ನವದೆಹಲಿ:ವಿಸ್ತರಣಾವಾದಿ ಚೀನಾಕ್ಕೆ ಕಡಿವಾಣ ಹಾಕಲು ದೇಶದ ಪೂರ್ವ ಗಡಿಗೆ ಅಮೆರಿಕ ನಿರ್ವಿುತ ಅತ್ಯಾಧುನಿಕ ಹೊಸ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಭಾರತ ನಿಯೋಜಿಸಿದೆ. ಕಳೆದ ತಿಂಗಳು ಚೀನಾ ಸೇನೆಯ 100ಕ್ಕೂ ಹೆಚ್ಚು ಯೋಧರಿದ್ದ ತಂಡ ತವಾಂಗ್​ನಲ್ಲಿ ಗಡಿ ಪ್ರವೇಶಿಸಿ ಕೆಲವು ತಾಸು ಇದ್ದು ವಾಪಸ್ ಹೋಗಿತ್ತು. ಈ ಘಟನೆಯ ನಂತರ ಗಡಿಯಲ್ಲಿ ಗಸ್ತನ್ನು ಭಾರತ ಹಚ್ಚಿಸಿದೆ. ಈಗ ಅಮೆರಿಕ ನಿರ್ವಿುತ ಅತ್ಯಂತ ಹಗುರ ತುಪಾಕಿ (ಅಲ್ಟ್ರಾ ಲೈಟ್ ಹೌವಿಟ್ಜರ್ ಎಂ 777 ಗನ್), ಚಿನೂಕ್ ಹೆಲಿಕಾಪ್ಟರ್, ರೈಫಲ್​ಗಳನ್ನು ರವಾನಿಸಲಾಗಿದೆ. ಜತೆಗೆ ದೇಶೀಯವಾಗಿ ನಿರ್ವಿುಸಲಾದ ಶಸ್ತ್ರಗಳನ್ನೂ ಕಳುಹಿಸಿದೆ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟೆರ್​ನ ಆಯಕಟ್ಟಿನ ಸ್ಥಳವು ಭೂತಾನ್ ಮತ್ತು ಟಿಬೆಟ್ ಜತೆಗೆ ಗಡಿ ಹಂಚಿಕೊಂಡಿದೆ. ಈ ಸ್ಥಳವನ್ನು ಚೀನಾ ತನ್ನದೆಂದು ಹೇಳುತ್ತದೆ. ಆದರೆ ಇದು ಮೊದಲಿನಿಂದಲೂ ಭಾರತದ ಹಿಡಿತದಲ್ಲೇ ಇದೆ. 1959ರಲ್ಲಿ ನಿರಾಶ್ರಿತರಾಗಿದ್ದ ದಲೈ ಲಾಮಾ ಇದೇ ಜಾಗದ ಮೂಲಕ ಭಾರತಕ್ಕೆ ಬಂದರು. 1962ರಲ್ಲಿ ಚೀನಾ ಜತೆಗೆ ಯುದ್ಧ ನಡೆದಾಗ ಈ ಸ್ಥಳದಲ್ಲೂ ಕಾಳಗ ನಡೆದಿತ್ತು. ಭಾರತದ ಅರುಣಾಚಲ ಪ್ರದೇಶವನ್ನು ಟಿಬೆಟ್​ನ ದಕ್ಷಿಣ ಭಾಗವೆಂದು ಚೀನಾ ಹೇಳಿಕೊಳ್ಳುತ್ತದೆ. 1962ರ ಯುದ್ಧದ ವೇಳೆ ಲಡಾಖ್​ನ ಉತ್ತರ ಭಾಗದ ಶಕ್ಸ್​ಗಮ್ ಕಣಿವೆಯ ಸುಮಾರು ಐದು ಸಾವಿರ ಚ.ಅಡಿಯ (ಆಕ್ಸಾಯ್ ಚೀನ್) ಭೂಭಾಗವನ್ನು ಚೀನಾ ವಶಪಡಿಸಿಕೊಂಡಿದೆ. ಇದರಲ್ಲಿ ಕೆಲವು ಭಾಗವನ್ನು 1963ರಲ್ಲಿ ಪಾಕ್ ನೀಡಿದೆ.
