ನವದೆಹಲಿ:ರಾಷ್ಟ್ರೀಯ ನೇಮಕಾತಿ ಆಯೋಗ ರಚನೆ, ಅದಕ್ಷ ನೌಕರರಿಗೆ ಕಡ್ಡಾಯ ನಿವೃತ್ತಿಯಂಥ ಕ್ರಮಗಳ ಬಳಿಕ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಅಖಿಲ ಭಾರತ ಸೇವೆಯ ವ್ಯಾಪ್ತಿಗೆ ಬರುವ ಅಧಿಕಾರಿಗಳ ಕೌಶಲ, ದಕ್ಷತೆ ಹಾಗೂ ಸಾಮರ್ಥ್ಯ ದುಪ್ಪಟ್ಟುಗೊಳಿಸುವ ಸಲುವಾಗಿ ನಾಗರಿಕ ಸೇವೆ ಸಾಮರ್ಥ್ಯ ವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮ (ಎನ್​ಪಿಸಿಎಸ್​ಸಿಬಿ) ಎಂಬ ಹೊಸ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಈ ಉಪಕ್ರಮಕ್ಕೆ ಮಿಷನ್ ‘ಕರ್ಮಯೋಗಿ’ ಎಂದು ಹೆಸರಿಟ್ಟಿದೆ.
ಆಯೋಗ ರಚನೆ:ಬುಧವಾರ ಪ್ರಧಾನಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ದೊರೆತಿದೆ. ಮಿಷನ್ ಕರ್ಮಯೋಗಿ ರಾಷ್ಟ್ರೀಯ ಯೋಜನೆಯಾಗಿದ್ದು, ಇದರ ಮೇಲುಸ್ತುವಾರಿಗಾಗಿ ಪ್ರಧಾನಿ ನೇತೃತ್ವದ ಸಾರ್ವಜನಿಕ ಮಾನವ ಸಂಪನ್ಮೂಲ ಆಯೋಗ ರಚಿಸಲಾಗಿದೆ. ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಗಾಗಿ ಯೋಜನೆ ಅಡಿ ರೂಪಿಸಲಾಗುವ ಕಾರ್ಯಕ್ರಮಗಳನ್ನು ಪರಿಶೀಲಿಸಿ, ಸಮ್ಮತಿ ನೀಡಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ಹಂಚಿಕೊಂಡಿದ್ದಾರೆ.
ಸಹಕಾರ ಮತ್ತು ಸಹ-ಹಂಚಿಕೆ ಆಧಾರದ ಮೇಲೆ ಸಾಮರ್ಥ್ಯ ವೃದ್ಧಿಸುವ ವ್ಯವಸ್ಥೆ ನಿರ್ವಹಿಸಲು ಏಕರೂಪದ ವಿಧಾನ ಹೊಂದಲು ಸಾಮರ್ಥ್ಯ ನಿರ್ಮಾಣ ಆಯೋಗ (ಕೆಪ್ಯಾಸಿಟಿ ಬಿಲ್ಡಿಂಗ್ ಕಮಿಷನ್) ಸ್ಥಾಪಿಸಲು ಸಹ ಉದ್ದೇಶಿಸಲಾಗಿದೆ.
ಸರ್ಕಾರದ ದೃಷ್ಟಿಕೋನದಿಂದ ಐಎಎಸ್ ಅಧಿಕಾರಿಯೋರ್ವ ಹೇಗೆ ಕರ್ತವ್ಯ ನಿರ್ವಹಿಸಬೇಕು ಎಂಬುದನ್ನು ಆಧರಿಸಿ ಈ ಯೋಜನೆ ಸಿದ್ಧಪಡಿಸಲಾಗಿದೆ. ಅಧಿಕಾರಿಗಳು ವಿಶ್ವ ಎದುರಿಸುವ ಸವಾಲುಗಳಿಗೆ ಸಜ್ಜಾಗಲು ಕ್ರಿಯಾತ್ಮಕವಾಗಿ, ನಾವಿನ್ಯತೆಯಿಂದ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ಯೋಚಿಸಬೇಕಾಗುತ್ತದೆ. ಅಲ್ಲದೆ, ಸೌಜನ್ಯ, ಸಭ್ಯತೆ, ವೃತ್ತಿಪರತೆ, ಶಕ್ಯತೆ, ಪಾರದರ್ಶಕ ದೃಷ್ಟಿಕೋನ, ವಿಶಾಲ ಚಿಂತನೆ, ಸೃಜನಶೀಲತೆಯಿಂದ ಕಾರ್ಯನಿರ್ವಹಿಸುವುದು ಈ ಕಾಲಘಟ್ಟದಲ್ಲಿ ಅಗತ್ಯ ಮತ್ತು ಅನಿವಾರ್ಯವೂ ಹೌದು. ಈ ನಿಟ್ಟಿನಲ್ಲಿ, ಕರ್ಮಯೋಗಿ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಜಿಎಣಖಓಚ್ಟಞಚಢಟಜಜಿ ಎಂಬ ಆನ್​ಲೈನ್ ತರಬೇತಿ ವೇದಿಕೆ ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಕಾರ್ಯದರ್ಶಿ ಸಿ. ಚಂದ್ರಮೌಳಿ ವಿವರಣೆ ನೀಡಿದ್ದಾರೆ.
