ಮುಂಬೈ: ಭಾರತವನ್ನು ಧರ್ಮದ ಆಧಾರದಲ್ಲಿ ವಿಭಜಿಸಿದ, ಸ್ವಾತಂತ್ರ್ಯದ ನಂತರ ಜಾತಿ-ಜಾತಿಗಳನ್ನು ವಿಭಜಿಸಿದ ಕಾಂಗ್ರೆಸ್ ದೇಶದ ಬಜೆಟ್​ನ್ನು ಕೂಡ ಧರ್ಮದ ಆಧಾರದಲ್ಲಿ ಹಂಚುವ ಅಪಾಯಕಾರಿ ಚಿಂತನೆಯನ್ನು ಹೊಂದಿದೆ. ಒಟ್ಟು ಬಜೆಟ್​ನಲ್ಲಿ ಶೇಕಡ 15ರಷ್ಟನ್ನು ಅಲ್ಪಸಂಖ್ಯಾತರಿಗಾಗಿಯೇ ಖರ್ಚು ಮಾಡುವ ಉದ್ದೇಶ ಕಾಂಗ್ರೆಸ್ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದರು.
ಬುಧವಾರ ಮಹಾರಾಷ್ಟ್ರದಲ್ಲಿ ಸರಣಿ ರ್ಯಾಲಿಗಳನ್ನು ನಡೆಸಿದ ಮೋದಿ, ಕಾಂಗ್ರೆಸ್ ವಿರುದ್ಧ ವಾಕ್ ಪ್ರಕಾರ ನಡೆಸಿದರು. ನಕಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮತ್ತು ನಕಲಿ ಎನ್​ಸಿಪಿ (ಶರದ್ ಪವಾರ್ ಬಣ) ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್​ನಲ್ಲಿ ವಿಲೀನಗೊಳ್ಳಲಿವೆ. ನಕಲಿ ಶಿವಸೇನೆ ಬಾಳಾಸಾಹೇಬ್ ಠಾಕ್ರೆಯವರ ಕನಸುಗಳನ್ನು ನುಚ್ಚುನೂರಾಗಿಸಿರುವುದರ ಬಗ್ಗೆ ಬೇಸರವಾಗುತ್ತಿದೆ. ಶಿವಸೇನೆ ಯಾವಾಗ ಕಾಂಗ್ರೆಸ್ ದಾರಿಯಲ್ಲಿ ನಡೆಯುತ್ತದೆಯೋ, ಅಂದು ಶಿವಸೇನೆ ಅಂತ್ಯವಾಗುತ್ತದೆ ಎಂದು ಬಾಳಾ ಠಾಕ್ರೆ ಹೇಳಿದ್ದರು. ಉದ್ಧವ್​ರ ಶಿವಸೇನೆ ಇಂದು ಇಂಥ ವಿನಾಶಕ್ಕೆ ತಲುಪಿದೆ. ಕಾಂಗ್ರೆಸ್ ವೋಟ್​ಬ್ಯಾಂಕಿಗಾಗಿ ರಾಮ ಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸಿತು, ಮಂದಿರ ನಿರ್ವಣದ ಬಗ್ಗೆ ವಿಚಿತ್ರ ಹೇಳಿಕೆಗಳನ್ನು ನೀಡಿತು. ಆದರೂ, ನಕಲಿ ಶಿವಸೇನೆ ಮೌನವಾಗಿತ್ತು. ಕಾಂಗ್ರೆಸ್ಸಿನ ಹಾದಿಯನ್ನೇ ಅದು ಆಯ್ದುಕೊಂಡಿತು ಎಂದ ಮೋದಿ, ಈ ಬೆಳವಣಿಗೆಗಳು ಬಾಳಾಸಾಹೇಬ್ ಠಾಕ್ರೆ ಅವರಿಗೆ ಅತ್ಯಂತ ನೋವು ತರುವಂಥವು ಎಂದು ಹೇಳಿದರು.
