ಬೆಂಗಳೂರು:ಐಪಿಎಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎನ್ನಲಾದ ಬಹುಕೋಟಿ ಬಿಟ್ ಕಾಯಿನ್ ಹಗರಣದ ರಹಸ್ಯಗಳನ್ನು ಭೇದಿಸಲು ಸಿಐಡಿಯ ವಿಶೇಷ ತನಿಖಾ ತಂಡ (ಎಸ್​ಐಟಿ) ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿದೆ. ಈಗಾಗಲೇ ಸಿಸಿಬಿ, ಸ್ಥಳೀಯ ಪೊಲೀಸರು ಸೇರಿ ಪ್ರಕರಣದ ತನಿಖೆ ನಡೆಸಿದ್ದ ಎಲ್ಲರಿಂದಲೂ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಿರುವ ತನಿಖಾ ತಂಡ, ಅಗತ್ಯ ಸಾಕ್ಷ್ಯ ಸಂಗ್ರಹಿಸುವ ಉದ್ದೇಶದಿಂದ ತಾಂತ್ರಿಕವಾಗಿ ನೈಪುಣ್ಯತೆ ಹೊಂದಿರುವ ವಿದೇಶಿ ತನಿಖಾ ಸಂಸ್ಥೆಗಳ ನೆರವು ಕೋರಲು ಚಿಂತನೆ ನಡೆಸಿದೆ.
ಬಿಟ್ ಕಾಯಿನ್ ಹಗರಣದಲ್ಲಿ ತಾಂತ್ರಿಕ ಸಾಕ್ಷ್ಯ ನಾಶಪಡಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಯಾವಾಗ? ಹೇಗೆ? ಏನೆಲ್ಲ ಸಾಕ್ಷ್ಯ ನಾಶಪಡಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ವಿಧಿವಿಜ್ಞಾನ ತಜ್ಞರ ನೆರವು ಬೇಕಿದೆ. ರಾಜ್ಯಮಟ್ಟದ ಎಫ್​ಎಸ್​ಎಲ್ ಲ್ಯಾಬ್ ಇದ್ದರೂ ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ಅಷ್ಟೊಂದು ಪರಿಣಿತಿ ಹೊಂದಿಲ್ಲ ಎಂಬ ಮಾತುಗಳು ಪೊಲೀಸ್ ವಲಯದಲ್ಲೇ ಕೇಳಿಬಂದಿವೆ. ಆದ್ದರಿಂದ, ವಿದೇಶಿ ಸಂಸ್ಥೆಗಳ ನೆರವು ಪಡೆಯುವುದು ಸೂಕ್ತ ಎಂಬ ಸಲಹೆಗಳು ಬಂದಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಪ್ರಪಂಚದ ಬಹುದೊಡ್ಡ ಕ್ರಿಪ್ಟೋಕರೆನ್ಸಿ ಹಗರಣದಲ್ಲಿ ಅಮೆರಿಕದಲ್ಲಿ ಬಂಧಿತರಾಗಿದ್ದ ನ್ಯೂಯಾರ್ಕ್​ನ ಲಿಶ್ಚನ್ ಸ್ಟೇನ್ ಹಾಗೂ ಹೀಥರ್ ರೀಹ್ನನ್ ಮೊರ್ಗನ್ ದಂಪತಿ ಪ್ರಕರಣಕ್ಕೂ ಹ್ಯಾಕರ್ ಶ್ರೀಕಿ ನಂಟಿರುವುದು ಈ ಹಿಂದೆ ಗೊತ್ತಾಗಿತ್ತು.
