|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಇರುವುದು ಕಲ್ಲು-ಮುಳ್ಳುಗಳಿಂದ ಕೂಡಿರುವ ಹಾದಿ. ಆದ್ದರಿಂದಲೇ ಖರ್ಗೆ ಅವರಿಗೆ ಇಳಿವಯಸ್ಸಿನಲ್ಲಿ ಈ ಹುದ್ದೆ ಸವಾಲು ಹೌದು, ಅವಕಾಶವೂ ಹೌದು. ಹಾಗೇ, ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ.
ಕಾಂಗ್ರೆಸ್ ಸುಭಿಕ್ಷವಾಗಿರುವ ಕಾಲದಲ್ಲಿ ಖರ್ಗೆ ಈ ಹುದ್ದೆ ಅಲಂಕರಿಸುತ್ತಿಲ್ಲ. ಬದಲಾಗಿ ಪಕ್ಷ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಗುರುತರ ಜವಾಬ್ದಾರಿ ಹೊರುತ್ತಿದ್ದಾರೆ. ಪಕ್ಷ ನಿಷ್ಠ ಹಾಗೂ ಖಡಕ್ ಮಾತಿನ ಖರ್ಗೆ ಅವರತ್ತ ಪಕ್ಷದ ಕಾರ್ಯಕರ್ತರ ದೊಡ್ಡ ಪಡೆಯೇ ಆಸೆಗಣ್ಣಿನಿಂದ ಎದುರು ನೋಡುತ್ತಿದೆ. ಇತ್ತೀಚಿಗೆ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿದೆ. ಬಿಜೆಪಿ ಮುಖಂಡರು ಕಾಂಗ್ರೆಸ್​ವುುಕ್ತ ಭಾರತ ಮಾಡುವುದಾಗಿ ಹೇಳುತ್ತಿದ್ದಾರೆ. ಸಂಕಷ್ಟದಿಂದ ಸುಭಿಕ್ಷೆಯತ್ತ ಪಕ್ಷವನ್ನು ಅಧಿಕಾರಕ್ಕೆ ತರುವುದು ಖರ್ಗೆ ಅವರಿಗೆ ದೊಡ್ಡ ಹೊಣೆಯಾಗಿದೆ. ಖರ್ಗೆಗೆ ಇರುವ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಇಂಗ್ಲಿಷ್, ಹಿಂದಿ, ಉರ್ದು ಭಾಷೆಗಳ ಮೇಲಿರುವ ಹಿಡಿತ. ಮಂಡಿ ನೋವು ಹೊರತುಪಡಿಸಿದರೆ ಆರೋಗ್ಯದ ಗಂಭೀರ ಸಮಸ್ಯೆಗಳಿಲ್ಲ. ಮಾತಿನಲ್ಲಿ ಎಷ್ಟು ಖಡಕ್ಕೋ, ಅಷ್ಟೇ ಸ್ನೇಹಪರರು. ಪಕ್ಷದ ಸಂಘಟನೆಗೆ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಅವರು ಎತ್ತಿದ ಕೈ. ಅದನ್ನು ಈಗ ಸೊರಗಿದ ಪಕ್ಷಕ್ಕೆ ಟಾನಿಕ್ ನೀಡಲು ಬಳಸಬೇಕಾಗಿದೆ. ಮೈನಸ್ ಪಾಯಿಂಟ್ ಎಂದರೆ, ಅವರ ವಯಸ್ಸು! ದೇಶ ಸುತ್ತುವಷ್ಟು ಪ್ರವಾಸ ಮಾಡಲು ಸಾಧ್ಯವಾಗುವುದೇ ಎಂಬ ಪ್ರಶ್ನೆಯೂ ಇಲ್ಲಿದೆ.
