|ರಾಘವ ಶರ್ಮ ನಿಡ್ಲೆನವದೆಹಲಿ
ಗುಜರಾತ್ ಸಿಎಂ ಹುದ್ದೆಗೆ ವಿಜಯ್ ರೂಪಾನಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 15 ತಿಂಗಳ ಬಳಿಕ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ಪಟೇಲ್ ಸಮುದಾಯದ ವ್ಯಕ್ತಿಯನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ ಎಂಬುದು ಬಹುತೇಕ ಖಚಿತವಾಗಿತ್ತು. ಆದರೆ, ಯಾರೊಬ್ಬರೂ ಮೊದಲ ಬಾರಿ ಶಾಸಕನಾಗಿರುವ ಭೂಪೇಂದ್ರ ಪಟೇಲ್​ರನ್ನು ಸಿಎಂ ಹುದ್ದೆಗೆ ಪರಿಗಣಿಸುತ್ತಾರೆಂದು ಕಲ್ಪಿಸಿಯೂ ಇರಲಿಲ್ಲ. ಗುಜರಾತ್ ಮಟ್ಟಿಗೆ ಇದು ಅಚ್ಚರಿಯ ಆಯ್ಕೆ ಆಗಿದ್ದರೂ, ಚುನಾವಣೆ ದೃಷ್ಟಿಯಿಂದ ಅತೃಪ್ತ ಪಟೇಲ್ ಸಮುದಾಯವನ್ನು ತೃಪ್ತಿಪಡಿಸುವ ಉದ್ದೇಶದಿಂದ ತಮ್ಮ ಸಮಾಜದೊಂದಿಗೆ ಹೆಚ್ಚು ಗುರುತಿಸಿಕೊಂಡಿರುವ ವ್ಯಕ್ತಿಗೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಮಣೆ ಹಾಕಿದ್ದಾರೆ. ಜೈನ ಸಮುದಾಯದ ವಿಜಯ್ ರೂಪಾಣಿಯವರನ್ನು ಮುಖ್ಯಮಂತ್ರಿಯನ್ನಾಗಿ ಮುಂದುವರಿಸಿದಲ್ಲಿ ಚುನಾವಣೆಯಲ್ಲಿ ನಷ್ಟ ಅನುಭವಿಸಬೇಕಾದೀತು ಎಂದೇ ಇಂಥದ್ದೊಂದು ಬದಲಾವಣೆ ಮಾಡಲಾಗಿದೆ.
ಗುಜರಾತ್ ರಾಜಧಾನಿ ಮತ್ತು ಗೃಹ ಸಚಿವ ಅಮಿತ್ ಷಾ ಅವರ ಲೋಕಸಭೆ ಕ್ಷೇತ್ರ ಗಾಂಧಿನಗರದ ವ್ಯಾಪ್ತಿಯಲ್ಲಿ ಬರುವ ಅಹಮದಾಬಾದ್ ಜಿಲ್ಲೆಗೆ ಸೇರಿದ ಘಾಟ್ ಲೋಡಿಯಾ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಭೂಪೇಂದ್ರ ಯಾದವ್ ಹಾಲಿ ಸರ್ಕಾರದಲ್ಲಿ ಮಂತ್ರಿಯೂ ಆಗಿರಲಿಲ್ಲ. ಆದರೆ, ಅಹಮದಾಬಾದ್ ನಗರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಗಮನಸೆಳೆಯುವ ಕೆಲಸ ಮಾಡಿದ್ದರು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅಥವಾ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್​ಗೆ ಸಿಎಂ ಸ್ಥಾನ ಸಿಗಲಿದೆ ಎಂಬ ಚರ್ಚೆಗಳೇ ಜೋರಾಗಿದ್ದವು.
ಭೂಪೇಂದ್ರ ಪಟೇಲ್ ಹೆಸರನ್ನು ದೆಹಲಿ ನಾಯಕರೇ ಆಯ್ಕೆ ಮಾಡಿದ್ದು ಎಂಬುದರಲ್ಲಿ ಸಂದೇಹವಿಲ್ಲ. ರಾಜ್ಯಕ್ಕೆ ಕೇಂದ್ರದ ವೀಕ್ಷಕರು (ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಲ್ಹಾದ್ ಜೋಷಿ) ತೆರಳಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಕೈಗೊಂಡಿದ್ದು ಔಪಚಾರಿಕ ಪ್ರಕ್ರಿಯೆಯ ಭಾಗ. ಬಹುತೇಕ ಕರ್ನಾಟಕ ಮಾದರಿಯಲ್ಲೇ ಗುಜರಾತ್ ಸಿಎಂ ಆಯ್ಕೆ ನಡೆದಿದೆ. ಭೂಪೇಂದ್ರ ಪಟೇಲ್ ಸೌಮ್ಯ ಸ್ವಭಾವದ, ಕ್ಲೀನ್ ಇಮೇಜ್ ಹೊಂದಿರುವ ವ್ಯಕ್ತಿ. ಅಭಿವೃದ್ಧಿ ಬಗ್ಗೆ ಉತ್ತಮ ದೃಷ್ಟಿಕೋನ ಹೊಂದಿದ್ದಾರೆ ಎನ್ನುವುದಕ್ಕೆ ಅಹ್ಮದಾಬಾದ್ ನಗರವೇ ಸಾಕ್ಷಿ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸಾಮರ್ಥ್ಯವಿರುವುದು ಅವರ ಪ್ಲಸ್ ಪಾಯಿಂಟ್ ಎನ್ನುತ್ತಾರೆ ಅಹ್ಮದಾಬಾದ್ ಮೂಲದ ಲೇಖಕ, ಕನ್ನಡಿಗ ಎಂ.