ನವದೆಹಲಿ:ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ಮತ್ತೆ ಕಾವೇರುತ್ತಿರುವ ಸಂದರ್ಭದಲ್ಲೇ ಅನ್ನದಾತರಿಗೆ ಗರಿಷ್ಠ ಆದಾಯ ಖಾತರಿ ಪಡಿಸಿ, ವೈವಿಧ್ಯ ಬೆಳೆ ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್​ಪಿ) ಹೆಚ್ಚಿಸಲು ನಿರ್ಧರಿಸುವ ಮೂಲಕ ರೈತರಿಗೆ ಗೌರಿ-ಗಣೇಶ ಹಬ್ಬದ ಉಡುಗೊರೆ ನೀಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಮಾನ್ಯ ಮಾಡಿದ ಎಲ್ಲ ಹಿಂಗಾರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಿಸಲು ತೀರ್ಮಾನ ತೆಗೆದುಕೊಂಡಿದೆ. ಖಾರಿಫ್ (ಮುಂಗಾರು) ಬೆಳೆ ಕಟಾವು ಮಾಡಿದ ಕೂಡಲೇ ಹಿಂಗಾರು ಬೆಳೆಗಳ ಬಿತ್ತನೆ ಕಾರ್ಯ ಅಕ್ಟೋಬರ್​ನಲ್ಲಿ ಶುರುವಾಗಲಿದೆ. ಸಚಿವ ಸಂಪುಟ ತೀರ್ವನದ ಪ್ರಕಾರ, ಗೋಧಿಯ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್​ಗೆ 40 ರೂಪಾಯಿ, ಸಾಸಿವೆಗೆ ಕ್ವಿಂಟಾಲ್​ಗೆ 400 ರೂಪಾಯಿ ಹೆಚ್ಚಳವಾಗಲಿದೆ. ಇದೇ ರೀತಿ ವಿವಿಧ ಬೆಳೆಗಳ ಬೆಂಬಲ ಬೆಲೆ ಹೆಚ್ಚಳದ ಪ್ರಸ್ತಾವನೆಯನ್ನು ಸಂಪುಟ ಅಂಗೀಕರಿಸಿದೆ. ಕೇಂದ್ರ ಸರ್ಕಾರವು 2018-19ರ ಮುಂಗಡಪತ್ರದಲ್ಲಿ ಘೋಷಿಸಿದಂತೆ ಅಖಿಲ ಭಾರತ ಮಟ್ಟದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಹೆಚ್ಚು ಎಂಎಸ್​ಪಿ ಸಿಗುವಂತೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಗೋಧಿ, ರ್ಯಾಪ್ಸೀಡ್ ಮತ್ತು ಸಾಸಿವೆಗಳಿಗೆ ಶೇಕಡ 100, ಮಸೂರಕ್ಕೆ ಶೇ.79, ಕಡಲೆಗೆ ಶೇಕಡ 74, ಬಾರ್ಲಿಗೆ ಶೇಕಡ 60, ಕುಸುಮಬೀಜಕ್ಕೆ ಶೇಕಡ 50ರಷ್ಟು ಕೃಷಿಕರು ಹೂಡಿಕೆ ಮಾಡಿದ ಉತ್ಪಾದನಾ ವೆಚ್ಚ ಎಂಎಸ್​ಪಿ ಮೂಲಕ ಅವರಿಗೆ ವಾಪಸ್ ಸಿಗಲಿದೆ.
ಎನ್​ಎಂಇಒ-ಒಪಿ ನೆರವು:ಎಂಎಸ್​ಪಿಗೆ ಹೊರತಾಗಿ, ಕೇಂದ್ರ ಸರ್ಕಾರ ಘೋಷಿಸಿದ ನ್ಯಾಷನಲ್ ಮಿಷನ್ ಆನ್ ಎಡಿಬಲ್ ಆಯಿಲ್ಸ್-ಆಯಿಲ್ ಪಾಮ್ (ಎನ್​ಎಂಇಒ-ಒಪಿ) ಮೂಲಕ ಖಾದ್ಯ ತೈಲಗಳ ಉತ್ಪಾದನೆ ಹೆಚ್ಚಿಸಿ ಆಮದು ತಗ್ಗಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ 11,040 ಕೋಟಿ ರೂಪಾಯಿ ಮೀಸಲಿಟ್ಟಿದೆ.
