| ರಾಘವ ಶರ್ಮಾ ನಿಡ್ಲೆ ನವದೆಹಲಿ
ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ನಡೆಸಿದ್ದ ಬಿಜೆಪಿಗೆ ಈ ಬಾರಿಗೆ ಮೈತ್ರಿ ಧರ್ಮ ಪಾಲನೆಯ ಅನಿವಾರ್ಯತೆ ಎದುರಾಗಿದೆ. ಎನ್​ಡಿಎ ಮೈತ್ರಿಕೂಟ ಅಧಿಕಾರದಲ್ಲಿದ್ದರೂ, ಪೂರ್ಣ ಬಹುಮತವಿದ್ದುದರಿಂದ ಮಿತ್ರಪಕ್ಷಗಳು ಬಿಜೆಪಿ ನುಡಿದಂತೆ ನಡೆಯುತ್ತಿದ್ದವು. ಆದರೆ, ಈ ಬಾರಿ ಹಾಗಿಲ್ಲ. ಮಿತ್ರಪಕ್ಷಗಳ ಸಲಹೆಯಂತೆ ಹೆಜ್ಜೆ ಇಡಲೇಬೇಕಿದೆ. ಇಲ್ಲವಾದಲ್ಲಿ, ಈ ಸರ್ಕಾರ ಯಾವಾಗ ಬೇಕಾದರೂ ಕುಸಿದುಬೀಳಬಹುದು. ಆಂಧ್ರಪ್ರದೇಶದ ತೆಲುಗುದೇಶಂ ಪಾರ್ಟಿ (ಟಿಡಿಪಿ) ನಾಯಕ ಚಂದ್ರಬಾಬು ನಾಯ್ಡು ಮತ್ತು ಸಂಯುಕ್ತ ಜನತಾದಳ (ಜೆಡಿಯು) ಅಧ್ಯಕ್ಷ ನಿತೀಶ್ ಕುಮಾರ್ ‘ರಾಜಕಾರಣದ ಹವಾಮಾನ ತಜ್ಞ’ರೆಂದೇ ಕುಖ್ಯಾತಿಯಾಗಿದ್ದು, ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಧಾರಗಳನ್ನು ಬದಲಿಸುತ್ತಲೇ ಬಂದಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಪ್ರತಿ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಈ ಮಿತ್ರರನ್ನು ಆದ್ಯತೆಗೆ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅವರ ಸಲಹೆಗಳನ್ನು ಪಾಲಿಸಲೇಬೇಕಾಗುತ್ತದೆ.
ಗುಜರಾತ್​ನಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಹಾಗೂ ಕೇಂದ್ರದಲ್ಲಿ 2 ಬಾರಿ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ನೈಜ ಮೈತ್ರಿ ಸರ್ಕಾರವೊಂದನ್ನು ಮುನ್ನಡೆಸಲಿದ್ದಾರೆ. ಕಳೆದ 10 ವರ್ಷಗಳಲ್ಲಿ ಹತ್ತು ಹಲವು ತೀರ್ವನಗಳನ್ನು ತೆಗೆದುಕೊಂಡಿರುವ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಮಿತ್ರಪಕ್ಷಗಳ ಅಭಿಪ್ರಾಯಕ್ಕೆ ಜೋತುಬೀಳುವ ಅನಿವಾರ್ಯತೆ ಇರಲಿಲ್ಲ. 2016ರ ನೋಟು ರದ್ದತಿ, ಹೊಸ ತೆರಿಗೆ ಪದ್ಧತಿಯಾದ ಜಿಎಸ್​ಟಿ, ಕಾಶ್ಮೀರದ ವಿಶೇಷ ಸ್ಥಾನಮಾನ ನಿಷ್ಕ್ರಿಯಗೊಳಿಸಿದ್ದು, ಮೂರು ಕ್ರಿಮಿನಲ್ ಕಾನೂನುಗಳ ಸುಧಾರಣೆ… ಹೀಗೆ ಹಲವು ದಿಟ್ಟ ನಿರ್ಣಯಗಳನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ತೆಗೆದುಕೊಂಡಿತ್ತು. ಈ ಕ್ರಮಗಳ ಬಗ್ಗೆ ಸಂಸತ್ತಿನಲ್ಲಿ ಕೂಡ ವಿಸõತವಾದ ಚರ್ಚೆಗಳು ನಡೆದಿಲ್ಲ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಲೋಕಸಭೆಯಲ್ಲಿ 272ಕ್ಕಿಂತಲೂ ಹೆಚ್ಚು ಸಂಖ್ಯಾಬಲ ಹೊಂದಿದ್ದರಿಂದ ಕೆಳಮನೆಯಲ್ಲಿ ಸಂಕಷ್ಟಗಳು ಎದುರಾಗಿದ್ದು ಕಡಿಮೆ. ಮೇಲ್ಮನೆಯಲ್ಲಿ (ರಾಜ್ಯಸಭೆ) ಸವಾಲುಗಳು ಎದುರಾದರೂ, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಸಂಖ್ಯಾಬಲ ವೃದ್ಧಿಯಾಗಿರುವುದರಿಂದ ಅಲ್ಲೂ ಅಡೆತಡೆಗಳು ಕಡಿಮೆಯಾಗಿದ್ದವು.
