ನವದೆಹಲಿ:ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಿಂದ ಒಟ್ಟು 60 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಇರಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ಏಪ್ರಿಲ್/ಮೇನಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಬಿಜೆಪಿಗೆ ಅತ್ಯಗತ್ಯವಾಗಿದೆ. ಇದಕ್ಕಿಂತ ಮುಖ್ಯವಾಗಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳದ ಮೇಲೆ ಬಿಜೆಪಿ ದೃಷ್ಟಿ ಕೇಂದ್ರೀಕೃತವಾಗಿದೆ. ಈ ರಾಜ್ಯಗಳಲ್ಲಿ ಪಕ್ಷದ ಸಂಘಟನೆ ಬಲಗೊಳಿಸಲು ಬಿಜೆಪಿ ತೀವ್ರವಾಗಿ ಶ್ರಮಿಸುತ್ತಿದೆ.
ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ದಕ್ಷಿಣ ಭಾರತದಲ್ಲಿ ಪಕ್ಷ ಬಲಪಡಿಸುವ ಗುರಿಯನ್ನು ಸ್ಥಳೀಯ ಮುಖಂಡರಿಗೆ ನೀಡಲಾಗಿದೆ. 2024ರ ಚುನಾವಣೆಯಲ್ಲಿ ಈಗಿರುವ 303 ಸ್ಥಾನಕ್ಕಿಂತ ಹೆಚ್ಚಿನ ಸಂಖ್ಯೆ ಗಳಿಸಬೇಕಿದ್ದರೆ ದಕ್ಷಿಣ ಭಾರತದಿಂದ ಅಧಿಕ ಕ್ಷೇತ್ರಗಳನ್ನು ಗೆಲ್ಲಬೇಕು. ಇದನ್ನು ಸಂಘಟನಾತ್ಮಕವಾಗಿ ವ್ಯವಸ್ಥಿತವಾಗಿ ಸಾಧಿಸಬೇಕು ಎಂದು ಸಭೆಯಲ್ಲಿ ಹಿರಿಯ ನಾಯಕರು ಹೇಳಿದ್ದರು. ಹೀಗಾಗಿ ದಕ್ಷಿಣದತ್ತ ಹೆಚ್ಚಿನ ಚಿತ್ತ ಹರಿಸಿರುವ ಬಿಜೆಪಿ, ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಬನ್ಸಾಲ್ ಮತ್ತು ತರುಣ್ ಚುಗ್​ರನ್ನು ಈ ಕಾರ್ಯಕ್ಕೆ ನಿಯೋಜಿಸಿದೆ. ಉತ್ತರ ಪ್ರದೇಶದ ಡಬಲ್ ಇಂಜಿನ್ ಮಾದರಿ ಸರ್ಕಾರವಿದ್ದರೆ ಆಗುವ ಪ್ರಯೋಜನದ ಬಗ್ಗೆ ವಿವರಿಸಲು ಗುಜರಾತ್ ಮತ್ತು ಉತ್ತರ ಪ್ರದೇಶದಿಂದ ಹಿರಿಯ ನಾಯಕರನ್ನು ಇಲ್ಲಿಗೆ ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಂಪುಟದಲ್ಲಿ ಯಾರಿಗೆ ಸ್ಥಾನ?ಬೆಂಗಳೂರು: ಕೇಂದ್ರ ಬಜೆಟ್​ಗೆ ಮುನ್ನ ನರೇಂದ್ರ ಮೋದಿ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಸಾಧ್ಯತೆ ಇದ್ದು, ರಾಜ್ಯದಿಂದ ಯಾರಿಗೆ ಅವಕಾಶ ಸಿಗಬಹುದು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೆ ನಾಲ್ಕು ಮಂದಿ ಸಂಪುಟದಲ್ಲಿದ್ದಾರೆ. ಹಣಕಾಸು ಸಚಿವರನ್ನೂ ರಾಜ್ಯದ ಪ್ರತಿನಿಧಿಯಾಗಿ ಪರಿಗಣಿಸಿದರೆ ಐವರು ಸಂಪುಟದಲ್ಲಿದ್ದಾರೆ. ಹೀಗಾಗಿ ಮತ್ತೆ ಅವಕಾಶ ಸಿಗುವುದಿಲ್ಲ ಎಂಬ ವಾದವಿದೆ. ಜ.15ರ ಸಂದರ್ಭದಲ್ಲಿ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ಇದೆ. ಒಬ್ಬರನ್ನು ಕೈಬಿಟ್ಟು ಹಳೇ ಮೈಸೂರು ಭಾಗದವರಿಗೆ ಅವಕಾಶ ನೀಡಲಾಗುತ್ತದೆ. ಒಕ್ಕಲಿಗ ಅಥವಾ ಹಿಂದುಳಿದ ವರ್ಗದವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕರೂ ಸಿಗಬಹುದೆಂಬ ವಾದವಿದೆ. ಒಂದೊಮ್ಮೆ ಸಂಸದರೊಬ್ಬರಿಗೆ ರಾಜ್ಯಾಧ್ಯಕ್ಷ ಸ್ಥಾನ ಲಭಿಸಿದರೆ ಅವರ ಸಮುದಾಯದವರಿಗೆ ಸಂಪುಟ ಸೇರಿಕೊಳ್ಳುವರು ಎನ್ನಲಾಗಿದೆ.