ಎಸ್.ರಾವ್.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ದೆಹಲಿಗೆ ಬಂದ ನಂತರ ಸಿಎಂ ಆಗಿದ್ದ ಆನಂದಿ ಬೆನ್ ಪಟೇಲ್ ಆಗ ಘಾಟ್ ಲೋಡಿಯಾ ಶಾಸಕಿಯಾಗಿದ್ದರು. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯಪಾಲರಾದ ಬಳಿಕ ಪುತ್ರಿ ಅನರ್ ಪಟೇಲ್​ಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಹೈಕಮಾಂಡ್ ಸಮ್ಮತಿಸಿರಲಿಲ್ಲ. ಇದರಿಂದಾಗಿ ಆನಂದಿಬೆನ್ ಪಟೇಲ್ ಭೂಪೇಂದ್ರ ಪಟೇಲ್​ಗೆ ಟಿಕೆಟ್ ಕೊಡಿಸಿದ್ದರು. 2017ರ ವಿಧಾನಸಭೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ ಭೂಪೇಂದ್ರ, ಅತಿ ಹೆಚ್ಚು ಮತಗಳ (1.17 ಲಕ್ಷ) ಅಂತರದಲ್ಲಿ ಗೆದ್ದು ದಾಖಲೆ ಬರೆದಿದ್ದರು. ಕ್ಷೇತ್ರದ ಕಾರ್ಯಕರ್ತರು, ಸ್ನೇಹಿತರಿಂದ ಪ್ರೀತಿಪೂರ್ವಕವಾಗಿ ದಾದಾ ಎಂದೇ ಗುರುತಿಸಿಕೊಂಡಿದ್ದಾರೆ.
ಇಂದು ಪ್ರಮಾಣವಚನ ಸ್ವೀಕಾರ:ಗುಜರಾತ್​ನ ಹೊಸ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಟೇಲ್ ಆಯ್ಕೆ ಅವಿರೋಧವಾಗಿ ನಡೆಯಿತು. 182 ಸದಸ್ಯ ಬಲದ ಗುಜರಾತ್ ವಿಧಾನ ಸಭೆಯಲ್ಲಿ 112 ಬಿಜೆಪಿ ಶಾಸಕರಿದ್ದಾರೆ. ಸೋಮವಾರ ಪಟೇಲ್ ಮಾತ್ರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಳಿಕ ಸಚಿವ ಸಂಪುಟ ರಚನೆ ನಡೆಯಲಿದೆ ಎಂದು ಪಕ್ಷದ ರಾಜ್ಯ ಅಧ್ಯಕ್ಷ ಸಿ.ಆರ್. ಪಾಟೀಲ್ ತಿಳಿಸಿದ್ದಾರೆ.
ನಿತಿನ್ ಪಟೇಲ್​ಗೆ ಮತ್ತೆ ಬೇಸರ:2017ರ ಚುನಾವಣೆ ಗೆದ್ದ ಬಳಿಕ ಇನ್ನೇನು ತಮ್ಮನ್ನು ಸಿಎಂ ಮಾಡಿಯೇ ಬಿಟ್ಟರು ಎಂಬಂತೆ ಸಂಭ್ರಮಪಟ್ಟಿದ್ದ ಮೆಹಸಾನಾ ಕ್ಷೇತ್ರದ ಶಾಸಕ ನಿತಿನ್ ಪಟೇಲ್​ಗೆ ನಿರಾಸೆಯಾಗಿತ್ತು. ಕೊನೇ ಕ್ಷಣದಲ್ಲಿ ಅಮಿತ್ ಷಾ ಆಪ್ತ ವಿಜಯ್ ರೂಪಾನಿಗೆ ಸಿಎಂ ಹುದ್ದೆ ಒಲಿದಿತ್ತು. ನಿತಿನ್ ಪಟೇಲ್ ಗೆ ಡಿಸಿಎಂ ಸ್ಥಾನ ನೀಡಿ ಸಮಾಧಾನ ಮಾಡಲಾಗಿತ್ತು. ರೂಪಾನಿ ರಾಜೀನಾಮೆ ಹಿನ್ನೆಲೆಯಲ್ಲಿ ಈ ಬಾರಿ ಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದ ನಿತಿನ್ ಪಟೇಲ್​ಗೆ ಮತ್ತೆ ನಿರಾಸೆಯಾಗಿದೆ.
ನಿಷ್ಕಳಂಕ ವ್ಯಕ್ತಿತ್ವದ ಭೂಪೇಂದ್ರ ಪಟೇಲ್, ವಿವಾದಗಳಿಂದ ಹೊರತಾಗಿದ್ದಾರೆ. ಪಕ್ಷದ ಹೈಕಮಾಂಡ್ ಹೊಸ ಮುಖಕ್ಕೆ ಅವಕಾಶ ನೀಡಬೇಕೆಂದೇ ಈ ಕ್ರಮ ಕೈಗೊಂಡಿದೆ. ಪಕ್ಷಕ್ಕೆ ಈ ನಿರ್ಧಾರದಿಂದ ಅನುಕೂಲವಾಗಲಿದ್ದು, ಮುಂದಿನ ಚುನಾವಣೆಯನ್ನೂ ಗೆದ್ದು ನಾವು ಅಧಿಕಾರಕ್ಕೆ ಬರಲಿದ್ದೇವೆ.
|ಪ್ರಲ್ಹಾದ್ ಜೋಷಿವೀಕ್ಷಕರಾಗಿ ತೆರಳಿದ್ದ ಕೇಂದ್ರ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + two =
Remember me