ಇದಕ್ಕೆಲ್ಲಾ ಮುಖ್ಯ ಕಾರಣ 2014 ಮತ್ತು 2019ರಲ್ಲಿ ಬಿಜೆಪಿಗೆ ಸಿಕ್ಕ ನಿರ್ಣಾಯಕ ಜನಾದೇಶ. ಹಿಂದೆ ಮೈತ್ರಿ ಸರ್ಕಾರಗಳಲ್ಲಿ ಪ್ರಧಾನಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದ ಮಿತ್ರಪಕ್ಷಗಳು, ಅಹರ್ನಿಶಿಯಾಗಿ ಕಾಡುತ್ತಿದ್ದವು. ಯುಪಿಎ-2ರ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರದ ಕಾರಣದಿಂದಾಗಿ ಭ್ರಷ್ಟಾಚಾರ ಮತ್ತು ಆಡಳಿತ ನೀತಿಗಳು ತಳಹಿಡಿದದ್ದನ್ನು ದೇಶ ಕಂಡಿದೆ. ಆದರೆ, ನರೇಂದ್ರ ಮೋದಿ ಸಮ್ಮಿಶ್ರ ಸರ್ಕಾರದ ಈ ನಿರ್ಬಂಧಗಳಿಂದ ಮುಕ್ತರಾಗಿದ್ದರು. ತಮ್ಮ ಮನಸ್ಸಿನಲ್ಲಿದ್ದ ವಿಚಾರಗಳನ್ನು ಜಾರಿ ಮಾಡಲು, ನೀತಿಗಳನ್ನು ರೂಪಿಸಲು ಅವರಿಗೆ ಅಡಚಣೆಗಳಿದ್ದದ್ದು ಕಡಿಮೆ. ಹಾಗಾಗಿಯೇ, ಹತ್ತಾರು ಸುಧಾರಣಾ ಕ್ರಮಗಳನ್ನೂ ಜಾರಿಗೊಳಿಸಲಾಯಿತು. ಬ್ರಿಟಿಷ್ ಕಾಲದ ಮೂರು ಕ್ರಿಮಿನಲ್ ಕಾನೂನುಗಳನ್ನು ಸುಧಾರಣೆಗೊಳಿಸಿ, ಅವುಗಳಿಗೆ ಹೊಸ ಸ್ಪರ್ಶ ನೀಡಿದ್ದ ಕೇಂದ್ರ ಸರ್ಕಾರ ಎರಡೂ ಸದನಗಳ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ವಿಪಕ್ಷಗಳ ವಿರೋಧಗಳ ಮಧ್ಯೆಯೂ ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದಿವೆ. ಮಹಾರಾಷ್ಟ್ರದ ಶಿವಸೇನೆ, ಪಂಜಾಬಿನ ಶಿರೋಮಣಿ ಅಕಾಲಿದಳ, ಬಿಹಾರದ ಜೆಡಿಯು ಎನ್​ಡಿಎ ಮೈತ್ರಿಕೂಟದಿಂದ ಹೊರ ನಡೆದಾಗಲೂ, ಸರ್ಕಾರಕ್ಕೆ ಹಾನಿಯಾಗಲಿಲ್ಲ. ಆದರೆ, ಮುಂದಿನ ದಿನಗಳು ಮಾತ್ರ ಕಳೆದ 10 ವರ್ಷಗಳಂತಿರುವುದಿಲ್ಲ ಎನ್ನುವುದು ವಾಸ್ತವ.
