ನವದೆಹಲಿ:ಲಾಕ್​ಡೌನ್ ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ವರ್ಗದವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್​ನ ಎರಡನೇ ಚರಣದಲ್ಲಿ ಗುರುವಾರ ರೈತರು, ವಲಸೆ ಕಾರ್ವಿುಕರು, ರಸ್ತೆಬದಿ ವ್ಯಾಪಾರಿಗಳು, ಮುದ್ರಾ ಫಲಾನುಭವಿಗಳು, ಬುಡಕಟ್ಟು ಜನರ ಕಲ್ಯಾಣ ಸೇರಿ ಒಟ್ಟು 9 ನೆರವಿನ ಘೋಷಣೆ ಹೊರಬಿದ್ದಿದೆ. ಕಾರ್ವಿುಕರ ಸಂಹಿತೆಯ ಮಸೂದೆಯನ್ನು ಒಳಗೊಂಡಿರುವ ಈ ಉಪಕ್ರಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
ವಲಸೆ ಕಾರ್ವಿುಕರಿಗೆ ನರೇಗಾ ಯೋಜನೆಯ ಉದ್ಯೋಗಾವಕಾಶ ಹೆಚ್ಚಳ, ಮತ್ತೆ ಎರಡು ತಿಂಗಳು ಉಚಿತ ಪಡಿತರ ವಿತರಣೆ ವಿಸ್ತರಣೆ, ರೈತರ ಕೈಯಲ್ಲಿ ಹಣ ಇರುವಂತೆ ಮಾಡಲು ಬೆಳೆಸಾಲದ ಕಂತು ಪಾವತಿಗೆ 3 ತಿಂಗಳ ವಿನಾಯಿತಿ, 25 ಲಕ್ಷ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ  30 ಸಾವಿರ ಕೋಟಿಯ ಕ್ರೆಡಿಟ್, ಮುದ್ರಾ ಯೋಜನೆ ಫಲಾನುಭವಿಗಳಿಗೆ ಬಡ್ಡಿ ಸಬ್ಸಿಡಿ, ರಸ್ತೆಬದಿ ವ್ಯಾಪಾರಿಗಳಿಗೂ ಬ್ಯಾಂಕ್​ಗಳಿಂದ ಸಾಲ ಹಾಗೂ ಬುಡಕಟ್ಟು ಜನರಿಗೆ ಅವರು ಇರುವಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಗಳ ವಿವರವನ್ನು ಸಚಿವೆ ನೀಡಿದರು.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕಾರ್ಯನಿರತ ಬಂಡವಾಳ ಕಲ್ಪಿಸಿಕೊಳ್ಳಲು 30 ಸಾವಿರ ಕೋಟಿ  ರೂ.ನೆರವನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಮೂಲಕ ಒದಗಿಸಲಾಗುವುದು, ರೈತರಿಗೆ ನಬಾರ್ಡ್ ಈ ವರ್ಷ   90 ಸಾವಿರ ಕೋಟಿ ರೂ.ನೆರವು ನೀಡುತ್ತಿದೆ. ಇನ್ನೂ 30 ಸಾವಿರ ಕೋಟಿ ರೂ.ಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸೂಚಿಸಲಾಗಿದೆ.
ಪರಿಣಾಮ:ಮುಂಗಾರು ಹಂಗಾಮಿನ ವೇಳೆಗೆ ಮತ್ತು ಹಿಂಗಾರು ಹಂಗಾಮಿನ ಸಿದ್ಧತೆಗೆ ಅನುಕೂಲವಾಗಲಿದೆ. ಈ ಸಾಲ ಸಹಕಾರಿ, ಡಿಸಿಸಿ ಮತ್ತು ಗ್ರಾಮೀಣ ಪ್ರಾದೇಶಿಕ ಬ್ಯಾಂಕ್​ಗಳ ಮೂಲಕ ವಿತರಣೆಯಾಗಲಿದೆ. ಮೂರು ಕೋಟಿ ರೈತರಿಗೆ ಅನುಕೂಲ.
