ನವದೆಹಲಿ:ಹಿರಿಯ ನಾಗರಿಕರ ಸಹಿತ ಆಯ್ದ ವಿಭಾಗಗಳಿಗೆ ಕೋವಿಡ್ ಲಸಿಕೆಯ ಮುಂಜಾಗ್ರತಾ ಡೋಸ್ ನೀಡಿಕೆ ಅಭಿಯಾನಕ್ಕೆ ದೇಶದಾದ್ಯಂತ ಸೋಮವಾರ ಚಾಲನೆ ಸಿಕ್ಕಿದ್ದು, 9 ಲಕ್ಷಕ್ಕೂ ಹೆಚ್ಚು ಮಂದಿಗೆ ಚುಚ್ಚುಮದ್ದು ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸೇವಾ ವಲಯದ ಕಾರ್ಯಕರ್ತರು, ಅನ್ಯವ್ಯಾಧಿಗಳುಳ್ಳ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25ರಂದು ಘೋಷಿಸಿದ್ದರು. ಸುಮಾರು ಒಂದು ಕೋಟಿಯಷ್ಟು ಫಲಾನುಭವಿಗಳಿಗೆ ಪ್ರಿಕಾಶನರಿ ಡೋಸ್ ಬಗ್ಗೆ ಎಸ್​ಎಂಎಸ್ ಕಳಿಸಿ ನೆನಪಿಸಲಾಗಿತ್ತು. ಹೆಚ್ಚುವರಿ ಡೋಸ್​ಗಾಗಿ ಕೋವಿನ್ ಪೋರ್ಟಲ್​ನಲ್ಲಿ ಆನ್​ಲೈನ್ ನೋಂದಣಿ ಪ್ರಕ್ರಿಯೆ ಜ.8ರಂದು ಆರಂಭವಾಗಿದೆ. ಆದರೆ, ಫಲಾನುಭವಿಗಳು ನೇರವಾಗಿ ಲಸಿಕಾ ಕೇಂದ್ರಕ್ಕೆ ಬಂದೂ ಚುಚ್ಚುಮದ್ದು ಪಡೆಯಬಹುದು. ಎರಡನೇ ಡೋಸ್ ಲಸಿಕೆ ಪಡೆದ 9 ತಿಂಗಳು ನಂತರವಷ್ಟೇ ಪ್ರಿಕಾಶನರಿ ಡೋಸ್ ಪಡೆಯಬಹುದಾಗಿದೆ. ಹಿಂದೆ ಪಡೆದಿದ್ದ ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಯನ್ನೇ ಹೆಚ್ಚುವರಿ ಡೋಸ್ ಆಗಿ ಬಳಸಲಾಗುತ್ತದೆ.
1.80 ಲಕ್ಷ ಹೊಸ ಪ್ರಕರಣ:ಸೋಮವಾರ ಬೆಳಗಿನ ವರೆಗಿನ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 1,79,723 ಹೊಸ ಸೋಂಕಿತರು ಪತ್ತೆ ಆಗಿದ್ದಾರೆ. ಇದು 227 ದಿನಗಳಲ್ಲಿ ಅತಿ ಹೆಚ್ಚಿನ ನಿತ್ಯದ ಪ್ರಕರಣವಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 3,57,07,727ಕ್ಕೆ ಏರಿದೆ. ಈ ಅವಧಿಯಲ್ಲಿ 146 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 4,83,936ಕ್ಕೆ ತಲುಪಿದೆ.
