ರಾಯ್ಪುರ:ಛತ್ತೀಸ್​ಗಢದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಮುಖ್ಯಮಂತ್ರಿ ಆಗಿದ್ದ ಭೂಪೇಶ್ ಬಘೇಲ್ ಅವರ ಬಗಲಿನಿಂದ ‘ಕೈ’ ಜಾರಿ ಹೋಗಿದೆ. ಅರ್ಥಾತ್ ಈ ಹಿಂದಿನ ಆಡಳಿತಾರೂಢ ಕಾಂಗ್ರೆಸ್ ಇಲ್ಲಿ ಸೋತಿದ್ದು, ಚುನಾವಣೋತ್ತರ ಸಮೀಕ್ಷೆಗೂ ಮೀರಿದ ಫಲಿತಾಂಶ ಹೊರಬಿದ್ದಿದೆ. ಮತ್ತೊಂದೆಡೆ ಪ್ರಧಾನಿ ಮೋದಿ ಅವರ ಗ್ಯಾರಂಟಿ ಇಲ್ಲಿ ಮೋಡಿ ಮಾಡಿರುವುದೂ ಕಂಡುಬಂದಿದೆ. 90 ವಿಧಾನಸಭಾ ಕ್ಷೇತ್ರಗಳುಳ್ಳ ಛತ್ತೀಸ್​ಗಢದಲ್ಲಿ ಕಾಂಗ್ರೆಸ್ಸೇ ಅತ್ಯಧಿಕ ಸ್ಥಾನಗಳನ್ನು ಗೆಲ್ಲಲಿರುವುದಾಗಿ ಬಹುತೇಕ ಎಲ್ಲ ಸಮೀಕ್ಷೆಗಳು ಹೇಳಿದ್ದು, ಆ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಬಿಜೆಪಿ 50ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸುವುದಿಲ್ಲ ಎಂಬುದು ಬಹುತೇಕ ಎಲ್ಲ ಸಮೀಕ್ಷೆಗಳ ಅಂದಾಜಾಗಿತ್ತು. ಆದರೆ ಅದು ಉಲ್ಟಾ ಆಗಿದ್ದು, ಬಿಜೆಪಿ 54 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಪಾಲಿಗೆ 35 ಕ್ಷೇತ್ರಗಳಲ್ಲಷ್ಟೇ ಗೆಲುವು ಸಿಕ್ಕಿದ್ದು, ಒಂದು ಕ್ಷೇತ್ರ ಗೊಂಡಾವನ ಗಣತಂತ್ರ ಪಾರ್ಟಿ (ಜಿಜಿಪಿ) ಪಾಲಾಗಿದೆ.
ಪುತ್ರಶೋಕದ ಪ್ರತೀಕಾರಛತ್ತೀಸ್​ಗಢದ ಸಜಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಈಶ್ವರ್ ಸಾಹು 19 ಸಾವಿರ ಮತಗಳಿಂದ ಜಯ ಗಳಿಸಿದ್ದಾರೆ. ಏಳು ಬಾರಿ ಗೆದ್ದ ಕಾಂಗ್ರೆಸ್ ಶಾಸಕ ರವೀಂದ್ರ ಚೌಬೆ ವಿರುದ್ಧ ಅವರು ಈ ವಿಜಯ ಸಾಧಿಸಿದ್ದಾರೆ. ಈಶ್ವರ್ ಸಾಹು ಅವರ ಪುತ್ರನನ್ನು ಅಂದಿನ ಆಡಳಿತ ಪಕ್ಷದ ಬೆಂಬಲಿಗ ಗಲಭೆಕೋರರು ಕೊಲೆ ಮಾಡಿದ್ದರು. ಈಶ್ವರ್ ಸಾಹು ಈ ವಿಜಯದ ಮೂಲಕ ಪುತ್ರಶೋಕದ ಪ್ರತೀಕಾರವನ್ನೂ ಸಾಧಿಸಿದಂತಾಗಿದೆ.
