ನವದೆಹಲಿ:ಭಾರತದಲ್ಲಿ ಜನಸಂಖ್ಯೆ ವಿಪರೀತ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನಸಂಖ್ಯಾ ತಡೆ ಕಾನೂನು ಜಾರಿಯಾಗಬೇಕೆಂಬ ಸಾರ್ವಜನಿಕ ಒತ್ತಾಯ ಹೆಚ್ಚುತ್ತಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್​ನಲ್ಲೂ ಹಲವು ಅರ್ಜಿಗಳು ದಾಖಲಾಗಿವೆ. ಈ ನಡುವೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತೊಮ್ಮೆ ಜನಸಂಖ್ಯೆ ತಡೆ ನೀತಿಯ ಅಗತ್ಯದ ಬಗ್ಗೆ ಒತ್ತಿ ಹೇಳಿರುವುದು ಮಹತ್ವ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಜನಸಂಖ್ಯೆ ತಡೆ ಕಾನೂನು ಜಾರಿಗೆ ತರುವ ಉದ್ದೇಶ ಹೊಂದಿದೆ ಎಂದು ಕೆಲ ಕೇಂದ್ರ ಸಚಿವರೂ ಈ ಹಿಂದೆ ಹೇಳಿಕೆ ನೀಡಿದ್ದರು.
ಆರ್​ಎಸ್​ಎಸ್ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ನಾಗ್ಪುರದ ರೇಷಿಂಬಾಗ್​ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, 2030ರ ವೇಳೆಗೆ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವ ಬಗ್ಗೆ ಈಗಾಗಲೇ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನಸಂಖ್ಯೆ ತಡೆ ಮತ್ತು ನಿರ್ವಹಣೆಗೆ ಸೂಕ್ತ ಕಾನೂನು ತರಬೇಕು ಎಂಬ ಪರೋಕ್ಷ ಸಂದೇಶ ರವಾನಿಸಿದರು.
ಜನಸಂಖ್ಯೆಯ ಸಮತೋಲನ:ಜನಸಂಖ್ಯೆ ಪರಿಸರದ ಮೇಲೂ ಪರಿಣಾಮ ಬೀರುತ್ತದೆ ಎಂದ ಭಾಗವತ್, ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜನಸಂಖ್ಯಾ ನೀತಿ ರೂಪಿಸಬೇಕು. ಈ ಕಾನೂನು ಎಲ್ಲರಿಗೂ ಅನ್ವಯವಾಗಬೇಕು. ಆಗ ಮಾತ್ರ ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳು ಫಲಿತಾಂಶ ನೀಡುತ್ತವೆ. 21ನೇ ಶತಮಾನದಲ್ಲಿ ಇಂಡೋನೇಷ್ಯಾ, ಸುಡಾನ್, ಸರ್ಬಿಯಾ ದೇಶದ ಪ್ರಾಂತ್ಯಗಳಲ್ಲಿ ಅಸ್ತಿತ್ವಕ್ಕೆ ಬಂದ ಮೂರು ಹೊಸ ದೇಶಗಳಾದ ಪೂರ್ವ ತಿಮೋರ್, ದಕ್ಷಿಣ ಸುಡಾನ್ ಮತ್ತು ಕೊಸೊವೊ ಜನಸಂಖ್ಯೆಯ ಅಸಮತೋಲನದಿಂದ ಹುಟ್ಟಿವೆ.
ಜನಸಂಖ್ಯೆಯ ಅಸಮತೋಲನವು ಭೌಗೋಳಿಕತೆಯಲ್ಲಿನ ಬದಲಾವಣೆಗಳಿಗೆ ಕಾರಣವಾಗುತ್ತವೆ. ಜನನ ಪ್ರಮಾಣದಲ್ಲಿನ ವ್ಯತ್ಯಾಸ, ಒತ್ತಾಯದ ಮತಾಂತರ, ಅಕ್ರಮ ಒಳನುಸುಳುವಿಕೆ ಎಲ್ಲವೂ ಇದಕ್ಕೆ ಕಾರಣಗಳು. ಈ ಎಲ್ಲ ಅಂಶಗಳನ್ನು ಸರ್ಕಾರ ಪರಿಗಣಿಸಬೇಕು. ಜನಸಂಖ್ಯೆ ನಿಯಂತ್ರಣ ಮತ್ತು ಧರ್ವಧಾರಿತ ಜನಸಂಖ್ಯೆಯ ಸಮತೋಲನದಂತಹ ಪ್ರಮುಖ ವಿಚಾರವನ್ನು ಇನ್ನು ಮುಂದೆ ನಿರ್ಲಕ್ಷಿಸಬಾರದು ಎಂದು ಪ್ರತಿಪಾದಿಸಿದ್ದಾರೆ.