ಶೇ. 5-10 ಆಸ್ಪತ್ರೆ ದಾಖಲು ಅಗತ್ಯ:ಮೂರನೇ ಅಲೆಯ ಸಕ್ರಿಯ ಪ್ರಕರಣಗಳಲ್ಲಿ ಶೇಕಡ 5ರಿಂದ 10ರಷ್ಟು ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬೀಳಬಹುದು. ಆದರೆ ಶೀಘ್ರವೇ ಪರಿಸ್ಥಿತಿ ತ್ವರಿತವಾಗಿ ಬದಲಾಗಲೂಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ. ಹೋಮ್ ಐಸೋಲೇಷನ್ ಹಾಗೂ ಆಸ್ಪತ್ರೆಗಳಲ್ಲಿರುವ ಪ್ರಕರಣಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಅದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಎರಡನೇ ಅಲೆ ವೇಳೆ ಸಕ್ರಿಯ ಕೇಸ್​ನ ಶೇಕಡ 20-23 ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ದರು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಉಪ-ತಳಿ ಬಿಎ.1 ಹಾವಳಿ:ಒಮಿಕ್ರಾನ್ ಅವಳಿ ಪ್ರಭೇದವಾದ ಬಿಎ.1 ಭಾರತದಲ್ಲಿ ಡೆಲ್ಟಾಕ್ಕಿಂತ ಹೆಚ್ಚಿನ ಮೇಲುಗೈ ಪಡೆದಿದೆ ಎಂದು ಜಿನೋಮ್ ಸೀಕ್ವೆನ್ಸಿಂಗ್ ನಡೆಸುತ್ತಿರುವ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಬಿಎ.1 ಉಪ-ತಳಿ ಡೆಲ್ಟಾಕ್ಕಿಂತ ಮೇಲುಗೈ ಪಡೆದಿದೆ ಎಂದು ಜೈವಿಕತಂತ್ರಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಬಿಎ.1, ಬಿಎ.2 ಮತ್ತು ಬಿಎ.3 ಎಂಬ 3 ಉಪ ತಳಿಗಳನ್ನು ಒಮಿಕ್ರಾನ್ ಹೊಂದಿದೆ.
ಪುರಿ ದೇಗುಲ ಬಂದ್:ಕರೊನಾ ಹಾವಳಿ ಹೆಚ್ಚಿರುವುದರಿಂದ ಒಡಿಶಾದ ಪುರಿ ಜಗನ್ನಾಥ ಮಂದಿರಕ್ಕೆ ಜನವರಿ 10ರಿಂದ 31ರ ವರೆಗೆ ಭಕ್ತರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಕರೊನಾ ಹಾಟ್​ಸ್ಪಾಟ್ ಸಹಿತ ವಿವಿಧ ರಾಜ್ಯಗಳಿಂದ ಸಾವಿರಾರು ಜನರು ಆಗಮಿಸುವುದರಿಂದ ನಿಷೇಧ ಹೇರಲಾಗಿದೆ ಎಂದು ಪುರಿ ಜಿಲ್ಲಾಧಿಕಾರಿ ಸಮರ್ಥ್ ವರ್ವ ತಿಳಿಸಿದ್ದಾರೆ. ಆದರೆ ದೈನಿಕ ಪೂಜಾ ವಿಧಿಗಳು ನೆರವೇರುತ್ತವೆ.
2ನೇ ಅಲೆಯನ್ನು ಮೀರಿಸುವ ದೈನಿಕ ಕೇಸ್:ಭಾರತದಲ್ಲಿ ದೈನಿಕ ಪ್ರಕರಣದ ಸಂಖ್ಯೆ ಕರೊನಾದ ಎರಡನೇ ಅಲೆ ವೇಳೆ ದಾಖಲಾದ ನಿತ್ಯದ ಕೇಸ್ ಸಂಖ್ಯೆಯನ್ನು ಮೀರುವ ಸಾಧ್ಯತೆ ಯಿದೆ. ಜನವರಿ ಅಂತ್ಯದೊಳಗೆ ನಿತ್ಯದ ಕೇಸ್ 4 ಲಕ್ಷ ಮೀರಬಹುದು ಎಂದು ಕಾನ್ಪುರ ಐಐಟಿ ವಿಜ್ಞಾನಿ ಮಣೀಂದ್ರ ಅಗರವಾಲ್ ಸೋಮವಾರ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಕರಣಗಳ ಸಂಖ್ಯೆ ತ್ವರಿತವಾಗಿ ಇಳಿಮುಖವಾಗಲಿದ್ದು ಮಾರ್ಚ್ ಅಂತ್ಯದೊಳಗೆ ಕಡಿಮೆಯಾಗಲು ಅರಂಭವಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ದೆಹಲಿ, ಮುಂಬೈ ಮತ್ತು ಕೋಲ್ಕತದಲ್ಲಿ ಸೋಂಕು ಪ್ರಕರಣದಲ್ಲಿ ಭಾರಿ ಜಿಗಿತವಾಗಲಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ 10 ಲಕ್ಷ ಕೇಸ್:ಆಸ್ಟ್ರೇಲಿಯಾದಲ್ಲಿ ಒಮಿಕ್ರಾನ್ ತಳಿಯ ಹಾವಳಿ ಅಧಿಕವಾಗಿದ್ದು, ಕಳೆದ ವಾರ 10 ಲಕ್ಷ ದಾಟಿದೆ. ಸೋಂಕು ತಡೆಗೆ ಅಗತ್ಯ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಿದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಸೋಮವಾರ ಘೋಷಿಸಿದ್ದಾರೆ.