ಉರುಳಾಗದ ಮಹದೇವದೇಶಾದ್ಯಂತ ಭಾರಿ ಸದ್ದು ಮಾಡಿರುವ ಮಹದೇವ ಬೆಟ್ಟಿಂಗ್ ಆಪ್ ಪ್ರಕರಣದಲ್ಲಿ ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್ ಹೆಸರು ಕೇಳಿ ಬಂದಿತ್ತು. ಜಾರಿ ನಿರ್ದೇಶನಾಲಯದ ದಾಳಿ ವೇಳೆ ಮಹದೇವ ಆಪ್ ಪ್ರಮೋಟರ್ಸ್​ಗೆ ಸೇರಿದ್ದ ಭಾರಿ ಪ್ರಮಾಣದ ನಗದು ಸಿಕ್ಕಿತ್ತು. ಅಲ್ಲದೆ ಸಿಎಂ ಬಘೇಲ್​ಗೆ ಮಹದೇವ ಆಪ್ ಪ್ರಮೋಟರ್ಸ್​ರಿಂದ ಕೋಟಿಗಟ್ಟಲೆ ರೂ. ಸಂದಾಯ ಆಗಿದೆ ಎಂದು ತನಿಖೆ ವೇಳೆ ಕಂಡುಬಂದಿದೆ ಎಂಬುದಾಗಿ ಜಾರಿ ನಿರ್ದೇಶನಾಲಯ ಹೇಳಿತ್ತು. ಹೀಗಾಗಿ ಈ ಚುನಾವಣೆಯಲ್ಲಿ ಬಘೇಲ್​ಗೆ ಮಹದೇವ ಬೆಟ್ಟಿಂಗ್ ಆಪ್ ಪ್ರಕರಣವೇ ಉರುಳಾಗಲಿದೆ ಎಂಬ ಮಾತು ಕೇಳಿಬಂದಿತ್ತಾದರೂ ವೈಯಕ್ತಿಕವಾಗಿ ಅದು ಅವರ ಪಾಲಿಗೆ ನಿಜವಾಗಿಲ್ಲ. ಬಘೇಲ್ ಅವರನ್ನು ಅಲ್ಲಿನ ಜನ ಪ್ರೀತಿಯಿಂದ ‘ಕಾಕಾ’ ಎಂದು ಕರೆಯುತ್ತಿದ್ದು, ‘30 ಪರ್ಸೆಂಟ್ ಕಾಕಾ ಸರ್ಕಾರ ತೊಲಗುವುದು ಪಕ್ಕಾ’ ಎಂದು ಪ್ರಧಾನಿ ಮೋದಿ ಚುನಾವಣಾ ರ‍್ಯಾಲಿ ವೇಳೆ ಹೇಳಿದ್ದರು. ಮೋದಿಯ ಈ ಮಾತೂ ನಿಜವಾಗಿರುವುದು ಫಲಿತಾಂಶದಲ್ಲಿ ಕಂಡುಬಂದಿದೆ.
ಮೋದಿ ಮೋಡಿವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಛತ್ತೀಸ್​ಗಢದಲ್ಲಿ ಐದು ರ್ಯಾಲಿಗಳಲ್ಲಿ ಭಾಗಿಯಾಗಿದ್ದರು. ಬಿಜೆಪಿ ಪ್ರಣಾಳಿಕೆಯ ಭರವಸೆಗಳನ್ನು ಇಲ್ಲಿ ಮೋದಿ ಗ್ಯಾರಂಟಿ ಎಂದೇ ಬಿಂಬಿಸಲಾಗಿದ್ದು, ಕೊನೆಗೂ ಬಿಜೆಪಿಗೇ ಅಧಿಕಾರ ಗ್ಯಾರಂಟಿ ಆಗಿದೆ.
ಗ್ಯಾರಂಟಿಗಳಾಚೆ ನೋಡಿದ ಮತದಾರ?ಛತ್ತೀಸ್​ಗಢದ ಜನಪ್ರಿಯ ಸಿಎಂ ಎಂದೇ ಖ್ಯಾತಿಯಾಗಿದ್ದ ಭೂಪೇಶ್ ಬಘೇಲ್ ಸರ್ಕಾರವನ್ನು ಮರು ಆಯ್ಕೆ ಮಾಡಲು ರಾಜ್ಯದ ಜನ ಹಿಂದೇಟು ಹಾಕಿರುವುದು ಕಾಂಗ್ರೆಸ್​ಗೆ ಪಂಚರಾಜ್ಯ ಚುನಾವಣೆಯ ಬಹುದೊಡ್ಡ ಆಘಾತ. ಬಿಜೆಪಿ ಮೋದಿ ನಾಯಕತ್ವವನ್ನೇ ನಂಬಿಕೊಂಡು ಚುನಾವಣೆ ಎದುರಿಸಿತು. ಮಾಜಿ ಸಿಎಂ ರಮಣ್ ಸಿಂಗ್​ರನ್ನು ಸಿಎಂ ಅಭ್ಯರ್ಥಿ ಎಂದು ಘೊಷಿಸಲಿಲ್ಲ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರದ ಮರುಸ್ಥಾಪನೆ ಎಂದೇ ವರದಿ ನೀಡಿದರೂ, ಬಿಜೆಪಿ ನಿರೀಕ್ಷೆಗೂ ಮೀರಿ 54 ಸೀಟುಗಳನ್ನು ಗೆದ್ದು ಅಭೂತಪೂರ್ವ ವಿಜಯ ಸಾಧಿಸಿರುವುದು ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನೇ ಉಲ್ಟಾ ಮಾಡಿದೆ. 