ರಾಘವ ಶರ್ಮ ನಿಡ್ಲೆ ನವದೆಹಲಿಲೋಕಸಭಾ ಚುನಾವಣೆಗೆ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಸಿದ್ಧತೆ ಆರಂಭಿಸಿವೆ. ಸಾಕಷ್ಟು ಮುಂಚಿತವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಸಜ್ಜಾಗಿದ್ದರೆ, ಇನ್ನೊಂದೆಡೆ ಮೈತ್ರಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲು ಈಗಾಗಲೆ ಸಮಿತಿ ರಚಿಸಿರುವ ಕಾಂಗ್ರೆಸ್, ದೇಶದ ಪೂರ್ವದಿಂದ ಪಶ್ಚಿಮದವರೆಗೆ ಯಾತ್ರೆಗೆ ದಿನಾಂಕ ಘೋಷಿಸಿದೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢ ವಿಧಾನಸಭೆ ಚುನಾವಣೆ ಗೆದ್ದು ಬೀಗುತ್ತಿರುವ ಮಧ್ಯೆಯೇ ಬಿಜೆಪಿ ವರಿಷ್ಠರು 2024ರ ಲೋಕಸಭೆ ಚುನಾವಣೆಗೆ ರೋಡ್​ವ್ಯಾಪ್ ಸಿದ್ಧಪಡಿಸುತ್ತಿದ್ದು, ಚುನಾವಣಾ ಆಯೋಗವು ದಿನಾಂಕ ಪ್ರಕಟಿಸುವ ಮುನ್ನವೇ ಹಲವು ಸೀಟುಗಳಿಗೆ ಅಭ್ಯರ್ಥಿ ಘೊಷಿಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಮೂರು ರಾಜ್ಯಗಳ ಚುನಾವಣೆ ಘೊಷಣೆಗೆ ಮುನ್ನವೇ ಅಲ್ಲಿ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮಗೊಳಿಸಲಾಗಿತ್ತು. ಅವರಲ್ಲಿ ಬಹುಪಾಲು ಅಭ್ಯರ್ಥಿಗಳು ಗೆದ್ದು ಈಗ ಶಾಸಕರಾಗಿದ್ದಾರೆ. ಚುನಾವಣೆ ತಯಾರಿ, ಪರಿಣಾಮಕಾರಿ ಪ್ರಚಾರ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಕೆಲಸಗಳಿಗೆ ಅಗತ್ಯ ಕಾಲವಕಾಶ ಸಿಗುವುದರಿಂದ ಕ್ಷೇತ್ರಗಳಲ್ಲಿ ಇಮೇಜ್ ವೃದ್ಧಿಸಿಕೊಳ್ಳಲು ಅಭ್ಯರ್ಥಿಗಳಿಗೆ ಅನುಕೂಲವಾಗಿತ್ತು. ಹೀಗಾಗಿ, ಲೋಕಸಭೆ ಚುನಾವಣೆಗೂ ಇದೇ ಪ್ರಯೋಗ ಮುಂದುವರಿಸಲು ವರಿಷ್ಠರು ಚಿಂತನೆ ನಡೆಸಿದ್ದು, ಜನವರಿ ಅಂತ್ಯದೊಳಗೆ ಹಲವು ಸೀಟುಗಳಿಗೆ ಅಭ್ಯರ್ಥಿ ಪಟ್ಟಿ ಬಹಿರಂಗಗೊಳ್ಳಲಿದೆ ಎನ್ನಲಾಗಿದೆ.
