ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಮಧ್ಯೆ ಕೇಂದ್ರ ಸರ್ಕಾರ ಮುಂಗಡಪತ್ರದಲ್ಲಿ ಮಹತ್ವದ ಘೋಷಣೆ ಮಾಡಿದೆ. ಯಾವುದೇ ಕಾರಣಕ್ಕೂ ಕನಿಷ್ಠ ಬೆಂಬಲ ಬೆಲೆ(ಎಂಎಸ್​ಪಿ) ನಿಲ್ಲಿಸುವುದಿಲ್ಲವೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ರೈತರಿಂದ ಆಹಾರ ಧಾನ್ಯ ಖರೀದಿಸುವ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಏರಿಸಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕಳೆದ ಆರು ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆ ನೀಡಿ ರೈತರಿಂದ ಭತ್ತ, ಗೋಧಿ, ದ್ವಿದಳ ಧಾನ್ಯಗಳಂತಹ ಆಹಾರ ಧಾನ್ಯಗಳನ್ನು ಖರೀದಿಸಿದ ಪ್ರಮಾಣದಲ್ಲಿ ಏರಿಕೆಯಾಗಿದೆ. ಧಾನ್ಯಗಳ ಸಂಗ್ರಹ ಹೆಚ್ಚಾದಂತೆ ರೈತರಿಗೆ ಹಣ ಪಾವತಿ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ. ಪಂಜಾಬ್ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ಅಲ್ಲಿನ ಪ್ರಮುಖ ಬೆಳೆಯಾಗಿರುವ ಗೋಧಿಗೆ ನೀಡಲಾಗಿರುವ ಎಂಎಸ್​ಪಿ ಕುರಿತು ವಿವರಣೆ ನೀಡಿದ್ದಾರೆ. 2020-21ನೇ ಹಣಕಾಸು ವರ್ಷದಲ್ಲಿ ಎಂಎಸ್​ಪಿ ಮೂಲಕ ಗೋಧಿ ಬೆಳೆಗಾರರಿಗೆ 75,060 ಕೋಟಿ ರೂ. ಪಾವತಿಯಾಗಿದೆ. ಇದು 2013-14ರಲ್ಲಿ 33,874 ಕೋಟಿ, 2019-20ರಲ್ಲಿ 62,802 ಕೋಟಿ ರೂ. ಇತ್ತು. ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಹೆಚ್ಚಿನ ಬೆಂಬಲ ಬೆಲೆ ನೀಡಿದೆ ಎಂಬುದನ್ನು ಅಂಕಿ-ಅಂಶಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಎಂಎಸ್​ಪಿ ಯೋಜನೆ ಅಡಿ 2019-20ರಲ್ಲಿ 35.57 ಲಕ್ಷ ಗೋಧಿ ಬೆಳೆಗಾರರು ಪ್ರಯೋಜನ ಪಡೆದಿದ್ದಾರೆ. 2020-21ರ ವೇಳೆಗೆ ಈ ಸಂಖ್ಯೆ 43.36 ಲಕ್ಷಕ್ಕೆ ಏರಿಕೆಯಾಗಿದೆ. ಎಲ್ಲ ಕೃಷಿಉತ್ಪನ್ನ/ಬೆಳೆಗಳಿಗೆ ಅದರ ಉತ್ಪಾದನೆ ಖರ್ಚಿನ ಕನಿಷ್ಠ 1.5 ಪಟ್ಟು ಬೆಂಬಲ ಬೆಲೆಯನ್ನು ಸರ್ಕಾರ ನೀಡುತ್ತಿದೆ. ಮೋದಿ ಸರ್ಕಾರ ರೈತರ ಕಲ್ಯಾಣಕ್ಕಾಗಿ ನಿಂತಿದೆ ಎಂದು ಸಮರ್ಥಿಸಿಕೊಂಡರು.
ಹಾಲಿ ಇರುವ ಮಂಡಿಗಳ (ಕೃಷಿಮಾರಾಟ ಮಳಿಗೆ) ಸಾಲಿಗೆ ಒಂದು ಸಾವಿರ ಮಂಡಿ ಸೇರಿಸಿ ಎಲೆಕ್ಟ್ರಾನಿಕ್ ರಾಷ್ಟ್ರೀಯ ಮಾರುಕಟ್ಟೆಯ ಜತೆಗೆ ಸಂಯೋಜಿಸಲಾಗುತ್ತದೆ. ಈಗಾಗಲೇ ಇ-ನಾಮ್ ಮೂಲಕ 1.14 ಲಕ್ಷ ಕೋಟಿ ವ್ಯಾಪಾರ ಮೌಲ್ಯವನ್ನು ಇದು ನಿರ್ವಹಣೆ ಮಾಡುತ್ತಿದೆ. ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆ ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಮಾರುಕಟ್ಟೆಗೆ ಇ-ನಾಮ್ ಜಾರಿಗೆ ತರಲಾಗಿದೆ.