ಏನೇನು ನಿಯೋಜನೆ
* ಸರ್ವಋತುವಿನಲ್ಲೂ ಕಾರ್ಯನಿರ್ವಹಿಸುವ ಚಿನೂಕ್ ಹೆಲಿಕಾಪ್ಟರ್
*ಅತ್ಯಂತ ಹಗುರ ತುಪಾಕಿ ಎಂ 777 ಗನ್
* ರೈಫಲ್​ಗಳು
* ದೇಶೀಯ ತಂತ್ರಜ್ಞಾನದಲ್ಲಿ ನಿರ್ವಿುಸಲಾದ ಸೂಪರ್​ಸಾಣಿಕ್ ಕ್ರೂಸ್ ಕ್ಷಿಪಣಿ
* ಹೊಸ ತಲೆಮಾರಿನ ಸರ್ವೆಕ್ಷಣಾ ವ್ಯವಸ್ಥೆ

ಹೌವಿಟ್ಜರ್ ವಿಶೇಷ
2018ರಲ್ಲಿ 145 ಹೌವಿಟ್ಜರ್ ಎಂ 777 ಗನ್​ಗಳನ್ನು ಅಮೆರಿಕದಿಂದ ಖರೀದಿಸಲಾಗಿದೆ. ಇದು ಬೋಫೋರ್ಸ್ ಫಿರಂಗಿಗಳಿಗಿಂತ ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿವೆ. ತವಾಂಗ್ ಸೆಕ್ಟೆರ್ ಸಮುದ್ರ ಮಟ್ಟದಿಂದ 13 ಸಾವಿರ ಅಡಿ ಎತ್ತರದ ಪ್ರದೇಶವಾಗಿದ್ದು, ಅತಿ ಎತ್ತರ ಪ್ರದೇಶದ ಹವಾಮಾನ ವೈಪರೀತ್ಯದ ಸನ್ನಿವೇಶದಲ್ಲೂ ಹೌವಿಟ್ಜರ್ ಗನ್​ಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇವು ಬೋಫೋರ್ಸ್ ಫಿರಂಗಿಯಷ್ಟು ತೂಕವಿಲ್ಲದ ಕಾರಣ ಸಾಗಿಸುವುದು ಸರಾಗ. ಈ ತುಪಾಕಿಯಿಂದ ಸಿಡಿಯುವ ಗುಂಡು ಸುಮಾರು 40 ಕಿ.ಮೀ.ವರೆಗೂ ತಲುಪುತ್ತದೆ.
ಸೋಲಾರ್ ಟೆಂಟ್
ಹಿಮಾಲಯ ಶ್ರೇಣಿಯ 17 ಸಾವಿರ ಅಡಿ (ಸಮುದ್ರ ಮುಟ್ಟದಿಂದ) ಎತ್ತರವಿರುವ ಗಡಿಗೆ ಸೌರ ವಿದ್ಯುತ್​ನಿಂದ ಬೆಳಗುವ ಟೆಂಟ್​ಗಳನ್ನು ರವಾನಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇವು ಮೈಸನ್ 35ರಿಂದ 40 ಡಿಗ್ರಿ ಸೆಲ್ಶಿಯಸ್ ಕೆಳಗೆ ತಾಪಮಾನವಿದ್ದರೂ ಕಾರ್ಯನಿರ್ವಹಿಸುತ್ತವೆ. ಆರಂಭಿಕವಾಗಿ 50 ಟೆಂಟ್​ಗಳನ್ನು ಪೂರೈಕೆ ಮಾಡಲಾಗುವುದು. ಇವು ಸರ್ವಋತು ಟೆಂಟ್ ಆಗಿದ್ದು, ಇದರೊಳಗೆ 21 ಡಿಗ್ರಿ ಸೆಲ್ಶಿಯಸ್ ಉಷ್ಣತೆ ಇರುತ್ತದೆ. ತಾಸಿಗೆ 150 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೂ ಧಾರಣಾ ಶಕ್ತಿಯನ್ನು ಹೊಂದಿರುತ್ತದೆ.
