|ರಾಘವ ಶರ್ಮ ನಿಡ್ಲೆ, ನವದೆಹಲಿಮೋದಿ ಉಪನಾಮ ಕುರಿತ ಟೀಕೆ ಪ್ರಕರಣದಲ್ಲಿ ರಾಹುಲ್​ಗಾಂಧಿಗೆ ಸೂರತ್ ಕೋರ್ಟ್ ವಿಧಿಸಿದ್ದ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದು ಕಾಂಗ್ರೆಸ್​ನಲ್ಲಿ ಸಂಭ್ರಮಕ್ಕೆ ಕಾರಣವಾಗಿದ್ದರೆ ಬಿಜೆಪಿಗೆ ಮುಜುಗರ ಉಂಟು ಮಾಡಿದೆ.
ತೀರಾ ಗಂಭೀರವಲ್ಲದ, ಜಾಮೀನಿಗೆ ಅರ್ಹವಾದ, ರಾಜಿ ಮೂಲಕ ಮುಗಿಸಬಹುದಾದ ಮಾನನಷ್ಟ ಪ್ರಕರಣದಲ್ಲಿ ಗರಿಷ್ಠ ಅವಧಿಯ ಶಿಕ್ಷೆ ತೀರ್ಪು ನೀಡಲು ಸೂರತ್ ನ್ಯಾಯಾಲಯ ಸಕಾರಣಗಳನ್ನು ನೀಡಲೇ ಇಲ್ಲ ಎಂಬುದನ್ನು ಗಮನಿಸಿದ ಸುಪ್ರೀಂಕೋರ್ಟ್, ರಾಹುಲ್ ಶಿಕ್ಷೆಗೆ ತಡೆ ನೀಡಿದೆ. ರಾಹುಲ್ ಮೇಲಿದ್ದದ್ದು ಭ್ರಷ್ಟಾಚಾರ ಅಥವಾ ಹತ್ಯೆಯಂತಹ ಗಂಭೀರ ಪ್ರಕರಣವೇನಲ್ಲ. ಹೀಗಾಗಿ, ಕಾಂಗ್ರೆಸ್ ಕೂಡ ಬಿಜೆಪಿಯನ್ನು ಗುರಿಯಾಗಿಸಿ, ಇದು ದ್ವೇಷ ರಾಜಕಾರಣಕ್ಕೆ ತಾಜಾ ನಿದರ್ಶನ ಎಂದು ಕಿಡಿಕಾರಿತ್ತು. ಈಗ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್​ನಿಂದಲೇ ಪರಿಹಾರ ಸಿಕ್ಕಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್ಸಿಗರು ಸಂಭ್ರಮದಲ್ಲಿದ್ದಾರೆ. ಇದು ತಮ್ಮ ಮುಂಚೂಣಿ ನಾಯಕನ ನೈತಿಕ ಸ್ಥೈರ್ಯ ಹೆಚ್ಚಿಸಿರುವುದಲ್ಲದೆ, ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಲಿದೆ ಎಂದೂ ಕಾಂಗ್ರೆಸ್ ಭಾವಿಸಿದೆ.
ರಾಹುಲ್ ಗಾಂಧಿ ಅಪರಾಧಿ ಎಂದು ಸೂರತ್ ನ್ಯಾಯಾಲಯದ ಘೊಷಿಸಿದ ಕೆಲವೇ ಗಂಟೆಗಳಲ್ಲಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. 2019ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮೋದಿ ಸಮುದಾಯಕ್ಕೆ ಅಪಮಾನ ಮಾಡಿದ್ದ ರಾಹುಲ್​ಗೆ ವಿಚಾರಣಾ ನ್ಯಾಯಾಲಯ ಶಿಕ್ಷೆ ನೀಡಿದ್ದು ಕಾನೂನಾತ್ಮಕವಾಗಿ ಸರಿಯಾಗಿದ್ದರೂ, ಕೇಂದ್ರ ಸರ್ಕಾರ ತರಾತುರಿಯಲ್ಲಿ ಅವರ ಸದಸ್ಯತ್ವ ಅನರ್ಹಗೊಳಿಸಲು ಮುಂದಾದ ಕ್ರಮ ರಾಜಕೀಯ ವಲಯದಲ್ಲಿ ಪರ-ವಿರೋಧದ ಚರ್ಚೆ ಹುಟ್ಟುಹಾಕಿತ್ತು. ತಮ್ಮ ನಡುವಿನ ಆಂತರಿಕ ಮಾತುಕತೆಗಳ ಮಧ್ಯೆ ಅನೇಕ ಬಿಜೆಪಿ ಸಂಸದರು ಕೂಡ ರಾಹುಲ್​ರನ್ನು ಅನರ್ಹಗೊಳಿಸುವ ಅಗತ್ಯವಿರಲಿಲ್ಲ. ಇದರಿಂದ ಅವರನ್ನು ನಾವೇ ಹೀರೋ ಮಾಡುತ್ತಿದ್ದೇವೆ. ಜನರಲ್ಲಿ ರಾಹುಲ್ ಬಗ್ಗೆ ಅನುಕಂಪ ಮೂಡಲು ನಾವೇ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಅಸಮಾಧಾನ ತೋಡಿಕೊಂಡಿದ್ದರು.
