಿದೆ.
ಭವಿಷ್ಯಕ್ಕೂ ದಿಕ್ಸೂಚಿ
ಹಿರಿಯ ನಾಯಕರ ಪತ್ರಸಮರ ಹಾಗೂ ರಾಹುಲ್ ಗಾಂಧಿ ನಾಯಕತ್ವ ಪ್ರಶ್ನಿಸಿದ್ದರಿಂದಾಗಿ ಆಂತರಿಕ ಕಚ್ಚಾಟಕ್ಕೆ ಸಾಕ್ಷಿಯಾಗಿದ್ದ ಕಾಂಗ್ರೆಸ್​ಗೆ ಬಿಹಾರ ಫಲಿತಾಂಶ ಭವಿಷ್ಯದ ದಿಕ್ಸೂಚಿಯಾಗಲಿದೆ. ಮುಂಬರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪಾಂಡಿಚೇರಿ ಚುನಾವಣೆ ಮೇಲೂ ಇದು ಪರಿಣಾಮ ಬೀರಲಿದೆ. 2021ರ ಆರಂಭದಲ್ಲಿ ರಾಹುಲ್ ಗಾಂಧಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕೃತವಾಗಿ ಮರುನೇಮಕವಾಗಲಿದ್ದಾರೆ ಎಂಬ ಮಾತುಗಳು ಪಕ್ಷದ ನಡುಮನೆಯಲ್ಲೇ ಕೇಳುತ್ತಿರುವುದರಿಂದ, ರಾಹುಲ್ ಮತ್ತವರ ಆಪ್ತರು ಫಲಿತಾಂಶವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
2015ರ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್-ಲಾಲು ಯಾದವ್ ನೇತೃತ್ವದ ಮಹಾಘಟಬಂಧನದಲ್ಲಿ ಪಾಲುದಾರ ಪಕ್ಷ ಎಂಬ ಕಾರಣಕ್ಕೆ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರು. ತಾನು ಸ್ಪರ್ಧಿಸಿದ್ದ 41 ಸೀಟುಗಳಲ್ಲಿ 27ನ್ನು ಗೆಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. 2010ರ ಚುನಾವಣೆಯಲ್ಲಿ ಬರೀ 10 ಸ್ಥಾನಗಳಿಗೆ ಇಳಿದಿದ್ದ ಪಕ್ಷದಲ್ಲಿ 2015ರ ಫಲಿತಾಂಶ ನವಚೈತನ್ಯ (2014ರ ಲೋಕಸಭೆ ಚುನಾವಣೆ ಮುಖಭಂಗದ ಬಳಿಕ) ಮೂಡಿಸಿತ್ತು. ಈ ಬಾರಿ 70ರಲ್ಲಿ ಕಣಕ್ಕಿಳಿದಿರುವ ಕಾಂಗ್ರೆಸ್ 35-40 ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಮಹಾಮೈತ್ರಿ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ರ್ಯಾಲಿಗಳಿಗೆ ದೊಡ್ಡಮಟ್ಟದಲ್ಲಿ ಜನ ಸೇರುತ್ತಿರುವುದು ಕಾಂಗ್ರೆಸ್ ವಿಶ್ವಾಸ ಹೆಚ್ಚಿಸಿದೆ.
2015ರ ಫಲಿತಾಂಶ ಬಳಸಿಕೊಂಡು ರಾಜ್ಯದಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಗಟ್ಟಿಗೊಳಿಸುವ ಅವಕಾಶಗಳು ಕಾಂಗ್ರೆಸ್ ಮುಂದಿತ್ತು. ಆದರೆ ರಾಜ್ಯ ನಾಯಕರಾಗಲೀ, ವರಿಷ್ಠರಾಗಲೀ ಗಂಭೀರ ಪ್ರಯತ್ನ ಮಾಡಲಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ, ಜನಮನ ಸೆಳೆಯುವ ಒಬ್ಬನೇ ಒಬ್ಬ ನಾಯಕ ಪಕ್ಷದಲ್ಲಿಲ್ಲ. ಮಹಾಮೈತ್ರಿಯಲ್ಲಿ 2ನೇ ಪ್ರಭಾವಿ ಪಕ್ಷವಾಗಿದ್ದರೂ, 70 ಸೀಟುಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಿದೆ.