ಹನಿಮೂನ್ ಅವಧಿ ಇಲ್ಲ:ಖರ್ಗೆ ಅವರಿಗೆ ಅಧ್ಯಕ್ಷರಾಗಿ ಹನಿಮೂನ್ ಅವಧಿ ಇಲ್ಲ. ಅವರು ಅಧ್ಯಕ್ಷರಾಗುವ ಮೊದಲೇ ಹಿಮಾಚಲ ಪ್ರದೇಶದ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಸದ್ಯದಲ್ಲಿಯೇ ಗುಜರಾತ್​ಗೂ ಘೋಷಣೆಯಾಗಲಿದೆ. ಎರಡು ರಾಜ್ಯಗಳಲ್ಲಿ ಅವರು ಪಕ್ಷವನ್ನು ಮುನ್ನಡೆಸಬೇಕಾಗಿದೆ. ಖರ್ಗೆ ಕಾರ್ಯತಂತ್ರಕ್ಕೆ ಈ ಚುನಾವಣೆಗಳು ಕನ್ನಡಿ ಹಿಡಿಯಲಿವೆ. ತಮ್ಮ ಸಾಮರ್ಥ್ಯವನ್ನು ತೋರಿಸಲು ಅವರಿಗೆ ಇರುವ ಅವಕಾಶಗಳಿದು. ಕರ್ನಾಟಕ ಸೇರಿ ಒಂದರ ನಂತರ ಮತ್ತೊಂದು ರಾಜ್ಯಕ್ಕೆ ಚುನಾವಣೆ ಎದುರಾಗುತ್ತಲೇ ಇರುತ್ತವೆ. ಕಾಂಗ್ರೆಸ್​ಗೆ ಕಾರ್ಯಕರ್ತರ ಕೊರತೆ ಏನೂ ಇಲ್ಲ. ಆದರೆ ಅವರನ್ನು ಒಗ್ಗೂಡಿಸಿಕೊಂಡು ಹೋಗಬೇಕಾಗಿದೆ. ಬಹುತೇಕ ರಾಜ್ಯಗಳಲ್ಲಿ ಕಾರ್ಯಕರ್ತರಿದ್ದಾರೆ, ಸಮರ್ಥ ನಾಯಕತ್ವ ಇಲ್ಲ ಎಂಬ ಸ್ಥಿತಿ ಇದೆ. ಪಕ್ಷ ಮುನ್ನಡೆಸುವ ನಾಯಕತ್ವವನ್ನು ಗುರುತಿಸಿ ಜವಾಬ್ದಾರಿ ನೀಡುವ ಕೆಲಸವನ್ನು ಖರ್ಗೆ ಮಾಡಬೇಕಾಗಿದೆ. ಆ ಕೆಲಸವೇ ಖರ್ಗೆ ಅವರ ಮೊದಲು ಪ್ರಯತ್ನ ಆಗಬೇಕಾಗಿದೆ.
ಮತವಾಗಿ ಪರಿವರ್ತನೆ:ರಾಜ್ಯಗಳ ಚುನಾವಣೆ ನಂತರ 2024ಕ್ಕೆ ಲೋಕಸಭಾ ಚುನಾವಣೆ ಎದುರಾಗಲಿದೆ. ಸದ್ಯಕ್ಕೆ ಬಿಜೆಪಿಗೆ ಎದುರಾಳಿಗಳೇ ಇಲ್ಲವೇನೋ ಎಂಬ ಭಾವನೆ ಇದೆ. ಮೋದಿ ಸರ್ಕಾರದ ವಿರುದ್ಧ ಜನಾಭಿಪ್ರಾಯವನ್ನು ಗಟ್ಟಿಗೊಳಿಸುವ ಕೆಲಸವನ್ನು ಖರ್ಗೆ ಕಾರ್ಯಕರ್ತರ ಮೂಲಕ ತಕ್ಷಣ ಆರಂಭಿಸಬೇಕಾಗಿದೆ. ಆ ಪ್ರಯತ್ನದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ರಾಹುಲ್ ಗಾಂಧಿ ನಡೆಸಿರುವ ಭಾರತ್ ಜೋಡೋ ಜನರನ್ನು ಸೆಳೆಯುತ್ತಿದೆ. ಆದರೆ ಅದೆಲ್ಲವೂ ಮತಗಳಾಗಿ ಪರಿವರ್ತನೆ ಮಾಡುವ ಜವಾಬ್ದಾರಿ ಪಕ್ಷದ್ದಾಗಿರುತ್ತದೆ. ಆ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾಡುವ ಪ್ರಯತ್ನಗಳು ಕುತೂಹಲ ಮೂಡಿಸಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ರಾಜ್ಯದಲ್ಲಿ ಮೂರು ಪವರ್ ಸೆಂಟರ್:ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೇರುವ ಮೂಲಕ ರಾಜ್ಯ ಕಾಂಗ್ರೆಸ್​ನಲ್ಲಿನ್ನು ಮೂರು ಪವರ್ ಸೆಂಟರ್ ಇರುವುದು ಅಧಿಕೃತವಾಗಿದೆ. ಇದುವರೆಗೆ ರಾಜ್ಯ ಕಾಂಗ್ರೆಸ್ ಮೇಲೆ ಪರೋಕ್ಷವಾಗಿ ಪ್ರಭಾವ ಬೀರಲು ಖರ್ಗೆ ತೆರೆಮರೆಯಲ್ಲಿ ಯತ್ನಿಸುತ್ತಿದ್ದರು. ಆದರೀಗ, ಅಧ್ಯಕ್ಷರಾಗಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಟಿಕೆಟ್ ಹಂಚಿಕೆಯಲ್ಲಿ ಖರ್ಗೆ ಪ್ರಮುಖ ಪಾತ್ರವಹಿಸುವುದು ನಿಶ್ಚಿತ. ಈಗಾಗಲೆ ಸಿದ್ದರಾಮಯ್ಯ ಮತ್ತು ಡಿಕೆಶಿ ಬೆಂಬಲಿಗರ 2 ಗುಂಪುಗಳು ಕಾಂಗ್ರೆಸ್​ನಲ್ಲಿ ಮೇಲುಗೈ ಸಾಧಿಸಲು ಯತ್ನಿಸುತ್ತಿರುವ ಮಧ್ಯೆ, ಈ ಎರಡೂ ಗುಂಪುಗಳಿಂದ ಅಸಮಾಧಾನಗೊಂಡ ಮತ್ತೊಂದು ಗುಂಪು ಖರ್ಗೆ ಹಿಂದೆ ನಿಂತುಕೊಳ್ಳುವ ಸಾಧ್ಯತೆಗಳಿವೆ. ಸಿದ್ದರಾಮಯ್ಯರನ್ನು ವಿರೋಧಿಸುವ ಗುಂಪು ಕೂಡ ಖರ್ಗೆ ಕಡೆ ಎಡತಾಕುವ ಲಕ್ಷಣಗಳಿವೆ. ಅದೇ ರೀತಿ, ಇದುವರೆಗೆ ಉತ್ತರ ಭಾರತದ ತಮ್ಮ ’ಗಾಡ್ ಫಾದರ್’ ಎನಿಸಿಕೊಂಡ ಕೆಲ ನಾಯಕರ ಮೂಲಕ ರಾಷ್ಟ್ರೀಯ ಅಧ್ಯಕ್ಷರ ಮೇಲೆ ಪ್ರಭಾವ ಬೀರುತ್ತಿದ್ದ ಕೆಲ ರಾಜ್ಯ ನಾಯಕರಿಗೆ, ಖರ್ಗೆಯೇ ರಾಷ್ಟ್ರೀಯ ಅಧ್ಯಕ್ಷರಾಗಿರುವುದು ನುಂಗಲಾರದ ಬಿಸಿತುಪ್ಪವಾಗಿರುವುದು ಸುಳ್ಳೇನಲ್ಲ!
