ಪಾಟ್ನ:ಹದಿನೆಂಟು ತಿಂಗಳ ಹಿಂದೆ ಮಹಾಘಟಬಂಧನಕ್ಕೆ ಸೇರಿ ಬಿಹಾರದ ಮುಖ್ಯಮಂತ್ರಿಯೂ ಆಗಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್, ಆ ನಂಟು ಕಡಿದುಕೊಂಡು ಮತ್ತೆ ಬಿಜೆಪಿ ಜತೆ ಕೈಜೋಡಿಸುವ ಮೂಲಕ ಎನ್​ಡಿಎ ತೆಕ್ಕೆಗೆ ಸೇರಿದ್ದಾರೆ. ಭಾನುವಾರ ಪುನಃ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕಳೆದೆರಡು ದಿನಗಳಿಂದ ಬಿಹಾರದಲ್ಲಿ ನಡೆಯುತ್ತಿದ್ದ ರಾಜಕೀಯ ಕುತೂಹಲಕ್ಕೆ ತೆರೆಬಿದ್ದಂತಾಗಿದ್ದು, ನಿತೀಶ್ ಕುಮಾರ್ 9ನೇ ಸಲ ಬಿಹಾರ ಸಿಎಂ ಆಗಿದ್ದಾರೆ. ಬಿಜೆಪಿ ನಾಯಕರಾದ ಸಾಮ್ರಾಟ್ ಚೌಧರಿ, ವಿಜಯ್ಕುಮಾರ್ ಸಿನ್ಹಾ ಉಪ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿಜೆಪಿಯಿಂದ ಸ್ವಾಗತವೇಕೆ? :ನಿತೀಶ್​ಕುಮಾರ್ ಅವರದ್ದು ಇದು ಐದನೇ ಜಿಗಿತ. ಅದಾಗ್ಯೂ ಅವರನ್ನು ಬಿಜೆಪಿ ಬರಮಾಡಿಕೊಂಡಿದ್ದೇಕೆ ಎಂಬುದಕ್ಕೂ ಕೆಲವು ಕಾರಣಗಳಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿಯೇ ಯುಪಿಎ ಬಣದ ಕಾಂಗ್ರೆಸ್ ಮತ್ತಿತರ ಪಕ್ಷಗಳು ಜೊತೆಯಾಗಿ ‘ಇಂಡಿಯಾ’ ಎಂಬ ಒಕ್ಕೂಟ ರಚಿಸಿಕೊಂಡಿವೆ. ನಿತೀಶ್ ಕುಮಾರ್ ಈ ಒಕ್ಕೂಟ ರಚನೆಯ ಮುಂಚೂಣಿಯಲ್ಲಿ ಇದ್ದಿದ್ದಲ್ಲದೆ, ಒಕ್ಕೂಟದ ಪ್ರಮುಖರಾಗಿದ್ದರು. ಒಕ್ಕೂಟದ ಸಭೆ ಆಯೋಜಿಸಿದ ನಿತೀಶ್ ಕೊನೆಯವರೆಗೂ ಬಿಜೆಪಿ ವಿರುದ್ಧ ಹೋರಾಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಈ ಹಿಂದೆ ಹೇಳಿದ್ದು ಕೂಡ ಒಕ್ಕೂಟದಲ್ಲಿ ನಿತೀಶ್ ಪಾತ್ರ ಎಷ್ಟು ಮಹತ್ವದ್ದು ಎಂಬುದಕ್ಕೆ ಸಾಕ್ಷಿಯಾಗಿದೆ.
