ಬೆಂಗಳೂರು:ಕೇಂದ್ರದಲ್ಲಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್ ಮತ್ತು ಎ.ನಾರಾಯಣಸ್ವಾಮಿ ಅವರು ನಾನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಾಶೀರ್ವಾದ ಕೋರಿದರು. ಬಿಜೆಪಿ ಪಕ್ಷವೇ ಹಮ್ಮಿಕೊಂಡಿರುವ ಜನಾರ್ಶೀವಾದ ಯಾತ್ರೆಯಲ್ಲಿ ಭಾಗವಹಿಸಿದ ನಾಲ್ವರು ಸಚಿವರು, ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಜನರ ಜತೆಯಲ್ಲಿ ಬೆರೆತರು. ಲೋಕಸಭಾ ಅಧಿವೇಶನ ಪ್ರಾರಂಭವಾದ ಸಂದರ್ಭದಲ್ಲಿ ವಿರೋಧ ಪಕ್ಷಗಳಿಂದ ಗದ್ದಲವೇ ಹೆಚ್ಚಿದ ಹಿನ್ನೆಲೆಯಲ್ಲಿ ಸದನಕ್ಕೆ ಹೊಸ ಸಚಿವರನ್ನು ಪರಿಚಯ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಭಿನ್ನವಾಗಿ ಹೊಸ ಸಚಿವರಿಗೆ ಸ್ವಾಗತ ನೀಡುವ ಮತ್ತು ಜನರ ನಡುವೆಯೇ ಅವರನ್ನು ಕರೆದುಕೊಂಡುಹೋಗುವ ಕಾರ್ಯಕ್ರಮವನ್ನು ಬಿಜೆಪಿ ರೂಪಿಸಿದೆ.
ಜನಾರ್ಶೀವಾದ ಯಾತ್ರೆಯ ಮೊದಲ ದಿನವಾದ ಸೋಮವಾರ ಶೋಭಾ ಕರಂದ್ಲಾಜೆ ಅವರು ಮಂಡ್ಯದ ಹಳ್ಳಿಯೊಂದರಲ್ಲಿ ಗದ್ದೆ ಕೆಲಸ ಮಾಡುತ್ತಿದ್ದ ಮಹಿಳೆಯರ ಜತೆ ತಾವೂ ಭತ್ತ ನಾಟಿ ಮಾಡಿದರು. ಆ ಸಂದರ್ಭದಲ್ಲಿ ಕಿತ್ತೂರು ಚೆನ್ನಮ್ಮ ಶೋಭಾ ಕರಂದ್ಲಾಜೆ ಎಂಬ ಘೋಷಣೆಯನ್ನು ಅವರ ಬೆಂಬಲಿಗರು ಕೂಗಿದರು. ಮಂಗಳವಾರ ಹಾಗೂ ಬುಧವಾರ ಶೋಭಾ ಮೈಸೂರು ಹಾಗೂ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ. ಎ.ನಾರಾಯಣಸ್ವಾಮಿ ಬೆಂಗಳೂರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಿಜೆಪಿ ಕಚೇರಿಗೆ ಭೇಟಿ ನೀಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾರಾಯಣಸ್ವಾಮಿ ಭೇಟಿಯಾದರು. ಬೀದರ್ ಜಿಲ್ಲೆಯಲ್ಲಿ ಭಗವಂತ ಖೂಬಾ, ಹುಬ್ಬಳ್ಳಿ-ಧಾರವಾಡದಲ್ಲಿ ರಾಜೀವ್ ಚಂದ್ರಶೇಖರ್ ಪಾಲ್ಗೊಂಡರು.
ಕಲ್ಯಾಣ ಕರ್ನಾಟಕ ಪ್ರಗತಿಗೆ ಬದ್ಧ:ಕಲ್ಯಾಣ ಕರ್ನಾಟಕದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮ ವಹಿಸುವುದಾಗಿ ಭಗವಂತ ಖೂಬಾ ಹೇಳಿದರು. ರಾಜಕೀಯ ಎಂಬುದು ಚುನಾವಣೆಗೆ ಮಾತ್ರ ಸೀಮಿತ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೆರೆಸದೆ ಎಲ್ಲ ಪಕ್ಷದವರ ಸಹಕಾರ, ಸಲಹೆ ಮತ್ತು ವರಿಷ್ಠರ ಮಾರ್ಗದರ್ಶನ ದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದರು.
ತವರಿನಲ್ಲಿ ಖೂಬಾಗೆ ಅದ್ದೂರಿ ಸ್ವಾಗತ:ಕೇಂದ್ರ ಸಚಿವರಾದ ನಂತರ ಭಗವಂತ ಖೂಬಾ ಮೊದಲ ಸಲ ಬೀದರ್​ಗೆ ಆಗಮಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕೇಸರಿಪಡೆ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಸನ್ಮಾನದ ಜತೆಗೆ ಜೋರ್ದಾರ್ ಮೆರವಣಿಗೆ ನಡೆಸಿ ಅಭಿಮಾನ ಮೆರೆದರು. ಬಳಿಕ ಮಠ- ಮಂದಿರಗಳಿಗೆ ಭೇಟಿ ನೀಡಿ ಪೂಜ್ಯರ ದರ್ಶನಾಶೀರ್ವಾದ ಪಡೆದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹಾರ-ತುರಾಯಿ ನೀಡಿ ಸ್ವಾಗತಿಸಿದ ನೂರಾರು ಕಾರ್ಯಕರ್ತರು, ಸಾದಹಳ್ಳಿ ಗೇಟ್ ಬಳಿ 500 ಕೆ.ಜಿ. ಸೇಬು ಹಣ್ಣಿನ ಹಾರ ಹಾಕಿ, ಹೂವಿನ ಸುರಿಮಳೆಗೈದರು. ಸಚಿವರ ಕಾರು ಮುಂದಕ್ಕೆ ಹೋಗುತ್ತಿದ್ದಂತೆ ಸೇಬು ಹಣ್ಣುಗಳನ್ನು ಜನರು ಮತ್ತು ಪಕ್ಷದ ಕಾರ್ಯಕರ್ತರು ಮುಗಿಬಿದ್ದು ಕಿತ್ತುಕೊಂಡರು. ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ ಬರುವವರೆಗೂ ಹಲವು ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ನಾರಾಯಣಸ್ವಾಮಿಗೆ ಸ್ವಾಗತ ಕೋರಿದರು.
ಸ್ವಾಗತಕ್ಕೆ ಜನಸಾಗರ ಕ್ಷಮೆ ಕೋರಿದ ನಾರಾಯಣಸ್ವಾಮಿ:ಕೇಂದ್ರ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ತಮ್ಮ ಸ್ವಾಗತಕ್ಕೆ ಕರೊನಾ ನಿಯಮಗಳನ್ನು ಉಲ್ಲಂಘಿಸಿ ಜನ ಸೇರಿದ್ದಕ್ಕೆ ಎ.ನಾರಾಯಣಸ್ವಾಮಿ ಕ್ಷಮೆ ಕೋರಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಗೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಅಷ್ಟು ಜನ ಸೇರಬಾರದಿತ್ತು, ಆದರೆ, ಬಂದಿದ್ದಾರೆ ಏನು ಮಾಡುವುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ನಾನು ಸೋತಾಗ ಸಹ ಜನ ನನ್ನ ಬಳಿ ಬರುತ್ತಿದ್ದರು. ಸದಾ ಜನರ ನಡುವೆ ಬೆಳೆದವನು ನಾನು ಎಂದು ಸಮರ್ಥನೆ ಮಾಡಿಕೊಂಡರು.