ಮೀನುಗಾರರು, ಪಶುಪಾಲಕರಿಗೂ ನೆರವು:ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ವಿತರಿಸಲಾಗಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಮೀನುಗಾರರು ಮತ್ತು ಪಶುಪಾಲಕರಿಗೂ ನೀಡಲು ಸರ್ಕಾರ ನಿರ್ಧರಿಸಿದೆ. ಜತೆಗೆ ಕಿಸಾನ್ ಸಮ್ಮಾನ್ ಫಲಾನುಭವಿಯಾಗಿದ್ದರೂ ಈ ಕಾರ್ಡ್ ಪಡೆಯದ 25 ಲಕ್ಷ ರೈತರಿಗೆ ಹೊಸದಾಗಿ ಕಾಡ್ ವಿತರಣೆ ಮಾಡಲಾಗುತ್ತದೆ. ಒಟ್ಟಾರೆ ಸಾಲದ ಮಿತಿಯನ್ನು -ಠಿ; 25 ಸಾವಿರ ಕೋಟಿಗೆ ನಿಗದಿ ಮಾಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡಲು -ಠಿ; 2 ಲಕ್ಷ ಕೋಟಿ ಅನುದಾನದ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಿಂದ 2.50 ಕೋಟಿ ರೈತರಿಗೆ ಅನುಕೂಲವಾಗಲಿದೆ.
ಪರಿಣಾಮ:ಈ ಕಾರ್ಡ್ ಹೊಂದಿರುವವರಿಗೆ ರಿಯಾಯಿತಿ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ. ಮೀನುಗಾರರು, ಪಶು ಪಾಲಕರಿಗೂ ಕಾರ್ಡ್ ವಿತರಣೆ ಮಾಡುವುದರಿಂದ ವ್ಯಾಪ್ತಿ ಹಿಗ್ಗಲಿದೆ.
ಕೈಗೆಟಕುವ ದರದಲ್ಲಿ ಬಾಡಿಗೆಗೆ ಮನೆ:ವಲಸೆ ಕಾರ್ವಿುಕರು, ನಗರ ಪ್ರದೇಶದ ಬಡವರ ಆರ್ಥಿಕ ಸಂಕಷ್ಟ ತಗ್ಗಿಸಲು ಕೇಂದ್ರ ಘೋಷಿಸಿರುವ ಮತ್ತೊಂದು ಮಹತ್ವದ ಕಾರ್ಯಕ್ರಮ ಕೈಗೆಟಕುವ ದರದಲ್ಲಿ ಮನೆ ಬಾಡಿಗೆ ಸಮುಚ್ಚಯ ನಿರ್ಮಾಣ (ಎಆರ್​ಎಚ್​ಸಿ). ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿ ಇದನ್ನು ರೂಪಿಸಲಾಗಿದ್ದು, ಸರ್ಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಇದು ಜಾರಿಯಾಗಲಿದೆ. ಸರ್ಕಾರಿ ಜಾಗದಲ್ಲಿ ಅಥವಾ ಖಾಸಗಿ ಜಾಗದಲ್ಲಿ ಈ ಸಮುಚ್ಚಯದ ನಿರ್ಮಾಣ ಮಾಡಬಹುದು ಅಥವಾ ಈಗಾಗಲೇ ನಿರ್ವಿುಸಲಾದ ಆದರೆ, ಗ್ರಾಹಕರಿಗೆ ಮಂಜೂರಾದ ನಿರ್ವಣಗಳನ್ನು ಈ ಕಾರ್ಯಕ್ರಮದಡಿಗೆ ತರಬಹುದು. ಖಾಸಗಿ ಜಾಗದಲ್ಲಿ ಸಮುಚ್ಚಯ ನಿರ್ವಿುಸುವವರಿಗೆ ಸರ್ಕಾರ ಪ್ರೋತ್ಸಾಹಕ ಕ್ರಮಗಳನ್ನು ಕಲ್ಪಿಸಬಹುದು. ಇದನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸ್ವಾಮ್ಯದ ಇಲ್ಲವೆ ಖಾಸಗಿ ವಲಯದವರೇ ನಿರ್ವಿುಸಿ ನಿರ್ವಹಿಸಬಹುದು. ಈ ಕುರಿತು ಸಚಿವಾಲಯ ಅಗತ್ಯ ಮಾರ್ಗದರ್ಶಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಪರಿಣಾಮ:ನಗರ ಪ್ರದೇಶದಲ್ಲಿ ದುಬಾರಿ ಬಾಡಿಗೆ ತೆತ್ತು ಹೈರಾಣಾಗುತ್ತಿರುವ ಬಡವರಿಗೆ ದೊಡ್ಡ ನಿರಾಳ ದೊರೆಯಲಿದೆ.
