ಭಾರತ-ಚೀನಾ ಗಡಿಯಲ್ಲಿ ಭಾರತದ ಭಾಗವಾಗಿರುವ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾದ ಹೆಸರುಗಳನ್ನು ಘೊಷಿಸುವ ಮೂಲಕ ಉಭಯ ದೇಶಗಳ ನಡುವಿನ ಗಡಿ ಬಿಕ್ಕಟ್ಟು ಮತ್ತೊಂದು ಹಂತಕ್ಕೆ ತಲುಪಿದೆ. ಹೊಸ ವರ್ಷದ ಆರಂಭದಿಂದ ಅನ್ವಯವಾಗುವಂತೆ ದೇಶದಲ್ಲಿ ಹೊಸ ಗಡಿ ಭೂ ಕಾನೂನು ಜಾರಿಗೊಳಿಸುವ ಜತೆಗೆ ಚೀನಾ ಸರ್ಕಾರ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಪ್ರಮಾಣಿತ ಹೆಸರುಗಳನ್ನಿಟ್ಟಿರುವುದು ಭಾರತದ ಮುಂದೆ ಹೊಸ ಸವಾಲುಗಳನ್ನು ತಂದೊಡ್ಡಿರುವುದು ಸುಳ್ಳಲ್ಲ.
ಹೊಸ ಪ್ರಮಾಣಿತ ಹೆಸರುಗಳೇಕೆ?
2017ರಲ್ಲಿ ಬೌದ್ಧ ಗುರು ದಲೈ ಲಾಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಕ್ಕೆ ಪ್ರತಿರೋಧವಾಗಿ ಇಂಥದ್ದೇ ನಡೆ ಅನುಸರಿಸಿದ್ದ ಚೀನಾ, ಆಗ ಅರುಣಾಚಲದ 6 ಪ್ರದೇಶಗಳಿಗೆ ಚೀನಾದ ಅಧಿಕೃತ ಹೆಸರುಗಳನ್ನು ಘೊಷಿಸಿತ್ತು. ಈ ಸಲದ ಪಟ್ಟಿಯಲ್ಲಿ 15 ಹೊಸ ಸ್ಥಳಗಳಿದ್ದು, 8 ಪಟ್ಟಣಗಳು, ನಾಲ್ಕು ಪರ್ವತಗಳು, 2 ನದಿ ಮತ್ತು ಒಂದು ಮೌಂಟೇನ್ ಪಾಸ್ ಹೊಂದಿದೆ. ಈ ಪ್ರದೇಶಗಳು ಅರುಣಾಚಲದ ಪಶ್ಚಿಮದ ತವಾಂಗ್ ಜಿಲ್ಲೆಯಿಂದ ಪ್ರಾರಂಭಗೊಂಡು ಪೂರ್ವದ ಅಂಜಾವ್ ಎಂಬಲ್ಲಿ ಅಂತ್ಯಗೊಳ್ಳುತ್ತವೆ. ಹೊಸ ಹೆಸರುಗಳು ‘ಗಡಿ ವಾಸ್ತವ’ಗಳನ್ನು ಬದಲಿಸದಿದ್ದರೂ, ಭೌಗೋಳಿಕ ಬಿಕ್ಕಟ್ಟುಗಳನ್ನು ಎದುರಿಸಲು ಚೀನಾ ಅನುಸರಿಸುತ್ತಿರುವ ಹೊಸ ರಕ್ಷಣಾ ಕಾರ್ಯತಂತ್ರ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಗಣ್ಯರು ಬಂದಾಗಲೆಲ್ಲಾ ವಿರೋಧ
ಭಾರತೀಯ ಭೂಪ್ರದೇಶದ ಮೇಲೆ ತನ್ನ ಹಕ್ಕುಗಳನ್ನು ಪ್ರತಿಪಾದಿಸುವುದು ಚೀನಾದ ಕಾರ್ಯತಂತ್ರದ ಒಂದು ಭಾಗ. ಭಾರತದ ಗಣ್ಯರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದಾಗಲೆಲ್ಲಾ ಚೀನಾ ಆಕ್ರೋಶದ ಹೇಳಿಕೆಗಳನ್ನು ನೀಡುತ್ತಲೇ ಬಂದಿದೆ. ಕೆಲ ತಿಂಗಳುಗಳ ಹಿಂದೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಜ್ಯ ವಿಧಾನಸಭೆ ಉದ್ದೇಶಿಸಿ ಮಾತನಾಡಲು ಹೋಗಿದ್ದಾಗಲೂ ಚೀನಾ ವಿರೋಧ ಹೊರಹಾಕಿತ್ತು. ಅರುಣಾಚಲ ಪ್ರದೇಶದ ಮೇಲೆ ಭಾರತದ ಸ್ವಾಧೀನವು ಜಗತ್ತಿನಿಂದ ಗುರುತಿಸಲ್ಪಟ್ಟಿದೆ ಮತ್ತು ಚೀನಾದ ಪ್ರತಿಪಾದನೆ ಕಾನೂನುಬಾಹಿರ. ಹಾಗಿದ್ದರೂ, ಚೀನಾ ತನ್ನ ನೆಲವನ್ನು ಸಂರಕ್ಷಿಸುವ ಮತ್ತು ರಾಷ್ಟ್ರೀಯ ಭದ್ರತೆ ಹೆಸರಲ್ಲಿ ಭಾರತದ ಮೇಲೆ ಕಾಲ್ಕೆರೆದು ಜಗಳಕ್ಕೆ ಬರುವ ಪ್ರವೃತ್ತಿಯನ್ನು ತೋರುತ್ತಲೇ ಬಂದಿದೆ.
