ನವದೆಹಲಿ:ಸ್ವದೇಶಿ ವಸ್ತುಗಳಿಗೆ ಉತ್ತೇಜನ ನೀಡಲು ಅಬಕಾರಿ ಸುಂಕದಲ್ಲಿ ಮುಂದಿನ ಎರಡು ವರ್ಷಗಳಿಗೆ ಅನ್ವಯ ಆಗುವಂತೆ ಕೆಲ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಅಬಕಾರಿ ಸುಂಕಕ್ಕೆ ಸಂಬಂಧಿಸಿದಂತೆ ಹಳೆಯ 80 ವಿನಾಯಿತಿಗಳನ್ನು ತೆಗೆದುಹಾಕಲಾಗಿದೆ. ಕೆಲ ತಿಂಗಳುಗಳಿಂದ ಏರುಗತಿಯಲ್ಲಿ ಸಾಗಿರುವ ಚಿನ್ನ, ಬೆಳ್ಳಿಯ ಆಮದು ಸುಂಕದಲ್ಲಿ ಇಳಿಕೆಯಾಗಿದ್ದರೆ, ವಿದೇಶದ ಮದ್ಯ ಹಾಗೂ ವಿದೇಶದ ಮೊಬೈಲ್ ಫೋನ್​ಗಳನ್ನು ಬಯಸುವವರಿಗೆ ಜೇಬು ಭಾರವಾಗಲಿದೆ. ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್ ವಿಧಿಸಿದರೂ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.
ಚಿನ್ನ, ಬೆಳ್ಳಿ ಸುಂಕ ಶೇ. 2.5 ಇಳಿಕೆ:ಗಗನದತ್ತ ಮುಖ ಮಾಡಿರುವ ಚಿನ್ನ, ಬೆಳ್ಳಿ ದರಗಳನ್ನು ನಿಯಂತ್ರಣಕ್ಕೆ ತರಲು ಯತ್ನಿಸಿರುವ ಕೇಂದ್ರ ಸರ್ಕಾರ, ಇವುಗಳ ಆಮದು ಸುಂಕವನ್ನು ಇಳಿಕೆ ಮಾಡಿದೆ. ಚಿನ್ನ ಮತ್ತು ಬೆಳ್ಳಿ ಮೇಲೆ ಪ್ರಸ್ತುತ ಶೇ.12.5 ಕಸ್ಟಮ್ಸ್ ಸುಂಕವನ್ನು ವಿಧಿಸಲಾಗುತ್ತಿದೆ. ಇದನ್ನು ಶೇ.7.5ಕ್ಕೆ ಇಳಿಸಲಾಗಿದೆ. ಇದೀಗ ಇವುಗಳಿಗೆ ಶೇ.2.5 ಕೃಷಿ ಸುಂಕವನ್ನೂ ವಿಧಿಸುವ ಕಾರಣ, ಒಟ್ಟಾರೆಯಾಗಿ ಸುಂಕ ಶೇ.10 ಆಗಲಿದೆ. ಅತ್ತ ಬಜೆಟ್ ಮಂಡನೆಯಾಗುತ್ತಿದ್ದಂತೆಯೇ, ರಾಷ್ಟ್ರ ರಾಜಧಾನಿಯಲ್ಲಿ ಚಿನ್ನವು 10 ಗ್ರಾಂಗೆ 1,324 ರೂ. ಇಳಿಕೆಯಾಗಿದೆ. ಭಾನುವಾರ ಚಿನ್ನದ ದರ ಪ್ರತಿ 10 ಗ್ರಾಂಗೆ 48,844 ರೂಪಾಯಿ ಇತ್ತು. ಈಗ ಅದು 47,520 ರೂಪಾಯಿಗೆ ತಲುಪಿದೆ. ಬಜೆಟ್​ನಲ್ಲಿ ಬೆಳ್ಳಿಯ ಮೇಲಿನ ಸುಂಕವನ್ನು ಕಡಿಮೆ ಮಾಡಿದ್ದರೂ ಅದರ ಬೆಲೆ ಪ್ರತಿ ಕಿಲೋಗ್ರಾಂಗೆ 3,461 ರೂ ಹೆಚ್ಚಳವಾಗಿದೆ. ಹಿಂದಿನ ದರ 69,009ರಿಂದ ಸೋಮವಾರ 72,470 ರೂ.ಗೆ ತಲುಪಿದೆ.
ದುಬಾರಿಯಾಗಲಿದೆ ಅಡುಗೆ ಎಣ್ಣೆ:ಕಚ್ಚಾ ತಾಳೆ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನು ಶೇ. 27.5ರಿಂದ ಶೇ.15ಕ್ಕೆ ಹಾಗೂ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕವನ್ನು ಶೇ.35ರಿಂದ ಶೇ.15ಕ್ಕೆ ಕಡಿತಗೊಳಿಸಲಾಗಿದೆ. ಆದರೆ ಕಚ್ಚಾ ತಾಳೆ ಎಣ್ಣೆಯ ಮೇಲೆ ಶೇ.17.5 ಹಾಗೂ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲೆ ಶೇ.20ರಷ್ಟು ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ, ಅಡುಗೆ ಎಣ್ಣೆಗಳ ದರವು ತುಸು ದುಬಾರಿಯಾಗಲಿದೆ.
ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್:ಪೆಟ್ರೋಲ್ ಮೇಲೆ 2.5 ರೂಪಾಯಿ ಹಾಗೂ ಡೀಸೆಲ್ ಮೇಲೆ 4 ರೂಪಾಯಿ ಕೃಷಿ ಸೆಸ್ ವಿಧಿಸಲಾಗಿದೆ. ಬ್ರಾಂಡ್ ಅಲ್ಲದ ಪ್ರತಿ ಲೀಟರ್ ಪೆಟ್ರೋಲ್​ಗೆ 1.4 ರೂ ಮತ್ತು ಡೀಸೆಲ್​ಗೆ 1.8 ರೂ ಅಬಕಾರಿ ಸುಂಕ ವಿಧಿಸಲಾಗಿದೆ. ಬ್ರಾಂಡೆಡ್ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ಲೀಟರ್​ಗೆ 11 ಮತ್ತು 8 ರೂ. ಸುಂಕ ವಿಧಿಸಲಾಗಿದೆ. ಸೆಸ್ ವಿಧಿಸಿದ್ದರಿಂದ ಇಂಧನ ದರ ಏರಿಕೆಯಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಭಾರಿ ಗುಲ್ಲು ಎದ್ದಿತ್ತು. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಸುಂಕವನ್ನು ಕಡಿತಗೊಳಿಸಿರುವ ಕಾರಣ, ಸದ್ಯದ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡುವುದರೊಂದಿಗೆ ಜನ ಸ್ವಲ್ಪ ಸಮಾಧಾನಗೊಂಡರು.
ಎಲ್​ಇಡಿ, ಸೋಲಾರ್ ಸುಂಕದಲ್ಲೂ ಏರಿಕೆ:ಎಲ್​ಇಡಿ ದೀಪಗಳ ಮೇಲಿನ ಆಮದು ಸುಂಕವನ್ನು ಶೆ.5 ರಿಂದ 10ಕ್ಕೆ ಏರಿಸಲಾಗಿದೆ. ಸೋಲಾರ್ ದೀಪದ ಬೆಲೆಯ ಆಮದು ಸುಂಕವನ್ನು ಶೇಕಡಾ 5 ರಿಂದ 15ಕ್ಕೆ ಏರಿಸಲಾಗಿದೆ. ಆದರೆ ಸೌರ ಫಲಕಗಳ ಮೇಲಿನ ಕಸ್ಟಮ್್ಸ ಸುಂಕ ಶೇ.5ರಷ್ಟು ಇಳಿಕೆಯಾಗಿದ್ದು, ಸೋಲಾರ್ ಪ್ಯಾನಲ್​ಗಳ ದರವೂ ಕಡಿಮೆಯಾಗಲಿದೆ.
ಚರ್ಮದ ಉತ್ಪನ್ನಗಳ ಸುಂಕ ಹೆಚ್ಚಳ:ಚರ್ಮದ ಉತ್ಪನ್ನಗಳ ಮೇಲೆ ಈ ಮೊದಲು ಯಾವುದೇ ರೀತಿಯ ಸುಂಕ ಇರಲಿಲ್ಲ. ಈ ಸಾಲಿನ ಬಜೆಟ್​ನಲ್ಲಿ ಸುಂಕವನ್ನು ಶೇ.10ಕ್ಕೆ ನಿಗದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಚರ್ಮದ ಉತ್ಪನ್ನಗಳಾದ ಶೂಸ್, ಬ್ಯಾಗ್ ಸೇರಿದಂತೆ ಎಲ್ಲ ಉತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಜೇಬಿಗೆ ಭಾರವಾದ ವಿದೇಶಿ ಮದ್ಯ:ಮದ್ಯಪ್ರೇಮಿಗಳಿಗೆ ಸರ್ಕಾರ ಮತ್ತೆ ಶಾಕ್ ಕೊಟ್ಟಿದೆ. ಈ ಬಾರಿಯ ಬಜೆಟ್​ನಲ್ಲಿ ಸೆಸ್ ಅನ್ನು ಶೇ.100 ಹೆಚ್ಚಿಸಲಾಗಿದೆ. ವಿದೇಶಿ ಮದ್ಯದ ಬೆಲೆ ಹೆಚ್ಚಾಗಲಿದೆ. ಆಮದು ಮಾಡಿಕೊಳ್ಳುವ ದುಬಾರಿ ಮದ್ಯಗಳಿಗೆ ಇದು ಅನ್ವಯ ಆಗಲಿದೆ.
ಕೈ ಸುಡಲಿದೆ ಮೊಬೈಲ್ ಫೋನ್:ಭಾರತದಲ್ಲಿ ವಿದೇಶಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಕೆಲವೇ ಕಂಪನಿಗಳ ಸ್ವದೇಶಿ ಮೊಬೈಲ್​ಗಳು ಭಾರತದಲ್ಲಿ ಲಭ್ಯವಿದೆ. ವಿದೇಶಿ ಅವಲಂಬನೆ ತಪ್ಪಿಸುವ ನಿಟ್ಟಿನಲ್ಲಿ, ಮೊಬೈಲ್ ಬಿಡಿಭಾಗಗಳು, ಚಾರ್ಜರ್ ಸೇರಿದಂತೆ ಕೆಲ ಇಲೆಕ್ಟ್ರಾನಿಕ್ ವಸ್ತುಗಳ ಆಮದು ಸುಂಕವನ್ನು ಶೇಕಡ 2.5ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಕಡಿಮೆ ಬೆಲೆ ಮೊಬೈಲ್ ಫೋನ್​ಗಳು ದುಬಾರಿಯಾಗಲಿವೆ. ಆತ್ಮನಿರ್ಭರ ಯೋಜನೆಗೆ ಇದು ಪೂರಕವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 9 =
Remember me
