|ಡಾ. ಕೆ. ವಿದ್ಯಾಶಂಕರ್ಹಿರಿಯ ಪತ್ರಕರ್ತರು, ಆರ್ಥಿಕ ಚಿಂತಕರು
ಈಗಾಗಲೇ ಕೋವಿಡ್​ನಿಂದ ಆರ್ಥಿಕವಾಗಿ ಬಳಲುತ್ತಿರುವ ಜನಸಾಮಾನ್ಯರಿಗೆ ಹೊಸ ಸಂಕಟ ತರುವ ಹಲವು ಅಂಶಗಳು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು 4ನೇ ಬಾರಿಗೆ ಮಂಡಿಸಿದ ಬಜೆಟ್​ನಲ್ಲಿವೆ. ದಿನೇದಿನೇ ವಿಷದಂತೆ ಏರುತ್ತಿರುವ ಪೆಟ್ರೋಲ್, ಡೀಸೆಲ್ ದರಕ್ಕೆ ಇನ್ನೂ ಚುರುಕು ಮುಟ್ಟಿಸಿದೆ ಈ ಬಜೆಟ್. ಇದರಿಂದ ನಿತ್ಯ ಜೀವನದಲ್ಲಿ ಸ್ಪೋಟಕ ಬೆಲೆ ಏರಿಕೆ ಆಗುತ್ತದೆ. ಪೆಟ್ರೋಲ್ ಬೆಲೆ ಲೀಟರ್​ಗೆ 7 ರೂ. ಇದ್ದಾಗ ಎರಡು ಇಡ್ಲಿ ಬೆಲೆ 10 ಪೈಸೆ ಇತ್ತು. ಪೆಟ್ರೋಲ್ ಬೆಲೆ 70 ರೂ.ಗೆ ಏರಿದಾಗ ಇಡ್ಲಿ ಬೆಲೆ 20 ರೂ.ಗೆ ಏರಿದೆ. ಇದು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ಸ್ಪೋಟಕ ದುಬಾರಿ ಏರಿಕೆ ಆಗುತ್ತದೆ. ಇದಲ್ಲದೆ ಕೃಷಿ ಸೆಸ್ ಎಂದು ಜನಸಾಮಾನ್ಯರು ಬಳಸುವ ಆಹಾರ ಪದಾರ್ಥಗಳ ಮೇಲೆ ಭಾರ ಹೇರಿರುವುದು ಅಪಾಯಕಾರಿ ನಡೆ.
ಕಳೆದ ಮೂರು ವರ್ಷಗಳಿಂದ ಜನಸಾಮಾನ್ಯರ ಬದುಕು ಮೂರಾಬಟ್ಟೆ ಆಗಿದೆ. ಇದಕ್ಕೆ ಕಾರಣಗಳು ಅನೇಕ. 3 ವರ್ಷಗಳಿಂದ ಪ್ರವಾಹ, ಅದಕ್ಕೂ ಮೊದಲು 5 ವರ್ಷ ಬರಗಾಲ. ಹೀಗಾಗಿ ಜನರ ಬದುಕು ದುರ್ಭರ. ಕೊಳ್ಳುವ ಶಕ್ತಿ ಜನರಲ್ಲಿ ಕಡಿಮೆ ಆಗಿದೆ; ಪದಾರ್ಥಗಳಿಗೆ ಬೇಡಿಕೆ ಕೊರತೆ ಉಗ್ರವಾಗಿದೆ. ಕಳೆದ 3 ವರ್ಷಗಳಿಂದ ದೇಶದಲ್ಲಿ ಆರ್ಥಿಕ ಹಿನ್ನಡೆ ಇರಲು ಇದೇ ಕಾರಣ. ಇಂಥ ಹಿನ್ನೆಲೆಯಲ್ಲಿ ಅರ್ಥ ವ್ಯವಸ್ಥೆಯ ಏಳಿಗೆಗೆ ಬೇಕಾದ ಬೇಡಿಕೆ ಹೆಚ್ಚಿಸುವ ಕಾರ್ಯ ಆಗಬೇಕಿತ್ತು. ಆದರೆ ತದ್ವಿರುದ್ದ ಆಗಿದೆ. ಜನಸಾಮಾನ್ಯರ ಕೊಳ್ಳುವ ಶಕ್ತಿಯು ಈ ಬಜೆಟ್​ನಿಂದ ಇನ್ನೂ ಕುಸಿಯುತ್ತದೆ.
ಹಲವಾರು ಘೋಷಣೆಗಳು, ಯೋಜನೆಗಳು ಈ ಬಜೆಟ್​ನಲ್ಲಿ ಇವೆ. ಎಲ್ಲರಿಗೂ ಸುಖ ಎನ್ನುವ ಪರಿ ಮೊದಲ ನೋಟದಲ್ಲಿ ಕಂಡುಬರಬಹುದು. ಆದರೆ ನಿಜ ಬೇರೆ ಇದೆ. ಮಂತ್ರಕ್ಕಿಂತ ಉಗುಳೇ ಇಲ್ಲಿ ಜಾಸ್ತಿ ಇದೆ. ಇದನ್ನು ಕಾಣಬೇಕಾದರೆ ನೀವು ಸರ್ಕಾರದ ಖರ್ಚಿನ ಬಾಬ್ತು ತೆರೆದು ನೋಡಿ.
ಕೃಷಿ ಇಲಾಖೆ ಖರ್ಚು 2020-21ರಲ್ಲಿ 1.34 ಲಕ್ಷ ಕೋಟಿ ಅಂದಾಜು ಇತ್ತು; ಇದು ಪರಿಷ್ಕೃತ ಅಂದಾಜಿನಲ್ಲಿ 1.56 ಲಕ್ಷ ಕೋಟಿ ರೂ.ಗೆ ಇಳಿಯಿತು. ಈಗ 2021ರ ಅಂದಾಜು ವೆಚ್ಚ 1.23 ಲಕ್ಷ ಕೋಟಿ ರೂ.ಗಳಲ್ಲಿ ಇದೆ. ಅಂದರೆ ಹೋದ ವರ್ಷದ ಅಂದಾಜು ವೆಚ್ಚಕ್ಕಿಂತ ಇದು ಕಡಿಮೆ. ಗೊಬ್ಬರ ಇಲಾಖೆ ಖರ್ಚು ಆಗ 71345 ಕೋಟಿ ರೂ. ಇದ್ದುದು ಪರಿಷ್ಕೃತ ಅಂದಾಜಿನಲ್ಲಿ ಸುಮಾರು ದುಪ್ಪಟ್ಟಾಗಿ 1.34 ಲಕ್ಷ ಕೋಟಿಗೆ ಏರಿದ್ದು ಈ ಬಜೆಟ್​ನಲ್ಲಿ 80011 ಕೋಟಿ ರೂ.ಗೆ ಇಳಿದಿದೆ. ಇದು ಕೃಷಿ ಕ್ಷೇತ್ರದ ಚಿತ್ರ.
ಇನ್ನು ಆಹಾರ ಪೂರೈಕೆ ಇಲಾಖೆ ಬಾಬ್ತು ನೋಡಿ. ಹೋದ ಬಜೆಟ್ 1.22 ಲಕ್ಷ ಕೋಟಿ ಅಂದರೂ ಅದು 4.38 ಲಕ್ಷ ಕೋಟಿ ರೂ.ಗೆ ಪರಿಷ್ಕೃತವಾಯಿತು. ಈ ಬಜೆಟ್​ನಲ್ಲಿ 2.53 ಲಕ್ಷ ಕೋಟಿಗೆ ಅದು ಇಳಿದಿದೆ. ಅಂದರೆ ಪುಕ್ಕಟೆ ರೇಷನ್ ಕಾಲ ಇಲ್ಲ ಎಂದಾಯಿತು. ಹಾಗೆಯೇ ಆಹಾರ ಬೆಲೆ ದುಬಾರಿಯೂ ಆಗುತ್ತಿದೆ. ಇಡೀ ಜನಸ್ತೋಮದ ಖರ್ಚು ಅಂದರೆ ಕೃಷಿ ಮತ್ತು ಆಹಾರದ್ದು ಇಷ್ಟಾದರೆ ಕೇಂದ್ರ ಸರ್ಕಾರದ ಬೇರೆ ಖರ್ಚುಗಳು ತುಂಬಾ ಗಾತ್ರದ್ದು. ಕೃಷಿಗೆ, ಜನಕಲ್ಯಾಣಕ್ಕೆ ಆಗುವ ಕೇಂದ್ರದ ಖರ್ಚು ತುಂಬಾ ಕಡಿಮೆ. ಇದು ಗೊತ್ತಾಗಬೇಕಾದರೆ ಈ ಲೆಕ್ಕ ನೋಡಿ. ಹೋದ ಬಜೆಟ್​ನಲ್ಲಿ ಬಡ್ಡಿ ಬಾಬ್ತು 6.92 ಲಕ್ಷ ಕೋಟಿ ಎಂಬುವ ಅಂದಾಜು. ಅದು ಪರಿಷ್ಕೃತವಾಗಿ 8.09 ಲಕ್ಷ ಕೋಟಿಗೆ ಏರಿದೆ. ಈಗ ಅದು 7.08 ಲಕ್ಷ ಕೋಟಿ ರೂ. ಆಗುವ ಅಂದಾಜಿದೆ. ಅಂದಾಜು ವೆಚ್ಚಕ್ಕೂ ಪರಿಷ್ಕೃತ ಅಂದಾಜಿಗೂ ಇರುವ ಅಂತರವೇ ಸಾಕು ಕೃಷಿ ಬಜೆಟ್​ಗೆ.
