ಲಖನೌ:ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ದೇಶದಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ರಾಜ್ಯಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತರನ್ನು ಗುರುತಿಸುವಂತೆ ಉತ್ತರ ಪ್ರದೇಶ ಸರ್ಕಾರ ಆದೇಶ ನೀಡಿದೆ.
ಸಿಎಎಯಲ್ಲಿ ಸೂಚಿಸಲಾಗಿರುವ ಮೂರು ದೇಶಗಳ ಅಲ್ಪಸಂಖ್ಯಾತರಾದ ಹಿಂದು, ಸಿಖ್, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರೖೆಸ್ತರಿಗೆ ಪೌರತ್ವ ನೀಡುವ ಉದ್ದೇಶದಿಂದ ಅವರನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮೂಲಕ ಅರ್ಹ ವಲಸಿಗರಿಗೆ ಪೌರತ್ವ ನೀಡುವ ಪ್ರಕ್ರಿಯೆ ಆರಂಭಿಸಿದ ಮೊದಲ ರಾಜ್ಯವಾಗಲಿದೆ. ಇದರಿಂದ ಕಾನೂನುಬಾಹಿರ ವಲಸಿಗರ ಸಂಖ್ಯೆಯನ್ನು ತಿಳಿಯಲೂ ಅನುಕೂಲವಾಗುತ್ತದೆ. ನಾಗರಿ ಕತ್ವವಿಲ್ಲದೆ ಹಲವು ದಶಕಗಳಿಂದ ನೆಲೆಸಿರುವ ಪಾಕ್, ಬಾಂಗ್ಲಾ ಮತ್ತು ಅಫ್ಘಾನಿಸ್ತಾನಗಳ ವಲಸಿಗರನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ರಾಜ್ಯದ ಹೆಚ್ಚುವರಿ ಗೃಹ ಕಾರ್ಯದರ್ಶಿ ಅವಿನಾಶ್ ಅವಸ್ಥಿ ಮಾಹಿತಿ ನೀಡಿದ್ದಾರೆ. ಅಫ್ಘಾನಿಸ್ತಾನದಿಂದ ಬಂದು ಉತ್ತರ ಪ್ರದೇಶದಲ್ಲಿ ನೆಲೆಸಿರುವವರ ಸಂಖ್ಯೆ ಕಡಿಮೆಯಿದೆ. ಆದರೆ ಪಾಕ್ ಹಾಗೂ ಬಾಂಗ್ಲಾದೇಶದಿಂದ ಬಂದಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.
ಕೇಂದ್ರ ಸರ್ಕಾರಕ್ಕೆ ಮಾಹಿತಿ
ಪಾಕ್ ಮತ್ತು ಬಾಂಗ್ಲಾದಿಂದ ಬಂದ ವಲಸಿಗರು ಉತ್ತರ ಪ್ರದೇಶದ ಲಖನೌ, ಹಾಪುರ, ರಾಂಪುರ, ಷಹಜಹಾನ್​ಪುರ, ನೋಯ್ಡಾ ಮತ್ತು ಗಾಜಿಯಾಬಾದ್​ನಲ್ಲಿ ನೆಲೆಸಿದ್ದಾರೆ. ರಾಜ್ಯದಲ್ಲಿರುವ ಮುಸ್ಲಿಂ ವಲಸಿಗರ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ಒದಗಿಸಲಾಗುತ್ತದೆ. ಅವರನ್ನು ಅವರವರ ದೇಶಗಳಿಗೆ ಕಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ.
