ವರ್ಷದ ಹಿಂದೆ, 2022ರ ಫೆಬ್ರವರಿಯಲ್ಲಿ ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಹಿನ್ನೆಲೆಯಲ್ಲಿ ನ್ಯಾಟೋ ಸದಸ್ಯ ದೇಶಗಳು ಹಾಗೂ ಐರೋಪ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಿದವು. ಅದರಲ್ಲೂ ವಿಶೇಷವಾಗಿ, ರಷ್ಯಾದ ಕಚ್ಚಾ ತೈಲ ಖರೀದಿಗೆ ತಡೆಯೊಡ್ಡುವ ಮೂಲಕ ಆ ದೇಶಕ್ಕೆ ಆರ್ಥಿಕ ಸಂಕಷ್ಟ ಸೃಷ್ಟಿಸಲು ಮುಂದಾದವು. ಅಮೆರಿಕ ನೇತೃತ್ವದಲ್ಲಿ ನಡೆದ ಯತ್ನಕ್ಕೆ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ. ಬದಲಾಗಿ, ವಿದೇಶಿ ವ್ಯಾಪಾರ ವಹಿವಾಟಿನಲ್ಲಿ ಅಮೆರಿಕದ ಡಾಲರ್​ಗೆ ಇರುವ ಪ್ರಾಬಲ್ಯ ಈಗ ತಗ್ಗತೊಡಗಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡದಂತೆ ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ಭಾರತದ ಮೇಲೆ ಪ್ರಭಾವ ಬೀರಲು ಶತಪ್ರಯತ್ನ ನಡೆಸಿದವು. ಆದರೆ, ಮೊದಲಿನಿಂದಲೂ ರಷ್ಯಾ ಜತೆ ಆತ್ಮೀಯ ಸಂಬಂಧ ಹೊಂದಿರುವ ಭಾರತವು ಅಮೆರಿಕದ ಪ್ರಭಾವಕ್ಕೆ ಒಳಗಾಗಲಿಲ್ಲ. ಯೂಕ್ರೇನ್ ವಿರುದ್ಧದ ಯುದ್ಧಕ್ಕೆ ಬೆಂಬಲ ನೀಡದೆ ಆಲಿಪ್ತ (ತಟಸ್ಥ) ನೀತಿಯನ್ನು ಅನುಸರಿಸುವುದಾಗಿ ಘೋಷಿಸಿತು. ಇದೇ ವೇಳೆ ಅಗ್ಗದ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿ ಮಾಡಿ ಸಾಕಷ್ಟು ಲಾಭ ಮಾಡಿಕೊಂಡಿತು.
ಕಚ್ಚಾ ತೈಲವನ್ನು ಕಡಿಮೆ ಬೆಲೆಗೆ ಖರೀದಿಸುವ ಕ್ರಮವು ಅಪಾರ ಪ್ರಮಾಣದ ವಿದೇಶಿ ವಿನಿಮಯವನ್ನು ಉಳಿಸಿತು. ಅಲ್ಲದೆ, ಇದೇ ವೇಳೆ ವಿದೇಶಿ ವ್ಯಾಪಾರದಲ್ಲಿನ ಇನ್ನೊಂದು ಮಹತ್ವದ ಬೆಳವಣಿಗೆ ಎಂದರೆ ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಂಡಿರುವುದು. ಏಕೆಂದರೆ, ಕಚ್ಚಾ ತೈಲ ಖರೀದಿ ಸೇರಿದಂತೆ ಭಾರತದೊಂದಿಗೆ ರಷ್ಯಾ ನಡೆಸುತ್ತಿರುವ ಬಹುತೇಕ ವಹಿವಾಟುಗಳು ಈಗ ಡಾಲರ್​ನಲ್ಲಿ ನಡೆಯುತ್ತಿಲ್ಲ.
