ಇಸ್ಲಾಮಾಬಾದ್/ಬೀಜಿಂಗ್:ಶ್ರೀಲಂಕಾದ ಹಂಬನ್​ತೋಟ ಬಂದರಿನಲ್ಲಿ ತನ್ನ ನೌಕೆ ಲಂಗರು ಹಾಕಿದ ಬೆನ್ನಿಗೆ ಪಾಕಿಸ್ತಾನಕ್ಕೆ ಸೇನಾಪಡೆಯನ್ನು ಕಳುಹಿಸಲು ಚೀನಾ ಮುಂದಾಗಿದೆ. ಈ ಮೂಲಕ ಭಾರತ ಸುತ್ತ ತನ್ನ ನಿಗಾವಣೆಯನ್ನು ಚೀನಾ ಹೆಚ್ಚಿಸುತ್ತಿರುವುದು ಕಳವಳಕಾರಿ ಬೆಳವಣಿಗೆ ಆಗಿದೆ.
ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್ ಮತ್ತು ರಸ್ತೆ ಉಪಕ್ರಮದ (ಬಿಆರ್​ಐ) ಭಾಗವಾದ ಚೀನಾ-ಪಾಕ್ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಗಳ ಭದ್ರತೆಗಾಗಿ ಹೊರಠಾಣೆಗಳನ್ನು ಸ್ಥಾಪಿಸುವಂತೆ ಪಾಕ್ ಮೇಲೆ ಚೀನಾ ಒತ್ತಡ ಹಾಕುತ್ತಿದೆ. ಈ ಹೊರಠಾಣೆಗಳಲ್ಲಿ ಸ್ವಂತ ಪಡೆಗಳನ್ನು ನಿಯೋಜಿಸಲು ಚೀನಾ ಬಯಸಿದೆ. ಉಭಯ ದೇಶಗಳ ಹಿತಾಸಕ್ತಿಯನ್ನು ರಕ್ಷಿಸುವುದು ಸೇನಾಪಡೆ ರವಾನೆಯ ಉದ್ದೇಶ ಎಂದು ಚೀನಾದ ರಾಜತಾಂತ್ರಿಕ ಮೂಲಗಳು ಹೇಳಿವೆ.
ಇಸ್ಲಾಮಾಬಾದ್​ನಲ್ಲಿರುವ ಚೀನಾ ರಾಯಭಾರಿ ನಾಂಗ್ ರಾಂಗ್ ತನ್ನ ದೇಶದ ಸೇನೆಗೆ ಪ್ರವೇಶ ಪಡೆಯುವ ಸಂಬಂಧ ಪಾಕ್ ಪ್ರಧಾನಿ ಷೆಹಬಾಜ್ ಷರೀಫ್, ವಿದೇಶಾಂಗ ಸಚಿವ ಬಿಲ್​ವಾಲ್ ಭುಟ್ಟೋ ಮತ್ತು ಸೇನೆಯ ಮುಖ್ಯಸ್ಥ ಜನರಲ್ ಖಮರ್ ಬಜ್ವಾ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಸಿಪಿಇಸಿ ಯೋಜನೆಗಳಿಗೆ ಪಾಕ್​ನ ಕೆಲವು ಭಾಗಗಳಲ್ಲಿ ವಿರೋಧ ವ್ಯಕ್ತವಾಗಿದ್ದು, ದಾಳಿಗಳು ನಡೆಯುತ್ತಿವೆ. ಆದ್ದರಿಂದ ಯೋಜನೆ ಮತ್ತು ತನ್ನ ನಾಗರಿಕರ ಸುರಕ್ಷತೆಗೆ ಹೊರಠಾಣೆಗಳು ಅವಶ್ಯಕ ಎಂದು ಅವರು ಸಭೆಯಲ್ಲಿ ಪ್ರತಿಪಾದಿಸಿದ್ದಾರೆ ಎಂದು ತಿಳಿದುಬಂದಿದೆ. ಪಾಕ್ ಮತ್ತು ಅಫ್ಘಾನಿಸ್ತಾನದ ಮಾರ್ಗಗಳ ಮೂಲಕ ಕೇಂದ್ರ ಏಷ್ಯಾದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವುದು ಚೀನಾ ಉದ್ದೇಶ ಆಗಿದೆ. ಆಫ್ಘನ್​ನಲ್ಲಿ ಈಗ ತಾಲಿಬಾನ್​ಗಳ ಅಧಿಕಾರ ಶುರುವಾಗಿರುವುದರಿಂದ ಅಲ್ಲಿ ತನ್ನ ನಿರೀಕ್ಷೆಗಳನ್ನು ಚೀನಾ ಇನ್ನಷ್ಟೆ ಈಡೇರಿಸಿಕೊಳ್ಳಬೇಕಿದೆ.
