ನವದೆಹಲಿ:ಭಾರತದಲ್ಲಿ ಚೀನಾ ಅಪಾರ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದು, ಇದೀಗ ವಾಮಮಾರ್ಗದ ಮೂಲಕ ದೇಶದ ಹಲವು ಕಂಪನಿಗಳಲ್ಲಿ ಷೇರು ಪ್ರಮಾಣ ಹೆಚ್ಚಿಸಿಕೊಳ್ಳಲು ಅದು ಪ್ರಯತ್ನಿಸುತ್ತಿದೆ. ಹೀಗಾಗಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್​ಡಿಐ) ನಿಯಮವನ್ನು ತಿದ್ದುಪಡಿ ಮಾಡಿ ಅದರ ಹುನ್ನಾರವನ್ನು ವಿಫಲಗೊಳಿಸಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ.
ಕರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಷೇರು ಮೌಲ್ಯದಲ್ಲಿ ಕುಸಿತ ಕಂಡಿರುವ ಭಾರತೀಯ ಕಂಪನಿಗಳನ್ನು ಚೀನಾ ‘ಸಮಯಸಾಧಕತನದಿಂದ’ ಖರೀದಿಸುವ (ಟೇಕ್​ಓವರ್) ಅಪಾಯವನ್ನು ತಪ್ಪಿಸುವುದು ಇದರ ಉದ್ದೇಶ. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಹೂಡಿಕೆ ಮೇಲೆ ಈಗಾಗಲೇ ನಿರ್ಬಂಧವಿದ್ದು, ಚೀನಿ ಪ್ರಜೆಗಳು ‘ಲಾಭಕರ ಮಾಲೀಕತ್ವ’ ಹೊಂದಿರುವ ಕಂಪನಿಗಳಿಗೂ ಇದನ್ನು ವಿಸ್ತರಿಸಿದೆ. ಅವುಗಳು ಹಾಂಕಾಂಗ್, ಸಿಂಗಾಪುರ ಮತ್ತಿತರ ದೇಶಗಳ ಮೂಲಕ ಭಾರತದ ಕಂಪನಿಗಳಲ್ಲಿ ಹೂಡಿಕೆ ಮಾಡಿ ಅವುಗಳ ಟೇಕ್​ಓವರ್​ಗೆ ಪ್ರಯತ್ನಿಸುವುದನ್ನು ತಡೆಯಲು ಈ ತಿದ್ದುಪಡಿ ಮಾಡಲಾಗಿದೆ. ಸಾಂಕ್ರಾಮಿಕ ರೋಗವನ್ನು ಮುಚ್ಚಿಟ್ಟಿದ್ದಕ್ಕೆ ಚೀನಾದ ವಿರುದ್ಧ ಹಲವು ದೇಶಗಳು ಆಕ್ರೋಶ ವ್ಯಕ್ತಪಡಿಸುತ್ತಿರುವಾಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಾಳ್ಮೆಯಿಂದ ವರ್ತಿಸಿತ್ತು. ಆದರೆ ಈಗ ಹಠಾತ್ತನೆ ಈ ಕ್ರಮಕ್ಕೆ ಮುಂದಾಗಿರುವುದಕ್ಕೆ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ), ಭಾರತದ ಹೌಸಿಂಗ್ ಡೆವಲಪ್​ವೆುಂಟ್ ಫೈನಾನ್ಸ್ ಕಾರ್ಪೆರೇಷನ್​ನ (ಎಚ್​ಡಿಎಫ್​ಸಿ) ಶೇ. 1ರಷ್ಟು ಷೇರನ್ನು ಇತ್ತೀಚೆಗೆ ಖರೀದಿಸಿದ್ದು ಕಾರಣ. ಕರೊನಾದಿಂದಾಗಿ ಷೇರುಪೇಟೆಯಲ್ಲಿನ ತತ್ತರದಿಂದ ಎಚ್​ಡಿಎಫ್​ಸಿ ಷೇರು ಮೌಲ್ಯ ಶೇ.25ರಷ್ಟು ಕುಸಿತವಾಗಿತ್ತು. ಇದರ ಲಾಭ ಪಡೆದ ಪಿಬಿಒಸಿ ಈ ಹೂಡಿಕೆ ಮಾಡಿದೆ. ಚೀನಾದ ಅನೇಕ ದೊಡ್ಡ ಕಂಪನಿಗಳನ್ನು ಬೀಜಿಂಗ್​ನ ಕಮ್ಯುನಿಸ್ಟ್ ಆಡಳಿತಗಾರರು ಪರೋಕ್ಷ ಜಾಲದ ಮೂಲಕ ನಿಯಂತ್ರಿಸುತ್ತಿದ್ದಾರೆ.