ವಿಚಾರಣೆ ಹಂತದಲ್ಲಿ ಅರ್ಜಿಗಳು:ಜನಸಂಖ್ಯೆ ತಡೆಗೆ ಕಾನೂನು ಜಾರಿಗೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್​ಗೆ ವಕೀಲ ಆಶ್ವಿನಿ ಉಪಾಧ್ಯಾಯ ಸೇರಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದೆ, ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಮೊಮ್ಮಗ ಫಿರೋಜ್ ಭಕ್ತ್ ಅಹ್ಮದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅನಿರುದ್ಧ ಬೋಸ್ ನೇತೃತ್ವದ ನ್ಯಾಯಪೀಠ ನೊಟೀಸ್ ಜಾರಿ ಮಾಡಿತ್ತು. ಅದೇ ರೀತಿ ಪರ್ಯಾಯವಾಗಿ, ಜನಸಂಖ್ಯೆಯನ್ನು ನಿಯಂತ್ರಿಸುವ ಮಾರ್ಗಸೂಚಿಯನ್ನು 3 ತಿಂಗಳೊಳಗೆ ಸಿದ್ಧಪಡಿಸುವ ಬಗ್ಗೆ ಸಮಗ್ರ ವರದಿ ರೂಪಿಸಲು ರಾಷ್ಟ್ರೀಯ ಕಾನೂನು ಆಯೋಗಕ್ಕೂ ನ್ಯಾಯಾಲಯ ಸೂಚನೆ ನೀಡಿತ್ತು. ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ನೀಡಲಿರುವ ಉತ್ತರದಲ್ಲಿ ಜನಸಂಖ್ಯಾ ತಡೆ ಕುರಿತ ಸಂಭವನೀಯ ಕಾನೂನಿನ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆಗಳಿವೆ. ಇದು ದೇಶದ ಆಡಳಿತ ಮತ್ತು ಕಾನೂನಿಗೆ ಸಂಬಂಧಿಸಿದ ವಿಷಯವೇ ಆಗಿರುವುದರಿಂದ ಸೂಕ್ತ ಕಾನೂನು ರಚಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲೆಯೇ ಇರಲಿದೆ. ಸಂಸತ್ತಿನಲ್ಲಿ ಈ ಹಿಂದೆ 35 ಬಾರಿ ಜನಸಂಖ್ಯೆ ತಡೆ ಮಸೂದೆ ಮಂಡನೆಯಾಗಿದೆ. ಆದರೆ, ಮುಸ್ಲಿಂ ಧರ್ವಿುಯರು, ವಿಚ್ಛೇದಿತರ ಅಗತ್ಯತೆ ಸೇರಿದಂತೆ ಹಲವು ಅಂಶಗಳನ್ನು ಒಳಗೊಳ್ಳದ ಈ ಮಸೂದೆಗಳು ತಿರಸ್ಕೃತಗೊಂಡಿದ್ದವು. ಹೀಗಾಗಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಮಗ್ರ ಮಸೂದೆ ಮಂಡನೆಗೆ ಮುಂದಾಗುವುದೇ ಎನ್ನುವುದು ಸದ್ಯದ ಪ್ರಶ್ನೆ.
ಆರ್​ಎಸ್​ಎಸ್ ನಿರ್ಣಯಗಳು:ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ ಎರಡು ದಶಕಗಳಲ್ಲಿ ಎರಡು ಬಾರಿ (2004, 2015) ಜನಸಂಖ್ಯೆ ನಿಯಂತ್ರಣ ನೀತಿಯ ನಿರ್ಣಯಗಳನ್ನು ಅನುಮೋದಿಸಿದೆ. ಮತಾಂತರ ತಡೆ, ರಾಷ್ಟ್ರೀಯ ನಾಗರಿಕ ನೋಂದಣಿ (ಎನ್​ಆರ್​ಸಿ), ಅಕ್ರಮ ವಲಸೆ ಕುರಿತ ನೀತಿಗಳೂ ಇದರಲ್ಲಿ ಒಳಗೊಂಡಿವೆ. ದೇಶದಲ್ಲಿ ಸಂಪನ್ಮೂಲಗಳ ಲಭ್ಯತೆ, ಭವಿಷ್ಯದ ಅಗತ್ಯಗಳು ಮತ್ತು ಜನಸಂಖ್ಯಾ ಅಸಮತೋಲನದ ಸಮಸ್ಯೆಗೆ ಪರಿಹಾರ ರೂಪಿಸುವ ಪರಿಣಾಮಕಾರಿ ಕಾನೂನುಗಳ ಜಾರಿಗೆ ಸಂಘ ನಿರ್ಣಯ ಮಾಡಿ ದೇಶದ ಮುಸ್ಲಿಮರು ಸೇರಿ ಎಲ್ಲರಿಗೂ ಸಮಾನ ಕಾನೂನು ಎಂಬ ಸಂದೇಶ ರವಾನಿಸಿತ್ತು. ಭಾಗವತ್ ಅವರಿಗೆ ಕೇಂದ್ರ ಚುನಾವಣಾ ಆಯೋಗ ಮಾಜಿ ಮುಖ್ಯಸ್ಥ ಎಸ್.