ಗುಜರಾತ್​ನಲ್ಲಿ ಬಿಜೆಪಿ ಐತಿಹಾಸಿಕ ವಿಕ್ರಮ ಮೆರೆದಿದೆ. ಮೋದಿ ಅಲೆ ಎಲ್ಲರನ್ನೂ ಮೋಡಿ ಮಾಡಿದೆ. ಅಮಿತ್ ಷಾ ಲೆಕ್ಕಾಚಾರ ಉಳಿದವರ ಲೆಕ್ಕವನ್ನು ತಲೆಕೆಳಗಾಗಿಸಿದೆ. ಎಲ್ಲರ ನಿರೀಕ್ಷೆ ಮೀರಿ ರಾಜ್ಯದ ಇತಿಹಾಸದಲ್ಲೇ ಈವರೆಗೆ ಯಾವ ಪಕ್ಷವೂ ಗಳಿಸದಷ್ಟು ಸ್ಥಾನಗಳನ್ನು ಕಮಲ ಪಡೆ ಗಳಿಸಿದೆ. ಆಡಳಿತವಿರೋಧಿ ಅಲೆ ತಲೆ ಎತ್ತದಂತೆ ಮೆರೆದ ತಂತ್ರಗಾರಿಕೆ ಫಲ ನೀಡಿದೆ. ಇನ್ನೊಂದೆಡೆ, ಹಿಮಾಲಯದ ತಪ್ಪಲಿನ ರಾಜ್ಯದಲ್ಲಿ ಜನರು ಸಂಪ್ರದಾಯದಂತೆ ಅಧಿಕಾರದ ಹಸ್ತಾಂತರ ನಡೆಸಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್ ಕೈಗೆ ಆಡಳಿತದ ಚುಕ್ಕಾಣಿ ಬದಲಾಗಿದೆ. ಅಲ್ಲಿ ಆಂತರಿಕ ಕಿತ್ತಾಟ, ಪಕ್ಷವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕಿ ಅಧಿಕಾರ ಗಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಗಾಂಧಿನಗರ/ಶಿಮ್ಲಾಮತದಾನೋತ್ತರ ಸಮೀಕ್ಷೆಗಳು ಮತ್ತು ಸ್ವತಃ ಬಿಜೆಪಿಯ ನಿರೀಕ್ಷೆಗೂ ಮೀರಿ ಗುಜರಾತ್​ನಲ್ಲಿ 156 ಸ್ಥಾನಗಳನ್ನು ಗಳಿಸುವ ಮೂಲಕ ಕಮಲ ಪಕ್ಷ ಸಾರ್ವಕಾಲಿಕ ಅತಿ ಹೆಚ್ಚು ಶಾಸಕರನ್ನು ಹೊಂದಿದ ದಾಖಲೆ ಬರೆದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಜೋಡಿಯ ಚಮತ್ಕಾರದಿಂದ ತವರು ರಾಜ್ಯದಲ್ಲಿ ಸತತ ಏಳನೇ ಬಾರಿಗೆ ಬಿಜೆಪಿಗೆ ಅಧಿಕಾರ ಖಾತ್ರಿಗೊಂಡಿದೆ. ಹಿಮಾಚಲಪ್ರದೇಶದಲ್ಲೂ ಮತದಾನೋತ್ತರ ಸಮೀಕ್ಷೆಗಳು ಹೇಳಿದ್ದ ಸಮಬಲವು ದಿಟವಾಗಿಲ್ಲ. ಹಿಮಾಲಯ ತಪ್ಪಲ್ಲಿನ ಪುಟ್ಟ ರಾಜ್ಯದಲ್ಲಿ ಪರಂಪರೆಯಂತೆ ಬದಲಿ ಆಡಳಿತಕ್ಕೆ ಜನರು ಮಣೆಹಾಕಿದ್ದಾರೆ. ಇಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದು ಸುಭದ್ರ ಸ್ಥಿತಿಯಲ್ಲಿದೆ. 2017ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋತಿದ್ದ ಸೇಡನ್ನು ತೀರಿಸಿಕೊಂಡಿದೆ.