ಯುದ್ಧ ಸನ್ನದ್ಧ ಆರ್ವಿು ಸ್ಥಾಪನೆಯ ಉದ್ದೇಶ:ಆರ್ಥಿಕವಾಗಿ ಕಂಗೆಟ್ಟಿರುವ ಪಾಕ್​ನಲ್ಲಿ ಚೀನಾ ಹೂಡಿಕೆ 60 ಬಿಲಿಯನ್ ಡಾಲರ್ (4.76 ಲಕ್ಷ ಕೋಟಿ ರೂ.) ಮುಟ್ಟಿದೆ. ಇದರಿಂದ ಪಾಕ್, ಚೀನಾ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದರ ದುರ್ಲಾಭ ಪಡೆಯುತ್ತಿರುವ ಚೀನಾ, ಬಿಆರ್​ಐ ಹೊರಠಾಣೆಗಳಲ್ಲಿ ತನ್ನ ಸೇನೆಯನ್ನು ಸ್ಥಾಪಿಸುವುದಷ್ಟೆ ಅಲ್ಲ, ಯುದ್ಧ ಸನ್ನದ್ಧತೆಯ ಮಾದರಿಯಲ್ಲಿ ಪೀಪಲ್ಸ್ ಲಿಬ್ಢರೇಷನ್ ಆರ್ವಿು (ಪಿಎಲ್​ಎ) ತುಕಡಿಗಳನ್ನು ನಿಯೋಜಿಸುವುದು ಚೀನಾದ ಆಂತರ್ಯದಲ್ಲಿ ಇದೆ. ಪಾಕ್ ಮಾತ್ರವಲ್ಲದೆ ಅಫ್ಘಾನಿಸ್ತಾನದಲ್ಲೂ ತನ್ನ ಸೇನೆಗೆ ನೆಲೆ ಕಲ್ಪಿಸಿಕೊಳ್ಳುವ ಇರಾದೆಯನ್ನು ಚೀನಾ ಹೊಂದಿದೆ. ಈ ಮೂಲಕ ಬಿಆರ್​ಐ ಅನ್ನು ಸಾಧ್ಯವಾದಷ್ಟು ಹಿಗ್ಗಿಸಲು ಅದು ಬಯಸಿದೆ ಎಂದು ಪಾಕಿಸ್ತಾನದ ರಾಜತಾಂತ್ರಿಕ ಮತ್ತು ಭದ್ರತಾ ಮೂಲಗಳು ಹೇಳಿವೆ. ಚೀನಾ ಸೇನೆಗೆ ನೆಲೆ ನೀಡಿದರೆ ಕ್ರಮೇಣ ಅದು ತಮ್ಮ ದೇಶದ ಸೇನೆಯನ್ನು ಅಂಕೆಯಲ್ಲಿ ಇರಿಸಲು ಆರಂಭಿಸುತ್ತದೆ. ಇದರಿಂದ ದೇಶದ ಸಾರ್ವಭೌಮತ್ವಕ್ಕೂ ಅಡ್ಡಿ ಆಗುವ ಸಾಧ್ಯತೆ ಇದೆ. ಹೀಗಾಗಿ ಚೀನಾ ಸೇನೆಗೆ ಬಾಗಿಲು ತೆರೆಯುವ ಮುನ್ನ ಇದನ್ನು ಹಲವು ಆಯಾಮದಿಂದ ಆಲೋಚಿಸಬೇಕು ಎಂಬುದು ಪಾಕ್​ನ ರಾಜತಾಂತ್ರಿಕ ಮತ್ತು ಸೇನೆಯ ವಿಶ್ಲೇಷಕರ ಅಭಿಪ್ರಾಯ ಆಗಿದೆ. ಆದರೆ, ಚೀನಾ ಋಣದಲ್ಲಿ ಬಿದ್ದಿರುವ ಪಾಕ್​ಗೆ ಆ ರಾಷ್ಟ್ರದ ಒತ್ತಡವನ್ನು ವಿರೋಧಿಸುವಷ್ಟು ರಾಜಕೀಯ ಇಚ್ಛಾಶಕ್ತಿ ಇದೆಯೇ ಎಂಬ ಪ್ರಶ್ನೆಯೂ ಇದೆ.