ವೈ. ಖುರೇಶಿ ಅವರು ತಮ್ಮ ‘ದಿ ಪಾಪ್ಯುಲೇಷನ್ ಮಿಥ್: ಇಸ್ಲಾಂ, ಫ್ಯಾಮಿಲಿ ಪ್ಲಾನಿಂಗ್ ಆಂಡ್ ಪಾಲಿಟಿಕ್ಸ್ ಇನ್ ಇಂಡಿಯಾ’ ಎಂಬ ಪುಸ್ತಕವನ್ನು ಈಚೆಗೆ ಉಡುಗೊರೆಯಾಗಿ ನೀಡಿದ್ದರು. ಈ ಪುಸ್ತಕದಲ್ಲಿ ಜನಸಂಖ್ಯೆಯ ಮಾಹಿತಿ, ಅಂಕಿ-ಅಂಶಗಳ ಬಗ್ಗೆ ಬಲಪಂಥೀಯ ಚಿಂತಕರ ಏಕಮುಖ ವಿಶ್ಲೇಷಣೆಯಿಂದಾಗಿ ಮುಸ್ಲಿಂ ಧರ್ವಿುಯರ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಅಭಿಪ್ರಾಯ ರೂಪುಗೊಂಡಿದೆ ಎಂದವರು ದಾಖಲಿಸಿದ್ದಾರೆ. ಈ ಪುಸ್ತಕ ಸಿಕ್ಕ ಕೆಲ ದಿನಗಳ ಬಳಿಕ ಭಾಗವತ್ ಈ ಹೇಳಿಕೆ ನೀಡಿರುವುದು ಗಮನಾರ್ಹ.
ರಾಜ್ಯಗಳ ನಿಲುವು:2017ರಲ್ಲಿ ಅಸ್ಸಾಂ ವಿಧಾನಸಭೆ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿ ಅಂಗೀಕರಿಸಿತ್ತು. ಇಬ್ಬರು ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಸರ್ಕಾರಿ ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ ಮತ್ತು ಅಸ್ತಿತ್ವದಲ್ಲಿರುವ ಸರ್ಕಾರಿ ನೌಕರರು ಎರಡು ಮಕ್ಕಳ ಕುಟುಂಬದ ಮಾನದಂಡ ಅನುಸರಿಸಲು ಈ ಮೂಲಕ ನಿರ್ದೇಶಿಸಲಾಗಿತ್ತು. 2021ರಲ್ಲಿ ಅಸ್ಸಾಂನ ನೀತಿಯಲ್ಲಿ ತಿದ್ದುಪಡಿ ತರಲಾಗಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರನ್ನು ಸರ್ಕಾರಿ ಉದ್ಯೋಗಗಳ ಅವಕಾಶದಿಂದ ಹೊರಗಿಡಲಾಗಿದೆ. 2021ರಲ್ಲಿ, ಉತ್ತರಪ್ರದೇಶದ ಕಾನೂನು ಆಯೋಗವು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿ ಸರ್ಕಾರದ ಸಬ್ಸಿಡಿ ಪಡೆಯುವುದನ್ನು ತಡೆಯುವ ಪ್ರಸ್ತಾವ ಮುಂದಿಟ್ಟಿದೆ. ಈ ಕರಡು ಮಸೂದೆ ಸರ್ಕಾರದ ಪರಿಶೀಲನೆಯಲ್ಲಿದೆ.
ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿದ್ದ ಭಾಗವತ್:ದೇಶದಲ್ಲಿ ಸಾಮರಸ್ಯ ಕಾಪಾಡುವ ಹಾಗೂ ಜ್ವಲಂತ ವಿಷಯಗಳ ಬಗ್ಗೆ ರ್ಚಚಿಸಲು ಸೆ.23ರಂದು ಭಾಗವತ್ ದೆಹಲಿಯಲ್ಲಿ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್​ನ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿಯವರನ್ನು ಭೇಟಿ ಮಾಡಿದ್ದರು. ಸಂಘದ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಭಾಗವತ್​ರನ್ನು ‘ರಾಷ್ಟ್ರಪಿತ’ ಎಂದು ಬಣ್ಣಿಸಿದ್ದ ಇಲ್ಯಾಸಿ, ದೇಶಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ನಾವು ರ್ಚಚಿಸಿದ್ದೇವೆ ಎಂದಿದ್ದರು. ದೇಶದಲ್ಲಿ ಜನಸಂಖ್ಯೆ ತಡೆ ಕಾನೂನು ಜಾರಿಗೆ ತರುವ ಅಗತ್ಯದ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆಯಾಗಿತ್ತು; ಇದಕ್ಕಾಗಿ ಮುಸ್ಲಿಂ ಧರ್ವಿುಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗಿಯೇ ಭಾಗವತ್ ಈ ಭೇಟಿ ಕೈಗೊಂಡಿದ್ದರು ಎಂಬ ವಿಶ್ಲೇಷಣೆಗಳಿವೆ.