ಗುಜರಾತ್​ನಲ್ಲಿ ಕಳೆದ ಚುನಾವಣೆಯಲ್ಲಿ 99 ಸ್ಥಾನಗಳಿಸಿ ಸರಳ ಬಹುಮತಕ್ಕಿಂತ (92) ತುಸುವಷ್ಟೇ ಹೆಚ್ಚು ಸ್ಥಾನ ಪಡೆದಿದ್ದ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ, ಈ ಚುನಾವಣೆಯಲ್ಲಿ ಹಿಂದಿನ ಸಲಕ್ಕಿಂತ 57 ಸ್ಥಾನವನ್ನು ಹೆಚ್ಚು ಪಡೆದಿದೆ ಮತ್ತು ಮತಗಳಿಕೆ ಪ್ರಮಾಣಕ್ಕೆ (ಶೇ. 49)ಹೋಲಿಸಿದರೆ ಶೇ.4 ಹೆಚ್ಚಳ ಸಾಧಿಸಿ ಶೇ. 53ಕ್ಕೆ ಏರಿಸಿಕೊಂಡಿದೆ. 2017ರಲ್ಲಿ 77 ಸ್ಥಾನ ಹಾಗೂ ಶೇ.41.44 ಮತಗಳಿಕೆಯೊಂದಿಗೆ ಬಿಜೆಪಿಗೆ ಪೈಪೋಟಿ ನೀಡಿದ್ದ ಕಾಂಗ್ರೆಸ್ ಈ ಸಾರಿ 60 ಸ್ಥಾನ ಕಳೆದುಕೊಂಡು 17ರಲ್ಲಿ ಮಾತ್ರ ಗೆದ್ದು ಭಾರಿ ಮುಖಭಂಗ ಅನುಭವಿಸಿದೆ. ರಾಜ್ಯದಲ್ಲಿ ದಿವಂಗತ ಅಹ್ಮದ್ ಪಟೇಲ್ ನಂತರ ಯಾವುದೇ ವರ್ಚಸ್ವಿ ನಾಯಕ ಇಲ್ಲದಿರುವುದು ಮತ್ತು ಕೇಂದ್ರದಲ್ಲೂ ವಿಶ್ವಾಸಯುತವಾದ ನಾಯಕತ್ವದ ಕೊರತೆ ಕಾಂಗ್ರೆಸ್​ಗೆ ಹೀನಾಯ ಸೋಲು ತಂದಿದೆ. ಹಿರಿಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ನಡೆದ ಈ ಚುನಾವಣೆಯು ಮಿಶ್ರಫಲ ನೀಡಿದೆ. ಗುಜರಾತ್​ನಲ್ಲಿ ನೆಲಕಚ್ಚಿದ್ದರೆ, ಹಿಮಾಚಲದಲ್ಲಿ ಅಧಿಕಾರ ಗಳಿಸಿ ಕೊಟ್ಟಿದೆ.
ಎರಡೂ ರಾಜ್ಯಗಳಲ್ಲಿ ಭಾರಿ ನಿರೀಕ್ಷೆ ಉಂಟು ಮಾಡಿದ್ದ ಆಮ್ ಆದ್ಮಿ ಪಕ್ಷ (ಆಪ್) ಗುಜರಾತ್​ನಲ್ಲಿ ಐದು ಸ್ಥಾನಗಳಿಸಿರುವುದು ಸಾಧನೆ. ಆದರೆ, ಹಿಮಾಚಲದಲ್ಲಿ ಖಾತೆ ತೆರೆಯಲು ವಿಫಲವಾಗಿದೆ.

ರಾಜ್ಯದಲ್ಲಿ ಸರ್ಕಾರ ಎದುರಿಸುತ್ತಿರುವ ಶೇ.40 ಪರ್ಸೆಂಟ್ ಸೇರಿದಂತೆ ಅನೇಕ ಆರೋಪಗಳಿಂದ ಸೃಷ್ಟಿಯಾಗುತ್ತಿರುವ ಆಡಳಿತವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಲು ಸಾಧ್ಯವೇ ಎಂಬುದಕ್ಕೆ ಹಿಮಾಚಲಪ್ರದೇಶ ಹಾಗೂ ದೆಹಲಿ ಪಾಲಿಕೆ ಫಲಿತಾಂಶ ಉತ್ತರ ನೀಡುತ್ತವೆ.
ಗುಜರಾತ್​ನಲ್ಲಿ ಪ್ರತಿಪಕ್ಷವೇ ಇಲ್ಲದಂತಾಗಿತ್ತು. ಅಹ್ಮದ್ ಪಟೇಲ್ ನಿಧನದ ನಂತರ ಅಲ್ಲಿ ಕಾಂಗ್ರೆಸ್​ಗೆ ಇದ್ದ ಏಕೈಕ ನಾಯಕ ಎಂದರೆ ಜಿಗ್ನೇಶ್ ಮೇವಾನಿ ಮಾತ್ರ. ಉಳಿದವರನ್ನು ಬಿಜೆಪಿ ಆಪರೇಷನ್ ಮಾಡಿತ್ತು. ಆದರೆ ಕರ್ನಾಟಕದ ಸ್ಥಿತಿ ಆ ರೀತಿಯಲ್ಲಿ ಇಲ್ಲ. ಅಲ್ಲಿಯಂತೆ ಇಲ್ಲಿ ಕಾಂಗ್ರೆಸ್ ದುರ್ಬಲವಾಗಿಲ್ಲ. ಹಿಮಾಚಲಪ್ರದೇಶದ ರೀತಿಯಲ್ಲಿಯೇ ನಾಯಕತ್ವ ಸಹ ಬಲವಾಗಿದೆ. ಆದ್ದರಿಂದ ಗುಜರಾತ್ ಗೆಲುವಿನಲ್ಲಿ ಬಿಜೆಪಿ ಮೈ ಮರೆಯುವಂತಿಲ್ಲ.
ಕಾಂಗ್ರೆಸ್​ಗೆ ಗುಟುಕು ನೀರುಗುಜರಾತ್​ನಲ್ಲಿ ಹೀನಾಯವಾಗಿ ಸೋತಿದ್ದರೂ ಹಿಮಾಚಲಪ್ರದೇಶದಲ್ಲಿ ಬಿಜೆಪಿ ವಿರುದ್ಧ ಗಳಿಸಿರುವ ಗೆಲುವು ಕಾಂಗ್ರೆಸ್ ಪಾಲಿಗೆ ಗುಟುಕುನೀರು ಸಿಕ್ಕಂತೆ ಆಗಿದೆ. ನಾಯಕತ್ವ ಬಲವಾಗಿದ್ದರೆ ಗೆಲ್ಲಬಹುದು ಎಂಬುದನ್ನು ರಾಜ್ಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದೆ. ಗುಂಪುಗಾರಿಕೆ ಇದ್ದರೆ ಕಷ್ಟವಾಗಲಿದೆ. ಹಿಮಾಚಲಪ್ರದೇಶದಲ್ಲಿ ಪಕ್ಷದಲ್ಲಿ ಗುಂಪುಗಾರಿಕೆ ಮೂಡದಂತೆ ನೋಡಿಕೊಂಡಿದ್ದರಿಂದಲೇ ಕಾಂಗ್ರೆಸ್ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಅದು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಿಗೆ ಪಾಠವಾಗಬೇಕಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ರಾಜ್ಯದಲ್ಲಿಯೂ ಪ್ರಭಾವಿ ಮುಖಂಡರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಆರಂಭಿಸಿದೆ. ಕಾಂಗ್ರೆಸ್ ಗುಂಪುಗಾರಿಕೆಯಲ್ಲಿ ಮೈಮರೆತರೆ ಪ್ರಭಾವಿಗಳನ್ನು ಗುಜರಾತ್​ನಂತೆಯೇ ಕಳೆದುಕೊಳ್ಳಬೇಕಾಗುತ್ತದೆ. ಒಗ್ಗಟ್ಟಿನಿಂದ ಇದ್ದರೆ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಬಹುದು. ಇಲ್ಲದಿದ್ದರೆ ಕಷ್ಟದ ಸ್ಥಿತಿ ಎದುರಾಗುತ್ತದೆ.