ಏನಿದು ಗಡಿ ಕಾನೂನು
ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್​ನ ಸ್ಥಾಯಿ ಸಮಿತಿಯು ದೇಶದ ಭೂ ಗಡಿ ಪ್ರದೇಶಗಳ ರಕ್ಷಣೆಗಾಗಿ ಈ ಕಾನೂನನ್ನು ಅಂಗೀಕರಿಸಿದೆ. ಚೀನಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಕಾಪಾಡುವುದು ಮತ್ತು ಗಡಿಗಳನ್ನು ದುರ್ಬಲಗೊಳಿಸುವ ಯಾವುದೇ ಕೃತ್ಯದ ವಿರುದ್ಧ ಹೋರಾಡುವುದು ಈ ಕಾನೂನಿನ ಮೂಲ ಉದ್ದೇಶ. ಗಡಿ ರಕ್ಷಣೆ ಬಲಪಡಿಸುವುದು, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಬೆಂಬಲಿಸುವುದು, ಈ ಪ್ರದೇಶಗಳಲ್ಲಿ ಸಾರ್ವಜನಿಕ ಸೇವೆ ಮತ್ತು ಮೂಲಸೌಕರ್ಯಗಳ ಸುಧಾರಣೆ, ಉದ್ಯೋಗಕ್ಕೆ ಉತ್ತೇಜನ ಸೇರಿ ಒಟ್ಟಾರೆಯಾಗಿ ಗಡಿ ಭಾಗದ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಬಗ್ಗೆ ಕಾನೂನಿನಲ್ಲಿ ದಾಖಲಿಸಲಾಗಿದೆ. ಆದಾಗ್ಯೂ, ಪರಸ್ಪರ ನಂಬಿಕೆ ಮತ್ತು ಸೌಹಾರ್ದ ಸಮಾಲೋಚನೆ ಮೂಲಕ ದೀರ್ಘಕಾಲದ ಗಡಿ ಸಮಸ್ಯೆಗಳನ್ನು ನೆರೆಯ ದೇಶಗಳೊಂದಿಗೆ ಪರಿಹರಿಸಿಕೊಳ್ಳುವ ಬಗ್ಗೆಯೂ ಕಾನೂನು ರ್ಚಚಿಸಿದೆ. ಅಗತ್ಯ ಸಂದರ್ಭಗಳಲ್ಲಿ ಗಡಿ ಮುಚ್ಚುವಿಕೆ ಸೇರಿ ಗಡಿಯಲ್ಲಿ ತುರ್ತು ಕ್ರಮಗಳನ್ನು ಸರ್ಕಾರ ವಿಧಿಸಬಹುದು ಎಂದೂ ಹೇಳಲಾಗಿದೆ.
ಭಾರತ-ಚೀನಾ ಗಡಿ ಬಿಕ್ಕಟ್ಟಿನ ಮೇಲೆ ಪರಿಣಾಮ?