ಸೂರತ್ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್, ಸುಪ್ರೀಂಕೋರ್ಟ್​ಗಳಲ್ಲಿ ಪ್ರಶ್ನಿಸುತ್ತಾರೆ ಎಂದು ಗೊತ್ತಿದ್ದರೂ, ನಮ್ಮ ನಾಯಕರು ರಾಹುಲ್​ರನ್ನು ಅನರ್ಹಗೊಳಿಸಲು ಮುಂದಾದರು. ಸುಪ್ರೀಂಕೋರ್ಟ್ ತೀರ್ಪಿನ ತನಕ ಕಾಯುತ್ತಿದ್ದರೆ, ಬಹುಶಃ ಇಂದು ಮುಜುಗರ ಎದುರಿಸಬೇಕಾಗಿ ಬರುತ್ತಿರಲಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಬಿಜೆಪಿ ಸಂಸದರೊಬ್ಬರು ಹೇಳುತ್ತಾರೆ.ರಾಹುಲ್ ತಪ್ಪು ಮಾಡಿರಬಹುದು. ಹಾಗಂತ ಅನರ್ಹ ಮಾಡುವ ಪ್ರಕರಣ ಇದಾಗಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಕೂಡ ಸ್ವಾಸ್ಥ್ಯ ಸಮಾಜಕ್ಕೆ ಹಿತವಲ್ಲದ ನಿಕೃಷ್ಟ ಮಾತುಗಳನ್ನಾಡುತ್ತಾರೆ. ಅದಕ್ಕೇನು ಹೇಳುತ್ತೀರಿ? ಈಗ ಸುಪ್ರೀಂಕೋರ್ಟ್​ನಲ್ಲಿ ಗೆದ್ದೆವು ಎಂದು ರಾಹುಲ್, ಕಾಂಗ್ರೆಸ್ಸಿಗರು ಬೀಗುತ್ತಿದ್ದಾರೆ. ಇದಕ್ಕೆಲ್ಲಾ ನಾವೇ ಅವಕಾಶ ಮಾಡಿಕೊಟ್ಟೆವು. ಕಾನೂನಾತ್ಮಕ ಅಂಶಗಳು ಏನೇ ಇರಬಹುದು. ರಾಜಕೀಯ ಅಖಾಡದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತು ಎನ್ನುವುದು ನನ್ನ ಅನಿಸಿಕೆ ಎಂದು ಹೇಳಿದ್ದಾರೆ.