ಕಾಂಗ್ರೆಸ್​ಗೆ ಭಯ ತಂದ ಸಣ್ಣ ಪಕ್ಷಗಳು: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್, ಆಮ್ ಆದ್ಮಿ, ಓವೈಸಿಯ ಎಐಎಂಐಎಂ ಪಕ್ಷಗಳು ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕಲಿವೆ. ಗುಜರಾತ್​ನಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್​ನ ಮತಬುಟ್ಟಿಯನ್ನು ಕಿತ್ತು ಕೊಂಡಿದೆ. ಆಮ್ ಆದ್ಮಿ ನಗರಪ್ರದೇಶಕ್ಕೆ ಸೀಮಿತ ಎಂಬ ಭಾವನೆ ಕಾಂಗ್ರೆಸ್ ನಾಯಕರಲ್ಲಿತ್ತು, ಆದರೆ ಆ ಭಾವನೆ ಈಗ ಕಳಚಿದೆ. ರಾಜ್ಯದಲ್ಲಿಯೂ ಆ ರೀತಿ ಆದರೆ ಎಂಬ ಭಯ ಮತ್ತು ಆತಂಕ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಇಷ್ಟು ದಿನ ಇದ್ದ ನಿರಾಳಭಾವವನ್ನು ಈ ಫಲಿತಾಂಶ ದೂರ ಮಾಡಿದೆ. ಹೆಚ್ಚು ಬೆವರು ಹರಿಸಬೇಕಾದ ಸ್ಥಿತಿ ನಿರ್ವಣವಾಗಿದೆ.
ಜೆಡಿಎಸ್ ಸ್ಥಿತಿಪ್ರಾದೇಶಿಕ ಪಕ್ಷ ಜೆಡಿಎಸ್ ಈಗಾಗಲೇ ಪಂಚರತ್ನ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಚಾರ ಆರಂಭಿಸಿದೆ. ಗುಜರಾತ್ ಮತ್ತು ಹಿಮಾಚಲಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಲ್ಲ. ಆದರೆ, ರಾಜ್ಯದಲ್ಲಿ ಜೆಡಿಎಸ್​ಗೆ ನೆಲೆ ಇದೆ. ಅಲ್ಲಿನ ಫಲಿತಾಂಶ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಪ್ರಭಾವಿಗಳು ಪಕ್ಷ ಬಿಡದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ ಅಷ್ಟೇ.
ಹಲವು ಪ್ರಥಮಗಳುಗುಜರಾತ್ ವಿಧಾನಸಭೆಯ 9ನೇ ಚುನಾವಣೆಯಿಂದ (1995ರಿಂದ) ಅಧಿಕಾರದಲ್ಲಿರುವ ಬಿಜೆಪಿ (ಮಧ್ಯದಲ್ಲಿ 1996 ಅಕ್ಟೋಬರ್​ನಿಂದ ಒಂದೂವರೆ ವರ್ಷ ಶಂಕರ್ ಸಿಂಗ್ ವಘೇಲಾ ಅವರ ಆರ್​ಜೆಪಿ ಅಧಿಕಾರದಲ್ಲಿತ್ತು) ಇದೇ ಮೊದಲ ಬಾರಿಗೆ 150ರ ಮೈಲಿಗಲ್ಲನ್ನು ದಾಟಿದೆ ಮತ್ತು ಗುಜರಾತ್​ನ ಇತಿಹಾಸದಲ್ಲಿ ಇಷ್ಟು ಸಂಖ್ಯೆ (156) ಯಾವುದೇ ಪಕ್ಷ ದಾಟಿರಲಿಲ್ಲ.
ಅಭೂತಪೂರ್ವ ಫಲಿತಾಂಶವು ಮೂಕವಿಸ್ಮಿತಗೊಳಿಸಿದೆ. ಗುಜರಾತ್ ಜನತೆ ಅಭಿವೃದ್ಧಿಯ ರಾಜಕಾರಣದಲ್ಲಿ ಮತ್ತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುಜರಾತ್ ಜನಶಕ್ತಿಗೆ ತಲೆಬಾಗುವೆ. ಈ ಐತಿಹಾಸಿಕ ಗೆಲುವು ಸಾಧ್ಯವಾಗಿದ್ದು, ಕಾರ್ಯಕರ್ತರ ಕಠಿಣಶ್ರಮದಿಂದ. ಕಾರ್ಯಕರ್ತರೇ ಪಕ್ಷದ ಬಲ. ಹಿಮಾಚಲದ ತೀರ್ಪಿಗೂ ತಲೆ ಬಾಗುವೆ. ಹೊಸ ಸರ್ಕಾರಕ್ಕೆ ಕೇಂದ್ರದಿಂದ ಎಲ್ಲ ಸಹಕಾರ ದೊರೆಯಲಿದೆ.| ನರೇಂದ್ರ ಮೋದಿ ಪ್ರಧಾನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
