ನವದೆಹಲಿ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್​ನಲ್ಲಿ ಬರೀ ಬಿಹಾರ ಮತ್ತು ಆಂಧ್ರಪ್ರದೇಶಗಳಿಗಷ್ಟೇ ಆದ್ಯತೆ ನೀಡಲಾಗಿದೆ ಎಂಬ ಆರೋಪದೊಂದಿಗೆ ವಿಪಕ್ಷಗಳು ಬುಧವಾರ ಸಂಸತ್ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡವು. ಈ ಬಜೆಟ್​ನಲ್ಲಿ ಬಿಹಾರ-ಆಂಧ್ರಪ್ರದೇಶ ಹೊರತುಪಡಿಸಿ ಉಳಿದ ರಾಜ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ರಾಜ್ಯಸಭೆಯಲ್ಲಿನ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿಯನ್ನು ತಿರಸ್ಕರಿಸಿದ ಜನರ ರಾಜ್ಯಗಳಿಗೆ ಈ ಬಜೆಟ್​ನಲ್ಲಿ ಏನೂ ಸಿಕ್ಕಿಲ್ಲ. ಎಲ್ಲರ ತಟ್ಟೆಯೂ ಖಾಲಿ ಇದೆ, ಬರೀ ಎರಡು ರಾಜ್ಯಗಳ ತಟ್ಟೆಗಳಲ್ಲಿ ಮಾತ್ರ ಪಕೋಡ-ಜಿಲೇಬಿ ಇದೆ. ಕೇವಲ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಈ ಬಜೆಟ್ ಮಂಡಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಖರ್ಗೆ ವಾಕ್​ಪ್ರಹಾರ ನಡೆಸಿದರು.
ರಾಜ್ಯಗಳ ಹೆಸರು ಹೇಳಿಲ್ಲ:ಪ್ರತಿ ಬಜೆಟ್​ನಲ್ಲೂ ಎಲ್ಲ ರಾಜ್ಯಗಳ ಹೆಸರನ್ನು ಉಲ್ಲೇಖಿಸುವ ಅವಕಾಶ ಸಿಗುವುದಿಲ್ಲ. ಫೆಬ್ರವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್ ಹಾಗೂ ಮಂಗಳವಾರ ಮಂಡಿಸಿದ ಪೂರ್ಣ ಬಜೆಟ್​ನಲ್ಲಿ ಹಲವು ರಾಜ್ಯಗಳನ್ನು ಉಲ್ಲೇಖಿಸಿಲ್ಲ. ಹಾಗೆಂದ ಮಾತ್ರಕ್ಕೆ ಆ ರಾಜ್ಯಗಳಿಗೆ ಯಾವುದೇ ಪ್ರಯೋಜನ ನೀಡಿಲ್ಲ ಎಂದರ್ಥವಲ್ಲ. ಎರಡೂ ಬಜೆಟ್​ನಲ್ಲಿ ಮಹಾರಾಷ್ಟ್ರದ ಹೆಸರನ್ನೇ ಹೇಳಿಲ್ಲ, ಅದಾಗ್ಯೂ ಆ ರಾಜ್ಯಕ್ಕೆ ದಹನುವಲ್ಲಿನ ವಧವನ್ ಬಂದರು ಯೋಜನೆಗೆ 76 ಸಾವಿರ ಕೋಟಿ ರೂ. ಅನುಮೋದನೆ ಸಿಕ್ಕಿದೆ ಎಂಬುದನ್ನು ನಿರ್ಮಲಾ ಸೀತಾರಾಮನ್ ಉದಾಹರಿಸಿದರು. ಬೇಕಿದ್ದರೆ ಕಾಂಗ್ರೆಸ್​ನವರು ‘ಅವರು ಎಲ್ಲ ರಾಜ್ಯಗಳನ್ನು ಪ್ರಸ್ತಾಪಿಸಿದ್ದರೇ?’ ಎಂದು ಅವರು ಮಂಡಿಸಿದ್ದ ಬಜೆಟ್​ಗಳನ್ನು ಪರಿಶೀಲಿಸಿ ನೋಡಲಿ ಎಂದ ವಿತ್ತ ಸಚಿವೆ, ವಿಪಕ್ಷಗಳ ಆರೋಪಗಳು ಅತಿರೇಕದ್ದು ಹಾಗೂ ಸ್ವೀಕಾರಾರ್ಹವಲ್ಲ ಎಂದರು.
ಸದನ ಬಹಿಷ್ಕಾರ:ಖರ್ಗೆ ವಾಗ್ದಾಳಿ ಮಧ್ಯೆ ಪ್ರವೇಶಿಸಿದ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್, ‘ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಮಾತನಾಡಲು ಅವಕಾಶ ಕೊಡಿ’ ಎಂದರು. ಆಗ, ‘ಅಮ್ಮ(ನಿರ್ಮಲಾ) ಮಾತಲ್ಲಿ ಪರಿಣತರು ಎಂಬುದು ನನಗೆ ಗೊತ್ತು, ನಾನು ಮೊದಲು ಮಾತಾಡಿ ಮುಗಿಸುವೆ’ ಎಂದ ಖರ್ಗೆ, ರಾಜ್ಯಗಳ ನಡುವೆ ಸಮತೋಲನ ಇರದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ನಂತರ ನಿರ್ಮಲಾ ಸೀತಾರಾಮನ್ ಸದನಕ್ಕೆ ಉತ್ತರಿಸಲು ಮುಂದಾದಾಗ ವಿಪಕ್ಷಗಳ ಸದಸ್ಯರು ಖರ್ಗೆ ನೇತೃತ್ವದಲ್ಲಿ ಸದನವನ್ನು ಬಹಿಷ್ಕರಿಸಿದರು.
