ನವದೆಹಲಿ:ದೆಹಲಿಯ ರಾಷ್ಟ್ರಪತಿ ಭವನದ ಎದುರು ಭಾಗಕ್ಕೆ ನೇರ ದಿಕ್ಕಿನಲ್ಲಿರುವ ಇಂಡಿಯಾ ಗೇಟ್​ವರೆಗಿನ ಅತ್ಯಾಕರ್ಷಕ ಭೂ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಸೆಂಟ್ರಲ್ ವಿಸ್ಟಾ ಎಂಬ ಮಹತ್ವದ ಹೊಸ ಯೋಜನೆ ಕೈಗೆತ್ತಿಕೊಂಡಿದೆ.
ಕರೊನಾ ಕಾಲದಲ್ಲಿ ಯೋಜನೆಗೆಂದು ಕೋಟಿಗಟ್ಟಲೆ ಹಣ ಖರ್ಚು ಮಾಡಬೇಕೆ ಎಂದು ವಿಪಕ್ಷಗಳು ಆಕ್ಷೇಪ ತೆಗೆದಿವೆ. ಯೋಜನೆಯ ಪಾರದರ್ಶಕತೆ, ಟೆಂಡರ್ ಪ್ರಕ್ರಿಯೆ, ಸಂಬಂಧಪಟ್ಟ ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಚರ್ಚೆ, ಅಭಿಪ್ರಾಯಗಳನ್ನು ಕೇಳದೆ ಕೇಂದ್ರ ಸರ್ಕಾರ ಇಂಥದ್ದೊಂದು ಐತಿಹಾಸಿಕ ಮಹತ್ವವುಳ್ಳ ಪ್ರದೇಶದಲ್ಲಿ ಯೋಜನೆ ಕೈಗೆತ್ತಿಕೊಂಡಿರುವುದನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀಂಕೋರ್ಟ್​ಗೆ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಅದೇನೇ ಇದ್ದರೂ ಕೇಂದ್ರ ಸರ್ಕಾರ ಯೋಜನೆಗೆ ಹಸಿರು ನಿಶಾನೆ ನೀಡಿದೆ. ಈಗಿರುವ ಸಂಸತ್ ಭವನದ ಬದಲಿಗೆ ಹೊಸದಾದ ಸಂಸತ್ ಭವನ, ರಕ್ಷಣಾ ಭವನಗಳನ್ನೊಳಗೊಂಡ ಹೊಸ ಆಧುನಿಕ ಮಾದರಿಯ ಕಟ್ಟಡಗಳನ್ನು ಈ ಪ್ರದೇಶದಲ್ಲಿ ನಿರ್ಮಾಣ ಮಾಡಲು ನೀಲಿನಕ್ಷೆಯನ್ನೂ ಸಿದ್ಧಪಡಿಸಲಾಗಿದೆ.
ಸೆಂಟ್ರಲ್ ವಿಸ್ಟಾ ಯೋಜನೆ ಬರುವ ದೆಹಲಿಯ ಹೃದಯಭಾಗದಲ್ಲಿ ರಾಜ್​ಪಥ್ ರಸ್ತೆಯೂ ಹಾದು ಹೋಗುತ್ತದೆ. ಈ ರಸ್ತೆಯ ಎರಡೂ ಭಾಗದಿಂದ ಕೊಂಚ ದೂರದಲ್ಲಿ ಹೊಸ ಮಾದರಿಯ 10 ಕಟ್ಟಡಗಳು ತಲೆ ಎತ್ತಲಿವೆ. ವಾಸ್ತವದಲ್ಲಿ ಈ ಸ್ಥಳಕ್ಕೆ ಸೆಂಟ್ರಲ್ ಸೆಕ್ರೆಟೇರಿಯಟ್ ಪ್ರದೇಶ ಎಂದೂ ಕರೆಯಲಾಗುತ್ತದೆ. 2022ರ ಅಂತ್ಯದ ವೇಳೆಗೆ ಸೆಂಟ್ರಲ್ ವಿಸ್ಟಾ ಸಮುಚ್ಚಯ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಹೇಳಿದ್ದು, ಈ ಅವಧಿಯಲ್ಲಿ ಯಾವುದೇ ಅಡೆತಡೆಗಳು ಇಲ್ಲದಂತೆ ಹಾಲಿ ಸಂಸತ್ ಭವನದಲ್ಲಿ ಅಧಿವೇಶನಗಳನ್ನು ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಹೊಸ ಸಂಸತ್ ಹೀಗಿರಲಿದೆ:ಆಧುನಿಕತೆಯ ಸ್ಪರ್ಶ ದೊಂದಿಗೆ ಕಾಗದರಹಿತ ಕಚೇರಿಗಳ ನಿರ್ಮಾಣ ಮಾಡುವ ಜತೆಗೆ ಲೋಕಸಭೆ ಚೇಂಬರ್​ನಲ್ಲಿ 888, ರಾಜ್ಯಸಭೆಯಲ್ಲಿ 384 ಮಂದಿ ಸದಸ್ಯರಿಗೆ ಕುಳಿತು ಕೊಳ್ಳುವ ವ್ಯವಸ್ಥೆಯಿರಲಿದೆ. ಭವಿಷ್ಯದಲ್ಲಿ ಲೋಕಸಭೆ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಗಳಿರುವುದರಿಂದ ಎರಡೂ ಸದನಗಳಲ್ಲಿ ಹೆಚ್ಚುವರಿ ಸೀಟುಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದ್ದು, 2021ರ ಜೂನ್​ನಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಈಗಿರುವ ಸಂಸತ್ ಭವನದ ಪಕ್ಕದಲ್ಲೇ ಹೊಸ ಸಂಸತ್ತು ತಲೆಎತ್ತಲಿದೆ. ಹಾಲಿ ಸಂಸತ್ ಭವನಕ್ಕೆ 1921ರ ಫೆಬ್ರವರಿ 12ರಂದು ಅಡಿಪಾಯ ಹಾಕಲಾಗಿತ್ತು ಮತ್ತು 6 ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಭಾರತದ ಅಂದಿನ ಗವರ್ನರ್ ಜನರಲ್ ಲಾರ್ಡ್ ಇರ್ವಿನ್ 1927ರ ಜನವರಿ 18ರಂದು ಕಟ್ಟಡ ಉದ್ಘಾಟನೆ ಮಾಡಿದ್ದರು. ಕಟ್ಟಡ ನಿರ್ವಣಕ್ಕೆ 83 ಲಕ್ಷ ರೂ. ಖರ್ಚಾಗಿತ್ತು.
ಪ್ರಧಾನಮಂತ್ರಿಯವರ ಅಧಿಕೃತ ನಿವಾಸವಿರುವುದು ದೆಹಲಿಯ ಲೋಕ ಕಲ್ಯಾಣ ರಸ್ತೆಯಲ್ಲಿ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ರೇಸ್​ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ ಮಾರ್ಗ ಎಂದು ಬದಲಿಸಿದರು. ಸೆಂಟ್ರಲ್ ವಿಸ್ಟಾ ಯೋಜನೆಯಡಿಯಲ್ಲಿ ಪ್ರಧಾನಿ ನಿವಾಸವನ್ನು ರಾಷ್ಟ್ರಪತಿ ನಿವಾಸದ ಎದುರುಭಾಗದಿಂದ ಎಡ ಭಾಗದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅಂದರೆ ರೈಸಿನಾ ಹಿಲ್ ಪ್ರದೇಶದ ಸೌತ್​ಬ್ಲಾಕ್​ನಲ್ಲಿರುವ ಪ್ರಧಾನಿ ಕಚೇರಿಯ ಕೂಗಳತೆ ದೂರದಲ್ಲೇ ನಿವಾಸವಿರಲಿದೆ. ಬಲಭಾಗದಲ್ಲಿ ಉಪ ರಾಷ್ಟ್ರಪತಿ ನಿವಾಸ ನಿರ್ವಣವಾಗಲಿದೆ. ಸದ್ಯ ಉಪರಾಷ್ಟ್ರಪತಿ ಅಧಿಕೃತ ನಿವಾಸ ಇಂಡಿಯಾ ಗೇಟ್ ಪಕ್ಕದಲ್ಲಿರುವ ಮೌಲಾನಾ ಆಜಾದ್ ರಸ್ತೆಯಲ್ಲಿದೆ.
