ನವದೆಹಲಿ:ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್​ ನಿಜ್ಜರ್​ ಹತ್ಯೆ ವಿಚಾರದಲ್ಲಿ ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷ ತಾರಕಕ್ಕೇರಿದ್ದು, ಮತ್ತೊಂದು ಮಹತ್ವದ ಬೆಳವಣಿಗೆ ಇಂದು ನಡೆದಿದೆ. ಕೆನಡಾ, ಭಾರತದಿಂದ ತನ್ನ 41 ರಾಜತಾಂತ್ರಿಕರನ್ನು ವಾಪಸ್​ ಕರೆಸಿಕೊಳ್ಳುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಪ್ರವಾಸದ ಸಲಹೆಗಳನ್ನು ನೀಡುವ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
41 ರಾಜತಾಂತ್ರಿಕರನ್ನು ವಾಪಸ್​ ಕರೆಸಿಕೊಳ್ಳುವ ಮೂಲಕ ಕೆನಡಾ, ಭಾರತದಲ್ಲಿನ ತನ್ನ ರಾಯಭಾರ ಕಚೇರಿಗಳನ್ನು ಮುಚ್ಚಿದೆ. ಬಹುತೇಕ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಕಡಿತಗೊಂಡಿದ್ದು, ದೇಶದಾದ್ಯಂತ ಭಯೋತ್ಪಾದಕ ದಾಳಿಯ ಬೆದರಿಕೆಯಿಂದಾಗಿ ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ತುಂಬಾ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ.
ಕೆನಡಾ ಮತ್ತು ಭಾರತದ ನಡುವೆ ಇತ್ತೀಚಿಗೆ ನಡೆದ ಬೆಳವಣಿಗೆಗಳ ಸಂದರ್ಭದಲ್ಲಿ, ಕೆಲ ಸಾಂಪ್ರದಾಯಿಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೆನಡಾ ವಿರುದ್ಧ ಪ್ರತಿಭಟನೆಗಳು ಹಾಗೂ ಕೆಲವು ನಕಾರಾತ್ಮಕ ಮಾತುಗಳು ಕೇಳಿಬಂದಿವೆ. ಹೀಗಾಗಿ ಕೆನಡಾ ವಿರೋಧಿ ಪ್ರತಿಭಟನೆಗಳು ಸೇರಿದಂತೆ ಆಘಾತಕಾರಿ ಘಟನೆಗಳು ಸಂಭವಿಸಬಹುದು ಮತ್ತು ಕೆನಡಿಯನ್ನರು ಬೆದರಿಕೆ ಅಥವಾ ಕಿರುಕುಳಕ್ಕೆ ಒಳಗಾಗಬಹುದು. ದೆಹಲಿ ಮತ್ತು ಸುತ್ತುಮುತ್ತಲಿನ ಪ್ರದೇಶದಲ್ಲಿರುವ ಕೆನಡಿಯನ್ನರು ತುಂಬಾ ಎಚ್ಚರಿಕೆ ವಹಿಸಿ, ಯಾರೊಂದಿಗು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು ತನ್ನ ಪ್ರಜೆಗಳಿಗೆ ಕೆನಡಾ ಹೊರಡಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಇಂದು ಮುಂಜಾನೆಯಷ್ಟೇ ಕೆನಡಾ ತನ್ನ 41 ರಾಜತಾಂತ್ರಿಕರು ಮತ್ತು ಅವರ ಕುಟುಂಬದ ಸದಸ್ಯರನ್ನು ಭಾರತದಿಂದ ವಾಪಸ್​ ಕರೆಸಿಕೊಂಡಿದೆ. ರಾಜತಾಂತ್ರಿಕ ವಿನಾಯಿತಿಯನ್ನು ಹಿಂತೆಗೆದುಕೊಳ್ಳುವ ಎಚ್ಚರಿಕೆಯನ್ನು ಭಾರತ ನೀಡಿದ ಬಳಿಕ ಕೆನಡಾ ಈ ಕ್ರಮ ತೆಗೆದುಕೊಂಡಿದೆ. ಮುಂಬೈ, ಚಂಡೀಗಢ ಮತ್ತು ಬೆಂಗಳೂರಿನಲ್ಲಿರುವ ದೂತವಾಸ ಕಚೇರಿಗಳಲ್ಲಿನ ಎಲ್ಲ ವೈಯಕ್ತಿಕ ಸೇವೆಗಳನ್ನು ಕೆನಡಾ ಸ್ಥಗಿತಗೊಳಿಸಿದೆ. ಈ ಮೂರು ನಗರಗಳಲ್ಲಿರುವ ತನ್ನ ನಾಗರಿಕರು ಎಚ್ಚರಿಕೆ ವಹಿಸುವಂತೆ ಒತ್ತಾಯಿಸಿದೆ. ಭಾರತದಲ್ಲಿರುವ ಎಲ್ಲ ಕೆನಡಿಯನ್ನರಿಗೆ ಸಹಾಯದ ಅಗತ್ಯವಿದ್ದರೆ ನವದೆಹಲಿಯಲ್ಲಿರುವ ಹೈಕಮಿಷನ್ ಸಂಪರ್ಕಿಸಲು ತಿಳಿಸಿದೆ.