ಜನಪ್ರತಿನಿಧಿಯಾಗಿರುವ ರಾಹುಲ್ ಮಾತುಗಳನ್ನಾಡುವಾಗ ಎಚ್ಚರಿಕೆಯಿಂದಿರಬೇಕು ಅಥವಾ ಅಹಿತದ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಬಾರದು ಎಂದೂ ಸುಪ್ರೀಂಕೋರ್ಟ್ ಕಿವಿಮಾತು ಹೇಳಿದೆ. ಸೂರತ್ ನ್ಯಾಯಾಲಯ, ಗುಜರಾತ್ ಹೈಕೋರ್ಟ್ ಕೂಡ ಇದನ್ನೇ ಹೇಳಿರುವುದು. ಹಾಗೆ ನೋಡಿದರೆ, ಹತ್ತಾರು ಪ್ರಕರಣಗಳಲ್ಲಿ ರಾಜಕಾರಣಿಗಳಿಗೆ ದೇಶದ ಹಲವು ನ್ಯಾಯಾಲಯಗಳು ಎಚ್ಚರಿಕೆ ನೀಡುತ್ತಲೇ ಇವೆ. ಆದರೆ, ಅದರಿಂದ ಹೆಚ್ಚಿನ ಪ್ರಯೋಜನವಾಗಿದೆಯೇ? ಅದು ಸಾಧ್ಯವಾಗಿಲ್ಲ ಎಂಬ ಕಾರಣಕ್ಕಾಗಿಯೇ ಬಹುಶಃ ಸೂರತ್ ನ್ಯಾಯಾಲಯ ಈ ಪ್ರಕರಣದ ಮೂಲಕ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುವ ಮತ್ತು ಮೇಲ್ಪಂಕ್ತಿ ಹಾಕುವ ಉದ್ದೇಶದಿಂದ ಗರಿಷ್ಠ ಶಿಕ್ಷೆ ನೀಡಲು ಮುಂದಾಗಿದ್ದಿರಬಹುದು. ದಿಲ್ಲಿ ಚುನಾವಣೆ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದ ಪ್ರವೇಶ್ ವರ್ಮ ಸೇರಿ ಹಲವು ಮಂದಿ ಹಿಂದು-ಮುಸ್ಲಿಂ ಕೋಮು ಪ್ರಚೋದನೆ ಮಾಡುವಂತಹ, ಸಾರ್ವಜನಿಕ ಹಾನಿಗೆ ಕಾರಣವಾಗುವಂತಹ ಹೇಳಿಕೆಗಳನ್ನು ನೀಡಿದ್ದುಂಟು. ಅವರ ಮೇಲೆ ಪ್ರಕರಣಗಳು ದಾಖಲಾಗಿ, ವಿಚಾರಣೆ ನಡೆಯುತ್ತಿವೆ. ಒಂದುವೇಳೆ, ಅವರ ವಿರುದ್ಧ ತೀರ್ಪು ಹೊರಬಿದ್ದು, ಅಪರಾಧಿಗಳು ಎಂದು ಸಾಬೀತಾದರೆ, ಆಗ ಕೇಂದ್ರ ಸರ್ಕಾರ ಇಷ್ಟೇ ತರಾತುರಿಯಲ್ಲಿ ಅವರನ್ನೂ ಅನರ್ಹಗೊಳಿಸುವುದೇ ಎನ್ನುವುದು ಪ್ರಶ್ನೆ.
ಸಂಸತ್ ಸದಸ್ಯತ್ವ ಮರುಸ್ಥಾಪಿಸುವ ಕಾರ್ಯವಿಧಾನದ ಪ್ರಕಾರ, ರಾಹುಲ್ ಗಾಂಧಿ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಲೋಕಸಭೆಯ ಕಾರ್ಯದರ್ಶಿಗೆ ಸಲ್ಲಿಸಿ ತಮ್ಮ ಸದಸ್ಯತ್ವ ಮರುಸ್ಥಾಪಿಸಿ ಎಂದು ಮನವಿ ಸಲ್ಲಿಸಬೇಕು. ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧುರಿ ಈಗಾಗಲೇ ಇಂಥದ್ದೊಂದು ಮನವಿಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದ್ದಾರೆ. ಸದಸ್ಯತ್ವ ಮರುಸ್ಥಾಪನೆಗೆ ಕೆಲ ಸಂದರ್ಭಗಳಲ್ಲಿ ಸಮಯ ತೆಗೆದುಕೊಳ್ಳಲಾಗಿದೆ. ಲಕ್ಷದ್ವೀಪದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್​ಸಿಪಿ) ಸಂಸದ ಮೊಹಮ್ಮದ್ ಫೈಸಲ್ ಅವರ ಸದಸ್ಯತ್ವವನ್ನು ಮಾರ್ಚ್​ನಲ್ಲಿ ಮರುಸ್ಥಾಪಿಸಲಾಯಿತು. ಕೊಲೆ ಪ್ರಕರಣವೊಂದರಲ್ಲಿ ಅವರಿಗೆ ನೀಡಲಾಗಿದ್ದ ಶಿಕ್ಷೆಗೆ ಕೇರಳ ಹೈಕೋರ್ಟ್ ತಡೆ ನೀಡಿದ ಎರಡು ತಿಂಗಳ ನಂತರ ಸದಸ್ಯತ್ವ ಮರುಸ್ಥಾಪನೆಯಾಗಿತ್ತು. ಸದಸ್ಯತ್ವ ಮರುಸ್ಥಾಪಿಸಲು ವಿಳಂಬ ಮಾಡಿದ್ದರ ಬಗ್ಗೆ ಸುಪ್ರೀಂಕೋರ್ಟ್​ಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯ ಕೆಲ ಗಂಟೆಗಳ ಮೊದಲು ಸಚಿವಾಲಯ ಮರುಸ್ಥಾಪನೆಯ ಸೂಚನೆ ನೀಡಿತ್ತು.