ವಲಸೆ ಕಾರ್ವಿುಕರ ನೆರವಿಗೆ ನರೇಗಾ:ವಿವಿಧ ರಾಜ್ಯಗಳಿಂದ ತವರಿಗೆ ಮರಳುತ್ತಿರುವ ಕಾರ್ವಿುಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಮೇ 13ರವರೆಗೆ 14.62 ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಜಿಸಲಾಗಿದೆ. 10 ಸಾವಿರ ಕೋಟಿ ರೂ. ಕೂಲಿ ವಿತರಿಸಲಾಗಿದೆ.
ಕಳೆದ ವರ್ಷ ಮೇ ತಿಂಗಳಿಗೆ ಹೋಲಿಸಿದರೆ ಈ ಸಾರಿ ಶೇ. 40ರಿಂದ 50ರಷ್ಟು ಮಂದಿ ಹೊಸದಾಗಿ ಉದ್ಯೋಗಕ್ಕಾಗಿ ನರೇಗಾದಲ್ಲಿ ನೊಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ 182  ರೂ.ಇದ್ದ ಸರಾಸರಿ ಕೂಲಿದರ ಈ ಸಾರಿ  202 ರೂ. ಏರಿಸಲಾಗಿದೆ.
ಪರಿಣಾಮ:ದೇಶಾದ್ಯಂತ 1.87 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ 22.33 ಕೋಟಿ ಜನರಿಗೆ ಕೆಲಸ ದೊರಕಿದೆ.
ಗೃಹ ಸಾಲದ ಬಡ್ಡಿಗೆ ಸಬ್ಸಿಡಿ ವಿಸ್ತರಣೆ:ಮಧ್ಯಮ ವರ್ಗದವರಿಗೆ ಸೂರಿನ ಕನಸು ಸಕಾರಗೊಳಿಸಲು 2017ರಲ್ಲಿ ಜಾರಿಗೆ ತರಲಾದ ಕೈಗೆಟುಕುವ ದರ ವಸತಿ ಯೋಜನೆಯಲ್ಲಿ ಗೃಹ ಸಾಲದ ಬಡ್ಡಿಗೆ ನೀಡುವ ಸಬ್ಸಿಡಿಯನ್ನು (ಸಿಎಲ್​ಎಸ್​ಎಸ್) ಮುಂದಿನ ಮಾರ್ಚ್ ವರೆಗೂ ವಿಸ್ತರಿಸಲಾಗಿದೆ. ಇದಕ್ಕಾಗಿ  70 ಸಾವಿರ ಕೋಟಿ ರೂ.ಯನ್ನು ತೆಗೆದಿರಿಸಲಾಗಿದೆ.
2020ರ ಮಾರ್ಚ್​ವರೆಗೆ 3.30 ಲಕ್ಷ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. 2020-21ರಲ್ಲಿ 2.50 ಲಕ್ಷ ಜನರಿಗೆ ಪ್ರಯೋಜನವಾಗುವ ನಿರೀಕ್ಷೆ ಇದೆ.
ಪರಿಣಾಮ:– 6ರಿಂದ 8 ಲಕ್ಷ ವಾರ್ಷಿಕ ವರಮಾನ ಇರುವ ಮಧ್ಯಮ ವರ್ಗದ ಕುಟುಂಬಕ್ಕೆ ಅನುಕೂಲ. ಇದರಿಂದ ಪರೀಕ್ಷವಾಗಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ, ನಿರ್ಮಾಣ ಕಾಮಗಾರಿಯಲ್ಲಿ ಉದ್ಯೋಗಾವಕಾಶ ದೊರೆಯುತ್ತದೆ. ಕಚ್ಚಾ ಸಾಮಗ್ರಿ ಉತ್ಪಾದನಾ ವಲಯ ಮತ್ತು ಇದರ ಸಾಗಣೆಯಲ್ಲೂ ನೌಕರಿ ಪಾಪ್ತಿಯಾಗುತ್ತದೆ.
