ನವದೆಹಲಿ: ಈಶಾನ್ಯ ಲಡಾಖ್​ನ ಗಲ್ವಾನ್​ಕಣಿವೆಯಲ್ಲಿ ನಡೆದ ಸಂಘರ್ಷದಿಂದಾಗಿ ಉಂಟಾಗಿರುವ ಉದ್ವಿಗ್ನ ವಾತಾವರಣವನ್ನು ತಿಳಿಗೊಳಿಸಲು ಒಂದು ಕಡೆ ಮಾತುಕತೆ ನಡೆಸುತ್ತಿರುವ ಚೀನಾ ಮತ್ತೊಂದು ಕಡೆ ತನ್ನ ಕುತಂತ್ರ ಬುದ್ದಿ ತೋರಿಸುತ್ತಿದೆ.
ಘರ್ಷಣೆ ನಡೆದ ಕೇವಲ 1 ಕಿ.ಮೀ ದೂರದಲ್ಲೇ ಗಲ್ವಾನ್​ನದಿ ತೀರದಲ್ಲಿ ಚೀನಾ ಬೃಹತ್ ಕಾಮಗಾರಿ ನಡೆಸುತ್ತಿದ್ದು, ನದಿ ನೀರಿನ ಹರಿವು ಬದಲಿಸಲು ಯತ್ನಿಸುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಆ ಪ್ರದೇಶದ ಉಪಗ್ರಹ ಚಿತ್ರಗಳನ್ನು ಪರಿಶೀಲಿಸಲಾಗಿದ್ದು, ಸ್ಥಳದಲ್ಲಿ ಬುಲ್ಡೋಜರ್ ಸೇರಿದಂತೆ ಭಾರಿ ಪ್ರಮಾಣದ ನಿರ್ಮಾಣ ಯಂತ್ರಗಳು ಕಾರ್ಯಾಚರಣೆ ನಡೆಸುತ್ತಿರುವುದು ಕಂಡು ಬಂದಿದೆ. ನದಿ ಹರಿವು ತಿರುವು ಪಡೆದುಕೊಳ್ಳುವ ಸ್ಥಳವೊಂದರಲ್ಲಿ ಈ ರೀತಿ ಕಾಮಗಾರಿ ನಡೆಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ಈ ಬಗ್ಗೆ ಭಾರತೀಯ ಸೇನೆ ಪ್ರತಿಕ್ರಿಯೆ ನೀಡಿದ್ದು, ಸದ್ಯ ನದಿ ಹರಿವಿನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದಿದೆ. ಗಡಿಯ ಸಮೀಪ ಸೇನಾ ಪಡೆಗಳು, ಸೈನಿಕರನ್ನು ಸಾಗಿಸುವ ಟ್ರಕ್​ಗಳು, ಟೆಂಟ್​ಗಳು ಹಾಗೂ ಇನ್ನಿತರ ವಾಹನಗಳನ್ನು ನಿಯೋಜಿಸಿರುವಂತೆ ಕಂಡು ಬರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗಲ್ವಾನ್​ನದಿಯುದ್ದಕ್ಕೂ ಒಣ ಪ್ರದೇಶದಲ್ಲಿ ಚೀನಾದ ಸುಮಾರು 100ಕ್ಕೂ ಹೆಚ್ಚು ಟ್ರಕ್​ಗಳು, ಬುಲ್ಡೋಜರ್​ಗಳು ನಿಂತಿರುವುದೂ ಕೂಡ ಚಿತ್ರದಲ್ಲಿ ಕಾಣುತ್ತಿದೆ. ಸುಮಾರು 5 ಕಿ.ಮೀವರೆಗೂ ಚೀನಾದ ವಾಹನಗಳು ಸಾಲುಗಟ್ಟಿ ನಿಂತಿವೆ.
ಗಲ್ವಾನ್ ಹೆಸರು ಬಂದಿದ್ದು ಹೇಗೆ?
ಗಲ್ವಾನ್​ಕಣಿವೆಗೆ ಈ ಹೆಸರು ಬಂದಿದ್ದು ಗುಲಾಮ್ ರಸೂಲ್ ಗಲ್ವಾನ್​ಎಂಬುವವರಿಂದ. 19ನೇ ಶತಮಾನದಲ್ಲಿ ಬ್ರಿಟಿಷ್ ಆಳ್ವಿಕೆಯು ಟಿಬೆಟ್ ಕಡೆಗೆ ರಷ್ಯಾದ ವಿಸ್ತರಣೆಯ ಬಗ್ಗೆ ಚಿಂತಿತವಾಗಿತ್ತು. ಆಗ ಟಿಬೆಟ್​ಗೆ ಬ್ರಿಟಿಷ್ ಆಡಳಿತದಿಂದ ಕಳುಹಿಸಲಾಗಿದ್ದ ತಂಡವೊಂದಕ್ಕೆ ಗುಲಾಮ್ ರಸೂಲ್ ಗಲ್ವಾನ್ ಗೈಡ್ ಆಗಿ ಕೆಲಸ ನಿರ್ವಹಿಸಿದ್ದರು. ರಷ್ಯಾದ ಒಳನುಗ್ಗುವಿಕೆಯ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸಲು, ಹೊಸ ಮಾರ್ಗಗಳನ್ನು ಕಂಡು ಹಿಡಿಯಲು ಮತ್ತು ಮಾಹಿತಿ ಸಂಗ್ರಹಿಸಲು ಗಲ್ವಾನ್​ಬ್ರಿಟಿಷರ ತಂಡಕ್ಕೆ ಹೆಚ್ಚು ಸಹಾಯ ಮಾಡಿದ್ದರು. ಹೀಗಾಗಿ ಅವರ ಗೌರವಾರ್ಥ ಕಣಿವೆಗೆ ಗಲ್ವಾನ್​ಎಂದು ನಾಮಕರಣ ಮಾಡಲಾಗಿತ್ತು. ಇಂದಿಗೂ ಅವರ ಮೊಮ್ಮಗ ಹಾಗೂ ಕುಟುಂಬಸ್ಥರು ಲೇಹ್​ನಲ್ಲಿ ವಾಸಿಸುತ್ತಿದ್ದಾರೆ. ಗಲ್ವಾನ್​ನಲ್ಲಿ ಇತ್ತೀಚೆಗೆ ಭಾರತ-ಚೀನಾ ಪಡೆಗಳ ಮಧ್ಯೆ ನಡೆದ ಘರ್ಷಣೆ ಕುರಿತು ಪ್ರತಿಕ್ರಿಯಿಸಿರುವ ಗಲ್ವಾನ್​ವೊಮ್ಮಗ ಮೊಹಮ್ಮದ್ ಅಮಿನ್, ‘ಗಲ್ವಾನ್​ಕಣಿವೆ ಎಂದಿಗೂ ಭಾರತದ ಭಾಗ’ ಎಂದಿದ್ದಾರೆ.
ಹ್ಯಾಂಡ್ ಟು ಹ್ಯಾಂಡ್ ಕಾಂಬಾಟ್ ಎಂದರೇನು?
ಚೀನಾ-ಭಾರತೀಯ ಯೋಧರ ಮಧ್ಯೆ ಲಡಾಖ್ ಕಣಿವೆಯಲ್ಲಿ ನಡೆದ ಘರ್ಷಣೆ ಬಹುತೇಕ ಯುದ್ಧವೇ ಆದರೂ ಅದನ್ನು ಹ್ಯಾಂಡ್ ಟು ಹ್ಯಾಂಡ್ ಕಾಂಬಾಟ್ ಎನ್ನಲಾಗುತ್ತದೆ. ಇಲ್ಲಿ ಸೈನಿಕರು ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸುವುದಿಲ್ಲ ಹಾಗೂ ಪರಸ್ಪರಿಂದ ತುಂಬ ದೂರವೂ ಇರುವುದಿಲ್ಲ. ಉಭಯ ಪಡೆಗಳು ಎದುರು ಬದುರಾಗಿ ಕೈಗೆ ಸಿಕ್ಕ ವಸ್ತುಗಳಿಂದಲೇ ಬಡಿದಾಡಿಕೊಳ್ಳುತ್ತಾರೆ. ಭಾರತೀಯ ಸೇನೆ ಪ್ರಮುಖವಾಗಿ ಸಶಸ್ತ್ರ ಪಡೆಯಾಗಿರುವುದರಿಂದ ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಸೈನಿಕರಿಗೆ ಹೆಚ್ಚು ತರಬೇತಿ ನೀಡುತ್ತದೆ. ಜತೆಗೆ ಆಧುನಿಕತೆಗೆ ತಕ್ಕಂತೆ ಹೊಸ ಹೊಸ ಶಸ್ತ್ರಾಸ್ತ್ರಗಳು ಬರುತ್ತಿರುವುದರಿಂದ ಅವುಗಳ ಬಳಕೆ ತರಬೇತಿಗೆ ಪ್ರಮುಖ ಆದ್ಯತೆ. ಆದಾಗ್ಯೂ ಯೋಧರಿಗೆ ಶಸ್ತ್ರಾಸ್ತ್ರಗಳಿಲ್ಲದೆಯೂ ಶತ್ರುವಿನ ಜತೆಗೆ ಸೆಣೆಸಾಡುವ ಕಲೆಯನ್ನೂ ಸಹ ನೀಡಿರಲಾಗುತ್ತದೆ. ನಿರಾಯುಧ ಯುದ್ಧ, ಜಂಗಲ್ ವಾರ್ಫೆರ್ ಕೋರ್ಸ್ ಹಾಗೂ ಕಮಾಂಡೊ ತರಬೇತಿ ಸೇರಿ ಹಲವು ತರಬೇತಿಗಳಲ್ಲಿ ಶಸ್ತ್ರಾಸ್ತ್ರಗಳಿಲ್ಲದೆ ಹೋರಾಡುವುದನ್ನು ಕಲಿಸಲಾಗುತ್ತದೆ. ಇದಕ್ಕಾಗಿಯೇ ಸೇನೆಯಲ್ಲಿ ಪ್ರತಿ ದಿನ ಎಲ್ಲ ಘಟಕಗಳು ನಿಯಮಿತವಾಗಿ ಅಂತರ್ ಕಂಪನಿ ಹಾಗೂ ಅಂತರ್ ಬೆಟಾಲಿಯನ್ ಮಟ್ಟದಲ್ಲಿ ಬಾಕ್ಸಿಂಗ್ ಮತ್ತು ಕುಸ್ತಿ ಸ್ಪರ್ಧೆಗಳನ್ನೂ ಏರ್ಪಡಿಸುತ್ತವೆ. ವಿಶೇಷವಾಗಿ ಶತ್ರುಗಳ ಸಾಮೀಪ್ಯಕ್ಕೆ ಬಂದಂತಹ ವೇಳೆ ಅವರ ಮೇಲೆ ಶಸ್ತ್ರಾಸ್ತ್ರಗಳಿಲ್ಲದೇ ಆಕ್ರಮಣ ಮಾಡುವುದ್ನು ಸೈನಿಕರಿಗೆ ಕರಗತ ಮಾಡಿಸಲಾಗುತ್ತದೆ. ಜತೆಗೆ ಸೈನಿಕರಿಗೆ ಚಾಕುವಿನ ಆಕ್ರಮಣಕಾರಿ ಬಳಕೆಯನ್ನು ಹೇಳಿಕೊಡಲಾಗಿರುತ್ತದೆ.
ಪ್ರೋಟೋಕಾಲ್ ಮರುಪರಿಶೀಲನೆ?ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ನಿರಂತರ ಘರ್ಷಣೆಗಳು ನಡೆಯುತ್ತಿರುವ ಹಿನ್ನೆಲೆ ದಶಕಗಳಿಂದ ಪಾಲಿಸಿಕೊಂಡು ಬರುತ್ತಿರುವ, ಗಡಿಯಲ್ಲಿನ ಮುಂಚೂಣಿ ನೆಲೆಗಳಿಗೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಬಾರದು ಎಂಬ ನಿಯಮವನ್ನು ಮರುಪರಿಶೀಲಿಸಲಾಗುತ್ತಿದೆ ಎಂದೂ ಕೆಲ ಮೂಲಗಳು ತಿಳಿಸಿವೆ. 2013ರ ಗಡಿ ರಕ್ಷಣಾ ಸಹಕಾರ ಒಪ್ಪಂದದ ನಿರ್ದಿಷ್ಟ ನಿಬಂಧನೆಗಳು ಒಳಗೊಂಡಂತೆ ದ್ವಿಪಕ್ಷೀಯ ಒಪ್ಪಂದಗಳು ಹಾಗೂ ಗಡಿ ನಿರ್ವಹಣಾ ಪ್ರೋಟೋಕಾಲ್​ಗಳನ್ನು ಚೀನಾ ನಿರಂತರವಾಗಿ ಉಲ್ಲಂಘಿಸಿದೆ. 2016ರಲ್ಲಿ ಚೀನಾ ಒಟ್ಟು 296 ಬಾರಿ ಈ ರೀತಿ ಉದ್ಧಟತನ ತೋರಿಸಿದೆ. ನಂತರ 2017ರಲ್ಲಿ 473, 2018 ರಲ್ಲಿ 404 ಮತ್ತು 2019 ರಲ್ಲಿ ಒಟ್ಟು 663 ಬಾರಿ ಗಡಿಯಲ್ಲಿ ಕ್ಯಾತೆ ತೆಗೆದಿದೆ.
ಡ್ರ್ಯಾಗನ್ ಬೆನ್ನಲುಬು ಮುರಿಯೋದಕ್ಕೆ ಜಾಗೃತಿ ಅಭಿಯಾನ: ಮನೆಮನೆಗೆ ತೆರಳಲಿದ್ದಾರೆ ವಿಹಿಂಪ ಕಾರ್ಯಕರ್ತರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 14 =
Remember me