ತರಬೇತಿ ಸಂಸ್ಥೆ ಸ್ಥಾಪನೆ
ಅಧಿಕಾರಿಗಳಿಗೆ ತರಬೇತಿ ನೀಡಲೆಂದು ದೇಶದ ವಿವಿಧ ಭಾಗಗಳಲ್ಲಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಸಂಸ್ಥೆಗಳ ಮೇಲುಸ್ತುವಾರಿಯನ್ನು ಆಯೋಗ ನೋಡಿಕೊಳ್ಳಲಿದೆ ಮತ್ತು ಬೋಧಕವರ್ಗ, ಸಂಪನ್ಮೂಲಗಳನ್ನು ವಿವಿಧ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಿದೆ. ಇದರಿಂದಾಗಿ ಭಾರತ ಸರ್ಕಾರದ ಆಕಾಂಕ್ಷೆ, ಅಭಿವೃದ್ಧಿ ಗುರಿಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಹೊಂದಲು ಸಾಧ್ಯವಾಗಲಿದೆ. ವಿಭಾಗ ಅಧಿಕಾರಿಗಳಿಂದ ಹಿಡಿದು ಕಾರ್ಯದರ್ಶಿ ಹಂತದ ಎಲ್ಲರಿಗೂ ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಇಲ್ಲಿ ಎರಡು ಆಯ್ಕೆಗಳಿರಲಿವೆ. ಒಂದು ಸ್ವಂತ ಆಸಕ್ತಿಗೆ ಸಂಬಂಧಿಸಿದ್ದು. ಅಂದರೆ, ಅಧಿಕಾರಿಯು ತನ್ನ ಆಸಕ್ತಿಕರ ಕ್ಷೇತ್ರವನ್ನು ಆಯ್ಕೆ ಮಾಡುವುದು. ಎರಡನೆಯದ್ದು; ಮಾರ್ಗದರ್ಶನ, ತರಬೇತಿ ಮೂಲಕ ನೀಡಲಾಗುವ ಕ್ಷೇತ್ರ. ಅಲ್ಲಿ ಅಧಿಕಾರಿಗೆ ತನ್ನ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ ಎಂಬ ಬಗ್ಗೆ ತರಬೇತಿ ನೀಡುವುದು.
ಮಿಷನ್ ಕರ್ಮಯೋಗಿ ಅಧಿಕಾರಿಗಳ ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯ ವೃದ್ಧಿಯ ಮೇಲೆ ಕೇಂದ್ರೀಕರಿಸಲಿದೆ. ಆಫ್-ಸೈಟ್ ಕಲಿಕೆಗೆ (ಕಚೇರಿ ಕೆಲಸ) ಸಹಕಾರಿಯಾಗಲು ಆನ್-ಸೈಟ್ ಕಲಿಕೆಗೆ (ಕಚೇರಿಯಾಚೆಗಿನ ಪ್ರಾಕ್ಟಿಕಲ್ ಅನುಭವಕ್ಕೆ) ಹೆಚ್ಚಿನ ಗಮನ ನೀಡಲಾಗುತ್ತದೆ. ಇ-ಕಲಿಕೆಗೂ ಉತ್ತೇಜನವಿರಲಿದೆ ಎಂದು ಚಂದ್ರಮೌಳಿ ತಿಳಿಸಿದ್ದಾರೆ.