ಸ್ವಯಂಚಾಲಿತ ಮಾರ್ಗ ಎಂದರೇನು?
ಭಾರತಕ್ಕೆ ಬಹುತೇಕ ಎಫ್​ಡಿಐ ಸ್ವಯಂಚಾಲಿತ ಮಾರ್ಗದ (ಆಟೊಮ್ಯಾಟಿಕ್ ರೂಟ್) ಮೂಲಕ ಬರುತ್ತದೆ. ಹೂಡಿಕೆ ಮಾಡಿದ ನಂತರವಷ್ಟೆ ಮಾಹಿತಿ ಬಹಿರಂಗವಾಗುವ ವ್ಯವಸ್ಥೆಯನ್ನು ಆಟೊಮ್ಯಾಟಿಕ್ ರೂಟ್ ಎನ್ನುತ್ತಾರೆ. ಈ ರೀತಿಯ ಹೂಡಿಕೆ ತಡೆಯುವುದೇ ತಿದ್ದುಪಡಿಯ ಮುಖ್ಯ ಉದ್ದೇಶ. ಹೊಸ ಎಫ್​ಡಿಐ ಮಾರ್ಗಸೂಚಿ ಪ್ರಕಾರ ಚೀನಾ ಬಂಡವಾಳ ಹೂಡಲು ಸರ್ಕಾರದ ಪೂರ್ವಾನುಮತಿ ಅಗತ್ಯ. ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್​ನೊಂದಿಗೆ ಭಾರತ ಗಡಿ ಹಂಚಿಕೊಂಡಿರುವ ರಾಷ್ಟ್ರಗಳು
ಸ್ಟಾರ್ಟಪ್​ಗಳ ಚಿಂತೆ
ಎಫ್​ಡಿಐ ನೀತಿಯಲ್ಲಿ ಬದಲಾವಣೆ ತರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಸ್ಟಾರ್ಟಪ್​ಗಳು ಬೇಸರ ವ್ಯಕ್ತಪಡಿಸಿವೆ. ಭಾರತದ ಸ್ಟಾರ್ಟಪ್​ಗಳಲ್ಲಿ 2018ರಲ್ಲಿ ಚೀನಾದ ಹೂಡಿಕೆ ಎರಡು ಬಿಲಿಯನ್ ಡಾಲರ್ ಇದ್ದದ್ದು, 2019ರಲ್ಲಿ 3.90 ಬಿಲಿಯನ್ ಡಾಲರ್​ಗೆ ಏರಿತ್ತು. ಆರ್ಥಿಕತೆ ಈಗಾಗಲೇ ನಿಧಾನಗತಿಯಲ್ಲಿದ್ದು ಎಫ್​ಡಿಐ ಹೂಡಿಕೆ ಮೇಲಿನ ನಿರ್ಬಂಧಗಳಿಂದ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ಸ್ಟಾರ್ಟಪ್​ಗಳು ಚಿಂತೆಗೀಡಾಗಿವೆ. ಭಾರತದ ಪ್ರಮುಖ ಇ-ಕಾಮರ್ಸ್ ಕಂಪನಿಗಳಾದ ಫ್ಲಿಪ್​ಕಾರ್ಟ್, ಪೇಟಿಎಂ, ಓಲಾ, ಬೈಜುಸ್, ಜಿಮಾಟೊ, ಬಿಗ್​ಬಾಸ್ಕೆಟ್, ಡ್ರೀಂ11 -ಇವುಗಳಲ್ಲಿ ಚೀನಾದ ಎರಡು ಪ್ರಮುಖ ಇಂಟರ್​ನೆಟ್ ಕಂಪನಿಗಳಾದ ಆಲಿಬಾಬಾ ಅಥವಾ ಟೆನ್​ಸೆಂಟ್​ನ ಷೇರು ಇದೆ.
