ನವದೆಹಲಿ:ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಮನವಿಗಳನ್ನು ವಿಸ್ತೃತವಾಗಿ ಪರಿಶೀಲಿಸಿ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ಭಾರತ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಉಭಯ ಲಸಿಕೆಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಚಿವಾಲಯ, ಈ ಪ್ರಕ್ರಿಯೆಯ ವಿವರವಾದ ಮಾಹಿತಿಯನ್ನು ಪ್ರಕಟಿಸಿದೆ. ರೋಗ ನಿರೋಧಕತೆ, ಪರಿಣಾಮ ಮುಂತಾದ ಅಂಶಗಳನ್ನು ಪರಿಗಣಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಅವುಗಳ ತುರ್ತು ಬಳಕೆಗೆ ಕೆಲವು ಷರತ್ತುಗಳೊಂದಿಗೆ ಸಮ್ಮತಿಸಲಾಗಿದೆ ಎಂದು ತಿಳಿಸಿದೆ. ಸುರಕ್ಷಿತ ಹಾಗೂ ಜಾಗತಿಕವಾಗಿ ಮಾನ್ಯವಾಗಿರುವ ವಿಧಾನಗಳನ್ನು ಅನುಸರಿಸಿ ಈ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಕೋವಿಶೀಲ್ಡ್ ಪ್ರಮುಖ ಲಸಿಕೆ:ಭಾರತದಲ್ಲಿ ಕೋವಿಡ್-19 ವಿರುದ್ಧದ ಸಮರದಲ್ಲಿ ಸೆರಂ ಉತ್ಪಾದನೆಯ ಕೋವಿಶೀಲ್ಡ್ ಲಸಿಕೆಯೇ ಪ್ರಮುಖ ಲಸಿಕೆಯಾಗಿರುತ್ತದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್್ಸ) ಮುಖ್ಯಸ್ಥ ರಣದೀಪ್ ಗುಲೇರಿಯಾ ಹೇಳಿದ್ದಾರೆ. ಇನ್ನೂ ಕ್ಲಿನಿಕಲ್ ಪರೀಕ್ಷೆ ಹಂತದಲ್ಲಿರುವ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆ ಮುಂದಿನ ದಿನಗಳಲ್ಲಿ ‘ಬ್ಯಾಕಪ್’ ಲಸಿಕೆ ಆಗಬಹುದಾಗಿದೆ ಅಷ್ಟೆ ಎಂದು ಸಂದರ್ಶನವೊಂದರಲ್ಲಿ ಅವರು ಅಭಿಪ್ರಾಯ ಪಟ್ಟರು.
ಯಾರಿಗೆ ಮೊದಲು ಲಸಿಕೆ?:ಆದ್ಯತಾ ವಲಯದ 30 ಕೋಟಿ ಜನರಿಗೆ ಪ್ರಾಶಸ್ಱಕ್ಕೆ ಅನುಗುಣವಾಗಿ ಮೊದಲ ಹಂತದಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದೆಂದು ಆರೋಗ್ಯ ಸಚಿವ ಹರ್ಷವರ್ಧನ್ ಪ್ರಕಟಿಸಿದ್ದಾರೆ. ಆರೋಗ್ಯ ಇಲಾಖೆಗಳ ನೌಕರರು, ಕರೊನಾ ವಿರುದ್ಧದ ಹೋರಾಡುತ್ತಿರುವ ಮುಂಚೂಣಿ ಕಾಯಕರ್ತರು ಮತ್ತು 50 ವರ್ಷ ಮೇಲ್ಪಟ್ಟವರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದಿದ್ದಾರೆ.
ಡಬ್ಲ್ಯೂಎಚ್​ಒ ಸ್ವಾಗತ:ಎರಡು ಲಸಿಕೆಗಳಿಗೆ ಭಾರತ ಅನುಮೋದನೆ ನೀಡಿರುವುದರಿಂದ ಕೋವಿಡ್ ವಿರುದ್ಧ ಹೋರಾಡಲು ಹೆಚ್ಚಿನ ಬಲ ಸಿಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ಅಭಿಪ್ರಾಯಪಟ್ಟಿದೆ. ಡಿಸಿಜಿಐ ಅನುಮೋದನೆಯನ್ನು ಡಬ್ಲ್ಯೂಎಚ್​ಒ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸ್ವಾಗತಿಸಿದ್ದಾರೆ.
ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ದೊರಕಿರುವುದು ಭಾರತದ ವ್ಯಾಕ್ಸಿನ್ ಉದ್ಯಮದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಇತರ ದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು (ಎಂಎನ್​ಸಿ) ಸಂಶೋಧಿಸಿ ಅಭಿವೃದ್ಧಿಪಡಿಸಿದ ಲಸಿಕೆಗಳನ್ನೇ ಸಾಮಾನ್ಯವಾಗಿ ಭಾರತೀಯ ಕಂಪನಿಗಳು ಉತ್ಪಾದಿಸುತ್ತವೆ. ಆದರೆ, ಕೊವ್ಯಾಕ್ಸಿನ್ ಸಂಪೂರ್ಣವಾಗಿ ದೇಶೀಯ ಲಸಿಕೆಯಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಎಂಸಿಆರ್) ಮತ್ತು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್​ಐವಿ) ವಿಜ್ಞಾನಿಗಳು ಕರೊನಾ ಸೋಂಕಿತ ಭಾರತೀಯ ರೋಗಿಯೊಬ್ಬರಿಂದ ಕರೊನಾ ವೈರಸ್ ಅಂಶಗಳನ್ನು ಪ್ರತ್ಯೇಕಿಸಿ ಎಲ್ಲ ಪ್ರಕ್ರಿಯೆಗಳನ್ನು ದೇಶೀಯವಾಗಿಯೇ ಮಾಡಿದ್ದಾರೆ. ಸೂತ್ರೀಕರಣ, ಪ್ರಾಣಿಗಳ ಮೇಲಿನ ಅಧ್ಯಯನ ಮತ್ತು ಮಾನವರ ಮೇಲೆ ಪರೀಕ್ಷೆ ಇವೇ ಮೊದಲಾದವು ಈ ಪ್ರಕ್ರಿಯೆಯಲ್ಲಿ ಒಳಗೊಂಡಿದ್ದವು. ? 800ಕ್ಕೂ ಅಧಿಕ ಜನರ ಮೇಲೆ ಮೊದಲ ಮತ್ತು ಎರಡನೇ ಹಂತದ ಪ್ರಯೋಗ ? 22,500 ಜನರ ಮೇಲೆ ಮೂರನೇ ಹಂತದ ಪ್ರಯೋಗ ಚಾಲ್ತಿಯಲ್ಲಿದ್ದು, ಇದರ ಪರಿಣಾಮ ಸದ್ಯದಲ್ಲೇ ಸಿಗುವ ನಿರೀಕ್ಷೆ ಇದೆ ? ಅಂದಾಜು ಬೆಲೆ ಪ್ರತಿ ಡೋಸ್​ಗೆ 100 ರೂಪಾಯಿ.
ವೈರಸ್ ಬಳಸಿಯೇ ಔಷಧ ಅಭಿವೃದ್ಧಿ ವಿಧಾನವನ್ನು ಬ್ರಿಟನ್​ನ ಆಕ್ಸ್​ಫರ್ಡ್ ಯೂನಿವರ್ಸಿಟಿ ಹಾಗೂ ಆಸ್ಟ್ರಾಜೆನಿಕಾ ಕಂಪನಿ ಸಂಶೋಧಿಸಿದೆ. ಚಿಂಪಾಜಿಯ ಸಾಮಾನ್ಯ ಶೀತದ ವೈರಸ್​ನ ದುರ್ಬಲ ಆವೃತ್ತಿಯನ್ನೂ ಇದರಲ್ಲಿ ಬಳಸಲಾಗಿದೆ. ಭಾರತದಲ್ಲಿ ಪ್ರಯೋಗ ಹಾಗೂ ಉತ್ಪಾದನೆ ಪಾಲುದಾರ ಸಂಸ್ಥೆ ಸೇರಂ ಇನ್​ಸ್ಟಿಟ್ಯೂಟ್ ಆಗಿದೆ. ಇದಕ್ಕೆ ಕೋವಿಶೀಲ್ಡ್ ಎಂಬ ಹೆಸರು ಕೊಡಲಾಗಿದೆ. ? 23,745 ವ್ಯಕ್ತಿಗಳ ಮೇಲೆ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆ. ? 1,600 ವ್ಯಕ್ತಿಗಳ ಮೇಲೆ 2ನೇ ಹಂತದ ಪ್ರಯೋಗ ? ಅಂದಾಜು ಬೆಲೆ ಪ್ರತಿಡೋಸ್​ಗೆ 200-1000 ರೂಪಾಯಿ.
