ಭದ್ರತೆಗಾಗಿ ನೇಮಿಸಲ್ಪಟ್ಟ ಸಿಖ್ ಅಂಗರಕ್ಷಕರಿಂದಲೇ ಕೊಲೆಗೀಡಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಸಂಭ್ರಮಾಚರಣೆಯ ಮೆರವಣಿಗೆಯೊಂದು ಜೂನ್ 4ರಂದು ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಜರುಗಿತು. ಅಮೃತಸರದ ಸ್ವರ್ಣ ಮಂದಿರದಿಂದ ಖಲಿಸ್ತಾನಿ ಉಗ್ರಗಾಮಿಗಳನ್ನು ಹೊರಹಾಕಲು ನಡೆದ ಸೇನಾ ಕಾರ್ಯಾಚರಣೆಯೇ ಆಪರೇಷನ್ ಬ್ಲೂಸ್ಟಾರ್. ಇದರ 39ನೇ ವಾರ್ಷಿಕೋತ್ಸವವನ್ನು ಜೂನ್ 6 ರಂದು ಆಚರಿಸಲಾಯಿತು. ಅದರ ಪೂರ್ವಭಾವಿಯಾಗಿ ಜೂನ್ 4ರಂದು ಕೆನಡಾದ ಒಂಟಾರಿಯೊದ ಬ್ರಾಂಪ್ಟನ್​ನಲ್ಲಿ ಖಲಿಸ್ತಾನ ಬೆಂಬಲಿಗರು ಮೆರವಣಿಗೆಯನ್ನು ಆಯೋಜಿಸಿದ್ದರು. ಐದು ಕಿ.ಮೀ. ಉದ್ದದ ಮೆರವಣಿಗೆಯ ಸ್ತಬ್ಧಚಿತ್ರ ಇಂದಿರಾ ಗಾಂಧಿ ಅವರ ಹತ್ಯೆಯ ಸಂಭ್ರಮವನ್ನು ಆಚರಿಸುವಂತಿತ್ತು. ಕೈಗಳನ್ನು ಮೇಲಕ್ಕೆತ್ತಿದ್ದ ಒಂದು ಹೆಣ್ಣಿನ ಆಕೃತಿಯನ್ನು ರಕ್ತದ ಕಲೆಯುಳ್ಳ ಬಿಳಿ ಸೀರೆಯಲ್ಲಿ ತೋರಿಸಲಾಗಿತ್ತು. ಪೇಟಾಧಾರಿ ಪುರುಷರು ಅವಳತ್ತ ಗುರಿ ಮಾಡಿ ಗನ್ ಹಿಡಿದಿದ್ದರು. ತೆರೆಮರೆಯ ಪೋಸ್ಟರ್​ನಲ್ಲಿ ‘ದರ್ಬಾರ್ ಸಾಹಿಬ್ ಮೇಲಿನ ದಾಳಿಗೆ ಪ್ರತೀಕಾರ’ಎಂದು ಬರೆಯಲಾಗಿತ್ತು.
ಈ ಮೆರವಣಿಗೆಗೆ ಭಾರತವು ಬಲವಾದ ಆಕ್ಷೇಪಣೆ ವ್ಯಕ್ತಪಡಿಸಿತು. ವಿದೇಶಾಂಗ ಸಚಿವ ಎಸ್. ಜೈಶಂಕರ್ ‘ದ್ವಿಪಕ್ಷೀಯ ಸಂಬಂಧಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇದು ಕೆನಡಾಕ್ಕೆ ಒಳ್ಳೆಯದಲ್ಲ’ ಎಂದು ಕಟುವಾಗಿ ಪ್ರತಿಕ್ರಿಯಿಸಿದರು.ಕಾಂಗ್ರೆಸ್ ನಾಯಕ ಮಿಲಿಂದ್ ದಿಯೋರಾ ಅವರು, ‘ಇಂದಿರಾ ಗಾಂಧಿ ಅವರ ಹತ್ಯೆಯನ್ನು ಬಿಂಬಿಸುವ ಮೆರವಣಿಗೆಯ ಕುರಿತಂತೆ ಒಬ್ಬ ಭಾರತೀಯನಾಗಿ ನಾನು ದಿಗ್ಭ›ಮೆಗೊಂಡಿದ್ದೇನೆ’ ಎಂದರು.