ಅಫ್ಘನ್​ನಿಂದ ಭಾರತ ಹಿಂದೆ ಸರಿಸಲು ಹಿಕ್ಮತ್:ಪಾಕ್​ಗೆ ಹೋಲಿಸಿದರೆ ಆಫ್ಘನ್ ವಿದೇಶಾಂಗ ನೀತಿ ಹೆಚ್ಚು ಸ್ವತಂತ್ರವಾಗಿದೆ ಮತ್ತು ಅದು ಚೀನಾ ಹಂಗಿನಲ್ಲಿ ಅಷ್ಟೊಂದು ಬಿದ್ದಿಲ್ಲ. ಭಾರತದ ನೆರವನ್ನು ಬಯಸುವ ತಾಲಿಬಾನ್ ಆಡಳಿತಗಾರರು, ತನ್ನ ಸೈನಿಕರು ಭಾರತದಿಂದ ತರಬೇತಿ ಪಡೆಯಬೇಕು ಎಂದು ಅಪೇಕ್ಷಿಸಿದ್ದಾರೆ. ತಾಲಿಬಾನ್​ಗಳು ಭಾರತಕ್ಕೆ ಹೆಚ್ಚು ವಾಲಿಕೊಂಡಿರುವುದು ಚೀನಾಕ್ಕೆ ಸರಿಬರುತ್ತಿಲ್ಲ. ಹೀಗಾಗಿ ತಾಲಿಬಾನ್​ಗಳನ್ನು ತನ್ನ ಬಿಆರ್​ಐ ಉದ್ದೇಶಕ್ಕೆ ಪಕ್ಕಾಗುವಂತೆ ಮಾಡಿ, ಭಾರತದ ಮೇಲಿನ ಅವಲಂಬನೆಯನ್ನು ತಪ್ಪಿಸುವುದು ಚೀನಾದ ಗುಪ್ತ ಕಾರ್ಯಸೂಚಿ ಆಗಿದೆ. ಜತೆಗೆ ತಾಲಿಬಾನ್ ಹಾಗೂ ಆಫ್ಘನ್-ಪಾಕ್ ಗಡಿಯಲ್ಲಿ ಸಕ್ರಿಯವಾಗಿರುವ ಹಕ್ಕಾನಿ ಮೂಲಭೂತವಾದಿಗಳು ಉಯ್ಘಿರ್ ಮುಸ್ಲಿಮರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಇದು ಚೀನಾದ ತಲೆಬಿಸಿ ಮಾಡಿದೆ.
ಯಾವುದೇ ದೇಶಕ್ಕೆ ತೊಂದರೆ ಇಲ್ಲ:ಶ್ರೀಲಂಕಾದ ಹಂಬನ್​ತೋಟ ಬಂದರಿಗೆ ತಲುಪಿರುವ ತನ್ನ ‘ಯುವಾನ್ ವಾಂಗ್ 5’ ನೌಕೆಯಿಂದ ಯಾವುದೇ ದೇಶದ ಭದ್ರತೆಗೆ ತೊಂದರೆ ಇಲ್ಲ ಎಂದು ಚೀನಾ ಹೇಳಿದೆ. ಭಾರತ ಮತ್ತು ಅಮೆರಿಕಗಳು ಇದು ಬೇಹು ನೌಕೆ ಎಂದು ಗುಮಾನಿ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದೆ. ಚೀನಾ ನೌಕೆಗೆ ಸೇನಾ ಚಟುವಟಿಕೆ ನಡೆಸಲು ಅನುಮತಿಸಿಲ್ಲ ಎಂದು ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘ ಮಂಗಳವಾರ ಹೇಳಿದ್ದರು.