ಮುದ್ರಾ, ಸಬ್ಸಿಡಿಯಿಂದ 1,500 ಕೋಟಿ ರೂ. ಮಿಗತೆ:ಅತಿ ಸಣ್ಣ ಪ್ರಮಾಣದಲ್ಲಿ ಸಾಲ ಪಡೆಯುವ ವ್ಯಾಪಾರಸ್ಥರಿಗಾಗಿ ಜಾರಿಗೊಳಿಸಲಾಗಿರುವ ಮುದ್ರಾ ಯೋಜನೆಯ ‘ಶಿಶು ಸಾಲ’ದಡಿಯಲ್ಲಿ ಸಾಲ ಪಡೆದು (ವೈಯಕ್ತಿಕವಾಗಿ ಗರಿಷ್ಠ 50 ಸಾವಿರ ರೂ.ದವರೆಗೆ ಸಾಲ) ಪ್ರಾಮಾಣಿಕವಾಗಿ ಇಎಂಐ ಪಾವತಿ ಮಾಡುತ್ತಿರುವವರಿಗೆ ಬಡ್ಡಿ ಮೇಲೆ ಶೇ. 2ರಷ್ಟು ಸಬ್ಸಿಡಿ ಘೋಷಿಸಲಾಗಿದೆ. ಇದು 12 ತಿಂಗಳ ಅವಧಿಯದ್ದಾಗಿರಲಿದೆ. ಈ ರೀತಿ ಒಟ್ಟಾರೆ 1.62 ಲಕ್ಷ ಕೋಟಿ ರೂ. ಸಾಲ ವಿತರಣೆ ಆಗಿದೆ.
ಪರಿಣಾಮ:‘ಶಿಶು ಸಾಲ’ ಪಡೆದವರಿಗೆ ಒಟ್ಟಾರೆ 1,500 ಕೋಟಿ ರೂ.ಯಷ್ಟು ಬಡ್ಡಿ ಹಣ ಮಿಗತೆಯಾಗಲಿದೆ.
ಬೀದಿಬದಿ ವ್ಯಾಪಾರಿಗಳಿಗೆ ಸಾಲ:ಕೋವಿಡ್-19ನಿಂದ ಬಹಳ ಸಂಕಷ್ಟಕ್ಕೆ ಸಿಲುಕಿರುವ ಪೈಕಿ ಬೀದಿಬದಿ ವ್ಯಾಪಾರಿಗಳು ಇದ್ದಾರೆ. ಇವರಿಗೆ ಸಾಲ ಒದಗಿಸಲು ಸರ್ಕಾರ  5 ಸಾವಿರ ಕೋಟಿ ರೂ. ಲಿಕ್ವಿಡಿಟಿ ನೆರವು ನೀಡಿದೆ.  10 ಸಾವಿರ ರೂ.ದ ಬಂಡವಾಳ ಹೂಡಿಕೆಯ ವ್ಯಾಪಾರಿಗಳು ಇದರ ಪ್ರಯೋಜನ ಪಡೆಯಬಹುದು. ಈ ಯೋಜನೆ ಒಂದು ತಿಂಗಳಲ್ಲಿ ಜಾರಿಯಾಗಲಿದೆ.
ಪರಿಣಾಮ:50 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ
ಬುಡಕಟ್ಟು ಜನರ ಉದ್ಯೋಗ:ಬುಡಕಟ್ಟು ಜನರು, ಆದಿವಾಸಿಗಳಿಗೆ ಅರಣ್ಯ ಪ್ರದೇಶ ಮತ್ತು ಅರೆನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲು 6 ಸಾವಿರ ರೂ.ಕೋಟಿಯ ಅನುದಾನವನ್ನು ‘ಕ್ಯಾಂಪಾ‘ದಡಿಯಲ್ಲಿ ಘೋಷಿಸಲಾಗಿದೆ. ಈ ಹಣವನ್ನು ರಾಜ್ಯ ಸರ್ಕಾರಗಳು ಅರಣ್ಯೀಕರಣ, ನೆಡುತೋಪು, ಗಿಡ ನೆಡುವಿಕೆ, ಅರಣ್ಯ ವೃದ್ಧಿ, ಸಂರಕ್ಷಣೆ, ಮಣ್ಣು ಮತ್ತು ಫಲವತ್ತತೆ ಸಂರಕ್ಷಿಸುವ ಕಾರ್ಯ, ವನ್ಯ ಜೀವಿ ನಿರ್ವಹಿಸಲು ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ರಮದಲ್ಲಿ ಉದ್ಯೋಗ ನೀಡಲು ಬಳಸಬಹುದಾಗಿದೆ.
ಪರಿಣಾಮ:ಬುಡಕಟ್ಟು ಜನರಿಗೆ ಅವರು ಇರುವಲ್ಲೇ ಉದ್ಯೋಗ ಸೃಜನೆ.