ಆ.15ರಂದು ಟ್ರಾ್ಯಕ್ಟರ್ ರ್ಯಾಲಿ:ದೇಶಾದ್ಯಂತ ಆಗಸ್ಟ್ 15ರಂದು ಟ್ರಾ್ಯಕ್ಟರ್ ರ‍್ಯಾಲಿ ನಡೆಸುವ ಜತೆಗೆ ಹೊಸ ಕ್ರಿಮಿನಲ್ ಕಾನೂನುಗಳ ಪ್ರತಿ ಸುಡುವುದಾಗಿ ಬುಧವಾರ ದೆಹಲಿಯಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್​ಕೆಎಂ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ತಿಳಿಸಿವೆ. ರೈತರ ದೆಹಲಿ ಚಲೋಗೆ ಆ.31ರಂದು 200 ದಿನಗಳು ಪೂರ್ಣಗೊಳ್ಳಲಿದ್ದು, ಅಂದು ರೈತರು ಪಂಜಾಬ್-ಹರಿಯಾಣ ಗಡಿಭಾಗದ ಖನೌರಿ, ಶಂಭು ಮತ್ತಿತರ ಪ್ರದೇಶಗಳಲ್ಲಿ ಜಮಾಯಿಸಬೇಕು ಎಂದು ರೈತ ನಾಯಕರು ಕರೆ ನೀಡಿದ್ದಾರೆ.
ಹನ್ನೆರಡು ಮಂದಿ ರೈತ ನಾಯಕರನ್ನು ಒಳಗೊಂಡ ನಿಯೋಗವು ಬುಧವಾರ ಸಂಸತ್ ಭವನದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿತು. ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆ ಗಳ ರೈತ ಮುಖಂಡರು ಈ ನಿಯೋಗದಲ್ಲಿದ್ದು, ತಮ್ಮ ಬಹುಕಾಲದ ಬೇಡಿಕೆಗಳ ಕುರಿತಂತೆ ಸಂಸತ್ತಿನಲ್ಲಿ ದನಿ ಎತ್ತುವಂತೆ ಮನವಿ ಮಾಡಿಕೊಂಡರು. ಕೇಂದ್ರ ಸರ್ಕಾರದ ವಿರುದ್ಧ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಸೆ. 1ರಂದು ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಿರುವ ಬಗ್ಗೆಯೂ ರೈತ ನಾಯಕರು ಘೋಷಿಸಿದರು. ಜತೆಗೆ ಪಿಪ್ಲಿಯಲ್ಲಿ ಸೆ. 22ರಂದು ಇನ್ನೊಂದು ರ‍್ಯಾಲಿ ನಡೆಸಲಿರುವುದಾಗಿ ಹೇಳಿದರು. ಅಲ್ಲದೆ ರಾಷ್ಟ್ರಾದ್ಯಂತ ಹಮ್ಮಿಕೊಳ್ಳಲಿರುವ ತಮ್ಮ ಪ್ರತಿಭಟನೆಗಳ ವಿವರವನ್ನು ರಾಹುಲ್ ಗಾಂಧಿ ಜತೆ ಹಂಚಿಕೊಂಡರು. ಖಾಸಗಿ ಮಸೂದೆ ಹಾಗೂ ಕನಿಷ್ಠ ಬೆಂಬಲ ಬೆಲೆಯ ಕಾನೂನೀಕರಣಕ್ಕೆ ಆಗ್ರಹಿಸಿ ಹೊಸದಾಗಿ ಈ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ರೈತ ನಾಯಕರು ತಿಳಿಸಿದರು. ‘ನಮ್ಮ ಪ್ರಣಾಳಿಕೆಯಲ್ಲಿ ಎಂಎಸ್​ಪಿ ಮತ್ತು ಅದರ ಕಾನೂನಿನ ಖಚಿತತೆ ಕುರಿತು ಪ್ರಸ್ತಾಪಿಸಿದ್ದೇವೆ. ಅದನ್ನು ಅನುಷ್ಠಾನಗೊಳಿಸಲು ಸಾಧ್ಯ ಎಂಬ ಬಗ್ಗೆ ನಾವು ಪರಿಶೀಲನೆಯನ್ನೂ ನಡೆಸಿದ್ದೇವೆ. ಆ ನಿಟ್ಟಿನಲ್ಲಿ ಮೈತ್ರಿಕೂಟದ ಇತರ ಪಕ್ಷಗಳ ಜತೆ ಮಾತುಕತೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ’ ಎಂದು ರೈತ ನಾಯಕರಿಗೆ ರಾಹುಲ್ ಭರವಸೆ ನೀಡಿದರು.
Paris Olympics: ಒಲಿಂಪಿಕ್ಸ್‌ ಕ್ರೀಡಾಕೂಟ ವೀಕ್ಷಣೆಗೆ ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × one =
Remember me