ಆಯೋಗದ ಪಾತ್ರ
* ಸಾಮರ್ಥ್ಯ ವೃದ್ಧಿ ಯೋಜನೆಗಳನ್ನು ಅನುಮೋದಿಸುವಲ್ಲಿ ಪ್ರಧಾನಮಂತ್ರಿ ಸಾರ್ವಜನಿಕ ಮಾನವ ಸಂಪನ್ಮೂಲ ಮಂಡಳಿಗೆ ನೆರವಾಗುವುದು
* ಅಧಿಕಾರಿಗಳ ಸಾಮರ್ಥ್ಯ ವೃದ್ಧಿಗೆ ವ್ಯವಹರಿಸುವ ಎಲ್ಲ ತರಬೇತಿ ಕೇಂದ್ರಗಳ ಮೇಲ್ವಿಚಾರಣೆ ನಿರ್ವಹಿಸುವುದು
* ಆಂತರಿಕ, ಬಾಹ್ಯ ಬೋಧಕ ವರ್ಗ ಹಾಗೂ ಸಂಪನ್ಮೂಲ ಕೇಂದ್ರಗಳನ್ನು ಒಳಗೊಂಡಂತೆ ಕಲಿಕಾ ಸಂಪನ್ಮೂಲಗಳನ್ನು ಸಿದ್ಧಪಡಿಸುವುದು
* ಸಾಮರ್ಥ್ಯ ವೃದ್ಧಿ ಯೋಜನೆಗೆ ಸಂಬಂಧಿಸಿ ಕೆಲಸ ಮಾಡುವ ಇಲಾಖೆಗಳೊಂದಿಗೆ ವ್ಯವಹರಿಸುವುದು
* ತರಬೇತಿ, ಸಾಮರ್ಥ್ಯ ವೃದ್ಧಿ, ಶಿಕ್ಷಣಶಾಸ್ತ್ರ ಮತ್ತು ಕಲಿಕಾ ವಿಧಾನಗಳಲ್ಲಿ ಏಕರೂಪತೆ ತರುವುದು
* ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಸಾಮರ್ಥ್ಯ ವೃದ್ಧಿಯ ಕ್ಷೇತ್ರಗಳಲ್ಲಿ ಅಗತ್ಯವಿರುವ ನಿಯಮಗಳನ್ನು ರೂಪಿಸುವುದು
ಐ-ಗಾಟ್ ಕರ್ಮಯೋಗಿ ವೇದಿಕೆ
ಜಿಎಣಖ-ಓಚ್ಟಞಚಢಟಜಜಿ ವೇದಿಕೆಯು ಸರ್ಕಾರಿ ಸಿಬ್ಬಂದಿ ಸಾಮರ್ಥ್ಯ ವೃದ್ಧಿಸಲೆಂದೇ ಅತ್ಯಾಧುನಿಕ ಮೂಲಸೌಕರ್ಯ ವ್ಯವಸ್ಥೆ ಸಾಧಿಸಲು ಸಹಕಾರಿಯಾಗಲಿದೆ. ಇದರಿಂದ ಈ ವೇದಿಕೆಯು ವಿಶ್ವ ದರ್ಜೆಯ ಮಾರುಕಟ್ಟೆ ಸ್ಥಳವಾಗಿ ವಿಕಸನಗೊಳ್ಳುವ ನಿರೀಕ್ಷೆಯಿದ್ದು, ಇಲ್ಲಿ ಇ-ಲರ್ನಿಂಗ್​ಗೆ ಬೇಕಿರುವ ಅಗತ್ಯ ಸಾಮಗ್ರಿಗಳು ಲಭ್ಯವಿರಲಿವೆ.
ಪರಿವರ್ತನೆಯ ಸಾಧನ
ಮಿಷನ್ ಕರ್ಮಯೋಗಿ ಯೋಜನೆ ಅಧಿಕಾರಶಾಹಿಯನ್ನು ರಾಷ್ಟ್ರೀಯ ಪರಿವರ್ತನೆಯ ಪ್ರಬಲ ಸಾಧನವನ್ನಾಗಿ ರೂಪಿಸುವುದಕ್ಕೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶ್ಲಾಘಿಸಿದ್ದಾರೆ. ಅಖಿಲ ಭಾರತ ಸೇವೆ ಸೇರಿದಂತೆ ಇನ್ನಿತರ ವಲಯದ ಅಧಿಕಾರಿಗಳು ನೇಮಕ ನಂತರದ ಪ್ರಕ್ರಿಯೆ ಸರಳಗೊಳಿಸುವುದು. ಅಧಿಕಾರಿಗಳು ಮತ್ತು ನೌಕರರಿಗೆ ತರಬೇತಿ ನೀಡಿ ಹೆಚ್ಚು ರಚನಾತ್ಮಕ, ಕ್ರಿಯಾಶೀಲ ಮತ್ತು ಸಂವೇದನಾಶೀಲರನ್ನಾಗಿ ಮಾಡಲು ಇದು ಸಹಕಾರಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಉದ್ದೇಶವೇನು?