ಜನಸಂಖ್ಯೆ ಇದೇ ರೀತಿಯಲ್ಲಿ ಏರುತ್ತಿದ್ದರೆ 50 ವರ್ಷಗಳ ನಂತರ ನಮ್ಮ ದೇಶ ಎಷ್ಟು ಜನರಿಗೆ ಆಹಾರ ನೀಡುವ ಸ್ಥಿತಿಯಲ್ಲಿರಲಿದೆ? ಜನರಿಗೆ ಯಾವ ರೀತಿಯ ಶಿಕ್ಷಣ ಮತ್ತು ಆರೋಗ್ಯ ಒದಗಿಸಬಹುದು ಎಂಬ ಅವಲೋಕನ ಮಾಡಬೇಕು. ಜನಸಂಖ್ಯೆ ಜತೆಗೆ, ಅದರ ನಿರ್ವಹಣೆಗೆ ಅಷ್ಟೇ ಸಂಪನ್ಮೂಲಗಳೂ ಬೇಕು. ಆದರೆ, ಸಂಖ್ಯೆ ಬೆಳೆಯುತ್ತಲೇ ಇದ್ದರೆ ದೇಶಕ್ಕದು ದೊಡ್ಡ ಹೊರೆ ಅಥವಾ ಅಸಹನೀಯ ವಾಗಬಹುದು.
|ಮೋಹನ್ ಭಾಗವತ್ಆರ್​ಎಸ್​ಎಸ್ ​ಸರಸಂಘಚಾಲಕ
ಬೆಂಗಳೂರು:ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ, ಸಂಘ-ಪರಿವಾರದ ಆಶಯದಂತೆ ಮೂರು ಕಾಯ್ದೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾರಿಗೊಳಿಸಿದ್ದು, ಈಗ ಮತ್ತೊಂದು ಪ್ರಮುಖ ಸವಾಲು ಎದುರಾಗಿದೆ.
ಆರ್​ಎಸ್​ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್ ವಿಜಯದಶಮಿ ಭಾಷಣದಲ್ಲಿ ಜನಸಂಖ್ಯಾ ತಡೆಯ ಅಗತ್ಯವನ್ನು ಪ್ರತಿಪಾದಿಸಿರುವುದು ಕೇಂದ್ರ ಸರ್ಕಾರ ಮಾತ್ರವಲ್ಲ, ಬಿಜೆಪಿ ಆಡಳಿತವಿರುವ ರಾಜ್ಯಗಳಿಗೂ ನೀಡಿದ ಸ್ಪಷ್ಟ ಸಂದೇಶವೆಂಬ ವ್ಯಾಖ್ಯಾನವು ಪಕ್ಷದಲ್ಲಿ ಆಂತರಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಮತಾಂತರ ನಿಷೇಧ ಕಾನೂನು ಜಾರಿಗೆ ಬಂದಿದೆ. ಇದೀಗ ಜನಸಂಖ್ಯೆ ಸಮಸ್ಯೆಯತ್ತ ಚಿತ್ತ ಹರಿಸುವ ಅನಿವಾರ್ಯತೆ ಬೊಮ್ಮಾಯಿಗೆ ಎದುರಾಗಿದೆ ಎಂದು ರ್ತಸಲಾಗುತ್ತಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಈ ಹಿಂದೆ ಇಂತಹ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಅಗತ್ಯವಿದೆ ಎಂದಿದ್ದರೆ, ಪಕ್ಷದ ಹಲವು ನಾಯಕರೂ ದನಿಗೂಡಿಸಿದ್ದರು. ಆರ್​ಎಸ್​ಎಸ್ ಮುಖ್ಯಸ್ಥರ ಭಾಷಣವು ವಿಷಯ ಪ್ರಸ್ತಾಪಿಸಿದ ನಾಯಕರಿಗೆ ಪ್ರೇರಣೆ ನೀಡಲಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆಗಳಿವೆ.
ಕಾಂತಾರ: ಒಂದಕ್ಕೂ ನಾಲ್ಕಕ್ಕೂ ನಡುವೆ ಎಷ್ಟು ಅಂತರ!?; ಬದಲಾಯ್ತು ರಿಷಬ್ ‘ಸ್ಟೇಟಸ್​’

ನೀವು ಈ ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರಿಕೆ..​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − six =
Remember me