ಮೂರು ರಾಜ್ಯಗಳಲ್ಲಿ ಹಲವು ಸಂಸದರಿಗೂ ಟಿಕೆಟ್ ನೀಡಿದ್ದಲ್ಲದೆ, ಅನೇಕರು ಗೆದ್ದು ತಮ್ಮ ರಾಜ್ಯಕ್ಕೆ ಮರಳಿದ್ದಾರೆ. ಕೆಲವರಿಗೆ ರಾಜ್ಯದಲ್ಲಿ ಮಂತ್ರಿ ಭಾಗ್ಯವೂ ಒಲಿದಿದೆ. ಇದೇ ಮಾದರಿಯಲ್ಲಿ, ಬಿಜೆಪಿಯ ಬಹುಪಾಲು ರಾಜ್ಯಸಭೆ ಸದಸ್ಯರನ್ನೂ ಲೋಕಸಭೆ ಚುನಾವಣೆ ಕಣಕ್ಕಿಳಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಲೋಕಸಭೆಯ 543ರಲ್ಲಿ 303 ಸಂಸದರನ್ನು ಹೊಂದಿರುವ ಬಿಜೆಪಿ, ಈ ಬಾರಿ ತನ್ನ ಮತಗಳಿಕೆಯನ್ನು ಶೇ.37ರಿಂದ ಶೇ.47ಕ್ಕೆ ಏರಿಸುವ ಗುರಿ ಇಟ್ಟುಕೊಂಡಿರುವ ಜತೆಗೆ 350ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲಲು ಪಣತೊಟ್ಟಿದೆ. ಕಳೆದ ಶುಕ್ರವಾರ, ಶನಿವಾರದಂದು ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿಯೂ ಈ ಬಗ್ಗೆ ವಿಸõತ ಚರ್ಚೆಗಳಾಗಿವೆ.
ಬಿಜೆಪಿ ಸಂಸದರಲ್ಲಿ ಢವಢವ?:ಸಂಸದರ ಒಟ್ಟಾರೆ ಕಾರ್ಯನಿರ್ವಹಣೆ, ಜನಪ್ರಿಯತೆ, ಲಭ್ಯತೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಜನರಿಂದಲೇ ಅಭಿಪ್ರಾಯ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದು, ಇದಕ್ಕಾಗಿ ತಮ್ಮ ನಮೋ ಆಪ್​ನಲ್ಲಿ (ಚಞಟ ಚಟಟ)ವೇದಿಕೆ ಕಲ್ಪಿಸಿದ್ದಾರೆ. ಸಂಸದರ ಒಟ್ಟಾರೆ ನಿರ್ವಹಣೆ ಬಗ್ಗೆ ಮತದಾರರು ನೇರವಾಗಿ ಅಭಿಪ್ರಾಯಗಳನ್ನು ಆಪ್ ಮೂಲಕ ಪ್ರಧಾನಿಗೆ ತಲುಪಿಸಬಹುದು. ಹಳ್ಳಿಗರೂ ್ಞಞಟ ಚಟಟನ್ನು ಡೌನ್​ಲೋಡ್ ಮಾಡಿಕೊಂಡು, ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ತಂತ್ರಜ್ಞಾನಗಳ ಬಳಕೆಯನ್ನು ಪೋ›ತ್ಸಾಹಿಸುತ್ತಲೇ ಬಂದಿರುವ ಮೋದಿ, ಸಂಸದರ ಬಗ್ಗೆ ಆಪ್ ಮೂಲಕ ತಿಳಿದುಕೊಳ್ಳಲು ಮುಂದಾಗಿರುವುದು ಪಕ್ಷದ ಸಂಸದರ ಎದೆ ನಡುಕ ದುಪ್ಪಟ್ಟಾಗಿಸಿದೆ. ಕ್ಷೇತ್ರದಲ್ಲಿ ಜನರು, ಕಾರ್ಯಕರ್ತರ ಮುನಿಸನ್ನು ಎದುರಿಸುತ್ತಿರುವ ಸಂಸದರಂತೂ ಚಿಂತೆಗೀಡಾಗಿದ್ದಾರೆ. ಅದೇ ರೀತಿ, ಸರ್ಕಾರದ ಒಟ್ಟಾರೆ ಕಾರ್ಯನಿರ್ವಹಣೆ ಬಗ್ಗೆಯೂ ತಿಳಿಸಲು ಇಲ್ಲಿ ಅವಕಾಶವಿದೆ. ಈ ಚುನಾವಣೆಗೆ ಹೊಸ ಪ್ರಯೋಗಕ್ಕೆ ಮುಂದಾಗಿರುವ ಹೈಕಮಾಂಡ್, ಪ್ರತಿ ಕ್ಷೇತ್ರಕ್ಕೆ 3 ಸಂಭಾವ್ಯ ಅಭ್ಯರ್ಥಿಗಳನ್ನು ಕಡ್ಡಾಯವಾಗಿ ಶಿಫಾರಸು ಮಾಡಬೇಕೆಂದು ರಾಜ್ಯ ಘಟಕಗಳಿಗೂ ತಿಳಿಸಿದೆ.
