ನವದೆಹಲಿ:ಜಾತಿಗಣತಿ ಮೂಲಕ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ದೇಶದಲ್ಲಿ ಜಾತಿ ರಾಜಕಾರಣಕ್ಕೆ ಹೊಸ ಸ್ವರೂಪ ನೀಡಲು ಸಜ್ಜಾಗುತ್ತಿರುವ ಬೆನ್ನಲ್ಲೇ ಆತಂಕದಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಕೇಂದ್ರ ನಾಯಕರು, ಎಲ್ಲ ರಾಜ್ಯಗಳ ಪ್ರಮುಖ ಇತರ ಹಿಂದುಳಿದ ವರ್ಗಗಳ (ಒಬಿಸಿ) ನಾಯಕರನ್ನು ದೆಹಲಿಗೆ ಕರೆಸಿ ಮಹತ್ವದ ಸಭೆ ನಡೆಸಿ ದ್ದಾರೆ. ಮುಂಬರುವ ಲೋಕ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.
ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್, ಬಿ.ಎಲ್. ಸಂತೋಷ್, ವಿನೋದ್ ತಾವಡೆ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಬಿಹಾರದ ಸುಶೀಲ್ ಮೋದಿ, ಸಾಧಿ್ವ ನಿರಂಜನ ಜ್ಯೋತಿ ಸೇರಿ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದಿಂದ ಕೆ.ಎಸ್. ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ಪಿ.ಸಿ. ಮೋಹನ್ ಭಾಗವಹಿಸಿದ್ದರು.ವಿಪಕ್ಷಗಳು ಜಾತಿಗಣತಿ ಮೂಲಕ ಕೇಂದ್ರಕ್ಕೆ ರಾಜಕೀಯ ಒತ್ತಡ ಹೇರುತ್ತಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾತಿ ರಾಜಕಾರಣದ ಕುರಿತ ಚರ್ಚೆಗಳೇ ನಡೆಯುತ್ತಿವೆ. ಇದು ಬಿಜೆಪಿಗೆ ಹಾನಿ ಮಾಡಬಲ್ಲದು ಎಂದು ಭಾವಿಸಿರುವ ವರಿಷ್ಠರು ಈ ಆತಂಕ ನಿವಾರಿಸಲೆಂದೇ ಒಬಿಸಿ ನಾಯಕರೊಂದಿಗೆ ಮಹಾಮಂಥನ ಏರ್ಪಡಿಸಿದ್ದರು.
ಮೀಸಲು ನೀತಿ ಚರ್ಚೆ:ಹಿಂದುಳಿದ ವರ್ಗಕ್ಕೆ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯಗಳಲ್ಲಿರುವ ಬಿಜೆಪಿ ಸರ್ಕಾರಗಳು ಏನೇನು ಅನುಕೂಲಕರ ಕ್ರಮಗಳನ್ನು ಜಾರಿ ಮಾಡಿವೆ ಎಂಬ ಬಗ್ಗೆ ವ್ಯವಸ್ಥಿತ ಪ್ರಚಾರ ಮಾಡಬೇಕು ಹಾಗೂ ಈ ಬಗ್ಗೆ ಜನರಲ್ಲಿ ಮನವರಿಕೆ ಮೂಡಿಸಲು ಕಾರ್ಯಕರ್ತ ವರ್ಗವನ್ನೂ ಪ್ರೇರೇಪಿಸಬೇಕು ಎಂದು ವರಿಷ್ಠರು ಸಲಹೆ ನೀಡಿದ್ದಾರೆ. ಹಿಂದುಳಿದ ವರ್ಗಕ್ಕೆ ಸಂಬಂಧಿಸಿ ಇಡೀ ದೇಶಕ್ಕೆ ಅನ್ವಯವಾಗುವಂತಹ ಮೀಸಲಾತಿ ನೀತಿಯೊಂದನ್ನು ಅನುಷ್ಠಾನಗೊಳಿಸುವ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆಯಾಗಿದೆ. ಆದರೆ, ಮೀಸಲಾತಿ ನೀತಿಯ ಸ್ವರೂಪದ ಬಗ್ಗೆ ಚರ್ಚೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಬರಕ್ಕೆ ಹಣ ಬಿಡುಗಡೆ:ರಾಜ್ಯದ ಬರಗಾಲದ ಬಗ್ಗೆ ಕೇಂದ್ರ ಗೃಹ ಸಚಿವರ ಗಮನಸೆಳೆದ ಈಶ್ವರಪ್ಪ, ನಾನು ಜೀವಮಾನದಲ್ಲಿ ಇಂಥದ್ದೊಂದು ಬರ ಪರಿಸ್ಥಿತಿ ನೋಡಿರಲಿಲ್ಲ. ಜನರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ತಿಳಿಸಿದರು. ರಾಜ್ಯಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ ಎಂದು ಅಮಿತ್ ಷಾ ಕೇಳಿದ್ದಕ್ಕೆ, ರಾಜ್ಯ ಸರ್ಕಾರ ಇನ್ನೂ ನೀಡಿಲ್ಲ. ಕೇಂದ್ರದಿಂದ ನೆರವು ನಿರೀಕ್ಷಿಸುತ್ತಿದೆ. ರಾಜ್ಯ ನೆರವೇಕೆ ನೀಡಿಲ್ಲ ಎಂಬುದು ನನಗೆ ಗೊತ್ತಿಲ್ಲ ಎಂದು ವಿವರಿಸಿದ್ದಾರೆ ಎನ್ನಲಾಗಿದೆ. ಕೇಂದ್ರದಿಂದ ನಾವು ಸದ್ಯದಲ್ಲೇ ಸ್ವಲ್ಪ ಪ್ರಮಾಣದ ಹಣ ಬಿಡುಗಡೆ ಮಾಡಲಿದ್ದೇವೆ ಎಂದು ರಾಜ್ಯ ಬಿಜೆಪಿ ನಾಯಕರಿಗೆ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಬಗ್ಗೆ ಚರ್ಚೆ:ರಾಜ್ಯದಲ್ಲಿ ಜಾತಿಗಣತಿ ಬಗ್ಗೆ ಸರ್ಕಾರದ ನಿಲುವೇನು ಎಂದು ಗೃಹ ಸಚಿವ ಅಮಿತ್ ಷಾ ರಾಜ್ಯ ನಾಯಕರೊಂದಿಗೆ ಪ್ರಶ್ನಿಸಿದ್ದಾರೆ. ವರದಿ ಬಿಡುಗಡೆ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಭಿನ್ನಾಭಿಪ್ರಾಯಗಳಿವೆ. ಒಕ್ಕಲಿಗ ಸಮುದಾಯ ಉಪ ಮುಖ್ಯಮಂತ್ರಿಯನ್ನು ಕರೆದು ಸಭೆ ಮಾಡಿದೆ. ಮುಖ್ಯಮಂತ್ರಿ ಒಂದು ಕಡೆ, ಉಪಮುಖ್ಯಮಂತ್ರಿ ಒಂದು ಕಡೆ ಎಂಬಂತೆ ಆಗಿದೆ. ಲಿಂಗಾಯತ ಮಂತ್ರಿಗಳು ವರದಿ ಜಾರಿಗೆ ವಿರೋಧಿಸುವ ಸಾಧ್ಯತೆ ಇದೆ. ನಾವು ಹಿಂದೆ ಸದನದಲ್ಲಿಯೇ ವರದಿ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುವ ನಿಲುವು ತಾಳಿದ್ದೆವು ಎಂದು ರಾಜ್ಯ ನಾಯಕರು ವಿವರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ನಾಯಕರು, ನಿಮ್ಮ ಹೋರಾಟವನ್ನು ನೀವು ಮುಂದುವರಿಸಿ. ಕೇಂದ್ರದಿಂದ ನಾವು ಏನು ಮಾಡ ಬೇಕೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಬೆಟ್ಟಿಂಗ್​ ಆ್ಯಪ್​ನಿಂದಲೂ ಚುನಾವಣೆಗೆ ಹಣ!; ದೊಡ್ಡ ಮೊತ್ತವನ್ನೇ ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

ಪಕ್ಷದ ರಾಜ್ಯಾಧ್ಯಕ್ಷರೇ ಟ್ರಕ್​ ಕ್ಲೀನರ್ ಥರ ನಟಿಸಿ ಭ್ರಷ್ಟಾಚಾರ ಬಯಲಿಗೆಳೆದ್ರು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two − 1 =
Remember me