ಪಿಎಂ-ಆಶಾ ಪ್ರಾಯೋಗಿಕ ಅನುಷ್ಠಾನ:ಕೇಂದ್ರ ಸರ್ಕಾರ 2018ರಲ್ಲಿ ಘೋಷಿಸಿದ ಪ್ರಧಾನ ಮಂತ್ರಿ ಅನ್ನದಾತ ಆದಾಯ ಸಂರಕ್ಷಣೆ ಅಭಿಯಾನ (ಪಿಎಂ-ಆಶಾ) ಅಧೀನದಲ್ಲಿ ಕೃಷಿಕರಿಗೆ ರೆಮ್ಯುನರೇಟಿವ್ ರಿಟರ್ನ್ ಮೂಲಕ ನೆರವು ಒದಗಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದರಲ್ಲಿ ಮೂರು ಉಪ ಯೋಜನೆಗಳಿದ್ದು, ಬೆಲೆ ಬೆಂಬಲ ಯೋಜನೆ (ಪಿಎಸ್​ಎಸ್) ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್), ಖಾಸಗಿ ಸಂಗ್ರಹಣೆ ಮತ್ತು ಸ್ಟಾಕಿಸ್ಟ್ ಯೋಜನೆ (ಪಿಪಿಎಸ್​ಎಸ್)ಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
56 ಸಾರಿಗೆ ಏರ್​ಕ್ರಾಫ್ಟ್ ಡೀಲ್:ಭಾರತೀಯ ವಾಯುಪಡೆಗಾಗಿ 56 ಟ್ರಾನ್ಸ್ ಪೋರ್ಟ್ ಏರ್​ಕ್ರಾಫ್ಟ್ ಖರೀದಿಸುವ ಒಪ್ಪಂದದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. ಇದರಲ್ಲಿ 40 ವಿಮಾನಗಳನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತದೆ. ಸಿ-295 ಎಂಡಬ್ಲ್ಯು ಟ್ರಾನ್ಸ್​ಪೋರ್ಟ್ ಏರ್​ಕ್ರಾಫ್ಟ್ ಗಳನ್ನು ಖರೀದಿಸುವ ಒಪ್ಪಂದ ಇದು. ಟಾಟಾ ಕನ್ಸೋರ್ಟಿಯಂ ಮುಂದಿನ 10 ವರ್ಷದೊಳಗೆ 40 ವಿಮಾನಗಳನ್ನು ಉತ್ಪಾದಿಸಿ ಕೊಡಬೇಕು. ಉಳಿದ 16 ಏರ್​ಕ್ರಾಫ್ಟ್​ಗಳನ್ನು ಸ್ಪೇನ್​ನಿಂದ ಖರೀದಿಸಲಾಗುತ್ತದೆ.
ಜವಳಿಗೂ ಪಿಎಲ್​ಐ ಸ್ಕೀಮ್
ಜವಳಿ ಕ್ಷೇತ್ರಕ್ಕೂ ಪ್ರೊಡಕ್ಷನ್ ಲಿಂಕ್ಡ್ ಇನ್​ಸೆಂಟಿವ್ (ಪಿಎಲ್​ಐ) ವಿಸ್ತರಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. ಎಂಎಂಎಫ್ ಅಪ್ಪಾರೆಲ್, ಎಂಎಂಎಫ್ ಫ್ಯಾಬ್ರಿಕ್ಸ್ ಮತ್ತು ಟೆಕ್ನಿಕಲ್ ಟೆಕ್ಸ್​ಟೈಲ್ಸ್​ನ 10 ಸೆಗ್ಮೆಂಟ್ಸ್/ಪ್ರಾಡಕ್ಟ್ ್ಸಳಿಗೆ 10,683 ಕೋಟಿ ರೂಪಾಯಿ ಪಿಎಲ್​ಐ ಒದಗಿಸುವ ಅಂಶ ಇದರಲ್ಲಿದೆ. ಈ ವರ್ಷದ ಬಜೆಟ್​ನಲ್ಲಿ ಕೇಂದ್ರ ಸರ್ಕಾರವು 13 ಸೆಕ್ಟರ್​ಗಳಿಗೆ ಒಟ್ಟು 1.97 ಲಕ್ಷ ಕೋಟಿ ರೂ. ಪಿಎಲ್​ಐ ಘೋಷಿಸಲಾಗಿತ್ತು. ಇದರ ಮೂಲಕ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕನಿಷ್ಠ 37.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಉತ್ಪಾದನೆ, ಕನಿಷ್ಠ 1 ಕೋಟಿ ಉದ್ಯೋಗ ಸೃಜನೆಯನ್ನು ನಿರೀಕ್ಷಿಸಲಾಗುತ್ತದೆ.