ಎರಡು ತಿಂಗಳು ಉಚಿತ ಪಡಿತರ:ಕೇಂದ್ರ (ಎನ್​ಎಫ್​ಎಸ್​ಎ) ಅಥವಾ ರಾಜ್ಯಗಳ ಪಡಿತರ ಯೋಜನೆಯ ಫಲಾನುಭವಿಗಳ ಲ್ಲದ ವಲಸೆ ಕಾರ್ವಿುಕರು ಮತ್ತು ನಗರ ಪ್ರದೇಶದ ಬಡವರಿಗೆ ಎರಡು ತಿಂಗಳು ಉಚಿತ ಪಡಿತರ ವಿತರಣೆ. ಇವರಿಗೆ ಪ್ರತಿ ಕುಟುಂಬಕ್ಕೆ 5 ಕೆ.ಜಿ. ಅಕ್ಕಿ ಇಲ್ಲವೆ ಗೋಧಿ, 1 ಕೆ.ಜಿ. ಬೇಳೆ ದೊರೆಯಲಿದೆ. ಇದಕ್ಕಾಗಿ 3,500 ಕೋಟಿ ರೂ.ಅನುದಾನವನ್ನು ಒದಗಿಸಲಾಗಿದೆ. ಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸಲಿದೆ. ಆದರೆ, ಈ ಫಲಾನುಭವಿಗಳನ್ನು ಗುರುತಿಸುವ ಹೊಣೆಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ.
ಪರಿಣಾಮ:ಅಂದಾಜು 8 ಕೋಟಿ ಫಲಾನುಭವಿಗಳಿಗೆ ಅನುಕೂಲ.
ಕಾರ್ವಿುಕರಿಗೆ ಸಂಬಂಧಿಸಿದ ಹಳೆಯ 44 ಕಾನೂನುಗಳನ್ನು ನಾಲ್ಕರಲ್ಲಿ ಏಕೀಕರಿಸಿ ಸಂಸತ್​ನಲ್ಲಿ ಮಂಡಿಸಲಾಗಿರುವ ಕಾರ್ವಿುಕ ಸಂಹಿತೆ ಮಸೂದೆಯಿಂದ ಸಂಘಟಿತ ಮತ್ತು ಅಸಂಘಟಿತ ವಲಯದ ನೌಕರರಿಗೆ ಅನೇಕ ಲಾಭವಿದೆ. ಒಂದೇ ರೀತಿಯ ಕೆಲಸಕ್ಕೆ ಕನಿಷ್ಠ ವೇತನವು ಸಮಾನ ಇರಬೇಕು ಎಂಬುದು ಈ ಮಸೂದೆಯ ಪ್ರಮುಖ ಆಶಯ. ಹಾಲಿ ಕನಿಷ್ಠ ವೇತನದ ಸಮಾನತೆಯು ಶೇ. 30ರಷ್ಟಿದೆ. ಎಲ್ಲ ನೌಕರರಿಗೂ ನೇಮಕಾತಿ ಪತ್ರ ನೀಡಬೇಕು, ವಾರ್ಷಿಕ ಆರೋಗ್ಯ ತಪಾಸಣೆ, ಅಪಾಯಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಸುರಕ್ಷತೆ ಮತ್ತು ಆರೋಗ್ಯ ತಪಾಸಣೆ ಕಡ್ಡಾಯ ಮಾಡಲಾಗಿದೆ. ಇಎಸ್​ಐ ಸೌಲಭ್ಯ ಕೂಡ ಕಡ್ಡಾಯ. 10 ಅಥವಾ ಅದಕ್ಕಿಂತಲೂ ಹೆಚ್ಚು ನೌಕರರು ಇರುವೆಡೆ ಇಎಸ್​ಐ ಸೌಲಭ್ಯ ಕಡ್ಡಾಯ. 10ಕ್ಕಿಂತ ಕಡಿಮೆ ನೌಕರರು ಇರುವೆಡೆ ಇದು ಐಚ್ಛಿಕ. ಅಂತರ ರಾಜ್ಯ ವಲಸೆ ಕಾರ್ವಿುಕರ ವ್ಯಾಖ್ಯಾನವನ್ನು ಪರಿಷ್ಕರಿಸಲಾಗಿದೆ. ಉದ್ಯೋಗದಾತರು ನೇರವಾಗಿ ನೇಮಿಸಿಕೊಂಡ ಅಂತರ ರಾಜ್ಯ ನೌಕರರನ್ನು ಗುತ್ತಿಗೆದಾರರ ಮೂಲಕ ಪೂರೈಕೆಯಾಗುವ ನೌಕರರನ್ನೂ ಇದರಲ್ಲಿ ಪರಿಗಣಿಸಲಾಗಿದೆ. ಇವರಿಗೂ ಕಾರ್ವಿುಕ ಕಲ್ಯಾಣದ ಸೇವೆಗಳು ಲಭ್ಯವಾಗುವಂತೆ ಮಾಡಲಾಗಿದೆ. ಕಾರ್ವಿುಕರ ಕೌಶಲ್ಯ ಹೆಚ್ಚಿಸುವ ತರಬೇತಿಗೆ ನಿಧಿ. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಕಾರ್ವಿುಕರಿಗೆ ಸುರಕ್ಷತೆ ಖಾತರಿ. ಅಸಂಘಟಿತ ವಲಯದ ಕಾರ್ವಿುಕರಿಗೂ ಸಾಮಾಜಿಕ ಭದ್ರತಾ ಯೋಜನೆ ಜಾರಿ. ನಿಗದಿತ ಅವಧಿಯ ಕಾರ್ವಿುಕರಿಗೂ ಗ್ರಾಚ್ಯುಟಿ ಸೌಲಭ್ಯ.