ಗದ್ವಾರ್​ನಲ್ಲಿ ನೆಲೆ?:ಸಿಪಿಇಸಿ ಅಡಿಯಲ್ಲಿ ಗದ್ವಾರ್ ಬಂದರು ಅಭಿವೃದ್ಧಿ ಪಡಿಸುತ್ತಿರುವ ಚೀನಾ, ಇಲ್ಲೊಂದು ಹೊರಠಾಣೆಯನ್ನು ಆಪೇಕ್ಷಿಸಿದೆ. ತನ್ನ ತುಕಡಿಯ ಜತೆ ಸಂಪರ್ಕದ ದೃಷ್ಟಿಯಿಂದ ಗದ್ವಾರ್ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನಗಳನ್ನು ಇಳಿಸಲು ಅನುಮತಿ ಬೇಕು ಎಂಬ ಬೇಡಿಕೆಯನ್ನು ಇರಿಸಿದೆ. ಇಷ್ಟಾದರೆ ಗದ್ವಾರ್ ಚೀನಾ ಸೇನೆಯ ಅಧಿಕೃತ ನೆಲೆ ಆದಂತಾಗುತ್ತದೆ. ಗದ್ವಾರ್ ಬಂದರು ಅರಬ್ಬಿ ಸಮುದ್ರ ಮತ್ತು ಒಮನ್ ಕೊಲ್ಲಿಯ ಪ್ರವೇಶ ದ್ವಾರದಲ್ಲಿರುವ ಆಯಕಟ್ಟಿನ ಜಾಗ. ಇರಾನ್​ನ ಚಾಬಹರ್ ಬಂದರಿಗೆ 72 ಕಿ.ಮೀ. ಅಂತರದಲ್ಲಿ ಇದೆ. ಚಾಬಹರ್ ಬಂದರಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಭಾರತ ಕೈಜೋಡಿಸಿದೆ ಮತ್ತು ಈ ಬಂದರು ಒಮನ್ ಕೊಲ್ಲಿಯಲ್ಲಿ ಭಾರತ ಹೆಬ್ಬಾಗಿಲಾಗಿದೆ. ಮಾತ್ರವಲ್ಲದೆ ಆಫ್ಘನ್​ಗೆ ಸರಕು ಸಾಗಣೆಯ ಟರ್ವಿುನಲ್ ಆಗಿಯೂ ಬಳಸಿಕೊಳ್ಳುತ್ತಿದೆ. ಗದ್ವಾರ್ ಬಂದರಿನಲ್ಲಿ್ಲ ಚೀನಾ ಸೇನೆ ನೆಲೆ ನಿಂತರೆ ಭಾರತದ ನೌಕೆಗಳ ಓಡಾಟಕ್ಕೆ ಅಡ್ಡಿಯಾಗುವ ಸಂಭವ ಇದೆ. ಗದ್ವಾರ್ ಬಂದರು ಹಮುಜ್ ಜಲಸಂಧಿಗೆ ನಿಕಟವಾಗಿರುವುದರಿಂದ ಇದರ ಮೂಲಕ ಪೂರ್ವ ಭಾಗದಲ್ಲಿ ಹಿಂದು ಮಹಾಸಾಗರಕ್ಕೆ ತನ್ನ ನೌಕೆಗಳ ಸರಾಗ ಪ್ರವೇಶ ಗಿಟ್ಟಿಸಿಕೊಳ್ಳುವುದು ಮತ್ತು ಪರ್ಷಿಯನ್ ಕೊಲ್ಲಿಯಲ್ಲಿ ಭಾರತ ಹಾಗೂ ಅಮೆರಿಕದ ನೌಕೆಗಳ ಚಲನವಲನದ ಮೇಲೆ ನಿಗಾ ಇರಿಸುವುದು ಚೀನಾ ಕುಟಿಲ ನೀತಿ.
ಅಜಿತ್ ದೋವಲ್​ಗೆ ಭದ್ರತಾ ವೈಫಲ್ಯ, ಎನ್​ಎಸ್​​ಎ ಸೆಕ್ಯುರಿಟಿಯಿಂದ ಮೂವರು ಕಮಾಂಡೋಗಳ ಎತ್ತಂಗಡಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 7 =
Remember me