ಭಾರತದಲ್ಲಿ ಭಯೋತ್ಪಾದನೆ ಆರೋಪ ಹೊತ್ತಿರುವ ಖಲಿಸ್ತಾನ ಬೆಂಬಲಿಗರು ಮತ್ತು ಉಗ್ರಗಾಮಿಗಳಿಗೆ ಕೆನಡಾವನ್ನು ಬಹಳ ಹಿಂದಿನಿಂದಲೂ ಸುರಕ್ಷಿತ ಸ್ವರ್ಗವೆಂದು ಪರಿಗಣಿಸಲಾಗಿದೆ. ಖಲಿಸ್ತಾನಿಗಳ ಸವಾಲಿಗೆ ಕೆನಡಾದ ಸೌಮ್ಯ ಪ್ರತಿಕ್ರಿಯೆ ಕುರಿತಂತೆ 1982ರಲ್ಲಿಯೇ ಭಾರತೀಯ ರಾಜಕಾರಣಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಅಂದಿನ ಕೆನಡಾ ಪ್ರಧಾನಿ ಪಿಯರೆ ಟ್ರುಡೊಗೆ ಅವರಿಗೆ ದೂರು ನೀಡಿದ್ದರು ಎಂದು ಟೆರ್ರಿ ಮಿಲೆವ್ಸಿ್ಕ ಅವರು ‘ಬ್ಲಡ್ ಫಾರ್ ಬ್ಲಡ್: ಫಿಫ್ಟಿ ಇಯರ್ಸ್ ಆಫ್ ಗ್ಲೋಬಲ್ ಖಲಿಸ್ತಾನ ಪ್ರೊಜೆಕ್ಟ್’ (2021) ಕೃತಿಯಲ್ಲಿ ಬರೆದಿದ್ದಾರೆ. 1968ರಿಂದ 1979ರವರೆಗೆ ಮತ್ತು ನಂತರ 1980ರಿಂದ 1984ರವರೆಗೆ ಪ್ರಧಾನಿಯಾಗಿದ್ದ ಪಿಯರೆ ಟ್ರುಡೊ ಅವರು ಕೆನಡಾದ ಪ್ರಸ್ತುತ ನಾಯಕ ಜಸ್ಟಿನ್ ಟ್ರುಡೊ ಅವರ ತಂದೆ.
ಸಿಖ್ಖರ ಪ್ರಮುಖ ಹಬ್ಬವಾದ ವೈಶಾಖಿ ದಿನದಂದು ಏನಿಲ್ಲೆಂದರೂ ಒಂದು ಲಕ್ಷ ಜನರು ಸೇರುತ್ತಾರೆ. ಕೆನಡಾದಂತಹ ದೇಶದಲ್ಲಿ ಇಷ್ಟೊಂದು ಜನಸಂದಣಿ ಸೇರುವುದು ಸುಲಭವಲ್ಲ. ಚುನಾವಣೆಯಲ್ಲಿ ಮತ ಕಳೆದುಕೊಳ್ಳುವ ಭೀತಿಯಿಂದ ಇವರ ವಿಷಯದಲ್ಲಿ ಕೆನಡಾ ರಾಜಕಾರಣಿಗಳು ಮೌನ ವಹಿಸುತ್ತ ಬಂದಿದ್ದಾರೆ ಎಂದು ಮಿಲೆವ್ಸಿ್ಕ ಬರೆದಿದ್ದಾರೆ. 2021ರ ಕೆನಡಾದ ಜನಗಣತಿಯ ಪ್ರಕಾರ, ಸಿಖ್ಖರು ಅಲ್ಲಿನ ಜನಸಂಖ್ಯೆಯ ಶೇಕಡಾ 2.1 ರಷ್ಟಿದ್ದಾರೆ. ಅಲ್ಲದೆ, ಆ ದೇಶದಲ್ಲಿ ಬೆಳೆಯುತ್ತಿರುವ ಧಾರ್ವಿುಕ ಗುಂಪು ಇದಾಗಿದೆ. ಭಾರತದ ನಂತರ, ಕೆನಡಾವು ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಸಿಖ್ಖರ ನೆಲೆಯಾಗಿದೆ.