ಬ್ರಾಹ್ಮಣ ಸಮುದಾಯದ ಮದನ್ ಮೋಹನ್ ಝಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು. ಅವರಿಗೆ ಮುನ್ನ ಅಧ್ಯಕ್ಷರಾಗಿದ್ದ ಅಶೋಕ್ ಚೌಧುರಿ ಜೆಡಿಯು ಸೇರಿ, ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಗೇರಿದ್ದಾರೆ. ರೈತರು, ಕಾರ್ವಿುಕರ ಬಗ್ಗೆ ಕಾಳಜಿ ಹೊಂದಿದ್ದ ಚೌಧುರಿ, ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡು ಗಮನಸೆಳೆದಿದ್ದರು. ಆದರೆ, ತಮ್ಮ ಕೆಲಸಕ್ಕೆ ಸೂಕ್ತ ಮಾನ್ಯತೆ ಸಿಗಲಿಲ್ಲ ಎಂದು ನಿತೀಶ್​ರನ್ನು ನೆಚ್ಚಿಕೊಂಡರು.
ಕಾಂಗ್ರೆಸ್ ವಿರುದ್ಧ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಸೇರಿ ವಿವಿಧ ನಾಯಕರ ಹೋರಾಟದ ಫಲವಾಗಿ 1990ರ ಚುನಾವಣೆಯಲ್ಲಿ ಕಾಂಗ್ರೆಸ್ (79 ಸೀಟು) ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವಂತಾಯಿತು. ಸಹಜವಾಗಿಯೇ ಲಾಲು ಮುಖ್ಯಮಂತ್ರಿಯಾದರು. ಅಂದಿನಿಂದ ಇಂದಿನವರೆಗೆ; 30 ವರ್ಷಗಳಲ್ಲಿ ಕಾಂಗ್ರೆಸ್ ತಲೆ ಎತ್ತಲು ಸಾಧ್ಯವಾಗಿಲ್ಲ. 1995ರ ಚುನಾವಣೆಯಲ್ಲಿ ಕಾಂಗ್ರೆಸ್ ಹಿಡಿತ 29 ಸೀಟುಗಳಿಗೆ ಇಳಿಯಿತು. ಇದು ಬಿಜೆಪಿಗಿಂತಲೂ ಕಡಿಮೆ ಸ್ಥಾನವಾದ್ದರಿಂದ ವಿಪಕ್ಷ ಸ್ಥಾನವೂ ಕೈಜಾರಿತ್ತು. 2000ದಲ್ಲಿ 23 ಸ್ಥಾನಕ್ಕೆ ತಗ್ಗಿದ ಕಾಂಗ್ರೆಸ್, 2005ರಲ್ಲಿ 9 ಸೀಟುಗಳಿಗಷ್ಟೇ ಸೀಮಿತಗೊಂಡು ‘ಒಂದಂಕಿ’ ಪಾರ್ಟಿ ಎಂದು ನಗೆಪಾಟಲಿಗೀಡಾಯಿತು. ಆ ಚುನಾವಣೆಯಲ್ಲಿ ಆರ್​ಜೆಡಿ-ಎಲ್​ಜೆಪಿ-ಕಾಂಗ್ರೆಸ್ ಮೈತ್ರಿಯನ್ನು ಜೆಡಿಯು-ಬಿಜೆಪಿ ಒಳಗೊಂಡ ಎನ್​ಡಿಎ ಮೈತ್ರಿಕೂಟ ಸೋಲಿಸಿದ್ದರಿಂದ ‘ಲಾಲು ಏಕಚಕ್ರಾಧಿಪತ್ಯ’ ಅಂತ್ಯವಾಗಿತ್ತು. 2010ರಲ್ಲಿ 4 ಸೀಟಿಗೆ ಕುಸಿದ ಕಾಂಗ್ರೆಸ್​ಗೆ ಹೊಸ ಶಕ್ತಿ ತುಂಬಿದ್ದು 2015ರ ಫಲಿತಾಂಶ. ಈ ಬಾರಿ ನಿತಿಶ್ ಕುಮಾರ್ ವಿರೋಧಿ ಅಲೆ ಮತ್ತು ತೇಜಸ್ವಿ ಯಾದವ್ ನಾಯಕತ್ವ ಪಕ್ಷದ ಸ್ಥಾನಗಳನ್ನು ಹೆಚ್ಚಿಸಬಹುದು ಎಂದು ಕಾಂಗ್ರೆಸ್ ಮುಖಂಡರು ನಂಬಿದ್ದಾರೆ.