ಹೀಗಾಗಿ ನಿತೀಶ್ ಅವರನ್ನೇ ಬರಮಾಡಿಕೊಂಡರೆ ಲೋಕಸಭಾ ಚುನಾವಣೆಗೂ ಮುನ್ನವೇ ಇಂಡಿಯಾ ಒಕ್ಕೂಟಕ್ಕೆ ಮರ್ವಘಾತ ಉಂಟು ಮಾಡಿದಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಿತೀಶ್ ಅವರನ್ನು ಸ್ವಾಗತಿಸಿದೆ ಎನ್ನುವುದು ಕೆಲ ರಾಜಕೀಯ ಪಂಡಿತರ ಅಭಿಪ್ರಾಯ. ಇನ್ನು ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್, ಪಂಜಾಬ್​ನಲ್ಲಿ ಕಾಂಗ್ರೆಸ್ ಮತ್ತು ಆಪ್ ನಡುವೆ ಸೀಟು ಹಂಚಿಕೆ ವಿಚಾರವಾಗಿ ಹೊಂದಾಣಿಕೆ ಹದಗೆಟ್ಟಿದೆ. ಹೀಗಿರುವಾಗ ಬಿಹಾರದಲ್ಲಿ ಜೆಡಿಯು-ಆರ್​ಜೆಡಿ ಮೈತ್ರಿ ಮುರಿದು ನಿತೀಶ್ ತಮ್ಮ ಜತೆ ಕೈಜೋಡಿಸಿದರೆ ಇಂಡಿಯಾ ಒಕ್ಕೂಟಕ್ಕೆ ಅದು ದೊಡ್ಡ ಹೊಡೆತವೇ ಆಗಲಿದೆ ಎಂದೂ ಬಿಜೆಪಿ ಮೈತ್ರಿಗೆ ಮುಂದಾಗಿದೆ ಎನ್ನಲಾಗುತ್ತಿದೆ.
ಮುಚ್ಚಿದ ಬಾಗಿಲು ತೆರೆಯಿತು! :ಕಳೆದೆರಡು ದಿನಗಳ ಕುತೂಹಲದ ಬೆಳವಣಿಗೆಗಳ ಬಳಿಕ ಜೆಡಿಯು ನಾಯಕ ನಿತೀಶ್ ಕುಮಾರ್ ಇಂಡಿಯಾ ಒಕ್ಕೂಟದಿಂದ ಬೇರ್ಪಟ್ಟು ಎನ್​ಡಿಎ ಜತೆ ಮತ್ತೆ ಮೈತ್ರಿ ಸಾಧಿಸಿದ್ದಾರೆ. ಒಂದು ವರ್ಷದ ಹಿಂದೆ ಇವರು ಎನ್​ಡಿಎನಿಂದ ಹೊರಹೋಗಿದ್ದಾಗ ‘ಜೆಡಿಯು ನಾಯಕ ನಿತೀಶ್ ಕುಮಾರ್ ಅವರಿಗೆ ಬಿಜೆಪಿಯ ಬಾಗಿಲು ಮುಚ್ಚಲಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದರು. ಆದರೆ ಇದೀಗ ನಿತೀಶ್ ಮತ್ತೆ ಬಿಜೆಪಿ ಜತೆ ಕೈಜೋಡಿಸುವ ಮೂಲಕ ಮುಚ್ಚಿದ ಬಾಗಿಲು ತೆರೆದಂತಾಗಿದೆ. ‘ಬಿಜೆಪಿಗೆ ವಾಪಸ್ ಹೋಗುತ್ತೀರಾ?’ ಎಂದು ಕಳೆದ ವರ್ಷದ ಜನವರಿಯಲ್ಲಿ ಸುದ್ದಿಗಾರರು ನಿತೀಶ್ ಕುಮಾರ್​ಗೆ ಕೇಳಿದ್ದರು. ಆಗ ‘ನಾನು ಸಾಯುತ್ತೇನೆ ಹೊರತು ಅವರೊಂದಿಗೆ ಕೈಜೋಡಿಸುವುದಿಲ್ಲ, ಇದನ್ನು ನೆನಪಿಟ್ಟುಕೊಳ್ಳಿ’ ಎಂದು ನಿತೀಶ್ ಪ್ರತಿಕ್ರಿಯಿಸಿದ್ದರು.
