|ರಾಘವ ಶರ್ಮ ನಿಡ್ಲೆಸೀತಾಪುರ (ಉತ್ತರ ಪ್ರದೇಶ)
ಕಾನೂನು ಸುವ್ಯವಸ್ಥೆ, ಕರೊನಾ ಸಂಕಷ್ಟ ವೇಳೆ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ರೇಷನ್ ವಿತರಣೆ, ಕಿಸಾನ್ ಸಮ್ಮಾನ್ ನಿಧಿ, ಹಿಂದುತ್ವ ಪ್ರತಿಪಾದನೆಗಳು ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ರಾಜಕೀಯವಾಗಿ ನೆರವಾಗುತ್ತಿವೆ. ಆದರೆ, ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಬೀಡಾಡಿ ಹಸುಗಳ ಸಮಸ್ಯೆಯ ಚರ್ಚೆಯೂ ಗರಿಗೆದರಿದೆ.
ರಾಜ್ಯದ ಹಲವೆಡೆ ಜಾನುವಾರುಗಳು ರೈತಕುಟುಂಬಗಳ ನೆಮ್ಮದಿ ಕಸಿದುಕೊಂಡಿರುವುದು ವಾಸ್ತವ. ರೈತರು ತಮಗಾಗಿರುವ ನಷ್ಟದ ಬಗ್ಗೆ ಬೇಸರ ತೋಡಿಕೊಳ್ಳುತ್ತಾರೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದ ಬಳಿಕ ಬೀಡಾಡಿ ದನಗಳು ಕೃಷಿಕರ ಹೊಲಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ರೈತರ ತಲೆನೋವು ಹೆಚ್ಚಿಸಿದೆ. ರೈತರ ಮತಗಳನ್ನು ಸೆಳೆಯಲೆಂದೇ ಸಮಾಜವಾದಿ ಪಕ್ಷ ‘ಬೀಡಾಡಿ ದನಗಳಿಂದ ಸೃಷ್ಟಿಯಾದ ಸಮಸ್ಯೆಗೆ ಬಿಜೆಪಿಯೇ ಕಾರಣ’ ಎಂದು ಪ್ರಚಾರ ಮಾಡುತ್ತಿದೆ. ವಿರೋಧಿ ಪಕ್ಷದ ಪ್ರತಿ ಅಭ್ಯರ್ಥಿಯೂ ಜಾನುವಾರು ಸಮಸ್ಯೆ ಮುಂದಿಟ್ಟು, ಸಮಾಜವಾದಿ ಪಕ್ಷ ಬೀಡಾಡಿ ದನಗಳಿಂದ ಉಂಟಾಗುತ್ತಿರುವ ಬವಣೆ ನೀಗಿಸಲಿದೆ ಎಂಬ ಭರವಸೆ ತುಂಬುತ್ತಿದ್ದಾರೆ. ಅಂತೂ ಪ್ರಚಾರ ಅಭಿಯಾನಗಳಲ್ಲಿ ಬೀಡಾಡಿ ಹಸುಗಳದ್ದೇ ಸದ್ದು, ಗದ್ದಲ!
