ಬೆಂಗಳೂರು:ಬಿಟ್​ಕಾಯಿನ್ ಬಿಕ್ಕಟ್ಟಿನ ಗೊಂದಲಕ್ಕೆ ತ್ವರಿತವಾಗಿ ತೆರೆ ಎಳೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಹತ್ವದ ಸಲಹೆ-ಸೂಚನೆ ನೀಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಇದರೊಟ್ಟಿಗೆ ಪಕ್ಷದ ವರಿಷ್ಠರು ಇಷ್ಟರಲ್ಲೇ ರಂಗಪ್ರವೇಶ ಮಾಡಲಿದ್ದು, ಆರೋಪಗಳ ಸುಳಿಯಿಂದ ಸರ್ಕಾರವನ್ನು ಮೇಲೆತ್ತುವ ಕಾರ್ಯತಂತ್ರ ರೂಪಿಸಲಿದ್ದಾರೆ.
ಬಿಟ್ ಕಾಯಿನ್ ಪ್ರಕರಣದ ಕಾವು, ಅಸ್ಪಷ್ಟತೆ ಮುಂದುವರಿದಿರುವ ನಡುವೆಯೇ ಅಮಿತ್ ಷಾ ಹಾಗೂ ಸಿಎಂ ಬೊಮ್ಮಾಯಿ ವಾರದಲ್ಲಿ ಎರಡನೇ ಬಾರಿ ಮುಖಾಮುಖಿಯಾಗಿದ್ದರು. ತಿರುಪತಿಯ ಹೋಟೆಲ್​ವೊಂದರಲ್ಲಿ ಭಾನುವಾರ ಮಧ್ಯಾಹ್ನ ನಡೆದ ಮಾತುಕತೆ ವೇಳೆ ಸರ್ಕಾರದ ಕೆಲವು ವಿಚಾರಗಳನ್ನು ಸಿಎಂ ಪ್ರಸ್ತಾಪಿಸಿದ್ದಾರೆಲ್ಲದೇ ಬಿಟ್​ಕಾಯಿನ್ ಮಸುಕು ಸರಿಸಲು ಕೋರಿದ್ದಾರೆ ಎನ್ನಲಾಗಿದೆ.
ಪಕ್ಷ ಉತ್ತರಿಸಲಿದೆ:ಇದೇ ಗೊಂದಲದಲ್ಲಿ ಇನ್ನಷ್ಟು ಕಾಲ ಮುಂದುವರಿದರೆ ಜನರಿಗೆ ಬೇರೆ ಸಂದೇಶ ಹೋಗುತ್ತದೆ ಮತ್ತು ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತದೆ. ಇದೇ ಕಾಂಗ್ರೆಸ್ ಉದ್ದೇಶವೂ ಆಗಿರುತ್ತದೆ. ಈ ಕಾರಣಕ್ಕೆ ನೀವು ಬಿಟ್ ಕಾಯಿನ್ ವಿಷಯಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿ ಜನರ ಮನಸ್ಸು ಗೆಲ್ಲಿ ಮತ್ತು ವಿಧಾನಪರಿಷತ್ 25 ಕ್ಷೇತ್ರಗಳ ಚುನಾವಣೆ ಬಗ್ಗೆ ಗಮನ ಕೊಡಿ. ಇದಕ್ಕೆಲ್ಲ ಪಕ್ಷ ಉತ್ತರ ಕೊಡುತ್ತದೆ ಎಂದು ಅಮಿತ್ ಷಾ ಹೇಳಿ ಆತ್ಮಸ್ಥೈರ್ಯ ತುಂಬಿ ಕಳಿಸಿದ್ದಾರೆಂದು ತಿಳಿದುಬಂದಿದೆ.