ಸಿಖ್ ಶಾಸಕರು ಮತ್ತು ಅಧಿಕಾರಿಗಳು ಕೆನಡಾ ಸರ್ಕಾರದ ಎಲ್ಲಾ ಹಂತಗಳಲ್ಲಿದ್ದಾರೆ. ಅಲ್ಲದೆ, ದೇಶದ ರಾಜಕೀಯ ಕ್ಷೇತದಲ್ಲಿ ಪ್ರಾಮುಖ್ಯ ಪಡೆದುಕೊಳ್ಳುತ್ತಿದ್ದಾರೆ. 2017ರಲ್ಲಿ, 39 ವರ್ಷದ ಜಗ್ಮೀತ್ ಸಿಂಗ್ ಅವರು ಎಡ ಒಲವಿನ ನ್ಯೂ ಡೆಮಾಕ್ರಟಿಕ್ ಪಕ್ಷದ (ಎನ್​ಡಿಪಿ) ಆಡಳಿತ ವಹಿಸಿಕೊಳ್ಳುವ ಮೂಲಕ ಕೆನಡಾ ರಾಜಕೀಯ ಪಕ್ಷವೊಂದರ ಮೊದಲ ಸಿಖ್ ನಾಯಕರಾದರು. ‘ಕೆನಡಾದ ಎಲ್ಲ ಸಿಖ್ಖರು ಖಲಿಸ್ತಾನ ಬೆಂಬಲಿಗರಲ್ಲ. ಅಲ್ಲದೆ, ಸಿಖ್ ಸಮುದಾಯದ ಬಹುತೇಕರಿಗೆ ಖಲಿಸ್ತಾನ ಮಹತ್ವದ ವಿಷಯವೇ ಅಲ್ಲ. ಆದರೆ, ಮತಗಳನ್ನು ಕಳೆದುಕೊಳ್ಳಲು ಬಯಸದ ರಾಜಕಾರಣಿಗಳು ಒಂದಿಷ್ಟು ಖಲಿಸ್ತಾನಿಗಳನ್ನು ಕೆನಡಾದ ಎಲ್ಲ ಸಿಖ್ಖರು ಎಂದು ತಪ್ಪಾಗಿ ಭಾವಿಸುತ್ತಾರೆ’ ಎಂದು ಮಿಲೆವ್ಸಿ್ಕ ವಿವರಿಸುತ್ತಾರೆ.
