ನವದೆಹಲಿ:ಎಲ್ಲರಿಗೂ ಕನಿಷ್ಠ ಸಾರ್ವತ್ರಿಕ ಮೂಲ ಆದಾಯವನ್ನು ಖಾತರಿಪಡಿಸುವ ಯೋಜನೆಯೊಂದನ್ನು ಅನುಷ್ಠಾನಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್​ಎಚ್​ಆರ್​ಸಿ) ಹೇಳಿದೆ. ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ (ಯುಎನ್​ಎಚ್​ಆರ್​ಸಿ) ಭಾರತದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಕುರಿತು ಸಲ್ಲಿಸಿದ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ.
ಸಾರ್ವತ್ರಿಕ ಅವಧಿಬದ್ಧ ಪರಿಶೀಲನೆಯ (ಯುಪಿಆರ್) ಮೂರನೇ ಸುತ್ತಿನ ಭಾಗವಾಗಿ ಎನ್​ಎಚ್​ಆರ್​ಸಿ ಇತ್ತೀಚೆಗೆ ಮಧ್ಯಂತರ ವರದಿ ಸಲ್ಲಿಸಿದೆ. ಯುಪಿಆರ್ ಕಾರ್ಯನಿರ್ವಹಣಾ ತಂಡ ಸಲ್ಲಿಸಿದ್ದ 152 ಶಿಫಾರಸುಗಳ ಅನುಷ್ಠಾನವನ್ನು ತಂಡ ಪರಿಶೀಲಿಸಿದೆ. 2017ರ ಸೆಪ್ಟೆಂಬರ್​ನಲ್ಲಿ ಭಾರತ ಸರ್ಕಾರ ಈ ಶಿಫಾರಸುಗಳ್ನು ಅಂಗೀಕರಿಸಿತ್ತು.
ಬಡತನದ ಮಟ್ಟವನ್ನು ಇನ್ನಷ್ಟು ಇಳಿಸುವ ಕ್ರಮವಾಗಿ ಸಾರ್ವತ್ರಿಕ ಆದಾಯವನ್ನು ಖಾತರಿಗೊಳಿಸುವ ಸಾಧ್ಯತೆಯನ್ನು ಸತತವಾಗಿ ಅಧ್ಯಯನ ಮಾಡಬೇಕೆಂಬುದು ಯುಪಿಆರ್ ತಂಡದ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿದೆ. ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚಿಸಿ ಇದಕ್ಕೆ ಮುಂದಾಗಬೇಕು ಎಂದು ಅದು ತಿಳಿಸಿತ್ತು.
ಸಂತಾನೋತ್ಪತ್ತಿ ಹಕ್ಕುಗಳ ವಿಚಾರವನ್ನು ಪ್ರಸ್ತಾಪಿಸಿರುವ ಎನ್​ಎಚ್​ಆರ್​ಸಿ ವರದಿಯು ಸಂತಾನ ಶಕ್ತಿ ನಿಯಂತ್ರಣ, ಜನನ ನಿಯಂತ್ರಣ ಚಿಕಿತ್ಸೆ ಪ್ರಸಕ್ತ ಆರೋಗ್ಯ ವಿಮೆ ಯೋಜನೆಗಳ ವ್ಯಾಪ್ತಿಗೆ ಬಾರದ ಪ್ರಕ್ರಿಯೆಗಳನ್ನು ಪರಿಶೀಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, ಭಾರತೀಯ ವಿಮೆ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿರುವುದನ್ನು ಗಮನಕ್ಕೆ ತಂದಿದೆ.
1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ (ಅಟ್ರಾಸಿಟಿ ಆಕ್ಟ್) ಮತ್ತು 1995ರ ನಿಯಮಗಳಲ್ಲಿರುವ ಕೊರತೆಗಳ ಬಗ್ಗೆ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ. ಎಸ್​ಸಿ, ಎಸ್​ಟಿ ಮತ್ತು ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ವರದಿ ಸಲ್ಲಿಸಲು ವಿಫಲವಾದ ರಾಜ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಆಯೋಗ ಎಚ್ಚರಿಕೆ ನೀಡಿದೆ. ಈ ವಿಚಾರವನ್ನೂ ಅದು ಮಧ್ಯಂತರ ವರದಿಯಲ್ಲಿ ನಮೂದಿಸಿದೆ.