ಕಳೆದ 10 ವರ್ಷಗಳಲ್ಲಿ ಎನ್​ಡಿಎ ಸರ್ಕಾರ ಏನು ಮಾಡಿದೆ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಅದು ಕಣ್ಣುಬಿಟ್ಟು ವಾಸ್ತವವನ್ನು ನೋಡಲಿ. ನಮ್ಮ ಸರ್ಕಾರ ಬಡವರಿಗೆ ಮನೆಗಳನ್ನು ನಿರ್ವಿುಸಿ ಕೊಟ್ಟಿದೆ. ಬಡವರಿಗೆ ಉಚಿತ ಪಡಿತರವನ್ನು ನೀಡುತ್ತಿದೆ. ಮನೆಮನೆಗೂ ವಿದ್ಯುತ್, ಶುದ್ಧ ಕುಡಿಯುವ ನೀರು, ಎಲ್​ಪಿಜಿ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ನಾವು ಯಾವತ್ತೂ ಯಾರದ್ದೇ ಧರ್ಮವನ್ನು ನೋಡಲಿಲ್ಲ. ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಲಿಲ್ಲ. ಆದರೆ, ಕಾಂಗ್ರೆಸ್ ಎಲ್ಲವನ್ನೂ ಧರ್ಮದ ಆಧಾರದಲ್ಲಿ ವಿಭಜಿಸಲು ನೋಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್​ನ ದುರ್ಬಲ ನೀತಿ:ಕಾಂಗ್ರೆಸ್ ದುರ್ಬಲ ನೀತಿಗಳಿಂದಲೇ ಜಮ್ಮು-ಕಾಶ್ಮೀರದ ಜನರು 60 ವರ್ಷಗಳ ಕಾಲ ಭಯದಲ್ಲೇ ಇರಬೇಕಾಯಿತು. ದೇಶವು ಎಷ್ಟೊಂದು ಭಯೋತ್ಪಾದಕ ದಾಳಿಗಳನ್ನು ಎದುರಿಸಬೇಕಾಯಿತು ಎಂಬುದನ್ನು ಜನ ಮರೆತಿಲ್ಲ. ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸುವುದನ್ನು ಬಿಟ್ಟು ಇವರು ಭಯೋತ್ಪಾದಕರೊಂದಿಗೇ ಸಭೆ ನಡೆಸುತ್ತಿದ್ದರು. 26/11ರ ಭೀಕರ ದಾಳಿಯ ಬಳಿಕವೂ ದಿಟ್ಟ ಕ್ರಮ ಕೈಗೊಳ್ಳುವ ಧೈರ್ಯವನ್ನು ಪ್ರದರ್ಶಿಸಲಿಲ್ಲ. ಏಕೆಂದರೆ, ಉಗ್ರವಾದದ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಅವರ ವೋಟ್​ಬ್ಯಾಂಕ್ ನಿರಾಶವಾಗಬಹುದು ಎಂಬ ಆತಂಕ ಎಂದು ಮೋದಿ ಆರೋಪಿಸಿದರು.
ವಾರಾಣಸಿ:‘ನುಸುಳುಕೋರರು ಮತ್ತು ಹೆಚ್ಚು ಮಕ್ಕಳಿರುವವರು’ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ನಾನು ಕೇವಲ ಮುಸ್ಲಿಮರನ್ನುದ್ದೇಶಿಸಿ ಮಾತನಾಡಿದ್ದಲ್ಲ. ಪ್ರತಿಯೊಂದು ಬಡ ಕುಟುಂಬದ ಬಗ್ಗೆಯೂ ಮಾತನಾಡಿದ್ದೆ. ಯಾವಾಗ ನಾನು ಹಿಂದೂ-ಮುಸ್ಲಿಂ ಎಂದು ಪ್ರತ್ಯೇಕ ಮಾಡುತ್ತೇನೋ ಅಂದು ನಾನು ಸಾರ್ವಜನಿಕ ಜೀವನದಿಂದ ಹೊರನಡೆಯುತ್ತೇನೆ’ ಎಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಮುಸ್ಲಿಮರ ಮೇಲಿನ ಪ್ರೀತಿಯನ್ನು ಲಾಭಕ್ಕಾಗಿ ಬಳಸಿಕೊಳ್ಳುವುದಿಲ್ಲ. ನಾನು ವೋಟ್​ಬ್ಯಾಂಕ್​ಗಾಗಿ ಕೆಲಸ ಮಾಡುವುದಿಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದನ್ನು ಬಲವಾಗಿ ನಂಬುತ್ತೇನೆ. ಹೆಚ್ಚು ಮಕ್ಕಳಿರುವವರ ಬಗ್ಗೆ ನಾನು ಮಾತನಾಡಿದೆ ಎಂದು ಹೇಳಿದ್ದು ಯಾರು? ಇಂಥದ್ದೊಂದು ವಿಶ್ಲೇಷಣೆ ಕೇಳಿ ನನಗೆ ಆಘಾತವಾಯ್ತು. ಹೆಚ್ಚು ಮಕ್ಕಳಿರುವವರು ಮುಸ್ಲಿಮರು ಎಂದು ಯಾರು ಹೇಳಿದರು? ನೀವು ಮುಸ್ಲಿಮರಿಗೆ ಏಕೆ ಅನ್ಯಾಯ ಮಾಡುತ್ತಿದ್ದೀರಿ? ಬಡ ಕುಟುಂಬಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಬಡತನ ಇರುವಲ್ಲಿ, ಹೆಚ್ಚು ಮಕ್ಕಳಿದ್ದೇ ಇರುತ್ತಾರೆ. ನಿಮ್ಮಿಂದ ನೋಡಿಕೊಳ್ಳಲು ಎಷ್ಟು ಸಾಮರ್ಥ್ಯವಿದೆಯೋ ಅಷ್ಟು ಮಕ್ಕಳನ್ನು ಮಾತ್ರ ಹೊಂದಬೇಕು ಎಂದಷ್ಟೇ ನಾನು ಹೇಳಿದ್ದೆ ಎಂದು ಪಿಎಂ ಮೋದಿ ಸ್ಪಷ್ಟಪಡಿಸಿದ್ದಾರೆ.
