|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ರಾಜ್ಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಡೆಸುತ್ತಿರುವ ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳನ್ನು ಕೇಂದ್ರೀಯ ಪಠ್ಯಕ್ರಮದ ವ್ಯಾಪ್ತಿಗೆ ತರುವ ಪ್ರಯತ್ನದ ಮೊದಲ ಹೆಜ್ಜೆಯಾಗಿ ಸರ್ಕಾರ ಈ ಶೈಕ್ಷಣಿಕ ವರ್ಷದಿಂದಲೇ ಜಿಲ್ಲೆಗೊಂದು ಶಾಲೆಯನ್ನು ಸಿಬಿಎಸ್​ಇ ವ್ಯಾಪ್ತಿಗೆ ತರುತ್ತಿದೆ.
ಮೊದಲ ಹಂತದಲ್ಲಿ 31 ಶಾಲೆಗಳಲ್ಲಿ 6ರಿಂದ 9 ನೇ ತರಗತಿ ಮತ್ತು 11ನೇ ತರಗತಿಗೆ ಸಿಬಿಎಸ್​ಇ ಪಠ್ಯಕ್ರಮ ಅಳವಡಿಸಿಕೊಳ್ಳುತ್ತಿದ್ದು, 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ಕಾರಣ, ಈ ವರ್ಷದ ಮಟ್ಟಿಗೆ ಅವರನ್ನು ರಾಜ್ಯ ಪಠ್ಯಕ್ರಮದಂತೆಯೇ ಮುಂದುವರಿಯಲು ಅವಕಾಶ ನೀಡಲಾಗಿದೆ.
ಪಠ್ಯಕ್ರಮ ಬದಲಾದರೆ ಶಾಲೆಗಳಲ್ಲಿ ಮೂಲಸೌಕರ್ಯ ಹಾಗೂ ಬೌದ್ಧಿಕವಾಗಿಯೂ ಅಗತ್ಯ ತಯಾರಿ ಆಗಬೇಕಾಗುತ್ತದೆ. ಪ್ರಸ್ತುತ ಈ ಕೆಲಸ ಆರಂಭವಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿ ವಿಜಯವಾಣಿಗೆ ತಿಳಿಸಿದ್ದಾರೆ. ಶಿಕ್ಷಕರ ತರಬೇತಿಗಾಗಿ ಅಜೀಂ ಪ್ರೇಮ್ ಫೌಂಡೇಷನ್​ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸುವ ಶಿಕ್ಷಕರಿಗೆ ಕೇಂದ್ರೀಯ ಪಠ್ಯಕ್ರಮ ಬೋಧನೆ ಸವಾಲಾಗಬಹುದು. ಪ್ರಸ್ತುತ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರಿದ್ದರೂ, ಪ್ರತ್ಯೇಕ ತಯಾರಿ ಬೇಕಾಗುತ್ತದೆ. ಈ ಕಾರಣಕ್ಕೆ ಅಂದಾಜು 300 ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಗೊಂದು ಕಲಾಂ ಸಿಬಿಎಸ್​ಇ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಈ ಮಕ್ಕಳು ವಿವಿಧ ರಾಷ್ಟ್ರೀಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಎದುರಿಸಲು ಇನ್ನಷ್ಟು ಬಲ ನೀಡಿದಂತಾಗುತ್ತದೆ. ಅಲ್ಪಸಂಖ್ಯಾತ ಸಮುದಾಯದವರು ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.
|ಬಸವರಾಜ ಬೊಮ್ಮಾಯಿಸಿಎಂ
ಮೂಲಸೌಕರ್ಯ ಅಭಿವೃದ್ಧಿ:ಸಿಬಿಎಸ್​ಇ ಪಠ್ಯಕ್ರಮಕ್ಕೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತಿಶಾಲೆಗೆ ಅಂದಾಜು 52 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಗ್ರಂಥಾಲಯ, ಕಂಪ್ಯೂಟರ್, ಸೇರಿ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇಲಾಖೆಯಿಂದ ಒಟ್ಟು 134 ವಸತಿ ಶಾಲೆ ಮತ್ತು ಕಾಲೇಜುಗಳಿದ್ದು ರಾಜ್ಯ ಪಠ್ಯಕ್ರಮದಲ್ಲೇ ನಡೆಯುತ್ತಿವೆ. ಇವನ್ನು ಹಂತಹಂತವಾಗಿ ಸಿಬಿಎಸ್​ಇಗೆ ಬದಲಾಯಿಸಲಾಗುತ್ತದೆ.