ಕರೊನಾ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಲು ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ಫಲ ನೀಡಿ ಎರಡು ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಸಿಕ್ಕಿರುವ ಬೆನ್ನಲ್ಲೇ ಈ ವಿಚಾರವಾಗಿ ಪರ ಮತ್ತು ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ. ಆಳುವ ಬಿಜೆಪಿ ಲಸಿಕೆಗೆ ಅನುಮೋದನೆ ಸಿಕ್ಕಿರುವುದನ್ನು ಸ್ವಾಗತಿಸಿದ್ದರೆ, ಕಾಂಗ್ರೆಸ್ ಸಹಿತ ಹಲವು ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಕಾಂಗ್ರೆಸ್​ನ ವಿರೋಧಕ್ಕೆ ಅನೇಕ ಸಾರ್ವಜನಿಕರು ಕೂಡ ಟ್ವೀಟ್ ಮೂಲಕ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೊವ್ಯಾಕ್ಸಿನ್ ಇನ್ನೂ 3ನೇ ಹಂತದ ಕ್ಲಿನಿಕಲ್ ಪರೀಕ್ಷೆ ನಡೆಸಿಲ್ಲ. ಅದಕ್ಕೆ ಅನುಮೋದನೆ ಕೊಟ್ಟಿರುವುದು ಅಕಾಲಿಕವಾಗಿದೆ. ಅಪಾಯಕಾರಿಯೂ ಆಗಬಹುದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆಕ್ಷೇಪಿಸಿದ್ದಾರೆ. ಎಲ್ಲ ಪರೀಕ್ಷೆ ನಡೆಸದೆ ಶಾರ್ಟ್​ಕಟ್ ಹಾದಿ ಹಿಡಿಯುವುದು ಅಭೂತಪೂರ್ವವಾಗಿದೆ. ಈ ವಿಚಾರದಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆಗ್ರಹಿಸಿದ್ದಾರೆ.
ಸ್ವದೇಶಿಯಾಗಿ ಸಿದ್ಧಗೊಂಡ ಯಾವುದಕ್ಕೂ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಿಗೆ ಹೆಮ್ಮೆಯಿಲ್ಲ. ಕೋವಿಡ್-19 ಲಸಿಕೆ ಕುರಿತ ಅವರ ಸುಳ್ಳುಗಳನ್ನು ಸ್ಥಾಪಿತ ಪಟ್ಟಭದ್ರರು ತಮ್ಮ ಹಿತ ಕಾಯಲು ಹೇಗೆ ಬಳಸಿಕೊಂಡಾರು ಎನ್ನುವ ಬಗ್ಗೆ ಪ್ರತಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂಥ ರಾಜಕೀಯವನ್ನು ಜನರು ತಿರಸ್ಕರಿಸುತ್ತಾ ಬಂದಿದ್ದು ಮುಂದೆಯೂ ಹಾಗೆ ಮಾಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿರುಗೇಟು ನೀಡಿದ್ದಾರೆ. ಪ್ರತಿಪಕ್ಷಗಳು ಕಾಯಂ ಆಗಿ ಮೂಲೆ ಸೇರುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿವೆ. ಜೈರಾಂ ರಮೇಶ್, ಶಶಿ ತರೂರ್ ಮುಂತಾದವರು ಸಿನಿಕತನದಿಂದ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹರ್​ದೀಪ್ ಸಿಂಗ್ ಪುರಿ ಹೇಳಿದ್ದಾರೆ.
‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

ಕರೊನಾ ಎಂಬುದೇ ಸುಳ್ಳು, ವಂಚನೆ!; ಆಸ್ಪತ್ರೆ ಮುಂದೆಯೇ ಪ್ರತಿಭಟನೆ…

ನದಿ ದಡದಲ್ಲಿ ಸಿಕ್ಕ ಬೈಕ್​, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 5 =
Remember me