ವರಿಷ್ಠರ ಕೆಂಗಣ್ಣು:ಈ ಮಧ್ಯೆ ಬಿಟ್​ಕಾಯಿನ್ ಪ್ರಕರಣದಲ್ಲಿ ಆಡಳಿತ ಪಕ್ಷ ಬಿಜೆಪಿಯನ್ನು ಹಣಿಯಲು ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿದ್ದರೆ, ಸಿಎಂ ಬೊಮ್ಮಾಯಿ ‘ಹಿತಶತ್ರುಗಳು’ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆಂಬ ಸಂದೇಹ ವ್ಯಕ್ತವಾಗಿದೆ. ನಾಯಕತ್ವ ಬದಲಾವಣೆಗಾಗಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ನಡೆದ ಮಸಲತ್ತು ಮರುಕಳಿಸಿದ್ದು, ಪಾತ್ರಧಾರಿಗಳು ಮತ್ತು ವಿಷಯ-ವಸ್ತು ಬೇರೆಯಷ್ಟೇ. ರಾಜ್ಯದ ಈ ಬೆಳವಣಿಗೆ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಆರೋಪ, ಅಪಪ್ರಚಾರಗಳಿಗೆ ಸ್ವಪಕ್ಷದವರೇ ಒತ್ತಾಸೆ ನೀಡುತ್ತಿದ್ದಾರೆ ಎಂದು ಅಮಿತ್ ಷಾಗೆ ಖುದ್ದು ಸಿಎಂ ಬೊಮ್ಮಾಯಿ ದೂರಿತ್ತಿದ್ದಾರೆ. ಇದರ ಬೆನ್ನಲ್ಲೇ ಕೆಲವು ಸಚಿವರು ಮತ್ತು ಅಧಿಕಾರಿಗಳು ತಮಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಯು ಪಕ್ಷದಲ್ಲಿ ಹುಟ್ಟಿಕೊಂಡಿರುವ ಸಂಶಯಕ್ಕೆ ಪುಷ್ಟಿ ನೀಡಿದೆ.
ನಡ್ಡಾ ಶೀಘ್ರ ರಂಗ ಪ್ರವೇಶ:ಆಡಳಿತಕ್ಕೆ ಚುರುಕು, ಅಭಿವೃದ್ಧಿ ವೇಗ ಹೆಚ್ಚಿದೆ ಎಂಬ ಖುಷಿಯನ್ನು ‘ಬಿಟ್​ಕಾಯಿನ್’ ಕಸಿದಿದೆ. ಹೀಗಾಗಿ ಪರಿಸ್ಥಿತಿ ತಿಳಿಗೊಳಿಸಲೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶೀಘ್ರ ರಂಗ ಪ್ರವೇಶಿಸಲಿದ್ದಾರೆ. ಪರಿಷತ್ ಚುನಾವಣೆ ರಣತಂತ್ರ ಪರಾಮರ್ಶೆಗೆ ಭೇಟಿ ನೀಡಲಿದ್ದಾರೆ ಎಂದು ಮೇಲ್ನೋಟಕ್ಕೆ ಬಿಂಬಿತವಾದರೂ ಅಪನಂಬಿಕೆ, ಗೊಂದಲ ನಿವಾರಣೆ ಪ್ರವಾಸದ ಮುಖ್ಯ ಉದ್ದೇಶವಾಗಿರಲಿದೆ. ಬೊಮ್ಮಾಯಿ ಸಂಪುಟದ ಸಹೋದ್ಯೋಗಿಗಳು ಸೇರಿದಂತೆ ಪ್ರಮುಖ ನಾಯಕರೊಂದಿಗೆ ಮುಖಾಮುಖಿ ರ್ಚಚಿಸಿ, ಆಡಳಿತ ಮತ್ತು ಪಕ್ಷದ ವರ್ಚಸ್ಸು ಹೆಚ್ಚಳಕ್ಕೆ ಒತ್ತು ನೀಡಲಿದ್ದಾರೆ.
ರಾಜ್ಯದಲ್ಲಿ ಮೇಲ್ಮನೆ ಜತೆಗೆ ಮುಂದೆ ಬರಲಿರುವ ಸರಣಿ ಚುನಾವಣೆಗಳು ಹಾಗೂ ಪಂಚ ರಾಜ್ಯಗಳ ವಿಧಾನಸಭೆ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ‘ಬಿಟ್​ಕಾಯಿನ್’ ಬಿಸಿ ತಣ್ಣಗಾಗಿಸುವುದು ಕಮಲ ಪಡೆಗೆ ಮುಖ್ಯವಾಗಿದೆ. ಅಲ್ಲದೆ, ಆರೋಪಗಳ ಸುಳಿಯಿಂದ ಮೇಲೆತ್ತಿ, ಕಾರ್ಯಚಟುವಟಿಕೆಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯತಂತ್ರ ರೂಪಿಸಿ, ಪರಿಣಾಮಕಾರಿ ಅನುಷ್ಠಾನಕ್ಕೆ ನಡ್ಡಾ ನಿರ್ದೇಶನ ನೀಡಲಿದ್ದಾರೆ.