ರಾಜ್ಯದಲ್ಲಿ ಗೋಹತ್ಯೆ ಕಾನೂನು ಜಾರಿಯಾದ ಬಳಿಕ ‘ಅನುಪಯೋಗಿ’ ದನಗಳ ಪೋಷಣೆಗೆಂದೇ ಸರ್ಕಾರ ಗೋಶಾಲೆಗಳನ್ನು ತೆರೆದಿತ್ತು. ಆದರೆ, ಈ ಗೋಶಾಲೆಗಳ ನಿರ್ವಹಣೆಗೆ ನೀಡಲಾಗುವ ಅನುದಾನ ಏನೇನೂ ಸಾಲದು ಎಂಬ ದೂರುಗಳು ಹಲವೆಡೆ ಕೇಳಿಬಂದಿವೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಎಮ್ಮೆ/ಕೋಣಗಳು ಹೆಚ್ಚಿದ್ದರೆ, ಪೂರ್ವ ಉತ್ತರ ಪ್ರದೇಶದಲ್ಲಿ ಹಸು/ದನಗಳು ಭಾರೀ ಪ್ರಮಾಣದಲ್ಲಿವೆ. ‘ಗೋಹತ್ಯೆ ನಿಷೇಧ ಕಾನೂನಿಗೆ ಮುನ್ನ ಬೀಡಾಡಿ ದನಗಳ ಸಮಸ್ಯೆ ಇರಲಿಲ್ಲ. ಆದರೆ, ಹಿಂದೂಗಳು ಗೋವನ್ನು ದೇವರಂತೆ ಪೂಜಿಸುತ್ತಾರೆ. ಅದನ್ನು ಕಸಾಯಿಖಾನೆಗೆ ಬಲಿಕೊಡಲು ಬಿಡುವುದಿಲ್ಲ ಎಂದು ಗೋಹತ್ಯೆ ನಿಷೇಧ ಕಾನೂನನ್ನು ಸರ್ಕಾರ ಜಾರಿಗೆ ತಂದಿತು. ಹಾಗಂತ, ಈ ವೃದ್ಧ ಪಶುಗಳನ್ನು ‘ಅನುಪಯೋಗಿ’ ಎನ್ನುವುದು ಸರಿಯಲ್ಲ. ಸಗಣಿಯಿಂದ ಗೋಬರ್ ತಯಾರಿಸಬಹುದು. ಯೋಗಿ ಸರ್ಕಾರ ಗೋಶಾಲೆಗಳನ್ನೇನೋ ನಿರ್ಮಾಣ ಮಾಡಿತು. ಆದರೆ, ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಲಿಲ್ಲ’ ಎನ್ನುತ್ತಾರೆ ಬಾರಾಬಂಕಿಯ ಕೃಷಿಕ ಮಂಗಲ್ ದುಬೆ.
ಜಾನುವಾರು ಸಮಸ್ಯೆ ಬಿಜೆಪಿಗೆ ಹಾನಿ ಮಾಡುತ್ತಿರುವುದನ್ನು ಮನಗಂಡೇ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನಾವ್​ನಲ್ಲಿ ಭಾನುವಾರದಂದು ಏರ್ಪಡಿಸಿದ್ದ ರ್ಯಾಲಿಯಲ್ಲಿ, ‘ಮಾರ್ಚ್ 10ರ ಬಳಿಕ ಬೀಡಾಡಿ ಹಸುಗಳ ಸಮಸ್ಯೆಗೆ ಮುಕ್ತಿ ಸಿಗಲಿದೆ. ಇದು ನಿಮ್ಮ ಪ್ರಧಾನಿ ನೀಡುತ್ತಿರುವ ವಾಗ್ದಾನ. ಹಾಲು ಕೊಡದ ದನಗಳ ಸಗಣಿಯಿಂದ ಆದಾಯ ಮಾಡಿಕೊಳ್ಳುವ ಹೊಸ ವ್ಯವಸ್ಥೆ ಜಾರಿ ಮಾಡುತ್ತೇವೆ. ನಿಮ್ಮ ಮನೆಯಲ್ಲೇ ಬೀಡಾಡಿ ದನಗಳನ್ನು ಕಟ್ಟಿಹಾಕುವ ದಿನಗಳು ಬರಲಿವೆ’ ಎಂದಿದ್ದಾರೆ.