56 ಸಾರಿಗೆ ಏರ್​ಕ್ರಾಫ್ಟ್ ಡೀಲ್
ಭಾರತೀಯ ವಾಯುಪಡೆಗಾಗಿ 56 ಟ್ರಾನ್ಸ್​ಪೋರ್ಟ್ ಏರ್​ಕ್ರಾಫ್ಟ್ ಖರೀದಿಸುವ 21 ಸಾವಿರ ಕೋಟಿ ರೂ. ಮೌಲ್ಯದ ಏರ್​ಬಸ್-ಟಾಟಾ ಯೋಜನೆಯ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅಂಗೀಕಾರ ನೀಡಿದೆ. ಇದರಲ್ಲಿ 40 ವಿಮಾನಗಳನ್ನು ಟಾಟಾ ಸಮೂಹ ಮುಂದಿನ 10 ವರ್ಷಗಳಲ್ಲಿ ಭಾರತದಲ್ಲೇ ಉತ್ಪಾದಿಸಲಿದ್ದರೆ, ಬಾಕಿ 16 ವಿಮಾನಗಳನ್ನು ಒಪ್ಪಂದ ಜಾರಿಗೆ ಬಂದ 2 ವರ್ಷಗಳ ಒಳಗೆ ಸ್ಪೇನ್​ನ ಏರ್​ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಸಂಸ್ಥೆ ನೀಡಲಿದೆ. ಈವರೆಗೆ ಬಳಕೆಯಲ್ಲಿದ್ದ ಅವ್ರೋ 748 ವಿಮಾನಗಳ ಸ್ಥಾನವನ್ನು 5-10 ಟನ್ ತೂಕ ಸಾಗಿಸಬಲ್ಲ ಸಾಮರ್ಥ್ಯದ ಹೊಸ ಟ್ವಿನ್ ಟರ್ಬೆಪ್ರೊಪ್ ಸಿ-295 ಎಂಡಬ್ಲ್ಯು ವಿಮಾನಗಳು ತುಂಬಲಿವೆ. ವಿದೇಶಿ ಸಂಸ್ಥೆಯಿಂದ ಏರ್​ಕ್ರಾಫ್ಟ್ ತಂತ್ರಜ್ಞಾನ ಪಡೆದುಕೊಂಡು ಟಾಟಾ ಸಮೂಹ 40 ಸಿ-295 ವಿಮಾನ ಉತ್ಪಾದಿಸುವ ಅವಕಾಶ ಪಡೆಯುವ ಮೂಲಕ ದೇಶದಲ್ಲಿ ಸೇನಾ ಏರ್​ಕ್ರಾಫ್ಟ್ ಉತ್ಪಾದನೆಗೆ ಅವಕಾಶ ಪಡೆದ ಮೊದಲ ಖಾಸಗಿ ಸಂಸ್ಥೆಯೆನಿಸಲಿದೆ. ತನ್ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ಹೊಂದಿದ್ದ ಏಕಸ್ವಾಮ್ಯ ಕೈತಪ್ಪಲಿದೆ.
ಕಬ್ಬು ಬೆಳೆಗಾರರಿಗೆ ಬಲ
ಕಬ್ಬು ಬೆಳೆಗಾರರಿಗೆ ಅನುಕೂಲವಾಗುವಂತೆ ಫೇರ್ ಆಂಡ್ ರೆಮ್ಯುನರೇಟಿವ್ ಪ್ರೖೆಸ್​ಗೆ (ಎಫ್​ಆರ್​ಪಿ) ಸಂಬಂಧಿಸಿದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. ಇದರಂತೆ ಮುಂದಿನ ಮಾರುಕಟ್ಟೆ ವರ್ಷಕ್ಕೆ ಸಂಬಂಧಿಸಿ ಕ್ವಿಂಟಾಲ್​ಗೆ 5 ರೂಪಾಯಿ ಏರಿಸಲಾಗಿದ್ದು, 290 ರೂಪಾಯಿ ಎಫ್​ಆರ್​ಪಿ ದೇಶದ 5 ಕೋಟಿಗೂ ಅಧಿಕ ಕಬ್ಬು ಬೆಳೆಗಾರರಿಗೆ ಸಿಗಲಿದೆ. ಹೊಸ ಬೆಲೆ ನಿಗದಿ ಶೇಕಡ 10 ರಿಕವರಿ ಆಧಾರಿತವಾಗಿರಲಿದೆ. ಒಂದೊಮ್ಮೆ ರೈತರ ರಿಕವರಿ ಶೇಕಡ 9.5ಕ್ಕಿಂತ ಕಡಿಮೆ ಇದ್ದರೂ ಇದು ಅನ್ವಯವಾಗಲಿದ್ದು, ಅವರು ಕ್ವಿಂಟಾಲ್​ಗೆ 275 ರೂಪಾಯಿ ಎಫ್​ಆರ್​ಪಿ ಪಡೆಯಲಿದ್ದಾರೆ ಎಂದು ಸಚಿವ ಪಿಯೂಷ್ ಗೋಯೆಲ್ ವಿವರಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 4 =
Remember me