ಗೆಲ್ಲುವ ಸವಾಲು:ಸ್ಪರ್ಧಿಸುತ್ತಿರುವ 70 ಸೀಟುಗಳಲ್ಲಿ 45 ಕ್ಷೇತ್ರಗಳಲ್ಲಿ ಕಳೆದೆರಡು ದಶಕಗಳಿಂದ ಕಾಂಗ್ರೆಸ್​ಗೆ ಗೆಲ್ಲಲು ಸಾಧ್ಯವಾಗಿಲ್ಲ. ಅದರಲ್ಲಿ 18 ಕ್ಷೇತ್ರಗಳನ್ನು ಮಿತ್ರಪಕ್ಷ ಆರ್​ಜೆಡಿಗೂ ಗೆಲ್ಲಲಾಗಿಲ್ಲ. ಕಳೆದ ಬಾರಿ ಗೆದ್ದ 27 ಸೀಟುಗಳಲ್ಲಿ 23ರಲ್ಲಿ ಕಾಂಗ್ರೆಸ್ ಟಿಕೆಟ್ ಉಳಿಸಿಕೊಂಡಿದ್ದು, ನಾಲ್ಕನ್ನು ಮಿತ್ರರಿಗೆ ಬಿಟ್ಟುಕೊಟ್ಟಿದೆ. ಜೆಡಿಯು ಮಾಜಿ ನಾಯಕ ಶರದ್ ಯಾದವ್ ಪುತ್ರಿ ಸುಭಾಷಿಣಿ – ಮಾಧೆಪುರ, ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಪುತ್ರ ಲವ್ ಸಿನ್ಹಾ – ಬಂಕೀಪುರ್ ಮತ್ತು ಎಲ್​ಜೆಪಿಯ ಮಾಜಿ ಮುಖಂಡ ಕಾಳಿಪ್ರಸಾದ್ ಪಾಂಡೆ – ಕುಚಾಯ್ಕೋಟ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್​ನಲ್ಲಿ ಸ್ಪರ್ಧಿಸುತ್ತಿರುವುದು ಗಮನಸೆಳೆದಿದೆ.
‘ಕರೊನಾ ನಿರ್ವಹಣೆಯಲ್ಲಿ ವೈಫಲ್ಯ, ವಲಸೆ ಕಾರ್ವಿುಕರ ಸಮಸ್ಯೆ ಕೇಳದ ಸರ್ಕಾರ ಶಿಕ್ಷಕರ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. 15 ವರ್ಷಗಳಲ್ಲಿ ಭಾರೀ ಅಭಿವೃದ್ಧಿ ಮಾಡಿದ್ದೇನೆ ಎನ್ನುವ ಸಿಎಂ ನಿತಿಶ್ ಕುಮಾರ್, ನಿರುದ್ಯೋಗಿಗಳ ಪ್ರಮಾಣ ಹೆಚ್ಚಿರುವ ಸತ್ಯವನ್ನು ಏಕೆ ಒಪ್ಪಿಕೊಳ್ಳುತ್ತಿಲ್ಲ? ಕರೊನಾ ಬಂದಾಗ ಜನಪ್ರತಿನಿಧಿಗಳೆಲ್ಲರೂ ಮನೆ ಬಾಗಿಲು ಹಾಕಿ ಕುಳಿತರು. ಈಗ ಬಿಹಾರ ಜನರಿಗೆ ಉಚಿತ ಕರೊನಾ ಲಸಿಕೆ ನೀಡುತ್ತೇವೆ ಎನ್ನುತ್ತಾ ಅದರಲ್ಲೂ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ. ಎನ್​ಡಿಎಗೆ ಜನ ಬುದ್ಧಿ ಕಲಿಸುತ್ತಾರೆ ನೋಡಿ’ ಎನ್ನುವುದು ಬಿಹಾರ ಪ್ರವಾಸದಲ್ಲಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅಭಿಪ್ರಾಯ.
ಜಾರ್ಖಂಡ್ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಗಳನ್ನು ಬದಿಗಿರಿಸಿ ಸ್ಥಳೀಯ ವಿಷಯಗಳನ್ನೇ ರ್ಚಚಿಸಿ ಜನಾಕರ್ಷಣೆ ಗಳಿಸುವಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್ ಮೈತ್ರಿ ಯಶಸ್ವಿಯಾಗಿತ್ತು. ಇದೇ ಕಾರಣಕ್ಕೆ ಬಿಹಾರದಲ್ಲಿ ಯುವಕರ ನಿರುದ್ಯೋಗವನ್ನೇ ಪ್ರಧಾನ ವಿಷಯವನ್ನಾಗಿಟ್ಟುಕೊಳ್ಳಲಾಗಿದೆ. ‘ಆರ್​ಜೆಡಿ-ಕಾಂಗ್ರೆಸ್, ಸ್ಥಳೀಯ ಸಮಸ್ಯೆಗಳಿಂದ ದೂರ ಸರಿಯದಂತೆ ಎಚ್ಚರಿಕೆ ವಹಿಸಬೇಕು. ಬಿಜೆಪಿ ಭಾವನಾತ್ಮಕವಾಗಿ ಸೆಳೆಯಲು ಯತ್ನಿಸುವ ಕೆಲವು ವಿಚಾರಗಳಿಗೆ ಪ್ರತಿಕ್ರಿಯೆ ನೀಡುತ್ತಾ ವಿವಾದಗಳಲ್ಲಿ ಸಿಲುಕಿಕೊಳ್ಳಬಾರದು’ ಎನ್ನುವುದು ಹಲವು ಬಾರಿ ಚರ್ಚೆಯಾಗಿದೆ.