ಆಧುನಿಕ ಮೀನುಗಾರಿಕೆ ಬಂದರು ಮತ್ತು ಫಿಷ್ ಲ್ಯಾಂಡಿಂಗ್ ಸೆಂಟರ್ (ಮೀನು ಇಳಿಸುವ ಕೇಂದ್ರ)ಗಳ ಅಭಿವೃದ್ಧಿಯಲ್ಲಿ ಸಾಕಷ್ಟು ಹೂಡಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಚ್ಚಿ, ಚೆನ್ನೈ, ವಿಶಾಖಪಟ್ಟಣಂ, ಪ್ಯಾರಡೀಪ್ ಮತ್ತು ಪೆಟುಘಾಟ್ ಎಂಬ 5 ಪ್ರಮುಖ ಮೀನುಗಾರಿಕೆ ಬಂದರುಗಳನ್ನು ಆರ್ಥಿಕ ಚಟುವಟಿಕೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ. ನದಿಗಳು ಮತ್ತು ಜಲಮಾರ್ಗಗಳ ತೀರದಲ್ಲಿ ಒಳನಾಡು ಮೀನುಗಾರಿಕೆ ಬಂದರು ಮತ್ತು ಮೀನು ಇಳಿಯುವ ಕೇಂದ್ರಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತದೆೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕೊಡುವ ಅನುದಾನವನ್ನು ಕಡಿಮೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ನರೇಗಾ ಯೋಜನೆಗಾಗಿ 1,11,500 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಆದರೆ, ಈ ಬಾರಿ ಇದನ್ನು 73 ಸಾವಿರ ಕೋಟಿ ರೂ.ಗೆ ಇಳಿಸಲಾಗಿದೆ. ಒಟ್ಟಾರೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ 2020-21ನೇ ವಿತ್ತ ವರ್ಷದಲ್ಲಿ -ಠಿ;1,97,376 ಕೋಟಿ ಅನುದಾನ ಒದಗಿಸಲಾಗಿತ್ತು. ಈ ಬಾರಿ ಈ ಇಲಾಖೆಗೆ 1,31,519 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಒಟ್ಟಾರೆ ಅನುದಾನದಲ್ಲಿ 65,857 ಕೋಟಿ ರೂ. ಕಡಿತವಾಗಿದೆ.
ನಗರ ಪ್ರದೇಶಗಳಲ್ಲಿ ಉದ್ಯೋಗ ಕಂಡುಕೊಂಡಿದ್ದ ಗ್ರಾಮೀಣ ಪ್ರದೇಶದ ಯುವಕರು ಕೋವಿಡ್-19 ನಂತರದಲ್ಲಿ ಹಳ್ಳಿಗಳಿಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಮಿಷನ್ (ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್) (ಆಜೀವಿಕ) ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಳಕ್ಕೆ ಒತ್ತು ನೀಡಿದೆ. ಇದಕ್ಕಾಗಿ 13,677 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. 2020-21ನೇ ಸಾಲಿನ ಬಜೆಟ್​ನಲ್ಲಿ ಇದಕ್ಕಾಗಿ ಇರಿಸಿದ್ದ 9,210 ಕೋಟಿ ರೂ.ಗಳಿಗೆ ಹೋಲಿಸಿದರೆ ಈ ಬಾರಿ ಒಟ್ಟಾರೆ 4,467 ಕೋಟಿ ರೂ. ಅನುದಾನವನ್ನು ಹೆಚ್ಚುವರಿಯಾಗಿ ಆಜೀವಿಕಗೆ ಒದಗಿಸಲಾಗಿದೆ.
ಅದರಂತೆ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೂ ಒತ್ತು ನೀಡಲಾಗಿದೆ, ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಗೆ ಕಳೆದ ವಿತ್ತ ವರ್ಷದಲ್ಲಿ ಕೊಟ್ಟಿದ್ದ 13,706 ಕೋಟಿ ರೂ. ಅನುದಾನಕ್ಕೆ ಹೆಚ್ಚುವರಿಯಾಗಿ 1,294 ಕೋಟಿ ರೂ. ಸೇರಿಸಿ ಒಟ್ಟಾರೆ 15 ಸಾವಿರ ಕೋಟಿ ರೂ. ಅನುದಾನ ಒದಗಿಸಿದ್ದಾರೆ.
ಶ್ಯಾಮಪ್ರಕಾಶ್ ಮುಖರ್ಜಿ ರುರ್ಬನ್ ಮಿಷನ್ ಅಡಿ ಕಳೆದ ವರ್ಷ 372 ಕೋಟಿ ರೂ. ಅನುದಾನ ಒದಗಿಸಿದ್ದ ನಿರ್ಮಲಾ ಸೀತಾರಾಮನ್, ಈ ಬಾರಿ ಅದನ್ನು 600 ಕೋಟಿ ರೂ.ಗೆ ಹೆಚ್ಚಿಸಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆ- ಗ್ರಾಮಾಂತರ (ಪಿಎಂಎವೈ-ಆರ್) ಅನುದಾನದಲ್ಲಿ ಬದಲಾವಣೆ ಮಾಡಿಲ್ಲ. ಕಳೆದ ಬಾರಿ ಕೊಟ್ಟಿದ್ದ 19,500 ಕೋಟಿ ರೂ. ಅನುದಾನವನ್ನೇ ಈ ಸಾಲಿನಲ್ಲೂ ಒದಗಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