ಬಿಟ್​ಕಾಯಿನ್ ಹಗರಣವನ್ನು ಬಯಲಿಗೆ ತಂದವರೇ ನಾವು. ದಂಧೆಯಲ್ಲಿ ಯಾರನ್ನೂ ರಕ್ಷಿಸುವುದಿಲ್ಲ. ಯಾರೇ ಭಾಗಿಯಾಗಿದ್ದರೂ ಬಲಿ ಹಾಕದೆ ಬಿಡೆವು.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಕಾಂಗ್ರೆಸ್​ನ ಈ ಅಪಪ್ರಚಾರ, ಸುಳ್ಳಿನ ರಾಜಕಾರಣವನ್ನು ಬಿಜೆಪಿ ಸಹಿಸುವುದಿಲ್ಲ. ನಿಮ್ಮ ಹುಳುಕು ಮುಚ್ಚಿಕೊಳ್ಳಲು ಇನ್ನೊಬ್ಬರ ವಿರುದ್ಧ ನೂರು ಸುಳ್ಳು ಹೇಳುವ ಕುತಂತ್ರಗಳನ್ನು ಜನರ ಮುಂದಿಡಲೇಬೇಕು. ಸಚಿವರು ಮಾತ್ರವಲ್ಲ, ಪ್ರತಿಯೊಬ್ಬ ಕಾರ್ಯಕರ್ತ ಕೂಡ ಕಾಂಗ್ರೆಸ್ ನಾಟಕವನ್ನು ಬಯಲಿಗೆಳೆಯಲು ಸಿದ್ಧರಾಗಿದ್ದಾರೆ.
|ಡಾ.ಕೆ. ಸುಧಾಕರ್ಆರೋಗ್ಯ ಸಚಿವ
ಮುಖ್ಯಮಂತ್ರಿ ಬೆನ್ನಿಗೆ ಬಿಜೆಪಿ:ಬಿಎಸ್​ವೈ ಆಡಳಿತಾವಧಿಯಲ್ಲಿ ಕರೊನಾ ನಿರ್ವಹಣೆ ಪರಿಕರಗಳ ಖರೀದಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಪಕ್ಷದ ಪ್ರಮುಖರು ಸರ್ಕಾರದ ಬೆನ್ನಿಗೆ ನಿಲ್ಲದ ಪರಿಣಾಮ ಆರೋಪಗಳು ಗಂಭೀರ ಸ್ವರೂಪ ಪಡೆದುಕೊಂಡಿದ್ದವು. ಇದೀಗ ಬಿಟ್ ಕಾಯಿನ್ ವಿಚಾರದಲ್ಲೂ ಮತ್ತದೇ ಮಂದ ನಿಲುವು ಅನುಸರಿಸಿದ್ದಕ್ಕೆ ವರಿಷ್ಠರು ಕಸಿವಿಸಿಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೆನ್ನಿಗೆ ನಿಲ್ಲಬೇಕು ಎಂದು ರಾಜ್ಯದ ಪ್ರಮುಖ ನಾಯಕರಿಗೆ ದೆಹಲಿ ನಾಯಕರು ಸೂಚಿಸಿದ್ದಾರೆ. ಆ ಮೂಲಕ ‘ಹಾನಿ ನಿಯಂತ್ರಣ’ಕ್ಕೆ ಮುಂದಾಗಿದ್ದು, ಪ್ರತ್ಯುತ್ತರ ನೀಡುವಲ್ಲಿ ವಿಳಂಬದಿಂದ ಜನರಿಗೆ ಬೇರೆಯದೇ ಸಂದೇಶ ರವಾನಿಸಲಿದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯಾದ್ಯಂತ ಬಿಜೆಪಿ ಆಕ್ರೋಶ:ವರಿಷ್ಠರಿಂದ ಸೂಚನೆ ಹೊರಬೀಳುತ್ತಿ ದ್ದಂತೆಯೇ ಬೆಂಗಳೂರು ಸೇರಿದಂತೆ ಒಟ್ಟು 10 ಕಡೆ ಬಿಜೆಪಿ ಸಂಸದ-ಶಾಸಕರು, ಪದಾಧಿಕಾರಿಗಳು ಕೈನಾಯಕರ ಮೇಲೆ ವಾಗ್ದಾಳಿ ನಡೆಸಿದ್ದು, ಸೋಮವಾರ ಮತ್ತೆ 10 ಜಿಲ್ಲೆಗಳಿಂದಲೂ ಹೇಳಿಕೆ ಹೊರಬೀಳಲಿವೆ.
ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗುವ ವಿದ್ಯಾನಿಧಿ, ಅಮೃತ ಯೋಜನೆಗಳು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ಪರಿಶೀಲನಾ ಸಮಿತಿ ರಚನೆ ಪ್ರಧಾನಿ ಮೋದಿಗೆ ಇಷ್ಟವಾಗಿವೆ. ಹೀಗಾಗಿ ಜನರ ಮೆಚ್ಚುಗೆ, ವರ್ಚಸ್ಸು ಹೆಚ್ಚಳಕ್ಕೆ ಪಾತ್ರವಾಗಿರುವ 100 ದಿನಗಳ ಕಾರ್ಯಕ್ರಮಗಳ ಮಾದರಿ ಮುಂದುವರಿಸಲು ಬೊಮ್ಮಾಯಿಗೆ ಸಲಹೆ ನೀಡಿದ್ದಾರೆ.
ರಹಸ್ಯ ಕಾರ್ಯಾಚರಣೆ:ಈ ಮಧ್ಯೆ ಸರ್ಕಾರ ಮತ್ತು ಪಕ್ಷದೊಳಗಿನ ಅಪ್ರಪಚಾರಕರ ಪತ್ತೆಗೆ ಬಿಜೆಪಿ ವರಿಷ್ಠರು ತಮ್ಮದೇ ಆದ ನೆಟ್​ವರ್ಕ್ ನೆರವಿನಿಂದ ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. ಸರ್ಕಾರದ ಅಸ್ಥಿರತೆ, ಪಕ್ಷದ ಸಂಘಟನೆಗೆ ಹೊಡೆತ ನೀಡುವ ಇಂತಹ ಪ್ರಯತ್ನಗಳನ್ನು ಚಿಗುರಿನಲ್ಲೇ ಚಿಗುಟು ಹಾಕಿ, 2023ರ ವಿಧಾನಸಭೆ ಚುನಾವಣೆಗೆ ಸಜ್ಜುಗೊಳಿಸುವುದು ಈ ಕಾರ್ಯಾಚರಣೆ ಗುರಿಯಾಗಿದೆ. ಸಚಿವರು, ಶಾಸಕರು ಮತ್ತು ರಾಜ್ಯಮಟ್ಟದ ನಾಯಕರ ನಡವಳಿಕೆ, ಕಾರ್ಯಶೈಲಿ, ಆಂತರಿಕ ಒಪ್ಪಂದ ಹೀಗೆ ಪ್ರತಿಯೊಂದು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮವಹಿಸಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಅಸ್ಥಿರತೆ ಸೋಂಕಿಗೆ ಮದ್ದು:ಯಡಿಯೂರಪ್ಪ ಆಡಳಿತಾವಧಿಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿಯೊಬ್ಬರು ಇಲ್ಲದ ವಿಚಾರ ತೇಲಿಬಿಟ್ಟು, ಅಪಪ್ರಚಾರಕ್ಕೆ ಗ್ರಾಸವಾಗಿ ಸರ್ಕಾರದ ಅಸ್ಥಿರತೆಗೆ ಕಾರಣರಾಗಿದ್ದರು. ಈಗಲೂ ಬೊಮ್ಮಾಯಿ ಸಂಪುಟದ ಸಹೋದ್ಯೋಗಿಯೊಬ್ಬರು ಬಿಟ್​ಕಾಯಿನ್ ಪ್ರಕರಣಕ್ಕೆ ಅತಿರೇಕದ ಸ್ಪರ್ಶ ನೀಡಿದ್ದಾರೆ ಎಂಬ ಮಾಹಿತಿ ವರಿಷ್ಠರಿಗೆ ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ.
ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 3 =
Remember me
