ನವದೆಹಲಿ: ಚುನಾವಣಾ ಬಾಂಡ್​ಗಳ ಮೂಲಕ 2018-19ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳು ಗಳಿಸಿದ ಒಟ್ಟು ಆದಾಯದಲ್ಲಿ ಬಿಜೆಪಿ ಪಾಲು ಶೇ. 75ರಷ್ಟಿದ್ದು, ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ಶೇ. 20 ಪಾಲು ಪಡೆದ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್​ಗೆ (ಟಿಎಂಸಿ) ಚುನಾವಣಾ ಬಾಂಡ್ (ದೇಣಿಗೆ)ನಿಂದ 1,931 ಕೋಟಿ ರೂಪಾಯಿ ಸಂಗ್ರಹಿಸಿವೆ. ಪಕ್ಷಗಳು ಸಲ್ಲಿಸಿರುವ ಆದಾಯ ತೆರಿಗೆ ವಿವರಗಳಿಂದ (ಐಟಿಆರ್) ಈ ಮಾಹಿತಿ ಬೆಳಕಿಗೆ ಬಂದಿದೆ. 2018-19ನೇ ಹಣಕಾಸು ವರ್ಷದಲ್ಲಿ ಬಿಜೆಪಿ 1,451 ಕೋಟಿ ರೂಪಾಯಿ ಸಂಗ್ರಹಿಸಿದೆ. ಪ್ರಜಾಸತ್ತಾತ್ಮಕ ಸುಧಾರಣಾ ಸಂಸ್ಥೆ (ಎಡಿಆರ್) ಈ ವಿವರಗಳನ್ನು ಬಹಿರಂಗಪಡಿಸಿದೆ. ಈ ಅವಧಿಯಲ್ಲಿ ಬಾಂಡ್ ಮೂಲಕ 383 ಕೋಟಿ ರೂ.ಗಳನ್ನು ಪಡೆದಿರುವುದಾಗಿ ಕಾಂಗ್ರೆಸ್ ತಿಳಿಸಿದೆ. ಟಿಎಂಸಿ ಗಳಿಸಿರುವುದು 97 ಕೋಟಿ ರೂ (ಐದು ಶೇಕಡಾ). ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್
ವಾದಿ-ಸಿಪಿಎಂ), ಬಹುಜನ ಸಮಾಜ ಪಕ್ಷ ಮತ್ತು ಸಿಪಿಐ ಸಹಿತ ಇತರ ರಾಜಕೀಯ ಪಕ್ಷಗಳು ತಮಗೆ ಚುನಾವಣಾ ಬಾಂಡ್​ಗಳಿಂದ ಯಾವುದೇ ಆದಾಯ ಬಂದಿಲ್ಲ ಎಂದು ತಿಳಿಸಿವೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ಚುನಾವಣಾ ಆಯೋಗಕ್ಕೆ ಇನ್ನೂ ಆದಾಯ ವಿವರಗಳನ್ನು ಸಲ್ಲಿಸಿಲ್ಲ.
ಏನಿದು ಚುನಾವಣಾ ಬಾಂಡ್?
ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಲು ಚುನಾವಣಾ ಬಾಂಡ್ ನೆರವಾಗುತ್ತದೆ. ಎಸ್​ಬಿಐ ನೀಡುವ ಬಾಂಡ್​ಗಳನ್ನು ಖರೀದಿಸಿ ಅವುಗಳನ್ನು ಪಡೆದ 15 ದಿನಗಳೊಳಗೆ ರಾಜಕೀಯ ಪಕ್ಷದ ಖಾತೆಗೆ ಜಮಾ ಮಾಡಬಹುದು. ಒಂದು ಸಾವಿರದಿಂದ ಒಂದು ಕೋಟಿ ರೂ. ವರೆಗಿನ ವಿವಿಧ ಮೊತ್ತಗಳ ಬಾಂಡ್ ಲಭ್ಯವಿದೆ. ಬಾಂಡ್ ಖರೀದಿಸಲು ದೇಣಿಗೆದಾರರು ಗ್ರಾಹಕರ ವಿವರಗಳನ್ನು (ಕೆವೈಸಿ) ಬ್ಯಾಂಕ್​ಗೆ ಸಲ್ಲಿಸಬೇಕು. ಆದರೆ ದೇಣಿಗೆ ಕೊಟ್ಟವರ ಗುರುತನ್ನು ರಹಸ್ಯವಾಗಿಡಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಪಾರದರ್ಶಕತೆಯಿಲ್ಲ ಎಂಬುದು ಹಲವು ತಜ್ಞರು ಹಾಗೂ ರಾಜಕೀಯ ಕಾರ್ಯಕರ್ತರ ಅಭಿಪ್ರಾಯ. ಚುನಾವಣೆ ನಿಧಿಗೆ ದೇಣಿಗೆ ಕೊಡುವವರ ವಿವರಗಳನ್ನು ತಡೆಹಿಡಿಯುವ ಮೂಲಕ ಸಾರ್ವಜನಿಕರ ಮಾಹಿತಿ ಪಡೆಯುವ ಹಕ್ಕನ್ನು ದಮನಿಸಲಾಗಿದೆ ಎಂದು ಹಲವರು ವಾದಿಸಿದ್ದಾರೆ.
ದೇಣಿಗೆ ಸಂಗ್ರಹ
ಚುನಾವಣಾ ಬಾಂಡ್ ಬಿಟ್ಟು 2018-19ನೇ ಸಾಲಿನಲ್ಲಿ ದೇಶದಾದ್ಯಂತ ವಿವಿಧ ಮೂಲಗಳಿಂದ ಒಟ್ಟಾರೆಯಾಗಿ 3,698.66 ಕೋಟಿ ರೂಪಾಯಿ ದೇಣಿಗೆ ಸಂಗ್ರಹ ಮಾಡಿರುವುದಾಗಿ ಎನ್​ಸಿಪಿ ಹೊರತು ಪಡಿಸಿ ಇತರ ಪಕ್ಷಗಳು ತಿಳಿಸಿವೆ. ಬಿಜೆಪಿಗೆ ಅತಿ ಹೆಚ್ಚು ದೇಣಿಗೆ 2,410 ಕೋಟಿ ರೂ. ಸಂಗ್ರಹವಾಗಿದೆ (ಒಟ್ಟು ಮೊತ್ತದ 65%). ಕಾಂಗ್ರೆಸ್ 918 ಕೋಟಿ ರೂ. ಸಂಗ್ರಹಿಸಿದೆ. ಅತಿ ಕಡಿಮೆ 7.15 ಕೊಟಿ ರೂ. ದೇಣಿಗೆ ಸಂಗ್ರಹಿಸಿರುವುದು ಸಿಪಿಐ. ಟಿಎಂಸಿ 193 ಕೋಟಿ, ಬಿಎಸ್​ಪಿ 70 ಕೋಟಿ ಹಾಗೂ ಸಿಪಿಎಂ 101 ಕೋಟಿ ರೂ. ಸಂಗ್ರಹಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 11 =
Remember me