ಮೋದಿ ನೇತೃತ್ವದ ಮೂರನೇ ಅವಧಿಯ ಎನ್​ಡಿಎ ಸರ್ಕಾರದಲ್ಲಿ ಟಿಡಿಪಿ, ಬಿಹಾರದ ಜೆಡಿಯು ಮತ್ತು ಲೋಕಜನಶಕ್ತಿ ಪಕ್ಷಗಳು ಮಹತ್ವದ ಪಾಲನ್ನು ಪಡೆಯುವುದು ನಿಶ್ಚಿತ. ಈಗಾಗಲೇ ಮಹತ್ವದ ಖಾತೆಗಳ ಬೇಡಿಕೆಯನ್ನು ಈ ಮೂರೂ ಪಕ್ಷಗಳು ಬಿಜೆಪಿ ಮುಂದಿಟ್ಟಿವೆ. ಬುಧವಾರ ಪ್ರಧಾನಿ ನಿವಾಸದಲ್ಲಿ ನಡೆದ ಎನ್​ಡಿಎ ಸಭೆಯಲ್ಲಿ ಎಲ್ಲಾ ಮಿತ್ರಪಕ್ಷಗಳು ದೇಶ ಕಟ್ಟುವಲ್ಲಿ ಮೋದಿ ಅವರ ಕೊಡುಗೆ, ಅಭಿವೃದ್ಧಿಗೆ ವೇಗ ಸಿಕ್ಕಿರುವುದು, ಜಾಗತಿಕವಾಗಿ ಭಾರತದ ವರ್ಚಸ್ಸು ಹೆಚ್ಚಿರುವುದು ಸೇರಿ ಎಲ್ಲಾ ವಿಷಯಗಳನ್ನು ನಿರ್ಣಯದಲ್ಲಿ ಉಲ್ಲೇಖಿಸಿವೆ. ಮಾಧ್ಯಮ ಚರ್ಚೆಯಲ್ಲಿ ಭಾಗಿಯಾಗುತ್ತಾ, ನಮ್ಮದೇನೂ ಬೇಡಿಕೆಗಳಿಲ್ಲ ಎಂದು ಈ ಪಕ್ಷಗಳ ವಕ್ತಾರರು ಹೇಳಿದರೂ, ರಾಜಕಾರಣ ವಾಸ್ತವದಲ್ಲಿ ಹಾಗೆ ನಡೆಯುವುದಿಲ್ಲ. ಮೈತ್ರಿ ಸರ್ಕಾರದಲ್ಲಂತೂ ಕೊಡು-ಕೊಳ್ಳುವಿಕೆ ಇಲ್ಲದಿದ್ದಲ್ಲಿ, ಸರ್ಕಾರಗಳು ರಾತ್ರಿ ಬೆಳಗಾಗುವುದರೊಳಗೆ ಪತನಗೊಂಡಿದ್ದಕ್ಕೆ ಈ ದೇಶ ಹಲವು ಬಾರಿ ಸಾಕ್ಷಿಯಾಗಿದೆ. ಇದೇ ಕಾರಣಕ್ಕೆ ಮೂರನೇ ಅವಧಿಯ ಎನ್​ಡಿಎ ಸರ್ಕಾರ ಎಷ್ಟು ದಿನ ಬಾಳಬಹುದು ಎಂಬ ಚರ್ಚೆಗಳು ಕೂಡ ಜನರ ಮಧ್ಯೆ ನಡೆಯುತ್ತಿದೆ. 10 ವರ್ಷಗಳ ಕಾಲ ಆಕ್ರಮಣಕಾರಿ ಧೋರಣೆಯೊಂದಿಗೆ ಸರ್ಕಾರ ನಡೆಸಿದ್ದ ಪಿಎಂ ಮೋದಿ, ಮಿತ್ರಪಕ್ಷಗಳೆದುರು ಎಷ್ಟು ದಿನಗಳ ಮಟ್ಟಿಗೆ ತಗ್ಗಿ-ಬಗ್ಗಿ ನಡೆದಾರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಒಂದು ದೇಶ ಒಂದು ಚುನಾವಣೆ ನರೇಂದ್ರ ಮೋದಿಯವರ ಕನಸಿನ ಕೂಸು. ಆದರೆ, ಬಹುಪಾಲು ವಿಪಕ್ಷಗಳು ಇದನ್ನು ವಿರೋಧಿಸಿವೆ. ತಮ್ಮ ಮೂರನೇ ಅವಧಿಯಲ್ಲಿ ಒಂದು ದೇಶ ಒಂದು ಚುನಾವಣೆ ಜಾರಿ ಮಾಡುತ್ತೇವೆ ಎಂದು ಗೃಹ ಸಚಿವ ಅಮಿತ್ ಷಾ ಪ್ರಚಾರ ರ್ಯಾಲಿಗಳಲ್ಲೂ ಹೇಳಿದ್ದರು. ಆದರೆ, ವಿಪಕ್ಷಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಬಿಜೆಪಿ ಇಂಥಾ ಸಾಹಸಗಳನ್ನೆಲ್ಲಾ ಒಪ್ಪಿಕೊಳ್ಳುವರೇ? ಮೈತ್ರಿಧರ್ಮ ಪಾಲಿಸುತ್ತೇವೆ ಎಂಬ ಧೋರಣೆ ಬಿಜೆಪಿಯಲ್ಲಿದ್ದರೆ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ತಜ್ಞರ ಸಮಿತಿ ಸಲ್ಲಿಸಿರುವ ಒಂದು ದೇಶ ಒಂದು ಚುನಾವಣೆ ಕುರಿತ ಶಿಫಾರಸುಗಳನ್ನು 5 ವರ್ಷಗಳ ಕಾಲ ಬದಿಗೆ ಸರಿಸಿಡಲೇಬೇಕು. ಅದೇ ರೀತಿ ದೇಶದಲ್ಲಿ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆ ಮಾಡಬೇಕೆಂಬ ಉದ್ದೇಶವನ್ನೂ ಕೇಂದ್ರ ಹೊಂದಿತ್ತು ಮತ್ತು ಈ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಿತ್ತು. ಆದರೆ, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಕೇಂದ್ರದ ಉದ್ದೇಶವನ್ನು ಪ್ರಶ್ನಿಸಿದ್ದವು. ಈ ವಿಷಯದಲ್ಲೂ ಮಿತ್ರಪಕ್ಷಗಳು ಬಿಜೆಪಿ ಉದ್ದೇಶಕ್ಕೆ ಅಡ್ಡಿಯಾಗುವ ಸಾಧ್ಯತೆಗಳೇ ಕಾಣುತ್ತಿವೆ.
ಕಳೆದ 10 ವರ್ಷಗಳಿಂದ ಸಚಿವ ಸಂಪುಟ ಸಭೆಗಳಲ್ಲಿ ಕೇಂದ್ರ ಸಚಿವರು ಮಾತನಾಡಿದ್ದೇ ಕಡಿಮೆ ಎಂದು ಬಿಜೆಪಿ ಸಂಸದರೇ ಆಂತರಿಕ ಚರ್ಚೆಗಳಲ್ಲಿ ಮಾತನಾಡಿದ್ದುಂಟು. ಬಹುತೇಕ ಪ್ರಧಾನಿ ಕಾರ್ಯಾಲಯ ಎಲ್ಲವನ್ನೂ ಸಿದ್ಧಪಡಿಸುತ್ತದೆ ಮತ್ತು ಕ್ಯಾಬಿನೆಟ್ ಸಭೆಯಲ್ಲಿ ಅದಕ್ಕೆ ಔಪಚಾರಿಕ ಅನುಮೋದನೆ ನೀಡಲಾಗುತ್ತಿತ್ತು. ಆದರೆ, ಬಹುಶಃ ಇನ್ನು ಹಾಗಾಗುವ ಸಾಧ್ಯತೆ ಕಡಿಮೆ. ಕ್ಯಾಬಿನೆಟ್ ಸಭೆಗಳಲ್ಲಿ ಬಿಜೆಪಿಯಿಂದ ಆಯ್ಕೆಯಾದ ಸಚಿವರು ಮಾತನಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಮಿತ್ರಪಕ್ಷಗಳ ಸಚಿವರು ಧ್ವನಿ ಎತ್ತಲಿದ್ದಾರೆ. ನೀತಿ, ಯೋಜನೆಗಳ ಬಗ್ಗೆ ಸಂವಾದ, ಚರ್ಚೆಗಳ ಅಗತ್ಯತೆ ದೃಷ್ಟಿಯಿಂದ ಇದು ಸ್ವಾಗತಾರ್ಹ ಕೂಡ.
