ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸೆ. 18ರಂದು ನಾಪತ್ತೆಯಾಗಿದ್ದ ಐದು ವರ್ಷದ ಬಾಲಕಿ 12 ದಿನಗಳ ಬಳಿಕ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪತ್ತೆಯಾಗಿದ್ದಾಳೆ! ನಗರದಲ್ಲಿ ವಾಸಿಸುತ್ತಿದ್ದ ತಮಿಳುನಾಡು ಮೂಲದ ದಂಪತಿ ಬಾಲಕಿಯನ್ನು ಕರೆದೊಯ್ದಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ನಾಪತ್ತೆಯಾಗಿದ್ದ ಬಾಲಕಿ ಲೋಕಿತಾ ಹಾಗೂ ಆಕೆಯನ್ನು ಕರೆದೊಯ್ದಿದ್ದ ದಂಪತಿಯನ್ನು ಕನ್ಯಾಕುಮಾರಿ ಪೊಲೀಸರು ವಶಕ್ಕೆ ಪಡೆದು, ನಗರದ ಉಪ್ಪಾರಪೇಟೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ದಂಪತಿ ವಿರುದ್ಧ ಅಪಹರಣ ಪ್ರಕರಣ ದಾಖಲಿಸಲಾಗಿದೆ. ಅವರನ್ನು ನಗರಕ್ಕೆ ಕರೆತಂದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸಿ, ಬಳಿಕ ಬಾಲಕಿಯನ್ನು ಪಾಲಕರಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ನಾಪತ್ತೆಯಾಗಿದ್ದು ಹೇಗೆ?: ಸತ್ಯಮೂರ್ತಿ ಮತ್ತು ಕಾರ್ತಿಕೇಶ್ವರಿ ದಂಪತಿ ಕೂಲಿ ಕೆಲಸ ಮಾಡಿಕೊಂಡು ತಂದೆ ವಿಜಯ್‌ಕುಮಾರ್ ಜತೆ ಕಾಕ್ಸ್‌ಟೌನ್‌ನಲ್ಲಿ ವಾಸಿಸುತ್ತಿದ್ದಾರೆ. ಪುತ್ರಿ ಲೋಕಿತಾಗೆ ಒಂದು ತಿಂಗಳಿಂದ ಜ್ವರ ಕಾಣಿಸಿಕೊಂಡಿತ್ತು. ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದರೂ ಗುಣವಾಗಿರಲಿಲ್ಲ. ಆದ್ದರಿಂದ ವಿಜಯ್‌ಕುಮಾರ್ ಸೆ. 18ರಂದು ಮೊಮ್ಮಗಳನ್ನು ಕಾಟನ್‌ಪೇಟೆಯಲ್ಲಿರುವ ತವಕಲ್ ಮಸ್ಕಾನ್ ದರ್ಗಾಕ್ಕೆ ಕರೆದುಕೊಂಡು ಬಂದು ತಾಯಿತ ಕಟ್ಟಿಸಿದ್ದರು.
ಅಲ್ಲಿಂದ ಮನೆಗೆ ವಾಪಸಾಗಲು ಮಧ್ಯಾಹ್ನ 1 ಗಂಟೆಯಲ್ಲಿ ಬಿಎಂಟಿಸಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಅದೇ ವೇಳೆ ಐದು ವರ್ಷದ ಪುತ್ರನ ಜತೆಗಿದ್ದ ದಂಪತಿ ವಿಜಯ್ ಕುಮಾರ್ ಅವರನ್ನು ಮಾತನಾಡಿಸಿದ್ದರು. ದಂಪತಿಯ ಪುತ್ರ ಹಾಗೂ ಲೋಕಿತಾ ಸೇರಿ ಆಟವಾಡುತ್ತಿದ್ದರು. ಬಳಿಕ ಎಲ್ಲರೂ ಒಂದೇ ಬಸ್ ಹತ್ತಿ ಕುಳಿತಿದ್ದರು. ಈ ವೇಳೆ ದಂಪತಿ ಹಾಗೂ ಲೋಕಿತಾಳನ್ನು ಎತ್ತಿಕೊಂಡು ಬೇರೆ ಬಸ್ ಹತ್ತಿ ಪರಾರಿಯಾಗಿದ್ದರು. ಈ ಬಗ್ಗೆ ವಿಜಯ್‌ಕುಮಾರ್ ದೂರು ಕೊಟ್ಟಿದ್ದರು.