ಏನಿದು ಸಾರ್ವತ್ರಿಕ ಮೂಲ ಆದಾಯ?: ಯಾವುದೇ ಪರೀಕ್ಷೆಯಿಲ್ಲದೆ ಅಥವಾ ಉದ್ಯೋಗದ ಅಗತ್ಯವೂ ಇಲ್ಲದೆ ಎಲ್ಲ ಜನರಿಗೆ ನಿರ್ದಿಷ್ಟ ಅವಧಿಗೆ ಹಣ ಪಾವತಿ ಮಾಡಬೇಕೆಂಬ ಸರ್ಕಾರದ ಒಂದು ತಾತ್ವಿಕವಾದ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮವೇ ಸಾರ್ವತ್ರಿಕ ಮೂಲ ಆದಾಯ (ಯುಬಿಐ) ಇದನ್ನು ರಾಷ್ಟ್ರೀಯವಾಗಿ, ಪ್ರಾದೇಶಿಕವಾಗಿ ಅಥವಾ ಸ್ಥಳೀಯವಾಗಿಯೂ ಅನುಷ್ಠಾನಗೊಳಿಸ ಬಹುದಾಗಿದೆ. ನಾಗರಿಕರ ಮೂಲ ಆದಾಯ, ಮೂಲ ಆದಾಯ ಖಾತರಿ, ಮೂಲ ಜೀವನ ಸ್ಟೈಪೆಂಡ್, ಖಾತರಿಪಡಿಸಲಾದ ವಾರ್ಷಿಕ ಆದಾಯ ಎಂಬುದು ಇದರ ಇತರ ಹೆಸರುಗಳಾಗಿವೆ. ಬಡತನ ರೇಖೆ ಅಥವಾ ಅದಕ್ಕಿಂತ ಮೇಲೆ; ಒಬ್ಬ ವ್ಯಕ್ತಿಯ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಕಾಗುವಷ್ಟು ಷರತ್ತುರಹಿತವಾದ ಆದಾಯವನ್ನು ಪೂರ್ಣ ಮೂಲ ಆದಾಯವೆನ್ನುತ್ತಾರೆ.
ತಜ್ಞರ ಬೆಂಬಲ: ಭಾರತದಲ್ಲಿ ಈಗಿರುವ ಭ್ರಷ್ಟ ವ್ಯವಸ್ಥೆ ಹಾಗೂ ಪರಿಣಾಮಕಾರಿಯಲ್ಲದ ಸಾಮಾಜಿಕ ಕಾರ್ಯಕ್ರಮಗಳ ಬದಲಿಗೆ ಯುಬಿಐ ಅನುಷ್ಠಾನಗೊಳಿಸುವುದು ತುಂಬಾ ಉತ್ತಮ ಎಂಬುದು ಜಗತ್ತಿನ ಅನೇಕ ತಜ್ಞರ ಅಭಿಪ್ರಾಯ.
ಬದ್ಧತೆ-ಅನುಷ್ಠಾನ ಅಂತರ
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಡಿ ಹೇಳಲಾಗಿರುವ ಅಂಶಗಳ ಅನುಷ್ಠಾನಕ್ಕೆ ಮಾಡಿರುವ ಬದ್ಧತೆ ಹಾಗೂ ರೂಪಿಸಲಾದ ನೀತಿಗಳ ನಡುವೆ ಅಂತರವಿರುವುದನ್ನು ಎನ್​ಎಚ್​ಆರ್​ಸಿ ಗಮನಿಸಿದೆ. ಅದನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಸಲಹೆ ಮಾಡಿದೆ. ಮಹಿಳೆಯರ ವಿರುದ್ಧದ ಎಲ್ಲ ರೀತಿಯ ತಾರತಮ್ಯ ಮೂಲೋತ್ಪಾಟನೆಗೆ ವಹಿಸಬೇಕಾದ ಕ್ರಮಗಳ ಉಸ್ತುವಾರಿಗೆ ಒಂದು ಸಮಿತಿ ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದೂ ಆಯೋಗ ತಿಳಿಸಿದೆ. ಅಂಗವಿಕಲ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣ ಸೌಲಭ್ಯ ಲಭ್ಯಗೊಳಿಸುವಂತಾಗಲು ಕರಡು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಮಗ್ರ ವಿಧಾನವನ್ನು ಅಳವಡಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ 2020ರ ಜನವರಿಯಲ್ಲಿ ಶಿಫಾರಸು ಮಾಡಿರುವುದಾಗಿ ಎನ್​ಎಚ್​ಆರ್​ಸಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 12 =
Remember me