ಜೇಬುಗಳ್ಳತನ ಮತ್ತು ಪರ್ಸ್ ದೋಚುವಿಕೆಯಂತಹ ಸಣ್ಣ ಅಪರಾಧಗಳು ಸಹ ಸಾಮಾನ್ಯವಾಗಿವೆ. ಅಪರಾಧಿಗಳು ವಿದೇಶಿಯರನ್ನು ಗುರಿಯಾಗಿಸಬಹುದು, ವಿಶೇಷವಾಗಿ ಪ್ರಮುಖ ನಗರಗಳು ಮತ್ತು ಪ್ರವಾಸಿ ಪ್ರದೇಶಗಳಲ್ಲಿ, ಜನಸಂದಣಿಯ ಸ್ಥಳಗಳಲ್ಲಿ ಜಾಗರೂಕರಾಗಿರಿ ಮತ್ತು ದೊಡ್ಡ ಮೊತ್ತದ ಹಣವನ್ನು ಸಾಗಿಸದಂತೆ ಕೆನಡಾ ತನ್ನ ನಾಗರಿಕರನ್ನು ಒತ್ತಾಯಿಸಿದೆ.
ಕೆನಡಾ ಪ್ರಧಾನಿ ಹೇಳಿಕೆ ಬಳಿಕ ಹಳಸಿದ ಸಂಬಂಧಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಸಿಖ್ ಸಮುದಾಯದ ಖಲಿಸ್ತಾನ ನಾಯಕ ಹರ್ದೀಪ್​ ಸಿಂಗ್​ ನಿಜ್ಜರ್​ ಹತ್ಯೆಯಾಗಿದ್ದ. ಕೆನಾಡದಲ್ಲಿ ಖಲಿಸ್ತಾನಿ ನಾಯಕನನ್ನು ಭಾರತ ಸರ್ಕಾರ ಹತ್ಯೆ ಮಾಡಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅಲ್ಲಿನ ಸಂಸತ್ತಿನಲ್ಲಿ ಹೇಳಿದ್ದರು. ಜಿ-20 ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗೂ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಎಂದು ಟ್ರುಡೊ ಹೇಳಿದ್ದರು. ಭಾರತದ ಕೈವಾಡದ ಬಗ್ಗೆ ಕೆನಡಾ ಸರ್ಕಾರಕ್ಕೆ ಗುಪ್ತಚರ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದ್ದರು. ಅಲ್ಲದೆ, ಕೆನಾಡದಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾ ಗಡಿಪಾರು ಮಾಡಿತು. ಈ ಆರೋಪಗಳನ್ನು ಭಾರತ ಸ್ಪಷ್ಟವಾಗಿ ನಿರಾಕರಿಸಿದೆ. ಕೆನಡಾದಲ್ಲಿ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರದ ಭಾಗಿಯಾಗಿರುವ ಆರೋಪಗಳು ಅಸಂಬದ್ಧ ಮತ್ತು ಪ್ರೇರಿತವಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೆ, ಭಾರತದಲ್ಲಿರುವ ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಗಡಿಪಾರು ಮಾಡುವ ಮೂಲಕ ತಿರುಗೇಟು ನೀಡಿತ್ತು.