ಮಂಡ್ಯ:ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಬಲಪಡಿಸುವ ಯೋಜನೆಯಡಿ ದೇಶದಲ್ಲಿ 10 ಸಾವಿರ ಕೃಷಿ ಉತ್ಪಾದಕರ ಸಂಘಗಳನ್ನು ರಚನೆ ಮಾಡಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಉಸ್ತುವಾರಿಯಲ್ಲಿ ರಫ್ತಿನ ಬೇಡಿಕೆ ಆಧರಿಸಿ ಸ್ವಸಹಾಯ ಸಂಘಗಳು ಹಾಗೂ ಸಹಕಾರ ಸಂಘಗಳ ಮೂಲಕ ಸಂಘಗಳನ್ನು ರಚಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಗೂ ವಿಶ್ವದ ಅನ್ನದಾತರಿಗೆ ಮನ್ನಣೆ ನೀಡುವ ಸಲುವಾಗಿ 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಕೃಷಿ ಉತ್ಪಾದಿತ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಪ್ರಕ್ರಿಯೆಯನ್ನು ಪೋಷಿಸುವುದು ಹಾಗೂ ವಿಷಮುಕ್ತ ಆಹಾರವನ್ನು ಒದಗಿಸುವ ಸಲುವಾಗಿ ವರ್ಷಾಚರಣೆ ಮಾಡಲು ತೀರ್ವನಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರಕ್ಕೆ 1.23 ಸಾವಿರ ಕೋಟಿ ರೂ. ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ 8500 ಕೋಟಿ ರೂ. ಮೀಸಲಿಡಲಾಗಿದೆ. ಆತ್ಮನಿರ್ಭರ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ರಾಸಾಯನಿಕ ಮುಕ್ತ ಸಕ್ಕರೆ ಬೆಲ್ಲವನ್ನು ಉತ್ಪಾದಿಸುವ ಘಟಕ ತೆರೆಯಲು ಶೇ.30 ರಿಯಾಯಿತಿಯಡಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಆಧುನೀಕರಣಕ್ಕೆ ಒತ್ತು ನೀಡಲು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ನಿಧಿ ಒದಗಿಸಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಬೆಳೆ ಸಮೀಕ್ಷೆಗಾಗಿ ಬಳಸುತ್ತಿರುವ ಮೊಬೈಲ್ ಆ್ಯಪ್​ ಕ್ರಮವನ್ನು ದೇಶದ ಎಲ್ಲ ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಮೇಕೆದಾಟು ಯೋಜನೆ ಕಾರ್ಯಗತ ದಿಂದ ಕರ್ನಾಟಕ, ತಮಿಳುನಾಡು ಎರಡೂ ರಾಜ್ಯಗಳಿಗೆ ಒಳಿತಾಗಲಿದೆ. ಆದರೆ ಯೋಜನೆ ಬಗ್ಗೆ ತಮಿಳುನಾಡು ಅಪಸ್ವರ ತೆಗೆಯುವುದು ಸರಿಯಲ್ಲ.
|ಶೋಭಾ ಕರಂದ್ಲಾಜೆಕೇಂದ್ರ ಸಚಿವೆ
ಹುಬ್ಬಳ್ಳಿ:ಕೇಂದ್ರದಲ್ಲಿ ಮುಂದಿನ ಕನಿಷ್ಠ 25 ವರ್ಷಗಳವರೆಗೆ ಬಿಜೆಪಿ ಆಡಳಿತ ಮುಂದುವರಿದರೆ, 2047ರ ಹೊತ್ತಿಗೆ ಬಲಿಷ್ಟ ಭಾರತ ನಿರ್ವಣಗೊಳ್ಳಲಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು. ಬಿಜೆಪಿಯ ಜನಾಶೀರ್ವಾದ ಯಾತ್ರೆಯಲ್ಲಿ ಐವರು ಕರೊನಾ ಸೇನಾನಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದ 60 ವರ್ಷಗಳಿಗೆ ಹೋಲಿಸಿದರೆ ಕಳೆದ 7 ವರ್ಷಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಭಾರತ ಸ್ವಾವಲಂಬಿಯಾಗುತ್ತಿದೆ ಎಂದರು.
ಒಟಿಟಿಯಲ್ಲಿ ಬರಲಿದೆ ಪದ್ಮಶ್ರೀ ಪುರಸ್ಕೃತ ನಟಿ ಭಾರತಿ ವಿಷ್ಣುವರ್ಧನ್​ ಅವರ ‘ಬಾಳೆ ಬಂಗಾರ’

ಒಂದು ವರ್ಷದ ಆ ಮಗುವನ್ನು ಒಂದು ದಿನ ಭೇಟಿ ಮಾಡುವೆ ಅಂದ್ರು ನಟಿ ರಶ್ಮಿಕಾ; ಅದಕ್ಕೆ ಕಾರಣ ಕೂಡ ‘ರಶ್ಮಿಕಾ’ನೇ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eleven =
Remember me