ಜಗತ್ತಿನಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತ ಮೂರನೆಯ ಸ್ಥಾನದಲ್ಲಿದೆ. ಈ ಮೊದಲು ಭಾರತವು ಹೆಚ್ಚಿನ ಪ್ರಮಾಣದ ತೈಲವನ್ನು ಇರಾನ್​ನಿಂದ ಖರೀದಿಸುತ್ತಿತ್ತು. ನಂತರದ ಸ್ಥಾನದಲ್ಲಿ ಸೌದಿ ಅರೇಬಿಯಾ ಇತ್ತು. ಯೂಕ್ರೇನ್ ಯುದ್ಧ ಆರಂಭವಾದ ನಂತರ ರಷ್ಯಾವು ಮೊದಲ ಸ್ಥಾನಕ್ಕೆ ಬಂದಿದೆ. ಭಾರತವು ರಷ್ಯಾದಿಂದ ಖರೀದಿಸುವ ಕಚ್ಚಾ ತೈಲಕ್ಕೆ ಈಗ ಬಹುತೇಕವಾಗಿ ಡಾಲರ್ ಹೊರತುಪಡಿಸಿದ ಕರೆನ್ಸಿಗಳಲ್ಲಿ ಪಾವತಿ ಮಾಡತೊಡಗಿದೆ. ಯುಎಇ ಕರೆನ್ಸಿಯಾಗಿರುವ ದಿರ್ಹಂ ಮತ್ತು ರಷ್ಯಾದ ಕರೆನ್ಸಿಯಾಗಿರುವ ರೂಬಲ್​ಗಳಲ್ಲಿ ಈ ಪಾವತಿಗಳನ್ನು ಮಾಡಲಾಗುತ್ತಿದೆ. ಕಳೆದ ಮೂರು ತಿಂಗಳುಗಳಿಂದ ಡಾಲರ್ ಹೊರತುಪಡಿಸಿದ ವಹಿವಾಟುಗಳು ಹೆಚ್ಚಾಗತೊಡಗಿವೆ. ಇಂತಹ ಪಾವತಿಗಳ ಮೊತ್ತವು ಸಹಸ್ರಾರು ಕೋಟಿ ರೂಪಾಯಿಗಳ ಲೆಕ್ಕದಲ್ಲಿದೆ. ದುಬೈ ಮೂಲದ ಕೆಲವು ವರ್ತಕರು ಹಾಗೂ ರಷ್ಯಾದ ತೈಲ ಮಾರಾಟ ಕಂಪನಿಗಳು ಡಾಲರ್ ಹೊರತುಪಡಿಸಿದ ಬೇರೆ ಕರೆನ್ಸಿಗಳಲ್ಲಿ ಹಣ ಪಾವತಿಸುವಂತೆ ಕೇಳಿಕೊಳ್ಳುತ್ತಿರುವುದು ವಿಶೇಷ ಬೆಳವಣಿಗೆಯಾಗಿದೆ. ಬ್ರೆಜಿಲ್, ಚೀನಾ, ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ದೇಶಗಳು ಕೂಡ ರಷ್ಯಾದೊಂದಿಗಿನ ವ್ಯಾಪಾರ ವಹಿವಾಟಿನಲ್ಲಿ ಬೇರೆ ಕರೆನ್ಸಿಗಳನ್ನು ಬಳಕೆ ಮಾಡತೊಡಗಿರುವುದು ಡಾಲರ್ ಪ್ರಭಾವ ತಗ್ಗಲು ಕಾರಣವಾಗಿದೆ.
ಇದನ್ನೂ ಓದಿ:ವಯಾಗ್ರ ತೆಗೆದುಕೊಂಡ ಆತ ಅವಳ ಮಾತು ಕೇಳದೆ ಕೊನೆಗೆ ಸಾವಿಗೀಡಾದ!
ಬ್ಯಾಂಕ್​ಗಳಿಂದಲೂ ಬೆಂಬಲ: ಭಾರತದ ಕೆಲವು ಬ್ಯಾಂಕ್​ಗಳು ಕೂಡ ಡಾಲರ್ ಹೊರತುಪಡಿಸಿದ ಕರೆನ್ಸಿಗಳಲ್ಲಿ ವಹಿವಾಟು ನಡೆಸುವುದಕ್ಕೆ ಬೆಂಬಲ ನೀಡುತ್ತಿವೆ ಎಂದು ಅಮೆರಿಕ ಮತ್ತು ರಷ್ಯಾದ ಆರ್ಥಿಕ ವ್ಯವಹಾರಗಳ ಅಧಿಕಾರಿಗಳೇ ಹೇಳಿದ್ದಾರೆ. ಇಂತಹ ವ್ಯಾಪಾರ ವಹಿವಾಟಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ರಷ್ಯಾದಲ್ಲಿ ವಿಶೇಷ ಖಾತೆಯೊಂದನ್ನು ತೆರೆದಿದೆ. ರಷ್ಯಾದ ಹಲವು ಬ್ಯಾಂಕ್​ಗಳು ಕೂಡ ಭಾರತದ ಬ್ಯಾಂಕ್​ಗಳಲ್ಲಿ ವಿಶೇಷ ಖಾತೆಗಳನ್ನು ತೆರೆದಿವೆ.