ವಿಜಯ್ ಚೌಕ್ ಪ್ರದೇಶದ ಮೇಲ್ಭಾಗದಲ್ಲಿರುವ ಸೌತ್ ಮತ್ತು ನಾರ್ಥ್ ಬ್ಲಾಕ್​ಗಳು ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳಾಗಿ ಪರಿವರ್ತನೆಯಾಗಲಿವೆ. ನಾರ್ಥ್ ಬ್ಲಾಕ್​ನಲ್ಲಿ ‘1984ರ ನಂತರದ ಭಾರತ’ ಮತ್ತು ಸೌತ್​ಬ್ಲಾಕ್​ನಲ್ಲಿ ‘1857ರವರೆಗಿನ ಭಾರತ’ ಎಂಬ ಎರಡು ಬಗೆಯ ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳು ತೆರೆದುಕೊಳ್ಳಲಿವೆ. ಸೆಂಟ್ರಲ್ ವಿಸ್ಟಾ ಯೋಜನೆ ವ್ಯಾಪ್ತಿಗೆ ಬರುವ ರಾಜೇಂದ್ರ ಪ್ರಸಾದ್ ರಸ್ತೆಯಲ್ಲಿ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ (ಐಜಿಎನ್​ಸಿಎ) ಸಂಸ್ಥೆಯಿದೆ. ಇದನ್ನು ಇಂಡಿಯಾ ಗೇಟ್ ಸರ್ಕಲ್ ರಸ್ತೆಯಲ್ಲಿರುವ ಜಾಮ್ಗರ್ ಹೌಸ್​ಗೆ ಸ್ಥಳಾಂತರಿಸಲಾಗುವುದು. ಐಜಿಎನ್​ಸಿಎ ಇದ್ದ ಪ್ರದೇಶದಲ್ಲಿ ಹೊಸ ಮೂರು ಕಟ್ಟಡಗಳು ನಿರ್ವಣವಾಗಲಿವೆ. ಸಾರಿಗೆ ಭವನ ಮತ್ತು ಶ್ರಮಶಕ್ತಿ ಭವನಗಳಲ್ಲಿ ಸಂಸದರ ಚೇಂಬರ್​ಗಳ ಜತೆಗೆ ರ್ಪಾಂಗ್​ಗೆ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ.
ಸೆಂಟ್ರಲ್ ವಿಸ್ಟಾ ಯೋಜನೆಯ ಸಮುಚ್ಚಯದಲ್ಲಿ ರಕ್ಷಣಾ ಇಲಾಖೆಯ ಸಂಸ್ಥೆಗಳಿಗೆಂದೇ ಮೂರು ಪ್ರತ್ಯೇಕ ಕಟ್ಟಡಗಳನ್ನು ಮೀಸಲಿಟ್ಟಿರುವುದು ವಿಶೇಷ. ಯೋಜನೆ ಪ್ರಕಾರ, ಮೌಲಾನಾ ಆಜಾದ್ ರಸ್ತೆಯಲ್ಲಿರುವ ವಿಜ್ಞಾನ ಭವನ ಮತ್ತು ಉಪರಾಷ್ಟ್ರಪತಿ ನಿವಾಸವನ್ನು ರಕ್ಷಣಾ ಸಂಸ್ಥೆಗಳಿಗೆ ನೀಡಲಾಗುವುದು. ಮೂರೂ ಸೇನೆಗಳ ಮುಖ್ಯಸ್ಥರ ಕಚೇರಿ ಸೇರಿದಂತೆ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಂಸ್ಥೆ, ಕಚೇರಿಗಳು ಈ ಕಟ್ಟಡಗಳ ಬ್ಲಾಕ್​ಗೆ ಸ್ಥಳಾಂತರಗೊಳ್ಳಲಿವೆ. ಈ 10 ಕಟ್ಟಡಗಳಲ್ಲೇ ಕೇಂದ್ರ ಸರ್ಕಾರದ ಬಹುತೇಕ ಸಚಿವಾಲಯಗಳು ಕಾರ್ಯನಿರ್ವಹಿಸಲಿವೆ. ಸದ್ಯ ಬೇರೆ ಬೇರೆ ಕಟ್ಟಡ ಹಾಗೂ ಪ್ರದೇಶಗಳಲ್ಲಿ ಸಚಿವಾಲಯಗಳಿವೆ. ಸಂಸತ್ ಭವನದಿಂದ ಕೂಗಳತೆ ದೂರದಲ್ಲಿಯೇ ರೈಲ್ವೆ ಭವನವಿರುವುದರಿಂದ ಅಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