ಚೀನಾದ ಕಾನೂನು ಕೇವಲ ಭಾರತವನ್ನೇ ಉದ್ದೇಶಿಸಿ ಮಾಡಿದಂತಿಲ್ಲ. ಆದರೂ ಉಭಯ ದೇಶಗಳ ಗಡಿ ಬಿಕ್ಕಟ್ಟಿನ ಮೇಲೆ ಇದು ಸಣ್ಣಮಟ್ಟಿಗೆ ಪರಿಣಾಮ ಬೀರುವ ಸಾಧ್ಯತೆ ಇದ್ದೇ ಇದೆ. ಎರಡೂ ದೇಶಗಳು 3,488-ಕಿಮೀ ಗಡಿಯನ್ನು ಹಂಚಿಕೊಂಡಿವೆ. ಮಂಗೋಲಿಯಾ ಮತ್ತು ರಷ್ಯಾ ನಂತರ ಚೀನಾ ಅತಿ ಉದ್ದದ ಗಡಿ ಹೊಂದಿರುವುದು ಭಾರತದೊಂದಿಗೇ. ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೇನಾನಿಗಳ ದೈಹಿಕ ಸಮರದ ಬಳಿಕ ಉಭಯ ದೇಶಗಳ ನಡುವಿನ ರಕ್ಷಣಾ ಬಿಕ್ಕಟ್ಟು ಈವರೆಗೂ ಅಂತ್ಯ ಕಂಡಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಚೀನಾವು ಭಾರತದ ರಕ್ಷಣಾ ಪಡೆ ಮತ್ತು ಸರ್ಕಾರವನ್ನು ಕೆರಳಿಸುವ ಧೋರಣೆ ಪ್ರದರ್ಶಿಸುತ್ತಿದೆ. ಈಗ ಗಡಿ ಭೂ ಕಾನೂನಿನ ಮೂಲಕ ಚೀನಾ ಸರ್ಕಾರವು ಭಾರತ ಮತ್ತು ಭೂತಾನ್​ಗೆ ಅಂಟಿಕೊಂಡಿರುವ ಗಡಿಗಳಲ್ಲಿ ಚೀನಾ ಮೂಲದ ಏಜೆನ್ಸಿಗಳಿಗೆ ಮೂಲಸೌಕರ್ಯ ಸೇರಿ ವಿವಿಧ ಕಾಮಗಾರಿ ಚಟುವಟಿಕೆಗಳನ್ನು ಮುಂದುವರಿಸಲು ಹೊಸ ಶಕ್ತಿಯನ್ನು ತುಂಬಲಿದೆ ಎಂದು ಭಾವಿಸಲಾಗಿದೆ. 2017ರಲ್ಲಿ ಜಾರಿಯಾದ ಗಡಿ ಗ್ರಾಮ ನಿರ್ಮಾಣ ಯೋಜನೆ ಅಡಿಯಲ್ಲಿ ಚೀನಾ 628 ಹಳ್ಳಿಗಳನ್ನು ಇಲ್ಲಿ ನಿರ್ಮಾಣ ಮಾಡುತ್ತಿದೆ. ಚೀನಾದ ಹಳ್ಳಿಗರು, ಕುರಿಗಾಹಿಗಳು ಸೇರಿದಂತೆ ಅನೇಕರನ್ನು ಭಾರತ, ನೇಪಾಳ ಮತ್ತು ಭೂತಾನ್​ನ ಈ ಗಡಿ ಪ್ರದೇಶಗಳಲ್ಲಿ ವಾಸ್ತವ್ಯ ಹೂಡುವಂತೆ ಪ್ರೇರೇಪಿಸುತ್ತಿದೆ. 2021ರ ನವೆಂಬರ್​ನಲ್ಲಿ ಉಪಗ್ರಹ ಚಿತ್ರಗಳಲ್ಲಿ ಅರುಣಾಚಲ ಪ್ರದೇಶದಲ್ಲಿರುವ ಭಾರತದ ಭೂಭಾಗ ಎಂದೇ ಗುರುತಿಸಲಾಗಿರುವ ಪ್ರದೇಶದಲ್ಲಿ ಚೀನಾ ಸರ್ಕಾರ ಸುಮಾರು 60 ಜನವಾಸಸ್ಥಳಗಳನ್ನು ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿತ್ತು. ಇಲ್ಲಿರುವ ವಿವಾದಿತ ಭೂಮಿ 1959ರ ಬಳಿಕ ಚೀನಾ ನಿಯಂತ್ರಣದಲ್ಲಿದ್ದರೂ ನಾಗರಿಕ ವಾಸಸ್ಥಳಗಳನ್ನು ನಿರ್ವಿುಸುವ ಮೂಲಕ ಚೀನಾ ತನ್ನ ಹಕ್ಕು ಪ್ರತಿಪಾದನೆಯನ್ನು ಮತ್ತಷ್ಟು ಬಲಗೊಳಿಸುತ್ತಿದೆ ಎಂದು ವಿಮಶಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + nine =
Remember me