2016 ಆಗಸ್ಟ್​ನಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟಿನ ಬಿಟ್​ಫಿನೆಕ್ಸ್ ವೆಬ್​ಸೈಟ್ ಹ್ಯಾಕ್ ಮಾಡಿದ್ದ ದಂಪತಿ, ಆಗ 71 ಮಿಲಿಯನ್ ಡಾಲರ್ ಮೌಲ್ಯದ 1,19,754 ಬಿಟ್ ಕಾಯಿನ್ ಕದ್ದಿದ್ದರು. 2020 ನವೆಂಬರ್​ನಲ್ಲಿ ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಿಟ್​ಫಿನೆಕ್ಸ್ ಹ್ಯಾಕ್ ಮಾಡಿದ ಮೊದಲ ಹ್ಯಾಕರ್ ತಾನೇ ಎಂದು ಶ್ರೀಕೃಷ್ಣ ಹೇಳಿಕೆ ಕೊಟ್ಟಿದ್ದ. ಹೀಗಾಗಿ ವಿದೇಶಿ ತನಿಖಾ ಸಂಸ್ಥೆಗಳು ಶ್ರೀಕಿ ವಿಚಾರಣೆಗೆ ಬರಲಿವೆ ಎಂಬ ಮಾತುಗಳು ಕೇಳಿಬಂತಾದರೂ ಕೊನೆಗೆ ಯಾವ ತನಿಖಾ ಸಂಸ್ಥೆಯೂ ಕರ್ನಾಟಕದ ಪ್ರಕರಣದಲ್ಲಿ ವಿಚಾರಣೆ ನಡೆಸಲಿಲ್ಲ.
ಏನಿದು ಪ್ರಕರಣ?:ಬಿಟ್ ಕಾಯಿನ್ ಹಗರಣ ಸಂಬಂಧ 2020ರಲ್ಲಿ ಕಾಟನ್​ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಹೆಚ್ಚಿನ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ, ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಬಂಧಿಸಿದ್ದರು. ಆರೋಪಿ ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ ಮತ್ತು ಜಾಲತಾಣ ಹ್ಯಾಕ್ ಮಾಡಿ ಅಂದಾಜು 46 ಕೋಟಿ ರೂ. ದೋಚಿದ್ದ ಸಂಗತಿ ಪತ್ತೆ ಮಾಡಿದ್ದರು. ಜತೆಗೆ, ಶ್ರೀಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ್ದ ಬಿಟ್ ಕಾಯಿನ್ ಪ್ರಕರಣಗಳು ಹೊರಬಂದಿದ್ದವು. ಆದರೆ, ಸಿಸಿಬಿ ಪೊಲೀಸರು ತರಾತುರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣೆಪಟ್ಟಿ ಸಲ್ಲಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಈ ಪ್ರಕರಣದ ಮರು ತನಿಖೆಯ ಹೊಣೆಯನ್ನು ಎಸ್​ಐಟಿಗೆ ವಹಿಸಿದೆ.
ರಾಜ್ಯದಲ್ಲಿ ತಂತ್ರಜ್ಞಾನದ ಕೊರತೆ:ಭಾರತದಲ್ಲಿ ಕ್ರಿಫ್ಟೋ ಕರೆನ್ಸಿ ಜಪ್ತಿ ಮಾಡಲು ಬೇಕಾದ ತಂತ್ರಜ್ಞಾನದ ಕೊರತೆ ಇದೆ. ಅದರಲ್ಲಿಯೂ ಡಾರ್ಕ್ ವೆಬ್​ನಲ್ಲಿ ನಡೆಯುವ ವಹಿವಾಟು ಪತ್ತೆ ಹಚ್ಚುವುದು ಕಷ್ಟದ ಕೆಲಸ. ಹಗರಣದ ತನಿಖೆ ನಡೆಸಿ ಸೂಕ್ತ ಸಾಕ್ಷ್ಯಳನ್ನು ಕೋರ್ಟ್​ಗೆ ಸಲ್ಲಿಸುವುದು ಅಷ್ಟೊಂದು ಸುಲಭವಲ್ಲ. ಬೇರೆ ರಾಜ್ಯಗಳಲ್ಲಿ ಕ್ರಿಪ್ಟೋ ಕರೆನ್ಸಿ ಹಗರಣದ ಪ್ರಕರಣಗಳು ನಡೆದಿರುವುದು ತುಂಬಾ ವಿರಳ. ಈ ಎಲ್ಲ ಕಾರಣಗಳಿಂದ ಕರ್ನಾಟಕ ಪೊಲೀಸರು ಇಸ್ರೇಲ್ ದೇಶದ ಸಹಾಯ ಕೇಳುವ ಸಾಧ್ಯತೆಯಿದೆ. ಪ್ರಕರಣದ ತನಿಖೆಗೆ ಅಗತ್ಯವಿದ್ದರೆ ಬೇರೆ ತನಿಖಾ ಏಜೆನ್ಸಿಗಳ ಸಹಾಯ ಪಡೆಯುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಈ ಹಿಂದೆ ಹೇಳಿದ್ದರು. ಇದರ ಭಾಗವಾಗಿ ಎಸ್​ಐಟಿ ಅಧಿಕಾರಿಗಳು ಇಸ್ರೇಲ್ ನೆರವು ಪಡೆಯಲು ಚಿಂತನೆ ನಡೆಸಿದ್ದಾರೆ.