ಪಡಿತರ ಗ್ರಾಹಕರು ದೇಶದ ಯಾವುದೇ ಸ್ಥಳದಲ್ಲಿದ್ದರೂ ಅಲ್ಲೇ ಅವರಿಗೆ ನ್ಯಾಯಬೆಲೆ ಅಂಗಡಿ ಮೂಲಕ ರಿಯಾಯಿತಿ ದರದ ಪಡಿತರ ದೊರಕಿಸಿಕೊಡಲು ರೂಪಿಸಲಾಗಿರುವ ‘ಒಂದು ದೇಶ- ಒಂದು ಕಾರ್ಡ್’ ಯೋಜನೆ ಆಗಸ್ಟ್​ನಲ್ಲಿ ಆರಂಭವಾಗಲಿದೆ. ಈ ಯೋಜನೆ ಪ್ರಧಾನಿ ಮೋದಿ ಸ್ವಾವಲಂಬಿ ಭಾರತದ ಅಭಿಯಾನದಲ್ಲಿ ಉಲ್ಲೇಖಿಸಿದ ಐದು ಆಧಾರ ಸ್ತಂಭಗಳಲ್ಲಿ ಒಂದಾದ ತಂತಜ್ಞಾನ ಚಾಲಿತ ವ್ಯವಸ್ಥೆಯ ಭಾಗವಾಗಿದೆ. ವಲಸೆ ಕಾರ್ವಿುಕರು ಯಾವುದೇ ರಾಜ್ಯದಲ್ಲಿ ಇದ್ದರೂ ಇದನ್ನು ಪಡೆಯಬಹುದಾಗಿದೆ. ಕಾರ್ಡ್​ದಾರರ ಕುಟುಂಬದ ಮೂವರು ತವರು ರಾಜ್ಯದಲ್ಲಿದ್ದು, ಉಳಿದಿಬ್ಬರು ಪರ ರಾಜ್ಯದಲ್ಲಿದ್ದರೆ, ಅವರ ಕುಟುಂಬಕ್ಕೆ ನಿಗದಿಯಾದ ಪಡಿತರವನ್ನು ಎರಡೂ ಕಡೆಗಳಲ್ಲಿ ಭಾಗಶಃವಾಗಿ ಹಂಚಿಕೊಳ್ಳಬಹುದು. 23 ರಾಜ್ಯಗಳ ಶೇ. 83ರಷ್ಟು (67 ಸಾವಿರ ಕೋಟಿ) ಫಲಾನುಭವಿಗಳು ಅನ್​ಲೈನ್ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ಶೇ. 100 ಅನುಷ್ಠಾನವು 2021ರ ಮಾರ್ಚ್ ವೇಳೆಗೆ ಸಾಧ್ಯವಾಗಲಿದೆ.

ವಿಶೇಷ ಆರ್ಥಿಕ ಪ್ಯಾಕೇಜ್​ನ 2ನೇ ದಿನದ ಘೋಷಣೆಗಳ ಬಗ್ಗೆ ಪಿಎಂ ಮೋದಿ ಹೀಗೆ ಹೇಳ್ತಿದ್ದಾರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