ಸಮಾಜ ಎದುರಿಸುತ್ತಿರುವ ಹತ್ತು ಹಲವು ಸವಾಲುಗಳನ್ನು ಎದುರಿಸಲು ಅಧಿಕಾರಿಗಳಿಗೆ ತರಬೇತಿ ನೀಡುವ ಮತ್ತು ಆ ದಿಕ್ಕಿನಲ್ಲಿ ಮುನ್ನಡೆಯಲು ಅವರನ್ನು ಸಜ್ಜುಗೊಳಿಸಲು ಅಡಿಪಾಯ ಹಾಕುವುದು
ಸಂಪುಟದ ಇತರ ತೀರ್ಮಾನಗಳು
ಹಿನ್ನೆಲೆ, ಮಹತ್ವ
ನಾಗರಿಕ ಸೇವೆಯ ಸಾಮರ್ಥ್ಯವು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ಪ್ರಮುಖ ಆಡಳಿತ ಕಾರ್ಯಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾಗರಿಕ ಸೇವಾ ಸಾಮರ್ಥ್ಯದಲ್ಲಿನ ಪರಿವರ್ತನೆ ಒಟ್ಟಾರೆ ಕಾರ್ಯಸ್ಥಳದಲ್ಲಿನ ಸಕಾರಾತ್ಮಕ ಬದಲಾವಣೆ, ಸಾರ್ವಜನಿಕ ಸಂಸ್ಥೆಗಳ ಬಲಪಡಿಸುವಿಕೆ ಮತ್ತು ಸರ್ಕಾರಿ ಸೇವೆಗಳನ್ನು ಜನರಿಗೆ ಸಮರ್ಥ ರೀತಿಯಲ್ಲಿ ತಲುಪಿಸುವುದನ್ನು ಖಾತರಿಪಡಿಸುವ ಗುರಿ ಹೊಂದಿದೆ.
ಅವಧಿಗೆ ಮೊದಲೇ ನಿವೃತ್ತಿ
ನವದೆಹಲಿ: ಸಾರ್ವಜನಿಕ ಹಿತಾಸಕ್ತಿಯ ಸಲುವಾಗಿ 50/55 ವರ್ಷ ಪೂರೈಸಿದ ಅಥವಾ ಸರ್ಕಾರಿ ಸೇವೆಯಲ್ಲಿ 30 ವರ್ಷ ಪೂರ್ಣಗೊಳಿಸಿದ ನಿರ್ದಿಷ್ಟ ನೌಕರರನ್ನು (ಮುಖ್ಯವಾಗಿ ಅದಕ್ಷ, ಅಸಮರ್ಥರಿಗೆ) ಅಕಾಲಿಕ ನಿವೃತ್ತಿಗೊಳಿಸುವ ಆದೇಶದಿಂದ ಸೃಷ್ಟಿಯಾಗಿದ್ದ ಗೊಂದಲಕ್ಕೆ ಕೇಂದ್ರ ತೆರೆ ಎಳೆದಿದೆ. ನೌಕರರ ‘ಕಾರ್ಯಕ್ಷಮತೆ ವಿಮರ್ಶೆ’ ತೃಪ್ತಿಕರ ಎನಿಸಿದ ಬಳಿಕವೂ ಸಂಬಂಧಪಟ್ಟ ಸಮಿತಿ ನೌಕರನ ಕುರಿತು ಹೆಚ್ಚಿನ ಪರಿಶೀಲನೆಯನ್ನು ನಡೆಸಬಹುದು ಮತ್ತು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೌಕರರನ್ನು ಉಳಿಸಿಕೊಳ್ಳುವ ನಿರ್ಧಾರ ಪ್ರಕಟಿಸಿದ ಬಳಿಕವೂ ನಿವೃತ್ತಿ ವಯಸ್ಸಿನವರೆಗೆ ಆತನನ್ನು ವೃತ್ತಿಯಲ್ಲಿ ಮುಂದುವರಿಸಬೇಕೆಂದಿಲ್ಲ. ಯಾವುದೇ ಸಂದರ್ಭದಲ್ಲಿ ಮರು ಪರಿಶೀಲನೆ ನಡೆಸಿ, ಅಗತ್ಯಬಿದ್ದಲ್ಲಿ ನಿವೃತ್ತಿಗೊಳಿಸುವ ಅಧಿಕಾರವಿರಲಿದೆ ಎಂದು ಸಿಬ್ಬಂದಿ ಸಚಿವಾಲಯದ ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − four =
Remember me