ವರ್ಷದಿಂದ ವರ್ಷಕ್ಕೆ ಜೆಡಿಯು ಸ್ಥಾನ ಇಳಿಕೆ:ಕಳೆದ ಒಂದು ದಶಕದಲ್ಲಿ ಬಿಹಾರದಲ್ಲಿ ಜೆಡಿಯು ಗಳಿಸುತ್ತಿರುವ ಸ್ಥಾನಗಳಲ್ಲಿ ಇಳಿಕೆ ಆಗಿದೆ. 2010ರ ಚುನಾವಣೆಯಲ್ಲಿ 115 ಸ್ಥಾನ ಗಳಿಸಿದ್ದ ಜೆಡಿಯು, 2015ರಲ್ಲಿ 71 ಮತ್ತು 2020ರಲ್ಲಿ 43 ಸ್ಥಾನಗಳನ್ನು ಗಳಿಸಿತ್ತು. ಅದಾಗ್ಯೂ ನಿತೀಶ್ ಕುಮಾರ್ ಸಿಎಂ ಗಾದಿ ಕಾದುಕೊಂಡಿರುವುದು ಅವರ ವೈಯಕ್ತಿಕ ವರ್ಚಸ್ಸಿಗೆ ಸಾಕ್ಷಿಯಾಗಿದೆ. ಅಲ್ಲದೆ ಜೆಡಿಯು ಬಿಹಾರ ವಿಧಾನಸಭೆಯಲ್ಲಿ ಮೂರನೇ ದೊಡ್ಡ ಪಕ್ಷವಾಗಿರುವುದು, ನಿತೀಶ್ ಈಗಾಗಲೇ ಎಂಟು ಸಲ ಸಿಎಂ ಆಗಿರುವುದು ಕೂಡ ಬಿಜೆಪಿ ಈ ನಂಟು ಬೆಳೆಸಲು ಕಾರಣ ಎಂದೂ ಹೇಳಲಾಗುತ್ತಿದೆ.
ಕಸ ತೊಟ್ಟಿಗೆ ಸೇರುತ್ತಿದೆ…:ಆರ್​ಜೆಡಿ ಮೈತ್ರಿ ತೊರೆದು ಎನ್​ಡಿಎ ಮೈತ್ರಿಗೆ ಸೇರಿದ ನಿತೀಶ್ ಕುಮಾರ್ ಕುರಿತು ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ, ‘ಕಸ ಮರಳಿ ಕಸದ ತೊಟ್ಟಿಗೆ ಸೇರುತ್ತಿದೆ. ಗಬ್ಬು ನಾರುವ ಕಸದ ಗುಂಪಿಗೆ ಶುಭಾಶಯ’ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಪಾಲಿಕೆ ಕಸದ ವಾಹನವೊಂದರ ಫೋಟೋ ಸಹಿತ ಎಕ್ಸ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಬಳಿಕ ಆ ಪೋಸ್ಟ್ ಡಿಲೀಟ್ ಮಾಡಿದ್ದರು.
ಆಯಾ ರಾಮ್ ಗಯಾ ರಾಮ್:ನಿತೀಶ್ ಕುಮಾರ್ ಮಹಾಘಟಬಂಧನ ತೊರೆದು ಎನ್​ಡಿಎ ಜತೆ ಮರುಮೈತ್ರಿ ಸಾಧಿಸಿದ ಬೆನ್ನಿಗೇ, ‘ಹೀಗಾಗುತ್ತದೆ ಎನ್ನುವುದು ನನಗೆ ಮೊದಲೇ ಗೊತ್ತಿತ್ತು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಮತ್ತು ನನಗೆ ನಿತೀಶ್ ಹೋಗುತ್ತಿರುವುದು ತಿಳಿದಿತ್ತು. ಆದರೆ ಈ ಬಗ್ಗೆ ಮಾತನಾಡಿದರೆ ತಪು್ಪ ಸಂದೇಶ ರವಾನೆ ಆಗುತ್ತದೆ ಹಾಗೂ ಇಂಡಿಯಾ ಒಕ್ಕೂಟಕ್ಕೆ ಧಕ್ಕೆ ಆಗಬಾರದು ಎಂಬ ಉದ್ದೇಶದಿಂದ ಸುಮ್ಮನಿದ್ದೆವು ಎಂದಿರುವ ಖರ್ಗೆ, ಆಯಾ ರಾಮ್ ಗಯಾ ರಾಮ್ ಥರದ ಅನೇಕರು ಈ ದೇಶದಲ್ಲಿದ್ದಾರೆ ಎಂದೂ ಹೇಳಿದ್ದಾರೆ.