ಸೀತಾಪುರ ಜಿಲ್ಲೆಯ ಹರಿಗಾಂವ್ ವಿಧಾನಸಭೆಯ ಕಸ್ರೇಲಾ ದೇವರಿಯಾ ಗ್ರಾಮದ ರಾಮ್ ಬಾಬು ಮಿಶ್ರಾ ಕೂಡ ಜಾನುವಾರುಗಳಿಂದ ತೊಂದರೆಗೀಡಾಗಿದ್ದಾರೆ. ‘ದನಗಳು ಬಂದಾಗ ಓಡಿಸುತ್ತೇವೆ. ಏಟು ಕೊಡಲು ಮನಸಾಗದು. ಗೋಶಾಲೆಗಳ ನಿರ್ವಹಣೆಗೆ ನೀಡುವ ಹಣವನ್ನು ಗ್ರಾಮ್ ಪ್ರಧಾನ್ ನುಂಗಿ ಹಾಕುತ್ತಾರೆ. ಬೇರೆ ಪಕ್ಷಗಳ ಗ್ರಾಮ ಪ್ರಧಾನ್​ಗಳು ಉದ್ದೇಶಪೂರ್ವಕವಾಗಿ ಗೋಶಾಲೆಗಳ ಸಶಕ್ತ ನಿರ್ವಹಣೆ ಮಾಡುತ್ತಿಲ್ಲ’ ಎಂದು ದೂರುತ್ತಾರೆ.
ರಾಜ್ಯದಲ್ಲಿ ಕೆಲ ರೈತರು ಬೇಲಿಗಳನ್ನು ಕಟ್ಟಿಕೊಂಡಿದ್ದರೆ ಮತ್ತೆ ಕೆಲವರು ಸರಿಗೆಯ ಫೆನ್ಸಿಂಗ್​ಗಳನ್ನು ಹಾಕಿದ್ದಾರೆ. ಬಲಿಷ್ಠ ಹಸುಗಳನ್ನು ಹಿಡಿಯುವುದು ಕಷ್ಟ. ಕಾಡಿನಿಂದ ಬರುವ ನೀಲ್​ಗಾಯ್ಗಳು ಫೆನ್ಸಿಂಗ್​ಗಳನ್ನು ದಾಟಿಬರುತ್ತಿವೆ. ಹೀಗಾಗಿ, ರೇಷನ್ ಸಾಮಗ್ರಿ, ಕಿಸಾನ್ ಸಮ್ಮಾನ್ ನಿಧಿ ಮೂಲಕ ರೈತರು ಖುಷಿಪಟ್ಟರೂ, ಜಾನುವಾರು ಸಮಸ್ಯೆ ಮೋದಿ-ಯೋಗಿಗೆ ಸವಾಲಾಗಿರುವುದು ಸುಳ್ಳಲ್ಲ.
ಬೆಲೆಯೇರಿಕೆಯ ಚಿಂತೆ: ಕಾನೂನು ಸುವ್ಯವಸ್ಥೆ ಬಿಗಿ ಮಾಡಿರುವುದರಿಂದ ನಾವೆಲ್ಲರೂ ಈಗ ನೆಮ್ಮದಿಯಿಂದ ನಿದ್ರಿಸುತ್ತಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸುವ ಲಖನೌ ಹೊರಭಾಗದ ಸರೋಜಿನಿ ನಗರ ವಿಧಾನಸಭೆ ಕ್ಷೇತ್ರದ ಔರಾವ ಹಳ್ಳಿಯ ಮಹಿಳೆಯರು, ಬೆಲೆಯೇರಿಕೆಯ ಬಗ್ಗೆ ಚಿಂತೆಗೀಡಾಗಿದ್ದಾರೆ. ಸ್ವಸಹಾಯ ಗುಂಪಿನ ಮೂಲಕ ಅಗತ್ಯವಿರುವ ಸದಸ್ಯರಿಗೆ ಸಾಲ ವಿತರಿಸುವ ಕೆಲಸದಲ್ಲಿ ತೊಡಗಿದ್ದ ಮಹಿಳೆಯರು ‘ವಿಜಯವಾಣಿ’ ಜತೆ ಮಾತನಾಡುತ್ತ, ಕರೊನಾ ಕಾಲದಲ್ಲಿ ಗೋಧಿ, ಅಕ್ಕಿ, ಧಾನ್ಯ, ಅಡುಗೆಎಣ್ಣೆ ನೀಡಿ ಸರ್ಕಾರ ನಮ್ಮನ್ನು ಕಾಪಾಡಿದೆ. ಹೀಗಾಗಿ, ಬೆಲೆಯೇರಿಕೆ ಬಿಸಿ ಜೋರಾಗಿ ತಟ್ಟಿಲ್ಲ. ಆದರೆ, ರೇಷನ್ ನಿಲ್ಲಿಸಿದ ಬಳಿಕ ನಮ್ಮ ಪಾಡೇನು? ಎಂದು ಪ್ರಶ್ನಿಸಿದರು. ‘ನಮ್ಮ ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದ ಮೋದಿಯವರ ಎಲ್ಲ ರ್ಯಾಲಿಗಳಿಗೂ ಈವರೆಗೆ ಹೋಗಿದ್ದೇನೆ. ಬಡವರ ನೋವು ಪ್ರಧಾನಿಗೆ ಗೊತ್ತಿದೆ. ಆದರೆ, ಪಿಎಂ ಆವಾಸ್ ಯೋಜನೆಯಡಿಯಲ್ಲಿ ನನಗೆ ಮನೆ ನೀಡಿಲ್ಲ. ಇಡೀ ಕಾಲನಿಯ ಕೊಳಚೆ ನೀರು ನನ್ನ ಜೋಪಡಿ ಮುಂದೆ ಬಂದುನಿಲ್ಲುತ್ತದೆ. ಮಳೆಗಾಲದಲ್ಲಿ ಮನೆ ಒಳಗೆಲ್ಲ ನೀರು ತುಂಬಿರುತ್ತದೆ. ಈ ಮನೆ ಸರಿ ಮಾಡಿಕೊಡಿ ಎಂದು ಎಷ್ಟು ಅರ್ಜಿಗಳನ್ನು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಕಣ್ಣೀರು ಹಾಕಿದರು ಶಾಂತಿದೇವಿ. ‘ಈಕೆ ನಮ್ಮ ಗ್ರಾಮದ ಅತ್ಯಂತ ಬಡಕುಟುಂಬದವಳು. ಸಮಾಜವಾದಿ ಪಾರ್ಟಿಯ ಗ್ರಾಮ ಪ್ರಧಾನ ವಿನೋದ್ ಕುಮಾರ್ ಶುಕ್ಲಾ ಬೇಕೆಂದೇ ಮನೆ ಕೊಡಿಸುತ್ತಿಲ್ಲ. ಕೊಳಚೆಯನ್ನೂ ತೆಗೆಸುತ್ತಿಲ್ಲ’ ಎಂದು ಮಹಿಳೆಯರು ಬೇಸರ ತೋಡಿಕೊಂಡರು. ಈ ವೇಳೆ ಪಕ್ಕದಲ್ಲಿದ್ದ ಗ್ರಾಮದ ಬಿಜೆಪಿ ಬೂತ್ ಅಧ್ಯಕ್ಷ ಬಿಜಯ್ ಕುಮಾರ್ ಸಿಂಗ್, ‘ಸರೋಜಿನಿ ನಗರ ಬಿಜೆಪಿ ಅಭ್ಯರ್ಥಿ ರಾಜೇಶ್ವರ್ ಸಿಂಗ್ ಜಾರಿ ನಿರ್ದೇಶನಾಲಯದಲ್ಲಿ ಮಾಜಿ ಜಂಟಿ ನಿರ್ದೇಶಕರಾಗಿದ್ದ ಪ್ರಾಮಾಣಿಕ ಅಧಿಕಾರಿ. ನೀವೆಲ್ಲರೂ ಅವರಿಗೆ ಮತ ನೀಡಿದರೆ, ಮಾರ್ಚ್ 10ರ ನಂತರ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ’ ಎಂದರು. ಮಹಿಳೆಯರು ಈ ಮಾತಿಗೆ ಹೆಚ್ಚು ಆಸಕ್ತಿ ತೋರಿದಂತೆ ಕಾಣಲಿಲ್ಲ. ಆದರೆ, ‘ರಾಜ್ಯಕ್ಕೆ ಯೋಗಿ ಸರ್ಕಾರದಿಂದ ಒಳ್ಳೆಯದಾಗಿದೆ. ಅನನುಕೂಲಗಳ ಮಧ್ಯೆ ಹಲವು ಅನುಕೂಲಗಳೂ ಆಗಿವೆ. ಯುವಕರಿಗೆ ನೌಕರಿ ಸಿಗುವ ವಾತಾವರಣ ರೂಪಿಸಲು ಯೋಗಿಯವರು ಮುಂದಾಗಬೇಕು’ ಎಂದು ಮಹಿಳೆಯರು ಮಾತು ಮುಗಿಸಿದರು.