ಯಾರು ಈ ನಿಜ್ಜರ್​?ಹರ್ದೀಪ್ ಸಿಂಗ್​ ನಿಜ್ಜರ್​, ಪಂಜಾಬ್ ಮೂಲದ ಖಲಿಸ್ತಾನಿ ಉಗ್ರ. 1992ರಲ್ಲಿ ಕೆನಡಾಕ್ಕೆ ವಲಸೆ ಹೋಗಿ ನೆಲೆಸಿದ್ದ. ಖಲಿಸ್ತಾನ್ ಟೈಗರ್ ಪೋರ್ಸ್ (ಕೆಟಿಎಫ್) ಮುಖ್ಯಸ್ಥನಾಗಿ ಪ್ರತ್ಯೇಕ ಖಲಿಸ್ತಾನ ರಚನೆಗೆ ಆಗ್ರಹಿಸಿ ಭಾರತದ ವಿರುದ್ಧ ಕೆಲಸ ಮಾಡುತ್ತಿದ್ದ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಆತನ ಹೆಸರೂ ಇತ್ತು. ಬ್ರಾಂಪ್ಟನ್ ನಗರದಲ್ಲಿ ಖಲಿಸ್ತಾನ ಪರವಾಗಿ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ. ನಿಜ್ಜರ್ ವಿರುದ್ಧ 2015ರಲ್ಲಿ ಭಾರತ ಲುಕ್‌ಔಟ್ ನೋಟಿಸ್, 2016ರಲ್ಲಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಕೆನಡಾದಲ್ಲಿ ನಿಜ್ಜರ್ ವಿರುದ್ಧ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ನಿಜ್ಜರ್‌ನನ್ನು ಭಾರತದ ಗುಪ್ತಚರ ಸಂಸ್ಥೆ ರಾ ಹತ್ಯೆ ಮಾಡಿದೆ ಎಂದು ಖಲಿಸ್ತಾನ್ ಪರ ಸಂಘಟನೆಗಳು ಆರೋಪ ಮಾಡಿವೆ.
ಕಲಹಕ್ಕೆ ಏನು ಕಾರಣ?* ಭಾರತದಲ್ಲಿ ಪ್ರತ್ಯೇಕತಾವಾದಿ ಹೋರಾಟ ನಡೆಸುತ್ತಿರುವ ಖಲಿಸ್ತಾನ ನಾಯಕರಿಗೆ ಕೆನಡಾ ಆಶ್ರಯ.* ಖಲಿಸ್ತಾನ ನಾಯಕರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕ* ಖಲಿಸ್ತಾನ ಮೂಲಕ ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಪಾಕಿಸ್ತಾನ ಸಂಚು* ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ಅವಕಾಶ ನೀಡುತ್ತಿದೆ ಎಂದು ಭಾರತದ ಆರೋಪ* ಇತ್ತೀಚೆಗೆ ಹಲವು ಖಲಿಸ್ತಾನಿ ನಾಯಕರ ನಿಗೂಢ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಆರೋಪ ​
ಬಿಜೆಪಿ ಶಾಸಕನ ವೆಬ್‌ಸೈಟ್ ಹ್ಯಾಕ್; ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಪೋಸ್ಟ್, ಎಫ್‌ಐಆರ್ ದಾಖಲು

ದೇಶದ ಪ್ರಥಮ ರ್ಯಾಪಿಡ್​ಎಕ್ಸ್ ಟ್ರೈನ್​ಗೆ ಪ್ರಧಾನಿ ಮೋದಿ ಹಸಿರು ನಿಶಾನೆ: ರೈಲಿನ ವಿಶೇಷತೆಗಳು ಹೀಗಿವೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fifteen =
Remember me