ಗೋಹಿಲ್ ‘ಶಕ್ತಿ’:ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾಗೆ ಗುಜರಾತ್​ನಲ್ಲಿ ಸವಾಲೊಡ್ಡುತ್ತಿದ್ದ ಪವರ್​ಫುಲ್ ರಾಜಕಾರಣಿ ಶಕ್ತಿ ಸಿಂಗ್ ಗೋಹಿಲ್​ರನ್ನು ಬಿಹಾರ ಉಸ್ತುವಾರಿಯನ್ನಾಗಿ ರಾಹುಲ್ ಗಾಂಧಿ ಮತ್ತು ಅಹ್ಮದ್ ಪಟೇಲ್ ಕಳುಹಿಸಿಕೊಟ್ಟಿದ್ದಾರೆ. 2017ರಲ್ಲಿ ಅಹ್ಮದ್ ಪಟೇಲ್ ರಾಜ್ಯಸಭೆ ಚುನಾವಣೆ ಗೆದ್ದ ಹಿಂದೆ ಗೋಹಿಲ್ ಮುಖ್ಯಪಾತ್ರ ವಹಿಸಿದ್ದರು. 60 ವರ್ಷದ ಗೋಹಿಲ್ 1980ರಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಯಾಗಿದ್ದರು ಮತ್ತು 1990ರಲ್ಲೇ ಗುಜರಾತ್​ನ ಭಾವ್​ನಗರ ವಿಧಾನಸಭೆ ಸೀಟು ಗೆದ್ದು ಶಾಸಕರಾಗಿದ್ದರು. 32ನೇ ವಯಸ್ಸಿಗೆ ಆರೋಗ್ಯ ಸಚಿವರಾಗಿ, ಗುಜರಾತ್​ನಲ್ಲಿ ಹೊಸ ಇತಿಹಾಸ ಬರೆದರು. ಪಟನಾದ ಸದಾಖಾತ್ ಆಶ್ರಮದಲ್ಲಿರುವ ಪಕ್ಷದ ಕಚೇರಿಯ ಕೋಣೆಯೊಂದರಲ್ಲೇ ಗೋಹಿಲ್ ವಾಸ್ತವ್ಯ ಹೂಡಿ, ಚುನಾವಣೆ ನಿಭಾಯಿಸುತ್ತಿದ್ದಾರೆ. ಗುಜರಾತ್​ನಿಂದ ಗೋಹಿಲ್ ಬಾರದಿದ್ದರೆ, ಆರ್​ಜೆಡಿ ನಮಗೆ 50ಕ್ಕಿಂತ ಹೆಚ್ಚು ಸೀಟುಗಳನ್ನು ನೀಡುತ್ತಿರಲಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ಸಿಗರೇ ಹೇಳುತ್ತಾರೆ. ಉಪೇಂದ್ರ ಖುಶ್ವಾಹರ ರಾಷ್ಟ್ರೀಯ ಲೋಕಸಮತಾ ಪಾರ್ಟಿ ಮತ್ತು ಮುಖೇಶ್ ಸಹಾನಿ ನೇತೃತ್ವದ ವಿಕಾಸ್​ಶೀಲ್ ಇನ್ಸಾನ್ ಪಾರ್ಟಿಯನ್ನು ಮಹಾಮೈತ್ರಿಯೊಂದಿಗೆ ಉಳಿಸಿಕೊಳ್ಳಬೇಕು ಎಂದು ಗೋಹಿಲ್ ಬಯಸಿದ್ದರೂ, ಆರ್​ಜೆಡಿಯ ತೇಜಸ್ವಿ ಯಾದವ್ ವಿರೋಧದಿಂದಾಗಿ ಕಾಂಗ್ರೆಸ್ ಸುಮ್ಮನಾಗಬೇಕಾಯ್ತು.
ಬಾಡಿಗೆ ಪಾವತಿ ವಿಚಾರ: ಕೇಂದ್ರ ಸಚಿವ ಪೋಖ್ರಿಯಾಲ್​ ವಿರುದ್ಧದ ನ್ಯಾಯಾಂಗ ನಿಂದನೆಗೆ ಸುಪ್ರೀಂ ತಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − three =
Remember me