1999-2004ರ ಅವಧಿಗೆ ದೇಶದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಮೈತ್ರಿ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಉದಾಹರಣೆ ಕಣ್ಣಮುಂದಿದೆ. 1999ರ ಚುನಾವಣೆಯಲ್ಲಿ ಬಿಜೆಪಿ 182 ಸೀಟುಗಳನ್ನಷ್ಟೇ ಗೆದ್ದುಕೊಂಡಿತ್ತು. ಹಲವು ವಿಚಿತ್ರ, ಭಿನ್ನ ಚಿಂತನೆಯ ಮಿತ್ರರನ್ನು ಕಟ್ಟಿಕೊಂಡು ವಾಜಪೇಯಿ ಸರ್ಕಾರ ನಡೆಸಿದ್ದರು. ಆದರೆ, ಬಿಜೆಪಿಯ ಮೂಲ ವಿಚಾರಗಳಾಗಿದ್ದ ರಾಮ ಮಂದಿರ ನಿರ್ವಣ, 370 ವಿಧಿ ರದ್ದತಿ…ಹೀಗೆ ಪಕ್ಷದ ಕೋರ್ ವಿಚಾರಗಳನ್ನು ಬದಿಗಿಡಬೇಕಾದ ಅನಿವಾರ್ಯತೆ ವಾಜಪೇಯಿ, ಉಪ ಪ್ರಧಾನಿ ಎಲ್.ಕೆ. ಆಡ್ವಾಣಿ ಮುಂದಿತ್ತು. ನಮ್ಮ ಸರ್ಕಾರವಿದ್ದರೂ, ಮಂದಿರ ವಿಚಾರದಲ್ಲಿ ಪ್ರಧಾನಿ-ಉಪ ಪ್ರಧಾನಿ ಏನೂ ಮಾಡಲಿಲ್ಲ ಎನ್ನುವುದು ವಿಶ್ವ ಹಿಂದು ಪರಿಷತ್ ಆಕ್ರೋಶಕ್ಕೆ ಗುರಿಯಾಗಿತ್ತು. ಆದರೆ, ಸರ್ಕಾರ ಮುನ್ನಡೆಸುತ್ತಿದ್ದ ನಾಯಕರಿಗೆ ಅಂದು ಮೈತ್ರಿ ಧರ್ಮ ಪಾಲನೆಯೂ ಅನಿವಾರ್ಯವಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದಿನ ನಡೆ ಹೇಗಿರಲಿದೆ ಮತ್ತು ಮಿತ್ರಪಕ್ಷಗಳು ಅವರ ದೂರದೃಷ್ಟಿ ಯೋಜನೆ, ನೀತಿಗಳಿಗೆ ಹೇಗೆ ಸ್ಪಂದಿಸುತ್ತವೆ ಎನ್ನುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ. ಬಿಜೆಪಿ ಮತ್ತು ಮಿತ್ರಪಕ್ಷಗಳ ನಡುವಿನ ಸಮನ್ವಯ, ಕೊಡು-ಕೊಳ್ಳುವಿಕೆ ಹಿಂದೆ ಸರ್ಕಾರದ ಭವಿಷ್ಯವೂ ಅಡಗಿದೆ.