2002ರಲ್ಲಿ ಟೊರಾಂಟೊ ಮೂಲದ ಪಂಜಾಬಿ ಭಾಷೆಯ ವಾರಪತ್ರಿಕೆ ‘ಸಾಂಜ್ ಸವೇರಾ’ದಲ್ಲಿ ಇಂದಿರಾ ಗಾಂಧಿ ಅವರ ಕೊಲೆಯ ಚಿತ್ರಣವಿರುವ ಮುಖಪುಟದೊಂದಿಗೆ ಸಾವಿನ ವಾರ್ಷಿಕೋತ್ಸವದ ಶುಭಾಶಯ ಕೋರಲಾಗಿತ್ತು.ಈ ನಿಯತಕಾಲಿಕವು ಸರ್ಕಾರಿ ಜಾಹೀರಾತುಗಳನ್ನು ಪಡೆಯುತ್ತಿದ್ದು, ಕೆನಡಾದಲ್ಲಿ ಪ್ರಮುಖ ಪತ್ರಿಕೆಯಾಗಿದೆ. ಕೆನಡಾದಲ್ಲಿ ಅತಿಹೆಚ್ಚು ಸಂಖ್ಯೆಯ ಸಿಖ್ ಜನರಿಗೆ ನೆಲೆಯಾಗಿರುವ ಬ್ರಾಂಪ್ಟನ್​ನಲ್ಲಿ ಕಳೆದ ವರ್ಷ ‘ಸಿಖ್ಸ್ ಫಾರ್ ಜಸ್ಟಿಸ್’ (ಎಸ್​ಎಫ್​ಜೆ) ಎಂಬ ಖಲಿಸ್ತಾನ ಪರ ಸಂಘಟನೆಯು ಖಲಿಸ್ತಾನಕ್ಕಾಗಿ ಜನಮತಸಂಗ್ರಹ ಅಭಿಯಾನ ಕೈಗೊಂಡಿತ್ತು. 100,000 ಕ್ಕೂ ಹೆಚ್ಚು ಜನರು ಖಲಿಸ್ತಾನ ಪರ ಬೆಂಬಲ ವ್ಯಕ್ತಪಡಿಸಿದರು ಎಂದು ಸಂಘಟಕರು ಹೇಳಿದರು.
ಭಾರತದಲ್ಲಿ ಎಸ್​ಎಫ್​ಜೆ ನಿಷೇಧ:ಭಯೋತ್ಪಾದಕರೆಂದು ಭಾರತವು ಪರಿಗಣಿಸಿರುವ ಇಂತಹ ಎಲ್ಲ ವ್ಯಕ್ತಿಗಳನ್ನು ಕೆನಡಾ ಕೂಡ ಭಯೋತ್ಪಾದಕರು ಎಂದೇ ಗುರುತಿಸಬೇಕು ಎಂದೂ ಭಾರತ ಆಗ್ರಹಿಸಿದೆ. ಎಸ್​ಎಫ್​ಜೆ ಭಾರತದಲ್ಲಿ ಕಾನೂನುಬಾಹಿರ ಸಂಸ್ಥೆಯಾಗಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಗುಪ್ತಚರ ಕೇಂದ್ರ ಕಚೇರಿಯಲ್ಲಿ ನಡೆದ ರಾಕೆಟ್​ಚಾಲಿತ ಗ್ರೆನೇಡ್ (ಆರ್​ಪಿಜಿ) ದಾಳಿಯೊಂದಿಗೆ ಸಂಬಂಧ ಹೊಂದಿದೆ.