ಹಮಾಸ್ ಉಗ್ರರ ಬಿಟ್​ಕಾಯಿನ್ ಇಸ್ರೇಲ್ ವಶ:ಈಗ ಕಾಂಗ್ರೆಸ್ ಸರ್ಕಾರ ಬಿಟ್ ಕಾಯಿನ್ ತನಿಖೆಗೆ ಎಸ್​ಐಟಿ ತಂಡ ರಚನೆ ಮಾಡಿರುವುದರಿಂದ ಪ್ರಕರಣದ ಸಾಕ್ಷ್ಯಳನ್ನು ಕಲೆ ಹಾಕುವುದು ಸವಾಲಾಗಿದೆ. ಉಗ್ರರಿಗೆ ಸಂದಾಯವಾಗಬೇಕಿದ್ದ ಬಿಟ್ ಕಾಯಿನ್​ಗಳನ್ನು ಇಸ್ರೇಲ್ ರಕ್ಷಣಾ ಇಲಾಖೆ ವಶಕ್ಕೆ ಪಡೆದಿತ್ತು. ನ್ಯಾಷನಲ್ ಬ್ಯುರೋ ಫಾರ್ ಕೌಂಟರ್ ಟೆರರ್ ಫೈನಾನ್ಸ್ ತನಿಖಾ ಸಂಸ್ಥೆಯು ಹಮಾಸ್ ಉಗ್ರ ಸಂಘಟನೆಗೆ ಸೇರಿದ ಕ್ರಿಪ್ಟೋ ವಾಲೆಟ್​ಗಳನ್ನು ಭೇದಿಸಿತ್ತು. ಇಸ್ರೇಲ್ ರಕ್ಷಣಾ ಇಲಾಖೆಯು ಬಿಟ್ ಕಾಯಿನ್ ಅವ್ಯವಹಾರದ ಬಗ್ಗೆ ದೆಹಲಿ ಪೊಲೀಸರಿಗೂ ಕಳೆದ ವರ್ಷ ಮಾಹಿತಿ ನೀಡಿತ್ತು. ಕ್ರಿಫ್ಟೋ ವಾಲೆಟ್ ವಶಪಡಿಸಿಕೊಳ್ಳುವಲ್ಲಿ ಇಸ್ರೇಲ್ ನೈಪುಣ್ಯತೆ ಹೊಂದಿದ್ದು, ಹೀಗಾಗಿ ಎಸ್​ಐಟಿ ಇವರ ನೆರವು ಪಡೆಯಲು ಮುಂದಾಗಿದೆ ಎಂದು ಹೇಳಲಾಗಿದೆ.
ಕಾಮಕುಮಾರ ಸ್ವಾಮೀಜಿಯ ಭೀಕರ ಕೊಲೆ; ತಲೆ ಇಬ್ಭಾಗ, ಕೈ-ಕಾಲುಗಳೂ ಕಟ್, ಶವ 9 ತುಂಡು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − four =
Remember me