ಅತಿ ಹಿಂದುಳಿದವರಿಗೆ ಆದ್ಯತೆ?:ಇತರೆ ಹಿಂದುಳಿದ ವರ್ಗ, ಎಸ್ಸಿ/ಎಸ್ಟಿಗಳಿಗೆ ಆದ್ಯತೆ ನೀಡುವುದರ ನಡುವೆ ದೇಶದ ಅತಿ ಹಿಂದುಳಿದ ವರ್ಗದವರನ್ನು (ಎಂಬಿಸಿ-ಮೋಸ್ಟ್ ಬ್ಯಾಕ್​ವರ್ಡ್ ಕಾಸ್ಟ್ ) ಲೋಕಸಭೆಗೆ ಕರೆತರಬೇಕು ಎನ್ನುವುದು ಪ್ರಧಾನಿ ಉದ್ದೇಶ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಎಲೆಮರೆ ಕಾಯಿಗಳಂತೆ ಸಾಧನೆ ಮಾಡಿದ ಈ ವರ್ಗದ ಎಂಬಿಸಿಯ ಹಲವರಿಗೆ ಟಿಕೆಟ್ ಲಭಿಸುವ ಸಾಧ್ಯತೆಗಳಿದ್ದು, ಈ ಮೂಲಕ ಸಮಾಜದಲ್ಲಿ ಮಾನ್ಯತೆಯೇ ಸಿಗದ ವ್ಯಕ್ತಿ, ಸಮಾಜಗಳನ್ನು ಗುರುತಿಸುವ ಏಕೈಕ ಪಕ್ಷ ನಮ್ಮದು ಎಂಬ ಗಟ್ಟಿ ಸಂದೇಶವನ್ನು ಮತ್ತೊಮ್ಮೆ ರವಾನಿಸಬೇಕು ಎನ್ನುವುದು ಮೋದಿ ಉದ್ದೇಶ ಎಂದು ಹೇಳಲಾಗಿದೆ.
ರಾಜೀವ್, ನಿರ್ಮಲಾ ಸ್ಪರ್ಧೆ?:ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗಿ ಕೇಂದ್ರದಲ್ಲಿ ಮಂತ್ರಿಗಳಾಗಿರುವ ನಿರ್ಮಲಾ ಸೀತಾರಾಮನ್ ಮತ್ತು ರಾಜೀವ್ ಚಂದ್ರಶೇಖರ್​ಗೂ ಈ ಬಾರಿ ಟಿಕೆಟ್ ನೀಡುವ ಬಗ್ಗೆ ಚರ್ಚೆಗಳಾಗಿವೆ. ಚುನಾವಣೆ ಸ್ಪರ್ಧಿಸಲು ಸಿದ್ಧ. ಆದರೆ, ಟಿಕೆಟ್​ನ್ನು ಮೊದಲೇ ಘೊಷಿಸಿದರೆ ಸೂಚಿಸಲಾದ ಕ್ಷೇತ್ರದಲ್ಲಿ ಕೆಲಸ ಮಾಡಲು ಅನುಕೂಲವಾಗುವುದು. ಶೀಘ್ರದಲ್ಲೇ ಈ ಬಗ್ಗೆ ನಮಗೆ ಸ್ಪಷ್ಟತೆ ನೀಡಿ ಎಂದು ರಾಜೀವ್ ಚಂದ್ರಶೇಖರ್ ವರಿಷ್ಠ ನಾಯಕರಿಗೆ ತಿಳಿಸಿದ್ದಾರೆಂದು ಬಿಜೆಪಿ ಮೂಲಗಳಿಂದ ಗೊತ್ತಾಗಿದೆ. ರಾಜೀವ್ ಸ್ಪರ್ಧೆ ಖಚಿತವಾದರೆ ಕರ್ನಾಟಕದಿಂದಲೋ ಅಥವಾ ಕೇರಳದಿಂದಲೋ ಎನ್ನುವುದು ಕುತೂಹಲ. ನಿರ್ಮಲಾಗೆ ತಮಿಳುನಾಡಿನಿಂದ ಟಿಕೆಟ್ ನೀಡಬಹುದು ಎಂಬ ಮಾತುಗಳಿವೆ.