ಪ್ರತ್ಯೇಕ ಸಿಖ್ ರಾಜ್ಯಕ್ಕಾಗಿ ಮೊದಲ ಘೊಷಣೆಯನ್ನು ಅಮೆರಿಕದಲ್ಲಿ ಮಾಡಲಾಯಿತು. 1971ರ ಅಕ್ಟೋಬರ್ 12ರಂದು ನ್ಯೂಯಾರ್ಕ್ ಟೈಮ್್ಸ ದಿನಪತ್ರಿಕೆಯಲ್ಲಿನ ಜಾಹೀರಾತು ಖಲಿಸ್ತಾನದ ಜನ್ಮವನ್ನು ಘೊಷಿಸಿತು. ‘ಇಂದು ನಾವು ವಿಜಯವನ್ನು ಸಾಧಿಸುವವರೆಗೆ ಅಂತಿಮ ಹೋರಾಟವನ್ನು ಪ್ರಾರಂಭಿಸುತ್ತಿದ್ದೇವೆ … ನಮ್ಮ ಹಕ್ಕಿನ ಪ್ರಕಾರ ನಾವು ನಮ್ಮ ರಾಷ್ಟ್ರವಾಗಿದ್ದೇವೆ’ ಎಂದು ಜಾಹೀರಾತಿನಲ್ಲಿ ಹೇಳಲಾಗಿತ್ತು. ಪಂಜಾಬ್​ನಲ್ಲಿ ದಂಗೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ, ಪಾಕಿಸ್ತಾನ ಮತ್ತು ಚೀನಾ ಖಲಿಸ್ತಾನಿ ಉಗ್ರಗಾಮಿಗಳಿಗೆ ಸಲಕರಣೆಗಳ ಮೂಲಕ ಬೆಂಬಲವನ್ನು ನೀಡುತ್ತಿದ್ದವು. ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಉಗ್ರರು ಚೀನಾ ನಿರ್ವಿುತ ಆರ್​ಪಿಜಿಗಳನ್ನು (ರಾಕೆಟ್ ಚಾಲಿತ ಗ್ರೆನೇಡ್) ಹೊಂದಿದ್ದರು. ಈ ಕಾರಣದಿಂದಲೇ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಟ್ಯಾಂಕ್​ಗಳನ್ನು ಉಪಯೋಗಿಸುವ ಅನಿವಾರ್ಯತೆ ಸೃಷ್ಟಿಯಾಯಿತು.
ಇಂದು, ಪ್ರತ್ಯೇಕ ಖಲಿಸ್ತಾನ ಆಂದೋಲನವು ಭಾರತದೊಳಗಿನ ಸಿಖ್ಖರ ಬೆಂಬಲವನ್ನು ಬಹುತೇಕವಾಗಿ ಕಳೆದುಕೊಂಡಿದೆ. ಆದರೆ, ಕೆನಡಾ, ಅಮೆರಿಕ ಮತ್ತು ಬ್ರಿಟನ್ ಮುಂತಾದ ದೇಶಗಳಲ್ಲಿ ಕೆಲವರಲ್ಲಿ ಉಳಿದುಕೊಂಡಿದೆ. ‘ಪಂಜಾಬ್​ನ ನೆಲದ ಪ್ರಸ್ತುತ ವಾಸ್ತವಗಳ ಅರಿವಿನ ಕೊರತೆಯಿಂದಾಗಿ ವಿದೇಶಗಳಲ್ಲಿ ಖಲಿಸ್ತಾನಕ್ಕೆ ಬೆಂಬಲವಿದೆ’ ಎಂದು ಮಿಲೆವ್ಸಿ್ಕ ಹೇಳುತ್ತಾರೆ. 1980ರ ದಶಕದಲ್ಲಿ ಖಲಿಸ್ತಾನ ಚಳವಳಿ ಉತ್ತುಂಗದಲ್ಲಿದ್ದಾಗ ಮತ್ತು ಭಾರತ ಸರ್ಕಾರವು ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಮೇಲೆ ಕಠಿಣ ಕ್ರಮ ಕೈಗೊಂಡ ಸಂದರ್ಭದಲ್ಲಿ, ತಲೆಮರೆಸಿಕೊಳ್ಳಲು ಸಾಕಷ್ಟು ಜನರು ವಿದೇಶಗಳಿಗೆ ತೆರಳಿದರು. ಇಂತಹ ಜನರಲ್ಲಿ ಚಳವಳಿಯನ್ನು ಜೀವಂತವಾಗಿರಿಸಿವೆ. ಹೀಗಿದ್ದರೂ ವಿದೇಶಿ ಸಿಖ್ಖರಲ್ಲಿ ಖಲಿಸ್ತಾನ ಪ್ರತ್ಯೇಕತಾ ಚಳವಳಿಗೆ ಬೆಂಬಲ ವ್ಯಾಪಕವಾಗಿ ಕ್ಷೀಣಿಸುತ್ತಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