ಭಾರತ್ ಜೋಡೋ ಯಾತ್ರೆ ಬಳಿಕ ಈಗ ಮತ್ತೊಂದು ಅಂಥದ್ದೇ ಮಾದರಿಯ ಯಾತ್ರೆಗೆ ರಾಹುಲ್ ತಯಾರಾಗುತ್ತಿದ್ದಾರೆ. ವಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಹೆಸರು ನೀಡುವುದರಲ್ಲಿ ರಾಹುಲ್ ಮುಖ್ಯ ಪಾತ್ರವಹಿಸಿದ್ದಾರೆ. ಇಂಡಿಯಾ ಮೈತ್ರಿಕೂಟ ಬಲಗೊಳ್ಳುತ್ತಿರುವ ಬಗ್ಗೆ ಎನ್​ಡಿಎ ಮುಖ್ಯಸ್ಥರಲ್ಲಿ ಸಣ್ಣ ಆತಂಕವಿದೆ. ಇದೇ ಕಾರಣಕ್ಕೆ ಇಂಡಿಯಾ ಮೈತ್ರಿಕೂಟದ ಎರಡನೇ ಸಭೆಯ ಎರಡನೇ ದಿನವೇ ಎನ್​ಡಿಎ ಮೈತ್ರಿಕೂಟದ ಸಭೆಯನ್ನು ದೆಹಲಿಯಲ್ಲಿ ಏರ್ಪಡಿಸಲಾಗಿತ್ತು ಎನ್ನುವುದು ಗುಟ್ಟಿನ ವಿಷಯವೇನಲ್ಲ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ರಾಹುಲ್​ಗೆ ನ್ಯಾಯಾಲಯದಿಂದ ರಿಲೀಫ್ ಸಿಕ್ಕಿ, ಸಂಸತ್ ಮರುಪ್ರವೇಶಕ್ಕೆ ಹಾದಿ ಸುಗಮವಾಗಿರುವುದು ಕೈ ಪಾಳಯದ ನೈತಿಕ ಶಕ್ತಿ ಹಿಗ್ಗಿಸಿರುವುದು ಸುಳ್ಳಲ್ಲ. ಮೈತ್ರಿಕೂಟದ ಸದಸ್ಯರು ಕೂಡ ಬಿಜೆಪಿಯ ದ್ವೇಷ ರಾಜಕಾರಣಕ್ಕೆ ನ್ಯಾಯಾಲಯವೇ ಬುದ್ಧಿ ಕಲಿಸಿದೆ ಎಂದು ವಿಶ್ಲೇಷಿಸುತ್ತಿದ್ದಾರೆ. ಬರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಇದೇ ವಿಷಯವನ್ನಿಟ್ಟುಕೊಂಡು, ದ್ವೇಷದ ರಾಜಕಾರಣದಿಂದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದರು ಎಂಬ ರಾಜಕೀಯ ನಿರೂಪಣೆಯನ್ನೇ ತೇಲಿಬಿಡಲು ಕಾಂಗ್ರೆಸ್ಸಿಗರು ಸಜ್ಜಾಗುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