ವಾಷಿಂಗ್ಟನ್:ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಜಾಗತಿಕವಾಗಿ ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಬಲ ನಾಯಕರಾಗಿದ್ದಾರೆ. ಮೂರನೇ ಬಾರಿಯೂ ಅವರು ಚುನಾವಣೆ ಗೆದ್ದು, ದೇಶದ ಪ್ರಧಾನಿಯಾಗಿ ಮರಳಲಿದ್ದಾರೆ ಎಂದು ಪ್ರಮುಖ ಪಾಕಿಸ್ತಾನಿ-ಅಮೆರಿಕನ್ ಉದ್ಯಮಿ ಸಾಜಿತ್ ತರಾರ್ ಹೇಳಿದ್ದಾರೆ. ಬಾಲ್ಟಿಮೋರ್ ಮೂಲದ ಈ ಉದ್ಯಮಿ, ಪ್ರಧಾನಿ ಮೋದಿ ಭಾರತಕ್ಕೆ ಮಾತ್ರವಲ್ಲ. ಜಗತ್ತಿಗೆ ಕೂಡ ಒಳ್ಳೆಯವರು. ಪಾಕಿಸ್ತಾನಕ್ಕೂ ಅವರಂತಹ ನಾಯಕ ಸಿಗಲಿ ಎಂದು ಆಶಿಸಿದ್ದಾರೆ. ಮೋದಿ ಪಾಕಿಸ್ತಾನದೊಂದಿಗೆ ಮಾತುಕತೆ ಮತ್ತು ವ್ಯಾಪಾರ ಪ್ರಾರಂಭಿಸುತ್ತಾರೆ ಎಂದು ನಿರೀಕ್ಷಿಸುತ್ತೇನೆ ಎಂದು ತರಾರ್ ಹೇಳಿದ್ದಾರೆ. 1990ರ ದಶಕದಲ್ಲಿ ಅಮೆರಿಕಕ್ಕೆ ತೆರಳಿದ ತರಾರ್ ಆಡಳಿತಾರೂಢ ಪಾಕಿಸ್ತಾನ ಸರ್ಕಾರದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದಾರೆ. ಭಾರತದಲ್ಲಿ 97 ಕೋಟಿ ಜನರು ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿರುವುದು ಪವಾಡವಲ್ಲದೆ ಬೇರೇನೂ ಅಲ್ಲ. ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅಲ್ಲಿ ಮೋದಿಯವರ ಜನಪ್ರಿಯತೆ ನೋಡುತ್ತಿದ್ದೇನೆ ಎಂದು ತರಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಆದಿವಾಸಿಗಳ ಮೀಸಲಾತಿಯನ್ನು ಕಾಂಗ್ರೆಸ್ ಕಸಿಯಲು ಹೊಂಚುಹಾಕಿದೆ. ಈ ಮೀಸಲಾತಿಯನ್ನು ಅದು ಮುಸ್ಲಿಮ್​ಗೆ ಹಂಚಲು ಬಯಸಿದೆ. ಕಾಂಗ್ರೆಸ್ ಕೇವಲ ತನ್ನ ಮತಬ್ಯಾಂಕ್ ಸುರಕ್ಷಿತವಾಗಿ ಇರಬೇಕು ಎಂದು ಬಯಸುತ್ತದೆ. ಈ ಭ್ರಷ್ಟ ಪಕ್ಷ ಸಂಪೂರ್ಣವಾಗಿ ತುಷ್ಟೀಕರಣ ರಾಜಕಾರಣದಲ್ಲಿ ಮುಳುಗಿದೆ. ಇದೇ ತುಷ್ಟೀಕರಣದ ಭಾಗವಾಗಿ ಕಾಂಗ್ರೆಸ್ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಆಮಂತ್ರಣವನ್ನು ತಿರಸ್ಕರಿಸಿತು.
| ನರೇಂದ್ರ ಮೋದಿ, ಪ್ರಧಾನಿ
ಅಕ್ರಮ ಹಣ ವರ್ಗಾವಣೆ ಹಗರಣ: ಜಾರ್ಖಂಡ್ ಸಚಿವ ಆಲಂಗೀರ್ ಆಲಂನನ್ನು ಬಂಧಿಸಿದ ಇಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