ಮಾನ್ಯತಾ ಪತ್ರ ಹಸ್ತಾಂತರ:ಈ ಶೈಕ್ಷಣಿಕ ವರ್ಷದ ತರಗತಿ ಆರಂಭವಾಗಿದೆ. ಸಾಂಕೇತಿಕ ಉದ್ಘಾಟನೆಯನ್ನು ಮುಖ್ಯಮಂತ್ರಿಯವರಿಂದ ನೆರವೇರಿಸಬೇಕೆಂಬ ಉದ್ದೇಶವಿದೆ. ಸಂಬಂಧಪಟ್ಟ ಶಾಲೆಯ ಪ್ರಾಂಶುಪಾಲರಿಗೆ ಸಿಬಿಎಸ್​ಇ ಮಾನ್ಯತೆಯ ಪ್ರಮಾಣಪತ್ರವನ್ನು ಸಿಎಂ ಹಸ್ತಾಂತರಿಸಲಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಪ್ರತಿಶಾಲೆಯ ಒಟ್ಟು ಪ್ರವೇಶದಲ್ಲಿ ಶೇ.75 ಅಲ್ಪಸಂಖ್ಯಾತ ಹಾಗೂ ಶೇ.25 ಮಕ್ಕಳು ಪರಿಶಿಷ್ಟ, ಒಬಿಸಿ ವರ್ಗದವರನ್ನು ಸೇರಿಸಿಕೊಳ್ಳಲು ಅವಕಾಶವಿದೆ. ಸರ್ಕಾರದ ಯೋಜನೆ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದುರ್ಬಲ ವರ್ಗಗಳ ಸಮಗ್ರ ಅಭಿವೃದ್ಧಿಗೆ ಶಿಕ್ಷಣ, ಉದ್ಯೋಗ, ಸಬಲೀಕರಣದ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. 21ನೇ ಶತಮಾನ ಜ್ಞಾನದ ಶತಮಾನ. ಜ್ಞಾನ ಇದ್ದವರು ದೇಶ ಆಳುತ್ತಾರೆ. ಆದ್ದರಿಂದ ಅಲ್ಪಸಂಖ್ಯಾತ ಮಕ್ಕಳಿಗೂ ಅತ್ಯುತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಬಜೆಟ್​ನಲ್ಲಿ ಘೊಷಿಸಿದಂತೆ ಅನುಷ್ಠಾನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬಜೆಟ್​ನಲ್ಲಿ ಘೋಷಿತ ಕಾರ್ಯಕ್ರಮ:ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ನಡೆಯುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ರ ಬಜೆಟ್​ನಲ್ಲಿ ಘೋಷಿಸಿದ್ದರು. ಆ ಪ್ರಕಾರ ಸಿಬಿಎಸ್​ಇ ಮಾನ್ಯತೆಗೆ ಪ್ರಯತ್ನ ನಡೆದಿತ್ತು. ಈಗ ಪ್ರಮಾಣಪತ್ರ ಬಂದಿದ್ದು, ಕೇಂದ್ರೀಯ ಪಠ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ. ಹಾಗೆಯೇ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿನ ವಿವಿಧ ಯೋಜನೆಗಳಡಿ ಬಹುವಿಧ ವಸತಿ ಶಾಲೆಗಳನ್ನು ನಡೆಸಲಾಗುತ್ತಿದೆ. ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳನ್ನು ಒಂದುಗೂಡಿಸುವುದು, ಪ್ರತಿಜಿಲ್ಲೆಯ ಕನಿಷ್ಠ ಒಂದು ಶಾಲೆಯಲ್ಲಿ ಪದವಿಪೂರ್ವ ತರಗತಿಗಳನ್ನು ಆರಂಭಿಸುವುದು, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯಗಳನ್ನು ಒದಗಿಸಿ ಉನ್ನತೀಕರಿಸುವುದು, ಈ ಶಾಲೆಗಳನ್ನು ಎಪಿಜೆ ಅಬ್ದುಲ್ ಕಲಾಂ ಶಾಲೆಗಳೆಂದು ಮರು ನಾಮಕರಣ ಮಾಡುವುದಾಗಿ ಸಿಎಂ ಬಜೆಟ್​ನಲ್ಲಿ ಘೋಷಿಸಿದ್ದರು. ಈ ಉದ್ದೇಶಕ್ಕೆ 25 ಕೋಟಿ ರೂ. ಹಂಚಿಕೆ ಮಾಡಿದ್ದರು.
15,000 ವಿದ್ಯಾರ್ಥಿಗಳಿಗೆ ಪ್ರಯೋಜನ:ಈ ರಿತಿಯ ಸಿಬಿಎಸ್​ಇ ಸರ್ಕಾರಿ ಶಾಲೆ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಮಕ್ಕಳಿಗೆ ಎಲ್ಲ ಸೌಲಭ್ಯಗಳು ಉಚಿತವಾಗಿರುತ್ತವೆ. ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಪ್ರಸ್ತುತ 15,000 ವಿದ್ಯಾರ್ಥಿಗಳು ಈ ಬದಲಾವಣೆಯ ಪ್ರಯೋಜನ ಪಡೆಯಲಿದ್ದಾರೆ. ಸಿಬಿಎಸ್​ಇಗೆ ಬದಲಾಗುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಬಹುದೆಂದು ನಿರೀಕ್ಷಿಸಲಾಗಿದೆ. ಈ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ನೀಟ್, ಜೆಇಇ, ಕೆ-ಸಿಇಟಿ ನಂತಹ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುತ್ತದೆ. ಮಕ್ಕಳು ಉನ್ನತ ವ್ಯಾಸಂಗಕ್ಕೆ ಹೋಗಲು ಅನುಕೂಲವಾಗಬೇಕೆಂಬುದೇ ಗುರಿ ಎಂಬುದು ಇಲಾಖೆಯ ವಿವರಣೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − one =
Remember me