ಪಕ್ಷದ ಪುನರುಜ್ಜೀವನ ಆರಂಭ…:ನವದೆಹಲಿ: ‘ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಖರ್ಗೆ ಅವರನ್ನು ಅಭಿನಂದಿಸುತ್ತೇನೆ. ನಮ್ಮ ಪಕ್ಷದ ಪುನರುಜ್ಜೀವನ ನಿಜವಾಗಿಯೂ ಇಂದು ಆರಂಭವಾಗಿದೆ ಎಂದು ಭಾವಿಸುತ್ತೇನೆ’ಎಂದು ಪರಾಜಿತ ಅಭ್ಯರ್ಥಿ ಶಶಿ ತರೂರ್ ಹೇಳಿದ್ದಾರೆ. ಪಕ್ಷದ ನೂತನ ಅಧ್ಯಕ್ಷರು ನನ್ನ ಸಹೋದ್ಯೋಗಿ ಮತ್ತು ಹಿರಿಯರು. ಅವರು ಅಧ್ಯಕ್ಷರಾಗಿರುವುದು ದೊಡ್ಡ ಗೌರವ ಮತ್ತು ಜವಾಬ್ದಾರಿಯಾಗಿದೆ. ದೇಶಾದ್ಯಂತ ಪಕ್ಷದ ಅನೇಕ ಹಿತೈಷಿಗಳ ಭರವಸೆ ಮತ್ತು ಆಕಾಂಕ್ಷೆಯೊಂದಿಗೆ ಸಾವಿರಕ್ಕೂ ಹೆಚ್ಚು ಸಹೋದ್ಯೋಗಿಗಳ ಬೆಂಬಲ ಪಡೆದಿರುವುದು ನಿಜಕ್ಕೂ ಸೌಭಾಗ್ಯ. ಉತ್ತಮ ನಾಯಕತ್ವ ಮತ್ತು ಅನುಭವ ಹೊಂದಿರುವ ಖರ್ಗೆ ಮಾರ್ಗದರ್ಶನದಲ್ಲಿ ನಾವೆಲ್ಲರೂ ಒಟ್ಟಾಗಿ ಪಕ್ಷವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂಬ ವಿಶ್ವಾಸವಿದೆ ಎಂದು ತರೂರ್ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಸೋನಿಯಾ ಗಾಂಧಿಗೂ ತರೂರ್ ಅಭಿನಂದನೆ ಸಲ್ಲಿಸಿದ್ದು, ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ಪಕ್ಷವನ್ನು ಸುದೀರ್ಘ ಕಾಲದವರೆಗೆ ಮುನ್ನಡೆಸಿದ ಸೋನಿಯಾ ಗಾಂಧಿ ನಿಜಕ್ಕೂ ಅಭಿನಂದನಾರ್ಹರು ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಅಕ್ರಮ ಆರೋಪ:ಪಕ್ಷದ ಅಧ್ಯಕ್ಷರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಪರಾಜಿತ ಅಭ್ಯರ್ಥಿ ಶಶಿ ತರೂರ್ ಅವರ ಎಲೆಕ್ಷನ್ ಏಜೆಂಟ್ ಸಲ್ಮಾನ್ ಸೋಜ್ ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸಲ್ಮಾನ್ ಸೋಜ್, ಕಾಂಗ್ರೆಸ್​ನ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿಗೆ ಪತ್ರ ಬರೆದಿದ್ದಾರೆ. ಉತ್ತರಪ್ರದೇಶದಲ್ಲಿ ಹಾಕಲಾಗಿರುವ ಎಲ್ಲ ಮತಗಳನ್ನು ಅಮಾನ್ಯವೆಂದು ಪರಿಗಣಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಅಧಿಕಾರಕ್ಕೆ ತರುವುದು:ರಾಜ್ಯ ವಿಧಾನಸಭೆಗೆ 2023ಕ್ಕೆ ಚುನಾವಣೆ ನಡೆಯುತ್ತಿದೆ. ಅಧಿಕಾರಕ್ಕೆ ಬರುವ ಅವಕಾಶಗಳು ಗುಂಪುಗಾರಿಕೆಯಿಂದ ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಕಂದಕವನ್ನು ಮುಚ್ಚುವ ಮೂಲಕ ಹೊಂದಾಣಿಕೆ ತರುವುದು ಖರ್ಗೆ ಅವರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಹಿರಿತನದ ಆಧಾರದಲ್ಲಿ ಖರ್ಗೆ ಅವರು ಎಲ್ಲರ ಮೇಲೂ ಹಿಡಿತ ಸಾಧಿಸುವ ಅವಕಾಶ ಇದೆ. ಪಕ್ಷದ ಅಧ್ಯಕ್ಷರಾಗಿ ಆ ಕೆಲಸವನ್ನು ಎಷ್ಟರಮಟ್ಟಿಗೆ ಮಾಡಿ ಅಧಿಕಾರಕ್ಕೆ ಬರುವ ಅವಕಾಶವನ್ನು ಬಳಸಿಕೊಳ್ಳಲಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − four =
Remember me