ರಾಜ್ಯಸಭೆ ಸದಸ್ಯರೇಕೆ?:ರಾಜ್ಯಸಭೆ ಸದಸ್ಯರು ಚುನಾವಣೆ ಸ್ಪರ್ಧಿಸಿ, ಗೆದ್ದರೆ ಅವರಿಂದ ತೆರವಾಗುವ ಸ್ಥಾನವನ್ನು ಪಕ್ಷಕ್ಕಾಗಿ ಕೆಲಸ ಮಾಡಿದ ಹೊಸಬರಿಗೆ ನೀಡಬಹುದು ಎನ್ನುವುದು ವರಿಷ್ಠರ ಉದ್ದೇಶ. ರಾಜ್ಯಸಭೆಯಲ್ಲಿರುವ ಅನೇಕ ಬಿಜೆಪಿ ಸದಸ್ಯರು ಇದುವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹೀಗಾಗಿ, ಹೊಸ ಸವಾಲಿಗೆ ತೆರೆದು ಕೊಳ್ಳಬೇಕೆಂದರೆ ಅವರಿಗೆ ಹೆಚ್ಚಿನ ಕಾಲಾವಕಾಶ ಅಗತ್ಯ. ಅದಕ್ಕಾಗಿ ರಾಜ್ಯಸಭೆ ಸದಸ್ಯರ ಟಿಕೆಟ್​ನ್ನು ಮೊದಲೇ ಘೊಷಿಸಬಹುದು ಎಂದು ಬಿಜೆಪಿ ಮುಖಂಡರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.
ರಾಜ್ಯದಲ್ಲೂ ಹಲವರಿಗೆ ಟಿಕೆಟ್ ಮಿಸ್?:ಹೊಸಬರಿಗೆ ಟಿಕೆಟ್ ನೀಡುವ ಪ್ರಯೋಗ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಜಾರಿಯಾಗಲಿದೆ. ಹೀಗಾಗಿ 25 ಸೀಟುಗಳಲ್ಲಿ 13-14 ಕ್ಷೇತ್ರಗಳ ಹಾಲಿ ಸಂಸದರಿಗೆ ಟಿಕೆಟ್ ತಪ್ಪುವ ಸಾಧ್ಯತೆ ದಟ್ಟವಾಗಿದೆ. ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ, ದಾವಣಗೆರೆ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ…ಈ ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ವ್ಯಾಪಕ ಚರ್ಚೆಗಳಾಗಿವೆ. ಬೆಂಗಳೂರು ಉತ್ತರ ಸಂಸದ ಸದಾನಂದಗೌಡರನ್ನು ಕೇಂದ್ರ ಸಚಿವ ಸ್ಥಾನದಿಂದ ಕೆಳಗಿಳಿಸಿದ ನಂತರ ಅವರಿಗೆ ಟಿಕೆಟ್ ತಪ್ಪಲಿದೆ ಎನ್ನುವ ಚರ್ಚೆ ಜೋರಾಗಿದೆ. ರಾಸಾಯನಿಕ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಬಗ್ಗೆ ಕ್ಷೇತ್ರದ ಬಿಜೆಪಿ ಮುಖಂಡರಲ್ಲೇ ಸದಭಿಪ್ರಾಯವಿಲ್ಲ. ಅವರಿಗೆ ಟಿಕೆಟ್ ಕೊಡಬೇಡಿ ಎಂದು ಜಿಲ್ಲೆಯ ಮುಖಂಡರು ಒತ್ತಾಯಿಸಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೇಲೆ ಸಿ.