ಲೋಕಸಭಾ ಚುನಾವಣೆಗೆ ಸೆಮಿಫೈನಲ್ಈ ವರ್ಷ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ, ತೆಲಂಗಾಣ ಈಶಾನ್ಯದಲ್ಲಿ ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯ, ಮಿಜೋರಾಂ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಇದು 2024ರ ಲೋಕಸಭಾ ಚುನಾವಣೆಗೆ ಉಪಾಂತ್ಯದಂತೆ ಪರಿಗಣಿತವಾಗಿದೆ. ಮಾರ್ಚ್​ನಲ್ಲಿ ಈಶಾನ್ಯದ ಮೂರು ರಾಜ್ಯಗಳ ವಿಧಾನಸಭಾ ಅವಧಿ ಮುಗಿಯಲಿದ್ದು, ಫೆಬ್ರವರಿ ಮತ್ತು ಮಾರ್ಚ್ ಆರಂಭದಲ್ಲಿ ಈ ರಾಜ್ಯಗಳು ಈ ವರ್ಷದ ಮೊದಲ ಚುನಾವಣೆಯನ್ನು ಎದುರಿಸಲಿವೆ. ತ್ರಿಪುರಾದಲ್ಲಿ ಬಿಜೆಪಿ ಸರ್ಕಾರ ಇದ್ದರೆ, ನಾಗಾಲ್ಯಾಂಡ್​ನಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಅಧಿಕಾರದಲ್ಲಿ ಇದೆ.
ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದ ಈಶಾನ್ಯ ಏಕೈಕ ಪಕ್ಷ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮೇಘಾಲಯದಲ್ಲಿ ಅಧಿಕಾರ ಹಿಡಿದಿದೆ. ದಕ್ಷಿಣದಲ್ಲಿ ಬಿಜೆಪಿಯ ಹೆಬ್ಬಾಗಿಲಾದ ಕರ್ನಾಟಕ ವಿಧಾನಸಭೆ ಅವಧಿ ಮೇ 24ಕ್ಕೆ ಪೂರ್ಣವಾಗಲಿದ್ದು, ಏಪ್ರಿಲ್/ಮೇನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿ ಇದೆ. ಎನ್​ಡಿಎ ನೇತೃತ್ವದ ಆಡಳಿತ ಇರುವ ಮಿಜೋರಾಂನ ವಿಧಾನಸಭೆ ಅವಧಿ ಮುಂದಿನ ಡಿಸೆಂಬರ್ ಮಧ್ಯಭಾಗದಲ್ಲಿ ಕೊನೆಗೊಳ್ಳಲಿದ್ದು, ಛತ್ತೀಸ್​ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ವಿಧಾನಸಭೆಗಳ ಅವಧಿ 2024ರ ಜನವರಿಯ ಮೊದಲೆರಡು ವಾರದಲ್ಲಿ ಮುಕ್ತಾಯವಾಗಲಿದೆ. ಹೀಗಾಗಿ ಈ ರಾಜ್ಯಗಳ ಚುನಾವಣೆ 2023ರ ಡಿಸೆಂಬರ್​ನಲ್ಲಿ ನಡೆಯುವ ಸಾಧ್ಯತೆ ಇದೆ. ಛತ್ತೀಸ್​ಗಢ, ರಾಜಸ್ಥಾನಗಳಲ್ಲಿ ಕಾಂಗ್ರೆಸ್​ಗೆ ಅಧಿಕಾರ ಉಳಿಸಿಕೊಳ್ಳುವ ಸವಾಲಿದ್ದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಗಳಿಸುವ ಉತ್ಸಾಹದಲ್ಲಿದೆ. ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಬಿಆರ್​ಎಸ್ ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿದೆ.
ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಗೆ ತಕರಾರಿಲ್ಲ2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದು ಸಂಯುಕ್ತ ಜನತಾ ದಳ (ಜೆಡಿಯು) ಮುಖ್ಯಸ್ಥ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಮಿತ್ರಪಕ್ಷಆಗಿರುವ ಕಾಂಗ್ರೆಸ್​ನೊಂದಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಶನಿವಾರ ಹೇಳಿರುವ ಕುಮಾರ್, ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪಿಎಂ ಅಭ್ಯರ್ಥಿ ಆಗಲಿದ್ದಾರೆ ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್​ನಾಥ್ ಹೇಳಿರುವುದಕ್ಕೆ ಕುಮಾರ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಎಲ್ಲ ಪಕ್ಷಗಳೊಂದಿಗೆ ರ್ಚಚಿಸಿ ನಿರ್ಧಾರ ತೆಗೆದುಕೊಳ್ಳುವುದು ಕಾಂಗ್ರೆಸ್​ಗೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದರು. ಕಾಂಗ್ರೆಸ್​ನವರು ಈಗ ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿರುವಂತೆ ಕಾಣಿಸುತ್ತದೆ. ಈ ವಿಚಾರದಲ್ಲಿ ಇನ್ನಷ್ಟು ಬೆಳವಣಿಗೆಗಳನ್ನು ಕಾದುನೋಡಬೇಕಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + twelve =
Remember me