ಕಾಣೆಯಾಗಿದ್ದ ಬಾಲಕಿಯ ಹೆಸರು, ಫೋಟೋ ಹಾಗೂ ಇತರ ವಿವರವನ್ನು ಉಪ್ಪಾರಪೇಟೆ ಪೊಲೀಸರು ಎನ್‌ಸಿಆರ್‌ಬಿ ಪೋರ್ಟಲ್‌ನಲ್ಲಿ ಹಾಕಿದ್ದರು. ಅಲ್ಲದೆ, ರಾಜ್ಯದ ಎಲ್ಲ ಠಾಣೆಗಳಿಗೆ ನಾಪತ್ತೆ ನೋಟಿಸ್ ರವಾನಿಸಿದ್ದರು. ಬುಧವಾರ (ಸೆ.30) ಬೆಳಗ್ಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಎರಡು ಮಕ್ಕಳ ಜತೆ ದಂಪತಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಅಲ್ಲಿನ ಪೊಲೀಸರಿಗೆ ಕಂಡು ಬಂದಿತ್ತು. ಹೀಗಾಗಿ, ಗಸ್ತಿನಲ್ಲಿದ್ದ ಪೊಲೀಸರು, ಶಂಕೆ ಮೇರೆಗೆ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರ ಬಳಿ ಇದ್ದ ಹೆಣ್ಣುಮಗು ಬೇರೆಯವರಿಗೆ ಸೇರಿದ್ದು, ಬೆಂಗಳೂರಿನಿಂದ ಮಗುವನ್ನು ಕರೆತಂದಿದ್ದರು ಎಂಬ ವಿಚಾರ ಗೊತ್ತಾಗಿತ್ತು. ಬಳಿಕ ಎನ್‌ಸಿಆರ್‌ಬಿ ಪೋರ್ಟಲ್‌ನಲ್ಲಿ ಪರಿಶೀಲಿಸಿದಾಗ ಮಗುವಿನ ಬಗ್ಗೆ ಮಾಹಿತಿ ಸಿಕ್ಕಿತ್ತು. ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ಹೀಗಾಗಿ ಪಿಎಸ್‌ಐ ನೇತೃತ್ವದಲ್ಲಿ ಕನ್ಯಾಕುಮಾರಿಗೆ ತೆರಳಿರುವ ಪೊಲೀಸರು, ಆರೋಪಿಯ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ದಂಪತಿ ತಮಿಳುನಾಡು ಮೂಲದವರು. ನಗರದಲ್ಲಿ ಸೆಕ್ಯೂರಿಟಿ ಗಾರ್ಡ್ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದರು. ಮಗುವಿನ ಪಾಲಕರು ತಮಿಳುನಾಡು ಮೂಲದವರಾಗಿದ್ದರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಿಜಯ್‌ಕುಮಾರ್‌ನನ್ನು ಮಾತನಾಡಿಸಿದ್ದರು. ಈ ವೇಳೆ ವಿಜಯ್ ಕುಮಾರ್ ಮದ್ಯ ಸೇವಿಸಿದ್ದ. ಮಗು ಒಂಟಿಯಾಗಿ ಆಟವಾಡುತ್ತಿತ್ತು. ಹೀಗಾಗಿ, ಕರೆದುಕೊಂಡು ಬಂದಿರುವುದಾಗಿ ದಂಪತಿ ಕನ್ಯಾಕುಮಾರಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಆರೋಪಿಗಳ ಮೇಲೆ ಹಲವು ಅನುಮಾನಗಳಿವೆ. ಎಲ್ಲ ಆಯಾಮದಲ್ಲೂ ತನಿಖೆ ಕೈಗೊಳ್ಳಲಾಗುವುದು. ಆರೋಪಿತರನ್ನು ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ನಿಖರವಾದ ಸತ್ಯಾಂಶ ಗೊತ್ತಾಗಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 6 =
Remember me