ಮೂರನೇ ಸ್ಥಾನದಲ್ಲಿ ಜೆಡಿಯು:ನಿತೀಶ್ ಕುಮಾರ್ 2022ರಲ್ಲಿ ಎನ್​ಡಿಯ ಮೈತ್ರಿ ತೊರೆದು ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ), ಕಾಂಗ್ರೆಸ್ ಮತ್ತು ಇತರ ಎಡಪಕ್ಷಗಳ ಜತೆ ಮಹಾ ಘಟಬಂಧನ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದ್ದರೆ ವಿಧಾನಸಭೆಯ ಸ್ಥಾನಗಳ ಬೆಂಬಲವೂ ಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲೂ ಈ ಮರುಮೈತ್ರಿ ನಡೆದಿದೆ. 243 ವಿಧಾನಸಭಾ ಕ್ಷೇತ್ರಗಳಿರುವ ಬಿಹಾರದಲ್ಲಿ ಆರ್​ಜೆಡಿ 79 ಶಾಸಕರನ್ನು ಹೊಂದಿರುವ ಮೂಲಕ ಅತಿದೊಡ್ಡ ಪಕ್ಷ ಎನಿಸಿಕೊಂಡಿದೆ.
ಬಿಜೆಪಿ (78) ಹಾಗೂ ಜೆಡಿಯು (45) ಕ್ರಮವಾಗಿ ಎರಡು ಮತ್ತು ಮೂರನೇ ಅತಿದೊಡ್ಡ ಪಕ್ಷ ಎನಿಸಿಕೊಂಡಿವೆ. ಹೀಗಾಗಿ ಲೋಕಸಭೆಯಲ್ಲಿ ಜೆಡಿಯು ಬೆಂಬಲ ಸಿಕ್ಕಿಬಿಟ್ಟರೆ ಬಿಜೆಪಿಗೆ ಗೆಲುವು ಖಚಿತ ಎಂಬ ನಿಟ್ಟಿನಲ್ಲಿಯೂ ಈ ಮೈತ್ರಿ ಫಲಪ್ರದವಾಗಿದೆ. ಅಲ್ಲದೆ, ಆರ್​ಜೆಡಿಯನ್ನು ಜಂಗಲ್​ರಾಜ್ ಎಂದು ದೂಷಿಸುತ್ತ ಬಂದಿರುವ ಬಿಜೆಪಿ ಅದರ ಜತೆಗೆ ಕೈಜೋಡಿಸುವುದು ಕಷ್ಟವಾದ್ದರಿಂದ ಜೆಡಿಯು ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಮೂಲಗಳ ಪ್ರಕಾರ ಬಿಹಾರದ ಬಿಜೆಪಿ ಶಾಸಕರು ಪತ್ರಗಳ ಮೂಲಕ ನಿತೀಶ್ ಕುಮಾರ್​ಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ನಿತೀಶ್ ಕುಮಾರ್ ಭಾನುವಾರ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಅವರನ್ನು ಭೇಟಿ ಆಗುವುದಕ್ಕೂ ಮುನ್ನ ಬಿಜೆಪಿ ಶಾಸಕರು ಪಟನಾದಲ್ಲಿ ಸಭೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ಚಿರ ಯುವಕನಂತೆ ಕಾಣುವ ಅಜ್ಜನ ಹೆಲ್ತ್ ಸೀಕ್ರೆಟ್ ಏನು ಗೊತ್ತಾ ? ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ !

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 2 =
Remember me