ಹೆಚ್ಚುತ್ತಿರುವ ಗಡಿ ಬಿಕ್ಕಟ್ಟು
2020ರ ಮೇ ತಿಂಗಳಲ್ಲಿ ಪೂರ್ವ ಲಡಾಖ್ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ)ಯಲ್ಲಿ ಚೀನಾ ಅಕ್ರಮ ಪ್ರವೇಶ ಮಾಡುವ ಮೂಲಕ ಆರಂಭವಾದ ಗಡಿ ಬಿಕ್ಕಟ್ಟು ಜೂನ್ 15ರ ಮಧ್ಯರಾತ್ರಿ ಗಲ್ವಾನ್ ಕಣಿಯಲ್ಲಿನ ಘರ್ಷಣೆಯ ಮೂಲಕ ತಾರಕಕ್ಕೆ ಏರಿತ್ತು. ಭಾರತದ 20 ಯೋಧರು ಹುತಾತ್ಮರಾದರು. ಚೀನಾ ಕಡೆ 40 ಸೈನಿಕರು ಮರಣಿಸಿದರು ಎನ್ನಲಾಗಿದೆ. ಶಾಂತಿ ಸ್ಥಾಪಿಸಲು ನಡೆಯುತ್ತಿರುವ ಉಭಯ ದೇಶಗಳ ಸೇನಾಧಿಕಾರಿಗಳ ಮಾತುಕತೆಯ ಫಲವಾಗಿ ಉದ್ವಿಗ್ನತೆ ಕಡಿಮೆ ಆಗಿದ್ದರೂ ಬಿಕ್ಕಟ್ಟು ಪೂರ್ಣವಾಗಿ ಶಮನವಾಗಿಲ್ಲ. ಕಗ್ಗಂಟಾಗಿದ್ದ ಆರು ಪಾಯಿಂಟ್​ಗಳಲ್ಲಿ ನಾಲ್ಕರಲ್ಲಿ ಚೀನಾ ಸೇನೆ ಹಿಂದೆಸರಿದಿದೆ. ಇನ್ನೆರಡು ಪಾಯಿಂಟ್​ಗಳಲ್ಲಿ ಸೇನೆ ವಾಪಸಾತಿ ಸಂಬಂಧ ಎರಡು ವಾರದ ಹಿಂದೆ ನಡೆದ ಮಾತುಕತೆ ವಿಫಲ ಆಗಿತ್ತು. 2017ರ ಜೂನ್​ನಲ್ಲಿ ಸಿಕ್ಕಿಂನ ಡೋಕ್ಲಾಂನಲ್ಲೂ ಬಿಕ್ಕಟ್ಟು ಉಂಟಾಗಿತ್ತು. ಚೀನಾ ಪಡೆಗಳು ಭೂತಾನ ಗಡಿ ಅತಿಕ್ರಮಿಸಿಕೊಂಡ ಕಾರಣ ತ್ರಿರಾಷ್ಟ್ರ ಗಡಿ ಬಿಂದುವಿನಲ್ಲಿ ಭಾರತ ಮತ್ತು ಚೀನಾ ಸೇನೆಗಳು 72 ದಿನ ಮುಖಾಮುಖಿಯಾಗಿದ್ದವು.
