ನವದೆಹಲಿ:ಕರೊನಾ ಸಾಂಕ್ರಾಮಿಕತೆಯ ಎರಡನೇ ಅಲೆ ವೇಳೆ ಸಂಭವಿಸಿದ ಕೋವಿಡ್ ರೋಗಿಗಳ ಎಲ್ಲ ಸಾವೂ ನಿರ್ಲಕ್ಷ್ಯದಿಂದ ಸಂಭವಿಸಿದೆ ಎಂದು ಭಾವಿಸಲಾಗದು ಎಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಸೋಂಕಿತರ ಸಾವು ಸಂಭವಿಸಿದ್ದು ಅದಕ್ಕಾಗಿ ಪರಿಹಾರ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿದ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸಂಬಂಧಪಟ್ಟ ಪ್ರಾಧಿಕಾರಗಳನ್ನು ಸಂರ್ಪಸುವಂತೆ ಅರ್ಜಿದಾರ ದೀಪಕ್ ರಾಜ್​ಗೆ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ವಿಕ್ರಂನಾಥ್ ಮತ್ತು ಹಿಮಾ ಕೊಹ್ಲಿ ಇದ್ದ ಪೀಠ ನಿರ್ದೇಶಿಸಿದೆ.
‘ಕೋವಿಡ್-19ರ ಪ್ರತಿ ಸಾವು ನಿರ್ಲಕ್ಷ್ಯದಿಂದ ಸಂಭವಿಸಿದ್ದೆಂದು ಊಹಿಸುವುದು ಸರಿಯಲ್ಲ. ಎರಡನೇ ಅಲೆಯ ತೀವ್ರತೆ ಭೀಕರವಾಗಿತ್ತು. ಹಾಗಾಗಿ ಈ ರೀತಿ ಯೋಚಿಸಲು ಆಗುವುದಿಲ’ ಎಂದು ಪೀಠ ಹೇಳಿದೆ. ಕರೊನಾ ಸಾಂಕ್ರಾಮಿಕತೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಒದಗಿಸಲು ಆರು ವಾರದೊಳಗೆ ಮಾರ್ಗಸೂಚಿ ಶಿಫಾರಸು ಮಾಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಿ ಜೂನ್ 30ರಂದು ತಾನು ನೀಡಿದ್ದ ತೀರ್ಪನ್ನು ಕೋರ್ಟ್ ಉಲ್ಲೇಖಿಸಿತು. ವಕೀಲ ಶ್ರೀರಾಮ್ ಪರಕಾತ್ ಅರ್ಜಿದಾರರ ಪರವಾಗಿ ಹಾಜರಾಗಿದ್ದರು.
21% ಹೆಚ್ಚಿದ ಕೇಸ್:ಭಾರತದಲ್ಲಿ ಬುಧವಾರ ಕರೊನಾ ಸಾಂಕ್ರಾಮಿಕತೆಯ 37,875 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಮಂಗಳವಾರದ್ದಕ್ಕಿಂತ ಶೇಕಡ 21.3ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 369 ಜನರು ಈ ಅವಧಿಯಲ್ಲಿ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು 3,91,256 ಸಕ್ರಿಯ ಪ್ರಕರಣಗಳಿವೆ.
ಫ್ರಿಜ್ ಅಗತ್ಯವಿಲ್ಲದ ಲಸಿಕೆ ಅಭಿವೃದ್ಧಿ:ಫ್ರಿಡ್ಜ್​ನಲ್ಲಿ ಇಡುವ ಅಗತ್ಯವೇ ಇಲ್ಲದ ಕೋವಿಡ್ ಲಸಿಕೆಯನ್ನು ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ಸಸ್ಯಗಳು ಹಾಗೂ ಬ್ಯಾಕ್ಟೀರಿಯಾ ವೈರಸ್​ಗಳ ಅಂಶಗಳಿಂದ ಈ ವಿಶಿಷ್ಟ ಲಸಿಕೆಯನ್ನು ರೂಪಿಸಲಾಗಿದೆ. ಇಲಿಗಳ ಮೇಲೆ ನಡೆದ ಈ ಲಸಿಕೆಯ ಪ್ರಯೋಗ ಯಶಸ್ವಿಯಾಗಿದೆ ಎಂದು ಅಧ್ಯಯನ ತಿಳಿಸಿದೆ. ಅವುಗಳು ಮಾನವರಲ್ಲೂ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಸಾಬೀತಾದರೆ ಈ ವ್ಯಾಕ್ಸಿನ್ ಮಹತ್ವದ ಪಾತ್ರ ವಹಿಸಬಹುದು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಗ್ರಾಮೀಣ ಪ್ರದೇಶ ಅಥವಾ ಸಂಪನ್ಮೂಲ ಕೊರತೆ ಕಾಡುವ ಸಮುದಾಯಗಳಿಗೆ ಇದೊಂದು ವರದಾನ ಆಗಬಲ್ಲದು.