32 ಸಾವಿರ ಕೋಟಿ ರೂ. ಉಳಿತಾಯ: ಸುಮಾರು ಒಂದು ವರ್ಷದ ಅವಧಿಯಲ್ಲಿ ರಷ್ಯಾದ ಕಚ್ಚಾ ತೈಲವನ್ನು ಆಮದಿನಿಂದ ಭಾರತವು ಅಂದಾಜು 4 ಬಿಲಿಯನ್ ಡಾಲರ್ (32,819 ಕೋಟಿ ರೂಪಾಯಿ) ಹಣವನ್ನು ಉಳಿತಾಯ ಮಾಡಿದೆ. ಉದಾಹರಣೆಗೆ, 2022ರ ಮೇ ತಿಂಗಳಲ್ಲಿ ಕಚ್ಚಾ ತೈಲ ಖರೀದಿಸಲು ಪ್ರತಿ ಬ್ಯಾರೆಲ್​ಗೆ 94 ಡಾಲರ್ ಪಾವತಿಸಿದೆ. ಆದರೆ, ಒಂದು ಬ್ಯಾರೆಲ್​ಗೆ ಭಾರತವು ಪಾವತಿಸುವ ಸರಾಸರಿ ಹಣ 110 ಡಾಲರ್ ಆಗಿದೆ. ಅಂದರೆ, ರಷ್ಯಾ ತೈಲ ಖರೀದಿಯಿಂದ ಪ್ರತಿ ಬ್ಯಾರೆಲ್​ಗೆ 16 ಡಾಲರ್ (329 ರೂಪಾಯಿ) ಉಳಿತಾಯ ಮಾಡಲಾಗಿದೆ.
ಇದನ್ನೂ ಓದಿ:ಮೇಡಮ್​ಗೆ ಕೇಸರಿ ಶಾಲು ಹಾಕಿಲ್ವಾ? ಎಂದು ಸುಮಲತಾ ಕಾಲೆಳೆದ ಪ್ರತಾಪ್​ಸಿಂಹ
ಪ್ರಬಲ ಕರೆನ್ಸಿಯಾಗಿದ್ದು ಹೇಗೆ?: ಕೆಲವು ದಶಕಗಳಿಂದ ಜಾಗತಿಕ ವ್ಯಾಪಾರದ ಬಹುಪಾಲು ಡಾಲರ್​ಗಳ ಮೂಲಕವೇ ನಡೆದುಕೊಂಡುಬಂದಿದೆ. ಎರಡನೇ ವಿಶ್ವ ಯುದ್ಧದ ಅಂತ್ಯದ ವೇಳೆಗೆ ಡಾಲರ್​ಗೆ ಹೆಚ್ಚಿನ ಮಹತ್ವ ದೊರೆಯಿತು. 1944ರಲ್ಲಿ ಯುದ್ಧದ ನಂತರ ವಿಶ್ವ ಆರ್ಥಿಕತೆಯನ್ನು ಸರಿಪಡಿಸಲು 44 ರಾಷ್ಟ್ರಗಳ ಪ್ರತಿನಿಧಿಗಳು ನ್ಯೂ ಹ್ಯಾಂಪ್​ಶೈರ್​ನ ಬ್ರೆಟನ್ ವುಡ್ಸ್​ನಲ್ಲಿ ಸಭೆ ಸೇರಿದರು. ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಅಮೆರಿಕವು ಡಾಲರ್​ನ ಮೌಲ್ಯವನ್ನು ಚಿನ್ನಕ್ಕೆ ನಿಗದಿಪಡಿಸಲು ಹಾಗೂ ಇತರ ದೇಶಗಳು ತಮ್ಮ ಕರೆನ್ಸಿಗಳನ್ನು ಡಾಲರ್​ಗೆ ಹೊಂದಿಸಲು ಈ ಸಭೆಯಲ್ಲಿ ಒಪ್ಪಿಗೆ ದೊರೆಯಿತು. ಇದರಿಂದಾಗಿ, ಯಾವುದೇ ರಾಷ್ಟ್ರ ತನ್ನ ವಿದೇಶಿ ವಿನಿಮಯ ದರವನ್ನು ಕಾಪಾಡಿಕೊಳ್ಳಲು ಡಾಲರ್​ಗಳನ್ನು ಮೀಸಲು ಇಡುವ ವ್ಯವಸ್ಥೆ ರೂಪುಗೊಂಡಿತು. ಈ ಮೂಲಕ ಡಾಲರ್ ಪ್ರಬಲ ಜಾಗತಿಕ ಕರೆನ್ಸಿಯಾಯಿತು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − seven =
Remember me