2003ರಲ್ಲಿ ಮೊದಲ ಸಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.39.26ರಷ್ಟು ಮತಗಳಿಕೆಯೊಂದಿಗೆ 50 ಸ್ಥಾನ ಗೆದ್ದಿತ್ತು. ನಂತರದ 2008 ಮತ್ತು 2018ರ ಚುನಾವಣೆಯಲ್ಲಿ, ಸಿಎಂ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಕ್ರಮವಾಗಿ 50 ಮತ್ತು 49 ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. 2018ರಲ್ಲಿ ಸೋತ ಬಳಿಕ ಈಗ ಮತ್ತೊಮ್ಮೆ ಎದೆಯುಬ್ಬಿಸಿ ನಿಂತಿದೆ. ಆದರೆ, ರಮಣ್ ಮತ್ತೆ ಸಿಎಂ ಆಗುತ್ತಾರಾ ಅಥವಾ ಹೊಸಮುಖಕ್ಕೆ ಅವಕಾಶ ಸಿಗುವುದೇ ಎಂಬ ಬಗ್ಗೆ ಖಚಿತತೆ ಇಲ್ಲ. ರೈತ ಕುಟುಂಬದ ಮತಗಳನ್ನು ಸೆಳೆಯಲು ಯತ್ನಿಸಿದ ಕಾಂಗ್ರೆಸ್, ಮತ್ತೆ ಅಧಿಕಾರಕ್ಕೆ ಬಂದರೆ, 2018ರಲ್ಲಿ ಜಾರಿಗೊಳಿಸಿದಂತೆ ಈ ಬಾರಿ ಎರಡನೇ ಹಂತದ ಕೃಷಿ ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿತ್ತು. 2018ರ ಸಾಲಮನ್ನಾ ಘೊಷಣೆ 15 ವರ್ಷಗಳ ಅಂದಿನ ಸಿಎಂ ರಮಣ್ ಸಿಂಗ್ ಆಡಳಿತ ಕೊನೆಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿತ್ತು. ಛತ್ತೀಸ್​ಗಢ ಸರ್ಕಾರ ಈ ಹಿಂದೆ 18.82 ಲಕ್ಷ ರೈತರ ರೂ 9,270 ಕೋಟಿ ಮೌಲ್ಯದ ಕೃಷಿ ಸಾಲ ಮನ್ನಾ ಮಾಡಿದೆ. ಸಾಲಮನ್ನಾ ಜತೆಗೆ ಜಾತಿ ಗಣತಿ, ಪ್ರತಿ ಎಕರೆ ಭತ್ತದ ಸಂಗ್ರಹವನ್ನು 15 ಕ್ವಿಂಟಾಲ್ ನಿಂದ 20 ಕ್ವಿಂಟಾಲ್​ಗೆ ಹೆಚ್ಚಿಸುವುದು ಹಾಗೂ 1.75 ಮಿಲಿಯನ್ ಜನರಿಗೆ ಮನೆಗಳನ್ನು ಒದಗಿಸುವ ಭರವಸೆ ನೀಡಿತ್ತು. ಏತನ್ಮಧ್ಯೆ, ಹಿಂದುತ್ವ ಅಜೆಂಡಾಕ್ಕೆ ಬಘೇಲ್ ಒತ್ತು ನೀಡಿದ್ದ ಬಘೇಲ್, ಭಗವಾನ್ ಶ್ರೀರಾಮನ ತಾಯಿಗೆ ಸಮರ್ಪಿತವಾಗಿರುವ ಏಕೈಕ ಮಾತಾ ಕೌಸಲ್ಯೆ ದೇವಾಲಯವನ್ನು ನವೀಕರಣಗೊಳಿಸುವ ಮೂಲಕ ಹಿಂದು ಮತಗಳನ್ನು ಸೆಳೆಯುವ ಯತ್ನ ಮಾಡಿದ್ದರು. ಅವರ ಭಾಷಣಗಳಲ್ಲೂ ರಾಮಾಯಣದ ಉಲ್ಲೇಖಗಳು ಕೇಳಿಬಂದವು. ಆದರೆ ಮೋದಿ ಗ್ಯಾರಂಟಿ ಮಧ್ಯೆ ಇವ್ಯಾವುವೂ ಮತದಾರರನ್ನು ಸೆಳೆದಂತಿಲ್ಲ.
ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು: ವಿಪಕ್ಷಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