3ನೇ ಅಲೆ ಸೂಚನೆ ಕೊಟ್ಟ ಇಸ್ರೇಲ್
ಇಸ್ರೇಲ್​ನಲ್ಲಿ ಕರೊನಾ ಸೋಂಕಿನ ಪ್ರಮಾಣ ತೀವ್ರ ಏರಿಕೆ ಆಗುತ್ತಿದ್ದು ಇದು ಮೂರನೇ ಅಲೆಯ ಸೂಚನೆಯಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಎಲ್ಲ ಅರ್ಹ ಜನರಿಗೆ ಲಸಿಕೆ ಕೊಟ್ಟ ಮೊದಲ ದೇಶವಾಗಬಹುದು ಎಂಬ ಆಶಾವಾದ ಮೂಡಿಸಿದ್ದ ಇಸ್ರೇಲ್​ನಲ್ಲಿ ಸೆಪ್ಟೆಂಬರ್ 4ರಂದು ಮುಕ್ತಾಯವಾದ ವಾರದಲ್ಲಿ ಅತಿ ಹೆಚ್ಚಿನ ತಲಾ ಪ್ರಕರಣಗಳಿವೆ. ಕರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗಿ ಸಾಂಕ್ರಾಮಿಕತೆ ತೊಡೆದು ಹಾಕುವಲ್ಲಿ ಮೊದಲ ಸ್ಥಾನದಲ್ಲಿದೆ ಎನ್ನಲಾಗಿದ್ದ ದೇಶ ಈಗ ಕರೊನಾ ಹಾಟ್​ಸ್ಪಾಟ್​ಗಳಲ್ಲಿ ಒಂದಾಗಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಸಂಖ್ಯೆಗಳು ಇಸ್ರೇಲ್​ನ ಕಳವಳಕಾರಿ ಸ್ಥಿತಿಗೆ ಕನ್ನಡಿ ಹಿಡಿದಿದೆ. ಕೆಲ ದಿನಗಳ ಹಿಂದೆ 100ರ ಒಳಗಿದ್ದ ದೈನಿಕ ಪ್ರಕರಣ ಈಗ 8 ಸಾವಿರ ದಾಟಿದೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಆತಂಕ
ಚೆನ್ನೈ ವಿಮಾನ ನಿಲ್ದಾಣದಲ್ಲಿ ಬುಧವಾರ ಪ್ರಯಾಣಿಕರು ಯಾವುದೇ ರೀತಿಯ ಕರೊನಾ ನಿಯಂತ್ರಣ ಕ್ರಮಗಳನ್ನು ಅನುಸರಿಸದೆ ಬೇಕಾಬಿಟ್ಟಿ ಓಡಾಡಿದ್ದು ಸೋಂಕು ಹರಡುವ ಭೀತಿ ಹೆಚ್ಚಿಸಿದೆ. ನೂರಾರು ಪ್ರಯಾಣಿಕರು ಗುಂಪುಗೂಡಿದ್ದು ಅಂತರ ಕಾಯ್ದುಕೊಳ್ಳದೆ ತಳ್ಳಾಟದಲ್ಲಿ ತೊಡಗಿದ್ದರು. ಕೊಲ್ಲಿಯಿಂದ ಎರಡು ವಿಮಾನಗಳು ಒಂದೇ ಸಮಯಕ್ಕೆ ಆಗಮಿಸಿದಾಗ ವಲಸೆ ಕೌಂಟರ್​ಗಳಲ್ಲಿ ಪ್ರಯಾಣಿಕರ ನೂಕುನುಗ್ಗಲು ಉಂಟಾಗಿತ್ತು. ಕೆಲವು ಪ್ರಯಾಣಿಕರೇ ಇದರ ವಿಡಿಯೋವನ್ನು ಶೇರ್ ಮಾಡಿದ್ದು ಜನರ ತಳ್ಳಾಟ-ನೂಕಾಟ ಅದರಲ್ಲಿ ದಾಖಲಾಗಿದೆ. ಪರಸ್ಪರ ಅಂತರ ಕಾಯ್ದುಕೊಳ್ಳದಿದ್ದುದರಿಂದ ಇದೊಂದು ಕರೊನಾ ಸೋಂಕಿನ ಕ್ಲಸ್ಟರ್ ಆಗಬಹುದೆಂಬ ಭೀತಿ ಎದುರಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