ಭಾರತ ಸೇರ್ಪಡೆ
ಚೀನಾಕ್ಕೆ ಸಂಬಂಧಿಸಿದಂತೆ ಎಫ್​ಡಿಐ ನೀತಿ ಮರುಪರಿಶೀಲನೆ ಮಾಡಿರುವ ಭಾರತ, ಇಂಥದ್ದೇ ಕ್ರಮಕೈಗೊಂಡಿರುವ ಆಸ್ಟ್ರೇಲಿಯಾ ಮತ್ತು ಜರ್ಮನಿ ಸಹಿತ ಅನೇಕ ಯುರೋಪ್ ದೇಶಗಳ ಸಾಲಿಗೆ ಸೇರಿದಂತಾಗಿದೆ. ಕಳೆದ ಒಂದು ತಿಂಗಳಿಂದೀಚೆಗೆ ಹಲವು ದೇಶಗಳು ಈ ಬಗ್ಗೆ ಚಿಂತನೆ ನಡೆಸುತ್ತಿವೆ. ಅಮೆರಿಕವಂತೂ ಈ ವರ್ಷದ ಆರಂಭದಲ್ಲೇ ಈ ಬಗ್ಗೆ ಆಲೋಚನೆ ನಡೆಸಲು ಆರಂಭಿಸಿತ್ತು. ವಿದೇಶೀ ಹೂಡಿಕೆಗೆ ಸರ್ಕಾರದ ಅಧಿಕೃತ ಅನುಮತಿ ಅಗತ್ಯ. ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆ ದೃಷ್ಟಿಯಿಂದ ಇದು ಅಗತ್ಯ ಎಂದು ಮಾರ್ಚ್ 17ರಂದು ಹೊರಡಿಸಿದ ಆದೇಶದಲ್ಲಿ ಸ್ಪೇನ್ ಹೇಳಿತ್ತು. ಇಟಲಿ ಸರ್ಕಾರ 2012ರಲ್ಲಿ ಈ ಸಂಬಂಧ ಹೊರಡಿಸಿದ ಗೋಲ್ಡನ್ ಪವರ್ ಲಾ ಎಂಬ ಡಿಕ್ರಿಯನ್ನು ಏಪ್ರಿಲ್ 8ರಂದು ವಿಸ್ತರಿಸಿದೆ. ಹಲವು ಹೊಸ ಕ್ಷೇತ್ರಗಳಿಗೆ ಅನ್ವಯಿಸಿದೆ.
ಭಾರತದಲ್ಲಿ ಚೀನಾ ಎಫ್​ಡಿಐ ಹೆಜ್ಜೆ ಗುರುತು
2014ರಲ್ಲಿ ಭಾರತದಲ್ಲಿ ಚೀನಾ ಬಂಡವಾಳ 1.60 ಬಿಲಿಯನ್ ಡಾಲರ್ ಇತ್ತು. 2017ರಲ್ಲಿ ಇದು 8 ಬಿಲಿಯನ್ ಡಾಲರ್​ಗೆ ಏರಿಕೆ ಆಯಿತು. ಹೀಗೆ ಹೆಚ್ಚು ಬಂಡವಾಳ ಹೂಡಿಕೆಯಾಗಿದ್ದು ಸ್ಟಾರ್ಟಪ್​ಗಳಲ್ಲಿ. ಚೀನಾದಿಂದ ಎಫ್​ಡಿಐ ಪಡೆದ ಸ್ಟಾರ್ಟಪ್​ಗಳಲ್ಲಿ ಹಲವು ಬೆಂಗಳೂರಿನಲ್ಲೂ ಇವೆ.
ಭಾರತದಲ್ಲಿ ಚೀನಿ ಹೂಡಿಕೆ
ಹೊಸ ನಿಯಮವೇನು?
1. ಭಾರತದೊಂದಿಗೆ ಗಡಿ ಹೊಂದಿರುವ ಎಲ್ಲ ದೇಶಗಳು ಎಫ್​ಡಿಐಗೆ ಮೊದಲೇ ಅನುಮತಿ ಪಡೆಯಬೇಕು.
2. ಇದುವರೆಗೆ ಪಾಕ್ ಮತ್ತು ಬಾಂಗ್ಲಾ ಕಂಪನಿಗಳಿಗೆ ಈ ನಿಬಂಧನೆ ಅನ್ವಯವಾಗುತ್ತಿತ್ತು.
3. ಪಾಕಿಸ್ತಾನಿ ಹೂಡಿಕೆದಾರರು ರಕ್ಷಣೆ, ಬಾಹ್ಯಾಕಾಶ ಮತ್ತು ಅಣುಶಕ್ತಿ ಕ್ಷೇತ್ರಗಳಲ್ಲಿ ಹೂಡಿಕೆಗೆ ಇನ್ನಷ್ಟು ನಿರ್ಬಂಧ.
4. ಹೊಸ ನೀತಿ ಅನ್ವಯವಾಗದ ದೇಶಗಳ ಹೂಡಿಕೆದಾರರು ತಮ್ಮ ವ್ಯವಹಾರದ ಬಗ್ಗೆ ಆರ್​ಬಿಐಗೆ ತಿಳಿಸಿದರೆ ಸಾಕು. ಸಂಬಂಧಪಟ್ಟ ಇಲಾಖೆಯ ಪೂರ್ವಾನುಮತಿ ಅಗತ್ಯವಿಲ್ಲ.

ಕರೊನಾ ಲಾಕ್​ಡೌನ್ ಉಲ್ಲಂಘಿಸಿದಲ್ಲದೇ ಬೇಜವಾಬ್ದಾರಿ ಹೇಳಿಕೆ ನೀಡಿದ ಕಾಂಗ್ರೆಸ್​ ಸಚಿವ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