ಟಿ. ರವಿ ಮತ್ತು ಪ್ರಮೋದ್ ಮಧ್ವರಾಜ್ ಕಣ್ಣಿಟ್ಟಿದ್ದರೂ, ಹೈಕಮಾಂಡ್ ನಾಯಕರಿಗೆ ಶೋಭಾ ಬಗ್ಗೆ ಉತ್ತಮ ಅಭಿಪ್ರಾಯವಿದೆ ಎನ್ನುವುದನ್ನು ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಾರೆ. ನಾನು 2024ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಾವೇರಿ ಸಂಸದ ಶಿವಕುಮಾರ್ ಉದಾಸಿ ಘೊಷಿಸಿದ್ದಾರೆ. ಉದ್ಯಮದ ಪಾಲುದಾರ ಅನಾರೋಗ್ಯಪೀಡಿತರಾಗಿರುವುದರಿಂದ ಖುದ್ದಾಗಿ ತಾವೇ ಉದ್ಯಮದತ್ತ ಗಮನ ನೀಡಬೇಕಾಗಿದೆ. ಜನಪ್ರತಿನಿಧಿಯಾಗಿ ಮುಂದುವರಿದರೆ, ಉದ್ಯಮದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟ. ಹೀಗಾಗಿ, ಚುನಾವಣಾ ರಾಜಕೀಯದಿಂದ ದೂರವಿರಲು ನಿರ್ಧರಿಸಿದ್ದೇನೆ ಎಂದು ಉದಾಸಿ ವಿಜಯವಾಣಿಗೆ ತಿಳಿಸಿದ್ದಾರೆ. ಟಿಕೆಟ್​ನ ಖಚಿತತೆಯಿದ್ದರೂ, ಅವರೇ ಬೇಡವೆಂದಿರುವುದರಿಂದ ಇಲ್ಲಿ ಹೊಸಬರನ್ನು ಹುಡುಕುವುದು ಅನಿವಾರ್ಯ.
14 ರಾಜ್ಯಗಳಲ್ಲಿ 6,200 ಕಿಮೀ ಪ್ರಯಾಣ:ವಿಧಾನಸಭೆ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಮತ್ತೆ ರಾಹುಲ್ ಗಾಂಧಿ ಯಾತ್ರೆಗೆ ನಿರ್ಣಯ ತೆಗೆದುಕೊಂಡಿರುವ ಕಾಂಗ್ರೆಸ್, ಜ.14ರಿಂದ ಮಾ.20ರ ತನಕ ‘ಭಾರತ ನ್ಯಾಯ ಯಾತ್ರೆ’ ನಡೆಯಲಿದೆ ಎಂದು ತಿಳಿಸಿದೆ. ರಾಹುಲ್ ಗಾಂಧಿ ಯಾತ್ರೆ 14 ರಾಜ್ಯಗಳು ಮತ್ತು 85 ಜಿಲ್ಲೆಗಳ 6,200 ಕಿ.ಮೀ. ಕ್ರಮಿಸಲಿದೆ. ಇಂಡಿಯಾ ಮೈತ್ರಿಕೂಟಕ್ಕೆ ಇದು ರಾಜಕೀಯವಾಗಿ ನೆರವಾಗಲಿದೆ ಎಂದು ಕಾಂಗ್ರೆಸ್ ಭಾವಿಸಿದೆ. ಮೂಲತಃ ’ಭಾರತ್ ಜೋಡೋ ಯಾತ್ರೆ’ಯಾಗಿದ್ದರೂ, ಈ ಬಾರಿ ಇದಕ್ಕೆ ‘ಭಾರತ ನ್ಯಾಯ ಯಾತ್ರೆ’ ಎಂದು ಹೆಸರಿಡಲಾಗಿದೆ. ಮಣಿಪುರದಿಂದ ಮುಂಬೈವರೆಗೆ ಯಾತ್ರೆ ಸಾಗಲಿದೆ. ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ನಡೆಸಿ ಹೆಚ್ಚಿನ ಅನುಭವಗಳೊಂದಿಗೆ ಮತ್ತೊಂದು ಯಾತ್ರೆ ಮಾಡಲಿದ್ದಾರೆ. ಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು, ಯುವಕರು, ಮಹಿಳೆಯರು, ಬಡ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿರುವ ಯಾತ್ರೆ ಬಸ್ ಮೂಲಕ ಸಾಗಿದರೂ, ಕೆಲ ಕಡೆ ನಡಿಗೆಯ ಮೂಲಕವೂ ಸಾಗಲಿದೆ ಎಂದು ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 1 =
Remember me