ಅಸ್ಸಾಂ ಬಂಧನ ಕೇಂದ್ರದಲ್ಲಿ ಸಾವು
ಅಸ್ಸಾಂನ ಗೋಲಪಾರಾದಲ್ಲಿರುವ ಬಂಧನ ಕೇಂದ್ರದಲ್ಲಿದ್ದ (ಡಿಟೆನ್ಶನ್ ಸೆಂಟರ್) 55 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಡಿ. 22ರಂದು ಹೃದಯಾಘಾತಕ್ಕೆ ಒಳಗಾಗಿದ್ದ ನರೇಶ್ ಕೊಚ್ಚ ಎಂಬಾತ ಗುವಾಹಟಿ ವೈದ್ಯಕೀಯ ಕಾಲೇಜ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಶುಕ್ರವಾರ ಈತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ರಾಜ್ಯದ ನಿರ್ಬಂಧ ಕೇಂದ್ರದಲ್ಲಿ ಬಂಧಿಯಾಗಿದ್ದವರಲ್ಲಿ ಕಳೆದ ಮೂರು ವರ್ಷಗಳಲ್ಲಿ ಮೃತರ ಸಂಖ್ಯೆ 29ಕ್ಕೇರಿದೆ. ಸರ್ಕಾರದ ಮಾಹಿತಿ ಪ್ರಕಾರ, 2016ರಿಂದ 2019ರ ಅಕ್ಟೋಬರ್ 13ರ ವರೆಗೆ 28 ವ್ಯಕ್ತಿಗಳು ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ. 2019ರ ನವೆಂಬರ್ 22ರ ವರೆಗೆ ಅಸ್ಸಾಂನ ಆರು ಕೇಂದ್ರಗಳಲ್ಲಿ ಒಟ್ಟು 988 ಜನರು ಬಂಧಿತರಾಗಿದ್ದರು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಇತ್ತೀಚೆಗೆ ರಾಜ್ಯಸಭೆಯಲ್ಲಿ ಹೇಳಿದ್ದರು. ರಾಜ್ಯದಲ್ಲಿ ಅಪ್​ಡೇಟ್ ಮಾಡಲಾದ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್​ಆರ್​ಸಿ) ಅಂತಿಮ ಪಟ್ಟಿಯಿಂದ ಸುಮಾರು 19 ಲಕ್ಷ ಜನರನ್ನು ಕೈಬಿಡಲಾಗಿದೆ. 2019 ಆಗಸ್ಟ್ 31ರಂದು ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆತ್ಮರಕ್ಷಣೆಗೆ ಪೊಲೀಸ್ ಫೈರಿಂಗ್
ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ನಡೆಸಿದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪೊಲೀಸರು ಗುಂಡು ಹಾರಿಸಿದ್ದು ನಿಜ ಎಂದು ಹಲವು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಾಗ ಆತ್ಮರಕ್ಷಣೆಗಾಗಿ ಅವರು ಶಸ್ತ್ರ ಬಳಕೆ ಮಾಡಿದ್ದರು ಎಂಬುದು ಗೊತ್ತಾಗಿದೆ. ಪೊಲೀಸ್ ಠಾಣೆಗಳಲ್ಲಿ ನಿರ್ವಹಿಸಲಾಗುವ ದಿನಚರಿ ಪುಸ್ತಕದಲ್ಲಿ ಈ ಸಂಬಂಧ ಮಾಹಿತಿ ನಮೂದಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿಭಟನೆ ಕುರಿತ ವಿಡಿಯೊ ದೃಶ್ಯಾವಳಿಗಳ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಹ್ಯಾಂಡ್ ಗನ್​ಗಳಿಂದ ಫೈರಿಂಗ್ ಮಾಡುತ್ತಿರುವುದು ವಿಡಿಯೊಗಳಲ್ಲಿ ದಾಖಲಾಗಿದೆ. ಪ್ರತಿಭಟನೆಗಳ ವೇಳೆ ಬಂದೂಕು (ಫೈರ್ ಆಮ್್ಸರ್ ಬಳಸಲಾಗಿತ್ತು ಎಂಬ ಆರೋಪಗಳನ್ನು ಪೊಲೀಸರು ಬಲವಾಗಿ ನಿರಾಕರಿಸಿದ್ದರು. ಆದರೆ ಫೈರಿಂಗ್ ನಡೆಸಿದ್ದು ಹೌದು ಎಂಬುದಕ್ಕೆ ಪೊಲೀಸ್ ದಾಖಲೆಗಳೇ ಸಾಕ್ಷ್ಯ ಹೇಳುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