‘ಆತ್ಮನಿರ್ಭರ’ ವಿಚಾರವು ದೊಡ್ಡದಾಗಿಯೇ ಬಜೆಟ್​ನಲ್ಲಿ ಬಂದಿದೆ. ಅದು ಸಹಜ. ಅದರ ಬಾಬ್ತು ಎಷ್ಟು ದೊಡ್ಡದು ಅಂದರೆ ಅದು ಹೋದ ವರ್ಷದ ಬಜೆಟ್​ನ ಶೇ. 90 ಭಾಗ ಆಗಿದೆ. ಹೋದ ಬಜೆಟ್ ಗಾತ್ರ 30.42 ಲಕ್ಷ ಕೋಟಿ ಇದ್ದರೆ ಅದು 36.50 ಲಕ್ಷ ಕೋಟಿ ರೂ.ಗೆ ಪರಿಷ್ಕೃತ ಆಯಿತು. ಈ ಬಜೆಟ್​ನ ಖರ್ಚು 34.83 ಲಕ್ಷ ಕೋಟಿ ರೂ. ಪಾಲು ಆಗಿದೆ. ಇದರಲ್ಲಿ 12 ಲಕ್ಷ ಕೋಟಿ ರೂ. ಸಾಲದಿಂದ ಬರುತ್ತಿದೆ. ಅಂದರೆ ಸರ್ಕಾರದ ಆದಾಯದಲ್ಲಿ ಶೇ. 36 ಪಾಲು ಸಾಲದಿಂದ ಬರುತ್ತಿದೆ. ಸರ್ಕಾರದ ಖರ್ಚಿನಲ್ಲಿ ಶೇ. 20 ಭಾಗ ಬಡ್ಡಿಗೆ ಹೋಗುತ್ತಿದೆ. ಪಿಂಚಣಿ ಖರ್ಚು ಶೇ. 5 ಆಗಿದೆ. ಹೀಗಾಗಿ ಸರ್ಕಾರದ ಖರ್ಚಿನಲ್ಲಿ ನಿತ್ಯನಿರ್ವಹಣೆಗೇ ಸಿಂಹಪಾಲು ಹೋಗುತ್ತಿದೆ. ಪ್ರಗತಿಯ ಕಾರ್ಯಕ್ರಮಗಳಿಗೆ ಹಣದ ಅನುಕೂಲ ಇಲ್ಲವಾಗಿದೆ. ಇದೇ ಕಾರಣದಿಂದ ಇಡೀ ದೇಶ ಕೋವಿಡ್​ನಿಂದ ತತ್ತರಿಸಿದರೆ ಸರ್ಕಾರದ ಆರ್ಥಿಕ ಸ್ಥಿತಿ ಈಗ ಶೋಚನೀಯವಾಗಿದೆ. ವಿತ್ತೀಯ ಕೊರತೆ ಅಂದರೆ ಸರ್ಕಾರ ಮಾಡುವ ಖರ್ಚುಗಳೂ, ಅದರ ಆದಾಯಕ್ಕೂ ಅಂತರ ಈಗ ಶೇ. 9.5 ಮುಟ್ಟಿದೆ. ಶೇ. 3ಕ್ಕೆ ತರುವ ಆಶಯ ಹೋದ ಬಜೆಟ್​ನಲ್ಲಿ ಇತ್ತು. ಈಗ ಮೂರು ಪಟ್ಟು ಏರಿದೆ. 2008ರ ಬಳಿಕ ದೇಶದ ಆರ್ಥಿಕ ಸಂಕಟ ಐದು ವರ್ಷ ಕಾಡಿದಾಗಲೂ ಈ ವಿತ್ತೀಯ ಕೊರತೆ ಶೇ. ಆರರ ಬಳಿ ಇತ್ತು. ಈಗ ನಿಜಕ್ಕೂ ಕಷ್ಟದಲ್ಲಿದೆ ಸರ್ಕಾರದ ಹಣಕಾಸು. ಇದು ಜನಸಾಮಾನ್ಯರಿಗೂ ಕುತ್ತು. ಸರ್ಕಾರ ಜಾಸ್ತಿ ಸಾಲ ಮಾಡಿದರೆ ಬ್ಯಾಂಕ್ ಬಡ್ಡಿ ದರ ಏರುತ್ತದೆ. ಜನರು ಸಾಲಕ್ಕೆ ಹೆಚ್ಚು ಬಡ್ಡಿ ನೀಡಬೇಕಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