ಮೋದಿಯವರು ಉಚಿತ ಸಿಲಿಂಡರನ್ನೇನೋ ನೀಡಿದರು. ಆದರೆ, ಸಿಲಿಂಡರ್ ಬೆಲೆ ಗಗನಕ್ಕೇರಿದ್ದು, ರಿ-ಫಿಲ್ಲಿಂಗ್ ಕಷ್ಟವಾಗುತ್ತಿದೆ. ಹಳ್ಳಿಗಳ ಹಲವು ಮನೆಗಳಲ್ಲಿ ಸಿಲಿಂಡರ್ ಖಾಲಿ ಬಿದ್ದಿದೆ. ಸಿಲಿಂಡರ್ ರೇಟ್ ಕಡಿಮೆ ಮಾಡಬೇಕು.
|ನಿಷಾ ಕಶ್ಯಪ್ಔರಾವ ಗ್ರಾಮದ ನಿವಾಸಿ
ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿದ್ದ ರಾಜೇಶ್ವರ್ ಸಿಂಗ್ ಸ್ವಯಂನಿವೃತ್ತಿ ಪಡೆದುಕೊಂಡ ಕೂಡಲೇ ಬಿಜೆಪಿ ಸೇರ್ಪಡೆಯಾಗಿ, ಸರೋಜಿನಿ ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ವಾತಿ ಸಿಂಗ್ ಗೆದ್ದಿದ್ದರು. ಯೋಗಿ ಸರ್ಕಾರದಲ್ಲಿ ಅವರು ಮಕ್ಕಳ ಕಲ್ಯಾಣ ಇಲಾಖೆ ಸಚಿವರೂ ಆಗಿದ್ದರು. ಆದರೆ, ರಾಜೇಶ್ವರ್ ಸಿಂಗ್ ಪ್ರವೇಶದಿಂದಾಗಿ ಸ್ವಾತಿ ಸಿಂಗ್​ಗೆ ಟಿಕೆಟ್ ತಪ್ಪಿದೆ. ಸ್ವಾತಿ ಬೇಸರ ತಣಿಸಲು ಪತಿ ದಯಾಶಂಕರ್ ಸಿಂಗ್​ಗೆ ಬಲಿಯಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. 1997ರಿಂದ 2007ರವರೆಗೆ ಉತ್ತರ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ರಾಜೇಶ್ವರ್ ಸಿಂಗ್, ಮಾಫಿಯಾ ಗ್ಯಾಂಗ್​ಗಳ ಬೆವರಿಳಿಸಿದ್ದರು. ಆಗ 20ಕ್ಕಿಂತಲೂ ಹೆಚ್ಚು ಗ್ಯಾಂಗ್​ಸ್ಟರ್​ಗಳನ್ನು ಎನ್​ಕೌಂಟರ್ ಮಾಡಿದ್ದಾರೆ. ಇ.ಡಿ. ಅಧಿಕಾರಿಯಾಗಿದ್ದಾಗ ಹಲವು ಹೈ-ಪ್ರೊಫೈಲ್ ಕೇಸುಗಳನ್ನು ನಿರ್ವಹಿಸಿರುವ ರಾಜೇಶ್ವರ್, ಏರ್ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರ ವಿರುದ್ಧವೂ ತನಿಖೆ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − three =
Remember me