100% ವರ್ಕ್ ಫ್ರಂ ಹೋಂ:ದೆಹಲಿಯ ಎಲ್ಲ ಖಾಸಗಿ ಕಚೇರಿಗಳ ನೌಕರರು ಮನೆಗಳಿಂದಲೇ ಕೆಲಸ ನಿರ್ವಹಿಸುವಂತೆ ದೆಹಲಿ ವಿಪತ್ತು ನಿರ್ವಹಣಾ ಸಂಸ್ಥೆ (ಡಿಡಿಎಂಎ) ಕಟ್ಟಪ್ಪಣೆ ಮಾಡಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್​ಗಳಲ್ಲಿ ಆಹಾರ ಸೇವನೆ ನಿರ್ಬಂಧಿಸಿದ್ದು ಕೇವಲ ಪಾರ್ಸೆಲ್​ಗೆ ಅವಕಾಶ ನೀಡಿದೆ.
ಡೆಲ್ಟಾಕ್ರಾನ್ ತಳಿ ಲ್ಯಾಬ್​ನಿಂದಾದ ಪ್ರಮಾದವಲ್ಲ:ಹೊಸದಾಗಿ ಪತ್ತೆಯಾಗಿರುವ ಕರೊನಾ ವೈರಸ್​ನ ಡೆಲ್ಟಾಕ್ರಾನ್ ಪ್ರಭೇದವು ಪ್ರಯೋಗಾಲಯದ್ಙಲ್ಲಿ ಆಗಿರುವ ತಪ್ಪಿನ ಫಲವಲ್ಲ ಎಂದು ಅದನ್ನು ಪತ್ತೆ ಮಾಡಿರುವ ಸೈಪ್ರಸ್ ವಿಜ್ಞಾನಿ ಲಿಯೋನಿಡಸ್ ಕೋಸ್ಟ್ರಿಕಿಸ್ ಸಮರ್ಥಿಸಿಕೊಂಡಿದ್ದಾರೆ. ಇದು ಡೆಲ್ಟಾ ಮತ್ತು ಒಮಿಕ್ರಾನ್ ಪ್ರಭೇದಗಳ ಮಿಶ್ರ ಲಕ್ಷಣಗಳನ್ನು ಹೊಂದಿದೆ ಎಂದವರು ಹೇಳಿದ್ದಾರೆ. ಪ್ರಯೋಗಾಲಯದಲ್ಲಿನ ಮಾಲಿನ್ಯದಿಂದ ಹೀಗಾಗಿರಬಹುದು ಎಂದು ಕೆಲವು ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕೋಸ್ಟ್ರಿಕಿಸ್, ಅದೊಂದು ವಾಸ್ತವ ಎಂದು ಪ್ರತಿಪಾದಿಸಿದ್ದಾರೆ.
4 ಸಾವಿರ ಒಮಿಕ್ರಾನ್:27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗಿರುವ ಒಮಿಕ್ರಾನ್ ರೂಪಾಂತರಿಯ ಪ್ರಕರಣ 4,033ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,23,619ಕ್ಕೆ ಏರಿದ್ದು ಒಟ್ಟು ಸೋಂಕಿನ ಶೇಕಡ 2.03 ಆಗಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇಕಡ 96.62ಕ್ಕೆ ಕುಸಿದಿದೆ ಎಂದು ಆರೋಗ್ಯ ಸಚಿವಾಲಯ ವಿವರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