ಡೀಪ್ ಫ್ರೀಜರ್​ಗೆ ಹೋಗುತ್ತಾ ಯುಸಿಸಿ? :ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಉದ್ದೇಶದಿಂದಲೇ ಸದ್ಯ ಮೂರು ರಾಜ್ಯಗಳಲ್ಲಿ ಪ್ರಯೋಗ ಮಾಡಲು ಬಿಜೆಪಿ ಮುಂದಾಗಿದೆ. ಸದ್ಯ ಯುಸಿಸಿ ವಿಧೇಯಕ ಉತ್ತರಾಖಂಡದಲ್ಲಷ್ಟೇ ಜಾರಿಯಾಗಿದೆ. ಆದರೆ, ದೇಶಾದ್ಯಂತ ಜಾರಿ ಮಾಡುವ ಬಿಜೆಪಿ ಉದ್ದೇಶ ಈ ಅವಧಿಯಲ್ಲಿ ಈಡೇರುವುದು ಅಸಾಧ್ಯ. ಮುಸ್ಲಿಂ ಮತಬ್ಯಾಂಕ್​ಗೆ ಹಾನಿ ಮಾಡುವ ಯಾವುದೇ ಕ್ರಮವನ್ನು ಟಿಡಿಪಿ, ಜೆಡಿಯು ಅಥವಾ ಇನ್ಯಾವುದೇ ಮಿತ್ರಪಕ್ಷಗಳು ಒಪ್ಪಲಾರವು. ತ್ರಿವಳಿ ತಲಾಖ್ ವಿಧೇಯಕವನ್ನೂ ಜೆಡಿಯು ಕಟುವಾಗಿ ವಿರೋಧಿಸಿತ್ತು. ಹಾಗಾಗಿ, 5 ವರ್ಷಗಳ ಮಟ್ಟಿಗೆ ಯುಸಿಸಿ ಬಗ್ಗೆ ಚರ್ಚೆ ಮಾಡುವುದೇ ವ್ಯರ್ಥ ಎಂಬ ವಾತಾವರಣ ಸೃಷ್ಟಿಯಾಗಿದೆ.
ಅಗ್ನಿವೀರ್ ಭವಿಷ್ಯವೇನು?:ಅಗ್ನಿವೀರ್ ಯೋಜನೆ ಬಗ್ಗೆ ಮರುಪರಿಶೀಲನೆ ನಡೆಯಬೇಕು ಎಂದು ಎಲ್​ಜೆಪಿಯ ಚಿರಾಗ್ ಪಾಸ್ವಾನ್ ಈಗಲೇ ಕ್ಯಾತೆ ತೆಗೆದಿದ್ದಾರೆ. ಲೋಕಸಭೆ ಚುನಾವಣೆಯುದ್ದಕ್ಕೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾವು ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆ ರದ್ದುಗೊಳಿಸಲಿದ್ದೇವೆ ಎಂದು ಭರವಸೆ ನೀಡಿದ್ದರು. ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಯುವಕರು ಇದೇ ಕಾರಣಕ್ಕೆ ಇಂಡಿ ಮೈತ್ರಿಕೂಟಕ್ಕೆ ಮತ ಹಾಕಿದ್ದಾರೆ ಎಂಬ ಚರ್ಚೆಗಳಿವೆ. ಅಗ್ನಿವೀರ್ ಯೋಜನೆ ಅಡಿಯಲ್ಲಿ ಆಯ್ಕೆಯಾಗುವ ಯುವಕರು 4 ವರ್ಷಗಳ ಬಳಿಕ ಸೇನೆಯಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಎಂಬ ಖಚಿತತೆ ಇಲ್ಲ. ಹೀಗಾಗಿ, ಈ ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ಚಿರಾಗ್ ಪಾಸ್ವಾನ್ ಯೋಜನೆಯ ಮರುಪರಿಶೀಲನೆ ಬಗ್ಗೆ ಮಾತನಾಡಿದ್ದಾರೆ. ಜೆಡಿಯು ಕೂಡ ಪಾಸ್ವಾನ್ ಮಾತಿಗೆ ದನಿ ಸೇರಿಸಬಹುದು. ಹಾಗಾದರೆ, ಅಗ್ನಿವೀರ್ ರದ್ದುಗೊಳಿಸಲು ಮೋದಿ, ಅಮಿತ್ ಶಾ ಒಪ್ಪಬಹುದೇ? ಒಂದುವೇಳೆ ರದ್ದುಗೊಂಡರೆ, ವಿಪಕ್ಷಗಳೂ ಅದನ್ನು ‘ನಮ್ಮ ಹೋರಾಟಕ್ಕೆ ಸಿಕ್ಕ ಫಲ’ ಎಂದೇ ಪ್ರಚಾರ ಮಾಡುತ್ತವೆ. ಇಂಥಾ ಸನ್ನಿವೇಶಗಳು ಸೃಷ್ಟಿಯಾಗುವ ಸಾಧ್ಯತೆಗಳಿರುವುದರಿಂದಲೇ ಹೊಸ ಸರ್ಕಾರ ಭವಿಷ್ಯದ ಬಗ್ಗೆ ಸಹಜವಾಗಿಯೇ ಅನುಮಾನಗಳು ಮೂಡುತ್ತಿವೆ.
ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಿ.ನಾಗೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