ಗಡಿಯಲ್ಲಿ ರಸ್ತೆಗಳ ಅಭಿವೃದ್ಧಿ
ತವಾಂಗ್ ಸೆಕ್ಟೆರ್​ನ ವಿವಾದಿತ ಸ್ಥಳಕ್ಕೆ ತುರ್ತಾಗಿ ಸೇನೆ ರವಾನಿಸಲು ಅಗತ್ಯವಾದ ರಸ್ತೆಯನ್ನು ಭಾರತ ನಿರ್ವಿುಸಿದೆ. ಮತ್ತೊಂದು ರಸ್ತೆಯು ಭೂತಾನ್ ಗಡಿಗೆ ಹೊಂದಿಕೊಂಡಂತೆ ನಿರ್ವಿುಸಿತ್ತಿದ್ದು, ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿತ್ತು. ಈಗ ಗಡಿ ರಸ್ತೆ ವಿಷಯದಲ್ಲಿ ನಾವು ಮೊದಲಿಗಿಂತ ಹೆಚ್ಚು ಸಮರ್ಥವಾಗಿದ್ದೇವೆ. ಇದೇ ರಸ್ತೆಗಳ ಮೂಲಕ ಸಾಧಾನ-ಸಲಕರಣೆಗೆಳು ಗಡಿಗೆ ವೇಗವಾಗಿ ತಲುಪುತ್ತಿವೆ ಎಂದು 5 ಮೌಂಟೆನ್ ವಿಭಾಗದ ಮೇಜರ್ ಜನರಲ್ ಜುಬಿನ್ ಎ. ಮನಿವಾಲಾ ಹೇಳಿದ್ದಾರೆ. ಉತ್ತರದ ಲಡಾಖ್​ನ ಕಾರಾಕೋರಂ ಪಾಸ್​ನಿಂದ ಈಶಾನ್ಯದ ಅರುಣಾಚಲ ಪ್ರದೇಶದ ಜಾಚೆಪ್ ಲಾವರೆಗೆ 3,500 ಕಿ.ಮೀ. ಉದ್ದದ ವಾಸ್ತವ ಗಡಿ ನಿಯಂತ್ರಣ ರೇಖೆ ಇದೆ. ಇಲ್ಲಿ 180 ಗಡಿ ಚೌಕಿಗಳಿದ್ದು, 47 ಗಡಿ ಹೊರಚೌಕಿಗಳಿವೆ. 12 ಸೇನಾ ಶಿಬಿರಗಳು ಭಾರತದ ಗಡಿಯನ್ನು ಕಾಯುತ್ತಿವೆ. ಇಲ್ಲಿಗೆ ಸೇನಾ ಸರಂಜಾಮು, ಆಹಾರಗಳನ್ನು ಪೂರೈಸಲು ಉತ್ತಮ ರಸ್ತೆಗಳು ಅವಶ್ಯ ಎಂದು ಅವರು ಹೇಳಿದ್ದಾರೆ.
ಹೈಪರ್​ಸಾನಿಕ್ ಕ್ಷಿಪಣಿ ಅಭಿವೃದ್ಧಿ
ಇತ್ತೀಚೆಗೆ ಹೈಪರ್​ಸಾನಿಕ್ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ನಡೆಸಿರುವ ಚೀನಾಕ್ಕೆ ಸೆಡ್ಡು ಹೊಡೆಯಲು ಭಾರತ ಕೂಡ ಹೈಪರ್​ಸಾನಿಕ್ ಅಣ್ವಸ್ತ್ರ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಆದರೆ, ಹೈಪರ್​ಸಾನಿಕ್ ವಾಹನದ ಪರೀಕ್ಷೆಯನ್ನಷ್ಟೆ ನಡೆಸಲಾಯಿತೆ ಹೊರತು ಅದು ಅಣ್ವಸ್ತ್ರ ಸಜ್ಜಿತ ಹೈಪರ್​ಸಾನಿಕ್ ಕ್ಷಿಪಣಿಯಲ್ಲ ಎಂದು ಚೀನಾ ಹೇಳಿತ್ತು. ಆದರೆ, ಚೀನಾ ಈ ಹೈಪರ್​ಸಾನಿಕ್ ಕ್ಷಿಪಣಿಯು 12 ಮೈಲಿ ಅಂತರದಲ್ಲಿ ನಿಗದಿತ ಗುರಿಯನ್ನು ತಪ್ಪಿಸಿತ್ತು ಎಂದು ಬ್ರಿಟನ್ ಪತ್ರಿಕೆ ಕಳೆದ ಅಕ್ಟೋಬರ್ ಎರಡನೇ ವಾರದಲ್ಲಿ ಮಾಡಿತ್ತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
